ಚೆನ್ನೈ: ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್.ಎನ್.ರವಿ ನಡುವಿನ ಸಂಘರ್ಷ ಮತ್ತೊಮ್ಮೆ ಬಹಿರಂಗವಾಗಿದ್ದು, ವರ್ಷದ ಮೊದಲ ವಿಧಾನಸಭಾ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಓದದೇ ಸಭಾತ್ಯಾಗ ಮಾಡಿದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.
ಮಂಗಳವಾರ ತಮಿಳುನಾಡು ವಿಧಾನಸಭೆಯ ಜಂಟಿ ಅಧಿವೇಶನಕ್ಕೆ ಆಗಮಿಸಿದ್ದ ರಾಜ್ಯಪಾಲ ಆರ್.ಎನ್.ರವಿ, ರಾಷ್ಟ್ರಗೀತೆ ಮುಕ್ತಾಯವಾದ ತಕ್ಷಣ ತಮ್ಮ ಭಾಷಣವನ್ನು ಓದದೇ ವಿಧಾನಸಭೆಯಿಂದ ಹೊರನಡೆದರು. ಸಂಪ್ರದಾಯದಂತೆ ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ಸರ್ಕಾರದ ಅನುಮೋದಿತ ಭಾಷಣವನ್ನು ಓದುವುದು ರೂಢಿಯಾಗಿದ್ದರೂ, ಈ ಬಾರಿ ಅದನ್ನು ಪಾಲಿಸದೆ ಅವರು ಸಭಾತ್ಯಾಗ ಮಾಡಿದ್ದಾರೆ.
ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಎಂ.ಅಪ್ಪಾವು, ಸ್ಥಾಪಿತ ನಿಯಮಗಳು ಹಾಗೂ ಸಂಪ್ರದಾಯಗಳಿಗೆ ರಾಜ್ಯಪಾಲರು ಬದ್ಧರಾಗಬೇಕು ಮತ್ತು ಸರ್ಕಾರದ ಅನುಮೋದಿತ ಭಾಷಣವನ್ನೇ ಓದಬೇಕು ಎಂದು ಒತ್ತಾಯಿಸಿದರು. ಆಡಳಿತ ಪಕ್ಷದ ಸದಸ್ಯರ ಆಕ್ಷೇಪಣೆಗಳ ನಡುವೆ ಮಾತನಾಡಿದ ಸ್ಪೀಕರ್, ಸದನದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಶಾಸಕರಿಗೆ ಮಾತ್ರ ಇದೆ ಎಂದು ಸ್ಪಷ್ಟಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯಪಾಲ ಆರ್.ಎನ್.ರವಿ, ತಮ್ಮ ಭಾಷಣಕ್ಕೆ ಅಡ್ಡಿಪಡಿಸಿರುವುದು ದುರದೃಷ್ಟಕರ ಎಂದು ಹೇಳಿ, ರಾಷ್ಟ್ರಗೀತೆಗೆ ನೀಡಬೇಕಾದ ಗೌರವ ದೊರೆತಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಭಾಷಣವನ್ನು ಪೂರ್ಣಗೊಳಿಸದೇ ಅವರು ವಿಧಾನಸಭೆಯಿಂದ ಹೊರನಡೆದರು.
ಈ ಬೆಳವಣಿಗೆಯ ನಂತರ ರಾಜಭವನದಿಂದ ಪ್ರಕಟಣೆ ಹೊರಬಂದಿದ್ದು, ರಾಜ್ಯಪಾಲರ ಮೈಕ್ ಅನ್ನು ಪದೇಪದೇ ಆಫ್ ಮಾಡಲಾಗಿದ್ದು, ಮಾತನಾಡಲು ಅವಕಾಶ ನೀಡಲಾಗಲಿಲ್ಲ ಎಂದು ಆರೋಪಿಸಲಾಗಿದೆ. ಸರ್ಕಾರದ ಅನುಮೋದಿತ ಭಾಷಣದಲ್ಲಿ ಆಧಾರರಹಿತ ಹಾಗೂ ದಾರಿತಪ್ಪಿಸುವ ಅಂಶಗಳಿದ್ದು, ರಾಜ್ಯಪಾಲರು ಎತ್ತಿದ ಹಲವು ಕಳವಳಕಾರಿ ವಿಷಯಗಳು ಭಾಷಣದಲ್ಲಿ ಸೇರಿರಲಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ರಾಜ್ಯಪಾಲ ಆರ್.ಎನ್.ರವಿ ಭಾಷಣ ಓದದೇ ವಿಧಾನಸಭೆಯಿಂದ ಹೊರನಡೆದಿರುವುದು ಇದು ಮೂರನೇ ಬಾರಿ. ಈ ಕುರಿತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತೀವ್ರ ಟೀಕೆ ವ್ಯಕ್ತಪಡಿಸಿದ್ದು, ಇದು ಸಂಪ್ರದಾಯದ ಉಲ್ಲಂಘನೆ ಮತ್ತು ಸದನದ ಅವಮಾನ ಎಂದು ಹೇಳಿದ್ದಾರೆ. ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರಿಗೆ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವಿಲ್ಲ, ಸರ್ಕಾರದ ಅನುಮೋದಿತ ಭಾಷಣವನ್ನೇ ಓದಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಮಸೂದೆಗಳ ವಿಚಾರ ಸೇರಿದಂತೆ ಹಲವು ಕಾರಣಗಳಿಗೆ ಹಿಂದೆಂದೂ ಜಟಾಪಟಿ ನಡೆಯುತ್ತಲೇ ಬಂದಿದೆ. ಆದರೆ ಈ ವರ್ಷದ ಮೊದಲ ಅಧಿವೇಶನದಲ್ಲಿಯೇ ಈ ರೀತಿಯ ಬೆಳವಣಿಗೆ ಸಂಭವಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
