ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಹೊರಡಿಸಿರುವ ಹೊಸ ಸರ್ಕಾರಿ ಆದೇಶವು (ಸಂಖ್ಯೆ: EP 81 EGOV 2025) ರಾಜ್ಯದ ಶಿಕ್ಷಣ ವಲಯದಲ್ಲಿ ತೀವ್ರ ಚರ್ಚೆ ಹಾಗೂ ಆತಂಕಕ್ಕೆ ಕಾರಣವಾಗಿದೆ. ಗುಣಮಟ್ಟದ ಶಿಕ್ಷಣ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಕಾರ್ಪೊರೇಟ್ ಸಂಸ್ಥೆಗಳ ಉಸ್ತುವಾರಿಗೆ ಒಪ್ಪಿಸಲು ಸರ್ಕಾರ ಅಧಿಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಖಾಸಗೀಕರಣಗೊಳಿಸುವ ಮೊದಲ ಹೆಜ್ಜೆ ಎಂಬ ತೀವ್ರ ಟೀಕೆಗಳು ಈಗ ಕೇಳಿಬರುತ್ತಿವೆ.
ನೂತನ ಆದೇಶದ ಪ್ರಕಾರ, ‘ಸಮುದಾಯ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ’ (CCSR) ಮಾರ್ಗಸೂಚಿಗಳ ಅಡಿಯಲ್ಲಿ ರಾಜ್ಯದ 1,000 ಸರ್ಕಾರಿ ಶಾಲೆಗಳನ್ನು ‘ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ’ (KPS) ಮೇಲ್ದರ್ಜೆಗೇರಿಸಲು ಖಾಸಗಿ ಕಂಪನಿಗಳು, ಟ್ರಸ್ಟ್‌ಗಳು ಮತ್ತು ಎನ್‌ಜಿಒಗಳಿಗೆ ಮುಕ್ತ ಅವಕಾಶ ನೀಡಲಾಗಿದೆ. ಈ ಮಾರ್ಗಸೂಚಿಯ ಅನ್ವಯ ಹೊಸ ಕೆಪಿಎಸ್ ಶಾಲೆಗಳ ಸ್ಥಾಪನೆ, ಮೂಲಸೌಕರ್ಯ ಅಭಿವೃದ್ಧಿ, ವಿಜ್ಞಾನ ಹಾಗೂ ಕಂಪ್ಯೂಟರ್ ಪ್ರಯೋಗಾಲಯಗಳ ನಿರ್ವಹಣೆ, ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ಮಾರ್ಟ್ ತರಗತಿಗಳ ಸ್ಥಾಪನೆ ಮಾತ್ರವಲ್ಲದೆ ಶಾಲೆಗಳಿಗೆ ಅಗತ್ಯವಿರುವ ಅರ್ಹ ಶಿಕ್ಷಕರನ್ನು ಒದಗಿಸಿ ಅವರ ವೇತನದ ಪ್ರಾಯೋಜಕತ್ವ ವಹಿಸುವ ಜವಾಬ್ದಾರಿಯನ್ನೂ ಖಾಸಗಿ ಸಹಭಾಗಿತ್ವಕ್ಕೆ ವಹಿಸಿಕೊಡಲು ಅನುಮತಿ ನೀಡಲಾಗಿದೆ.
ಸರ್ಕಾರದ ಈ ಧೋರಣೆಯು ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಗೆ ದೊಡ್ಡ ಶಾಪವಾಗಿ ಪರಿಣಮಿಸಲಿದೆ ಎಂದು ಶಿಕ್ಷಣ ತಜ್ಞರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಿ-ಸ್ಕೂಲ್‌ನಿಂದ ಹಿಡಿದು ಪಿಯುಸಿ ತನಕ ಒಂದೇ ಕ್ಯಾಂಪಸ್‌ನಲ್ಲಿ ಮಕ್ಕಳನ್ನು ಕಲಿಕೆಗೆ ಒಗ್ಗಿಸುವುದು ಅಸಾಧ್ಯದ ಮಾತು ಮತ್ತು ಪ್ರತಿ ಹಂತದ ಕಲಿಕೆಗೂ ಅದರದ್ದೇ ಆದ ಬೌದ್ಧಿಕ ವಾತಾವರಣ ಬೇಕಾಗುತ್ತದೆ. ಮೂಲತಃ ಅಮೆರಿಕನ್ ಪರಿಕಲ್ಪನೆಯಾದ ಈ ‘ಕೆಪಿಎಸ್ ಶಾಲಾ ಸಮುಚ್ಛಯ’ ಮಾದರಿ ನಮ್ಮ ಗ್ರಾಮೀಣ ವಾಸ್ತವಕ್ಕೆ ಹೊಂದಿಕೆಯಾಗುವುದಿಲ್ಲ.

