E20 ಇಂಧನ ಬಳಸುವ ಹಳೆಯ BS-III ವಾಹನಗಳ ರಬ್ಬರ್ ಬಿಡಿಭಾಗಗಳನ್ನು ಬದಲಾಯಿಸಬೇಕಾಗುತ್ತದೆ: ನಿತಿನ್‌ ಗಡ್ಕರಿ

ದೆಹಲಿ: ಶೇಕಡಾ 20 ರಷ್ಟು ಎಥನಾಲ್ ಹೊಂದಿರುವ E20 ಪೆಟ್ರೋಲ್ ಬಳಸಿದಾಗ, ಏಪ್ರಿಲ್ 1, 2005 ರ ನಂತರ ಪರಿಚಯಿಸಲಾದ ಮತ್ತು 2016 ಕ್ಕಿಂತ ಮೊದಲು ತಯಾರಿಸಲಾದ ಹಳೆಯ BS-III ವಾಹನಗಳ ಕೆಲವು ರಬ್ಬರ್ ಬಿಡಿಭಾಗಗಳು ಮತ್ತು ಗ್ಯಾಸ್ಕೆಟ್‌ಗಳನ್ನು ಬದಲಾಯಿಸಬೇಕಾಗಬಹುದು ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.

ವಾಹನದ ಕಾರ್ಯಕ್ಷಮತೆ, ಇಂಧನ ದಕ್ಷತೆ, ಇಂಜಿನ್ ಬಾಳಿಕೆ ಮತ್ತು ನಿರ್ವಹಣಾ ವೆಚ್ಚದ ಮೇಲೆ E20 ಇಂಧನದ ಪ್ರಭಾವದ ಕುರಿತು ಎದ್ದಿರುವ ಕಳವಳಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸಿಪಿಐ ಸಂಸದ ಎ. ಎ. ರಹೀಮ್ ಎತ್ತಿದ ಪ್ರಶ್ನೆಗೆ ಅವರು ಈ ಉತ್ತರ ನೀಡಿದ್ದಾರೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL), ಡೆಹ್ರಾಡೂನ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ (IIP), ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ಮತ್ತು ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಜಂಟಿಯಾಗಿ ನಡೆಸಿದ ಅಧ್ಯಯನವು ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳ ಮೇಲೆ E20 ರ ಪರಿಣಾಮವನ್ನು ಮೌಲ್ಯಮಾಪನ ಮಾಡಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

E20 ಬದಲಾವಣೆಗೆ ಹೆಚ್ಚಿನ ಪುರಾವೆಗಳ ಅಗತ್ಯವಿದೆ

ನಿರ್ದಿಷ್ಟಪಡಿಸಿದ ಹಳೆಯ BS-III ವಾಹನಗಳನ್ನು ಹೊರತುಪಡಿಸಿ, E20 ಬಳಕೆಗಾಗಿ ಕಾರು ಮತ್ತು ದ್ವಿಚಕ್ರ ವಾಹನಗಳ ಇಂಜಿನ್‌ಗಳನ್ನು ಮಾರ್ಪಡಿಸುವ ಅಗತ್ಯವಿಲ್ಲ ಎಂದು ಅಧ್ಯಯನವು ತೀರ್ಮಾನಿಸಿದೆ. ಚಾಲನಾ ಸಾಮರ್ಥ್ಯ, ಸ್ಟಾರ್ಟ್ ಮಾಡುವಿಕೆ, ಲೋಹದ ಹೊಂದಾಣಿಕೆ ಅಥವಾ ಪ್ಲಾಸ್ಟಿಕ್ ಹೊಂದಾಣಿಕೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ ಎಂದು ಅದು ಕಂಡುಕೊಂಡಿದೆ.

“ಏಪ್ರಿಲ್ 1, 2005 ರ ನಂತರ ಪರಿಚಯಿಸಲಾದ ಮತ್ತು 2016 ಕ್ಕಿಂತ ಮೊದಲು ತಯಾರಿಸಲಾದ BS-III ವಾಹನಗಳ ಮೇಲೆ ನಡೆಸಲಾದ ಪರೀಕ್ಷೆಯ ಸಂದರ್ಭದಲ್ಲಿ ಮಾತ್ರ ಕೆಲವು ರಬ್ಬರ್ ಬಿಡಿಭಾಗಗಳು ಮತ್ತು ಗ್ಯಾಸ್ಕೆಟ್‌ಗಳನ್ನು ಬದಲಾಯಿಸುವ ಅಗತ್ಯವಿರಬಹುದು. ಇದನ್ನು ವಾಹನದ ದಿನನಿತ್ಯದ ಸರ್ವಿಸಿಂಗ್ ಸಮಯದಲ್ಲಿ ಸುಲಭವಾಗಿ ನಿರ್ವಹಿಸಬಹುದು” ಎಂದು ಸಚಿವರು ಹೇಳಿದ್ದಾರೆ.

ವಾಹನಗಳು ಮಿಸ್‌ಫೈರ್ ಆಗುವುದು ಅಥವಾ ಕೆಟ್ಟು ನಿಲ್ಲುವ ಬಗ್ಗೆ ವ್ಯಾಪಕವಾದ ವೈಯಕ್ತಿಕ ದೂರುಗಳು ಕೇಳಿಬರುತ್ತಿದ್ದು, ಕೆಲ ಬಳಕೆದಾರರು ಇದಕ್ಕೆ E20 ಅಥವಾ ಕಲುಷಿತ ಇಂಧನ ಕಾರಣ ಎನ್ನುತ್ತಿದ್ದಾರೆ. ಆದರೆ ಅಧ್ಯಯನಗಳ ಪ್ರಕಾರ ಹಳೆಯ ವಾಹನಗಳ ಕಾರ್ಯಕ್ಷಮತೆಯಲ್ಲೂ ಯಾವುದೇ ಗಮನಾರ್ಹ ವ್ಯತ್ಯಾಸ ಅಥವಾ ಅಸಹಜ ಸವಕಳಿ ಕಂಡುಬಂದಿಲ್ಲ ಎಂದು ಸರ್ಕಾರ ಪ್ರತಿಪಾದಿಸಿದೆ.

ಇಂಧನ ದಕ್ಷತೆಗೆ (ಮೈಲೇಜ್) ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಗಡ್ಕರಿ, ವಾಹನದ ಮೈಲೇಜ್ ಮೇಲೆ ಇಂಧನದ ವಿಧ ಮಾತ್ರವಲ್ಲದೆ ಚಾಲನಾ ಅಭ್ಯಾಸಗಳು, ನಿಯಮಿತ ನಿರ್ವಹಣೆ (ಸಮಯಕ್ಕೆ ಸರಿಯಾಗಿ ಆಯಿಲ್ ಬದಲಾವಣೆ ಮತ್ತು ಏರ್ ಫಿಲ್ಟರ್‌ಗಳ ಸ್ವಚ್ಛತೆ), ಟೈರ್ ಒತ್ತಡ ಮತ್ತು ಅಲೈನ್‌ಮೆಂಟ್ ಹಾಗೂ ಏರ್-ಕಂಡೀಷನಿಂಗ್ ಲೋಡ್ ಸೇರಿದಂತೆ ಹಲವು ಅಂಶಗಳು ಪ್ರಭಾವ ಬೀರುತ್ತವೆ ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು