Friday, June 14, 2024

ಸತ್ಯ | ನ್ಯಾಯ |ಧರ್ಮ

ಸೆಪ್ಟೆಂಬರ್ 18ರ ಸಂಸತ್ ಅಧಿವೇಶನದಲ್ಲಿ ಮುಖ್ಯ ಚುನಾವಣಾ ಆಯುಕ್ತರ ನೇಮಕದ ಮಸೂದೆ ಮಂಡನೆ!

ನವದೆಹಲಿ, ಸಪ್ಟೆಂಬರ್.14: ಬುಧವಾರ ಸೆಪ್ಟೆಂಬರ್ 13 ರಂದು ತಡವಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಸಂಸತ್ ಬುಲೆಟಿನ್‌ನಲ್ಲಿ ಸೆಪ್ಟೆಂಬರ್ 18 ರಿಂದ ಪ್ರಾರಂಭವಾಗುವ ಸಂಸತ್ ಅಧಿವೇಶನದಲ್ಲಿ ಮಂಡಿಸಲು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಇತರ ಚುನಾವಣಾ ಆಯುಕ್ತರ ನೇಮಕ ಮಸೂದೆಯನ್ನು ಪಟ್ಟಿ ಮಾಡಿದೆ.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿ ಮಸೂದೆ – The Chief Election Commissioner and Other Election Commissioners (Appointment, Conditions of Service and Term of Office) Bill, 2023 ಬಗ್ಗೆ ಈಗಾಗಲೇ ದೇಶದಾದ್ಯಂತ ಚರ್ಚೆಗಳು ನಡೆಯುತ್ತಿದ್ದು, ಇದರ ಮಧ್ಯೆ ಈ ಬೆಳವಣಿಗೆ ನಡೆದಿದೆ.

ಈ ಹೊಸ ಮಸೂದೆಯಲ್ಲಿ ಸಿಇಸಿಯ ನೇಮಕಾತಿಗೆ ಪ್ರಧಾನ ಮಂತ್ರಿ ನೇತೃತ್ವದ ಆಯ್ಕೆ ಸಮಿತಿಯನ್ನು ರಚಿಸುವ ಪ್ರಸ್ತಾಪವಿದ್ದು, ಹಿಂದೆ ಸಮಿತಿಯಲ್ಲಿದ್ದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನು ತೆಗೆದುಹಾಕಿ ಪ್ರಧಾನಿ ಸೂಚಿಸುವ ಒಬ್ಬ ಕೇಂದ್ರ ಸಚಿವ ಹಾಗೂ ವಿರೋಧ ಪಕ್ಷದ ನಾಯಕ ಸದಸ್ಯರಾಗಿರುತ್ತಾರೆ.

ಈ ಅಧಿವೇಶನದಲ್ಲಿ ಪತ್ರಿಕೆ ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆ  2023  (The Press and Registration of Periodicals Bill, 2023) ಕೂಡ ಮಂಡನೆಯಾಗಲಿದೆ. ಈ ಮಸೂದೆಗೆ ಈಗಾಗಲೇ ಎಡಿಟರ್ಸ್‌ ಗಿಲ್ಡ್ ಆಫ್ ಇಂಡಿಯಾದ ಟೀಕೆಯನ್ನು ವ್ಯಕ್ತಪಡಿಸಿತ್ತು. ಈ ಬಿಲ್‌ ಸದ್ಯ ಇರುವ Press and Registration of Books Act, 1867 (PRB) ಅನ್ನು ಬದಲಿಸಿದೆ. ಅಲ್ಲದೇ, ಈ ಮಸೂದೆ ಆಗಸ್ಟ್ 3, ಗುರುವಾರದಂದು ಪ್ರತಿಪಕ್ಷಗಳ ಅನುಪಸ್ಥಿತಿಯಲ್ಲಿ ಧ್ವನಿ ಮತದ ಮೂಲಕ ರಾಜ್ಯಸಭೆಯಲ್ಲಿ ಅಂಗೀಕರವಾಗಿತ್ತು. ಈ ಹೊಸ ಮಸೂದೆ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಸವಾರಿ ಮಾಡಲಿದೆ ಎಂದು ಎಡಿಟರ್ಸ್‌ ಗಿಲ್ಡ್ ಆಫ್ ವಿರೋಧ ವ್ಯಕ್ತಪಡಿಸಿತ್ತು.

ಬುಲ್ಲೆಟಿನ್‌ ಬಿಡುಗಡೆಯಾದಂತೆ ಟ್ವೀಟ್‌ ಮಾಡಿರುವ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, “ಕೊನೆಗೂ ಸೋನಿಯಾ ಗಾಂಧಿಯವರು ಪ್ರಧಾನಿಗಳಿಗೆ ಪತ್ರ ಬರೆದು ಒತ್ತಡ ಹಾಕಿದ್ದಕ್ಕಾಗಿ ಸೆಪ್ಟೆಂಬರ್ 18ರಿಂದ ಪ್ರಾರಂಭವಾಗುವ ಸಂಸತ್ತಿನ ವಿಶೇಷ 5 ದಿನಗಳ ಅಧಿವೇಶನದ ಕಾರ್ಯಸೂಚಿಯನ್ನು ಮೋದಿ ಸರ್ಕಾರ ಬಿಡುಗಡೆ ಮಾಡಿದೆ. ಈಗ ಪ್ರಕಟಿಸಲಾಗಿರುವ ಕಾರ್ಯಸೂಚಿ ಗೊಂದಲದಿಂದ ಕೂಡಿದೆ.  ನವೆಂಬರ್‌ನ ಚಳಿಗಾಲದ ಅಧಿವೇಶನದವರೆಗೆ ಕಾಯಬಹುದಿತ್ತು. ಶಾಸಕಾಂಗದ ಗ್ರೆನೇಡ್‌ಗಳನ್ನು ಎಂದಿನಂತೆ ಕೊನೆಯ ಗಳಿಗೆಯಲ್ಲಿ ಎಸೆಯಲು ತಮ್ಮ ತೋಳುಗಳ ಮೇಲೆ ಇಟ್ಟುಕೊಂಡಿದ್ದಾರೆ. ಪರ್ದೇ ಕೆ ಪೀಚೆ ಕುಚ್ ಔರ್ ಹೈ ( ಏನೋ ಹಿಡನ್ ಅಜೆಂಡಾ ಇದೆ)! ಅದೇನೇ ಇರಲಿ, INDIA ಮೈತ್ರಿಕೂಟ  ಈ ಕಪಟ CEC ಮಸೂದೆಯನ್ನು ವಿರೋಧಿಸುತ್ತದೆ,”ಎಂದು ಹೇಳಿದ್ದಾರೆ.

ಈ ಅಧಿವೇಶನದಲ್ಲಿ  “ಸಂವಿಧಾನ ಸಭೆಯಿಂದ ಆರಂಭವಾಗಿ 75 ವರ್ಷಗಳ ಸಂಸತ್ತಿನ ಪಯಣ – ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಕಲಿಕೆಗಳು” ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು