Home ಜನ-ಗಣ-ಮನ ಬಾಕಿ ಹಣ ಕೊಡದ ಹೇಮಗಿರಿ ಸಕ್ಕರೆ ಕಾರ್ಖಾನೆ ವಿರುದ್ದ ಸಿಡಿದೆದ್ದ ಅನ್ನದಾತರು

ಬಾಕಿ ಹಣ ಕೊಡದ ಹೇಮಗಿರಿ ಸಕ್ಕರೆ ಕಾರ್ಖಾನೆ ವಿರುದ್ದ ಸಿಡಿದೆದ್ದ ಅನ್ನದಾತರು

0
ಮಿನಿ ವಿಧಾನಸೌಧದ ಮುಂದೆ ರೈತರಿಂದ ಶಂಖನಾದ, ಜಾಗಟೆ ಸದ್ದು, ಚಾಟಿ ಪ್ರಹಾರ ಪ್ರತಿಭಟನೆ

ಕೆ.ಆರ್.ಪೇಟೆ: ರಾಜ್ಯ ಸರ್ಕಾರ ಕಬ್ಬು ಬೆಳೆಗಾರರಿಗೆ ಘೋಷಿಸಿರುವ ಪ್ರತಿ ಟನ್‌ಗೆ 50 ರೂ. ಹೆಚ್ಚುವರಿ ಬೆಂಬಲ ಬೆಲೆಯನ್ನು ನೀಡದೆ ಸತಾಯಿಸುತ್ತಿರುವ ಮಾಕವಳ್ಳಿ ಹೇಮಗಿರಿ ಶುಗರ್ಸ್ ಕಾರ್ಖಾನೆ ವಿರುದ್ಧ ಕೆ.ಆರ್.ಪೇಟೆ ತಾಲ್ಲೂಕಿನ ರೈತ ಸಂಘದ ನೂರಾರು ಕಾರ್ಯಕರ್ತರು ತಾಲ್ಲೂಕಿನ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಶಂಖನಾದ,ಜಾಗಟೆ ಸದ್ದು,ಚಾಟಿ ಪ್ರಹಾರ ನಡೆಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿ ತಾಲೂಕು ಆಡಳಿತ ಹಾಗೂ ಕಾರ್ಖಾನೆಗೆ ಎಚ್ಚರಿಕೆ ನೀಡಿದ್ದರು.

ರೈತ ಸಂಘದ ಹಿರಿಯ ಮುಖಂಡ ಮುದುಗೆರೆ ರಾಜೇಗೌಡ ಮಾತನಾಡಿ ಕಳೆದ ಕಬ್ಬು ಹಂಗಾಮಿನಲ್ಲಿ ರಾಜ್ಯ ಸರ್ಕಾರ ಕಬ್ಬಿನ ಎಫ್‌ಆರ್‌ಪಿ ಜೊತೆಗೆ ಹೆಚ್ಚುವರಿಯಾಗಿ ಪ್ರತಿ ಟನ್‌ಗೆ 50 ರೂ. ನೀಡುವಂತೆ ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ಆದೇಶಿಸಿತ್ತು. ಅದರಂತೆ ರಾಜ್ಯದ ಸಕ್ಕರೆ ಕಾರ್ಖಾನೆಗಳು ಕಾರ್ಖಾನೆಗಳು ಈಗಾಗಲೇ ರೈತರ ಖಾತೆಗೆ ಹಣ ಜಮೆ ಮಾಡಿವೆ. ಆದರೆ ಮಾಕವಳ್ಳಿ ಹೇಮಗಿರಿ ಶುಗರ್ಸ್ ಮಾತ್ರ ಸಾವಿರಾರು ಕಬ್ಬು ಬೆಳೆದ ರೈತರಿಗೆ ಕೋಟಿ, ಕೋಟಿ ರೂ ಬಾಕಿ ಉಳಿಸಿಕೊಂಡು, ಸರ್ಕಾರದ ಆದೇಶ ಪ್ರಶ್ನಿಸಿ ಉದ್ದೇಶಪೂರ್ವಕವಾಗಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದೆ ಎಂದು ಆರೋಪಿಸಿದ ಅವರು ಕಾರ್ಖಾನೆ ಆಡಳಿತ ಮಂಡಳಿ 7 ದಿನದೊಳಗೆ ತಡೆಯಾಜ್ಞೆ ಹಿಂಪಡೆದು ಬಾಕಿ ಹಣ ಪಾವತಿಸಬೇಕು ಇಲ್ಲವಾದರೆ ಕಾರ್ಖಾನೆ ಗೇಟ್‌ಗೆ ಬೀಗ ಹಾಕುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಮನವಿ ಸ್ವೀಕರಿಸಿದ ತಹಶೀಲ್ದಾರ್ ಡಾ: ಎಸ್.ಯು ಅಶೋಕ್ ಮನವಿ ಸ್ವೀಕರಿಸಿ ರೈತರ ಬೇಡಿಕೆ ನ್ಯಾಯಸಮ್ಮತವಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತಂದು, ಕಾರ್ಖಾನೆ ಮಾಲೀಕರ ಸಭೆ ಕರೆದು ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ಭರವಸೆ ನೀಡಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ಹೇಮಗಿರಿ ಸಕ್ಕರೆ ಕಾರ್ಖಾನೆಯ ಅಧಿಕಾರಿ ದತ್ತಾತ್ರೇಯ ಈ ಸಂಬಂಧ ಎಂದು ಉಡಾಫೆ ಉತ್ತರ ನೀಡಿದ ಬಳಿಕ ಸ್ಥಳದಲ್ಲಿದ್ದ ರೈತರು ಉಳಿದ 40 ಕಾರ್ಖಾನೆಗಳು ಹಣ ಕೊಡುವಾಗ ಹೇಮಗಿರಿಗೆ ಮಾತ್ರ ನಷ್ಟವೇ? ನಾವು ಬೆವರು ಸುರಿಸಿ ಬೆಳೆದ ಕಬ್ಬು ಅರೆದು ಸಕ್ಕರೆ ಮಾರಿ ಲಾಭ ಮಾಡಿಕೊಂಡಿದ್ದೀರಿ. ನಮ್ಮ ಪಾಲಿನ 50 ರೂಪಾಯಿ ಕೊಡಲು ಕೋರ್ಟ್‌ಗೆ ಹೋಗ್ತೀರಾ? ನಿಮ್ಮ ಕಾರ್ಖಾನೆ ರೈತರ ಬೆವರು ಹಣನುಂಗುವ ಜೊತೆಗೆ ಸುತ್ತಮುತ್ತಲಿನ ಜನಸಾಮಾನ್ಯರಿಗೆ ಮಾರಕ ಕಾರ್ಖಾನೆ ಎಂದು ಶಂಖ ಊದಿ ಆಕ್ರೋಶ ವ್ಯಕ್ತಪಡಿಸಿ ಮುತ್ತಿಗೆ ಹಾಕಿದರು.

ಕೆ.ಆರ್.ಪೇಟೆ.ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿಯವರೆಗೂ ಆಗಮಿಸಿದ್ದ ಸುಮಾರು 800ಕ್ಕೂ ಹೆಚ್ಚು ರೈತರು ಚಾಟಿ, ಶಂಖ, ಜಾಗಟೆ, ಡೊಳ್ಳು ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ,ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರು. ಕಾರ್ಖಾನೆ ಆಡಳಿತ ಮಂಡಳಿಯ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಂದಗೆರೆ ಜಯರಾಮ್,ಕೆ.ಆರ್.ಪೇಟೆ ತಾಲ್ಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ,ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬೂಕನಕೆರೆ ನಾಗರಾಜು, ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್,ಸಿಂದಘಟ್ಟ ಮುದ್ದುಕುಮಾರ್,ಲಕ್ಷ್ಮಿಪುರ ಜಗದೀಶ್,ಕರೋಟಿ ತಮ್ಮಯ್ಯ,ಚೌಡೇನಹಳ್ಳಿ ನಾರಾಯಣಸ್ವಾಮಿ, ರಾಮೇಗೌಡ,ಹಿರಿಕಳಲೆ ನಾಗರಾಜ್,ಕಾರಿಗನಹಳ್ಳಿ ಕುಮಾರ್, ಶಂಕರ್, ಕರೋಟಿ ಪುಟ್ಟೇಗೌಡ,ಹೆಗ್ಗಡಹಳ್ಳಿ ಚೇತನ್,ವಿಠಲಪುರ ಅರುಣ್,ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

You cannot copy content of this page

Exit mobile version