ಈಗಾಗಲೇ ಇಲಾಖೆಯ ಅಡಿಯಲ್ಲೇ ಇರುವ ಮುರಾರ್ಜಿ ದೇಸಾಯಿ ಅಥವಾ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲೇ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗದ ಸರ್ಕಾರ, ಈ ಕೆಪಿಎಸ್ ಶಾಲೆಗಳಲ್ಲಿ ಖಾಸಗಿಯವರನ್ನು ತಂದು ಮ್ಯಾಜಿಕ್ ಮಾಡುತ್ತದೆ ಎನ್ನುವುದನ್ನು ನಂಬಲು ಸಾಧ್ಯವಿಲ್ಲ ಎಂದು ವಿಶ್ಲೇಷಕರು ಹೇಳಿದ್ದಾರೆ. ಇದು ಕೇವಲ ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಂದ ಬರುವ ಹಣವನ್ನು ವೆಚ್ಚ ಮಾಡಲು ಹೂಡಿರುವ ತಂತ್ರವಷ್ಟೇ ಎಂಬ ಟೀಕೆ ಕೇಳಿಬಂದಿದೆ.
ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ಇದೊಂದು ದೊಡ್ಡ ಜಾತ್ರೆಯಂತೆ ನಡೆಯುತ್ತಿದ್ದು, ಸರ್ಕಾರಿ ವೆಚ್ಚದಲ್ಲಿ ಸೃಷ್ಟಿಸಿದ ಮೂಲಸೌಕರ್ಯ ಹಾಗೂ ಸಾರ್ವಜನಿಕ ಆಸ್ತಿಯನ್ನು ವ್ಯವಸ್ಥಿತವಾಗಿ ಖಾಸಗಿ ನಿರ್ವಹಣೆಗೆ ಒಪ್ಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಒಂದೇ ಒಂದು ದೊಡ್ಡ ಕಾರ್ಪೊರೇಟ್ ಸಂಸ್ಥೆ ಇಡೀ ಶಾಲಾ ವ್ಯವಸ್ಥೆಯ ಮೇಲೆ ಹೂಡಿಕೆ ಮಾಡಿ, ನಿಯಂತ್ರಣ ಸಾಧಿಸಲಿದೆ ಎಂಬ ಭೀತಿ ವ್ಯಕ್ತವಾಗಿದೆ.
ಈ ಇಡೀ ಪ್ರಕ್ರಿಯೆಯು ಸಾರ್ವಜನಿಕ ಶಿಕ್ಷಣವನ್ನು ಕಾರ್ಪೊರೇಟ್‌ಗಳ ಕೈಗೆ ಇಡುವ ಸ್ಪಷ್ಟ ಮುನ್ಸೂಚನೆಯಾಗಿದ್ದರೂ, ರಾಜ್ಯದ ಪ್ರಗತಿಪರರು ಮತ್ತು ಶಿಕ್ಷಣ ಹೋರಾಟಗಾರರು ಮೌನಕ್ಕೆ ಶರಣಾಗಿರುವುದು ನಮ್ಮ ಸಾಮಾಜಿಕ ಚಳುವಳಿಗಳು ಎಷ್ಟು ದುರ್ಬಲಗೊಂಡಿವೆ ಎಂಬುದನ್ನು ತೋರಿಸುತ್ತದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಲಾಗುತ್ತಿದೆ.