ಕೊಪ್ಪದಲ್ಲಿ ಮೇ 3ರಂದು ಬೃಹತ್ ಸರ್ವ ಸಮಾಜೋತ್ಸವ : ಏಕತೆಯ ಸಂದೇಶ ಸಾರಲು ಮಲೆನಾಡು-ಕರಾವಳಿ ಜನಪರ ಒಕ್ಕೂಟದ ಮಹತ್ವದ ನಡೆ

ಕೊಪ್ಪ: ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ಮಲೆನಾಡು-ಕರಾವಳಿ ಜನಪರ ಒಕ್ಕೂಟದ ವತಿಯಿಂದ ಮೇ 3ರಂದು ಬೃಹತ್ ಸರ್ವ ಸಮಾಜೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾವಿರಾರು ಜನರ ಭಾಗವಹಿಸುವಿಕೆ ನಿರೀಕ್ಷಿಸಲಾಗಿದೆ. ಈ ಸಲುವಾಗಿ ಶೃಂಗೇರಿ ತಾಲ್ಲೂಕಿನ ಕೂತುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಮೇಶ್ ಭಟ್ ಅವರ ಮನೆಯಂಗಳದಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮದ ಆಯೋಜಕರಾದ ಅನಿಲ್ ಹೊಸಕೊಪ್ಪ ಮಾತನಾಡಿದರು‌.

ಈ ನಿಮಿತ್ತ ಆಹ್ವಾನ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಮಲೆನಾಡು-ಕರಾವಳಿ ಜನಪರ ಒಕ್ಕೂಟದ ಮುಖಂಡ ಅನಿಲ್ ಹೊಸಕೊಪ್ಪ ಅವರು, “ಒಡೆದು ಹೋದ ಮನಸ್ಸುಗಳನ್ನು ಒಗ್ಗೂಡಿಸುವುದೇ ಸರ್ವ ಸಮಾಜೋತ್ಸವದ ಮೂಲ ಉದ್ದೇಶ. ಭಾರತದ ನಿಜವಾದ ಸೌಂದರ್ಯ ಅಡಗಿರುವುದು ವೈವಿಧ್ಯತೆಯಲ್ಲಿ ಮತ್ತು ಕೂಡಿ ಬಾಳುವ ಸಂಸ್ಕೃತಿಯಲ್ಲಿ. ಆದರೆ ಇಂದು ದೇಶದಾದ್ಯಂತ ಜನರ ಮನಸ್ಸಿನಲ್ಲಿ ದ್ವೇಷ ಮತ್ತು ಅಸೂಯೆ ಬಿತ್ತಿ ಒಡೆದಾಳುವ ಪ್ರವೃತ್ತಿ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ಈ ಕಾರ್ಯಕ್ರಮ ಕೂಡಿ ಬಾಳುವ ಸ್ಫೂರ್ತಿ ತುಂಬುತ್ತದೆ” ಎಂದು ಸ್ಪಷ್ಟಪಡಿಸಿದರು.

ಸರ್ವ ಸಮಾಜೋತ್ಸವದ ಶೃಂಗೇರಿ ತಾಲ್ಲೂಕು ಸಮಿತಿ ಅಧ್ಯಕ್ಷ ಛಾಯಾಪತಿ ಮಾತನಾಡಿ, “ಅನಿಲ್ ಹೊಸಕೊಪ್ಪ ಮತ್ತು ಸುಧೀರ್ ಕುಮಾರ್ ಮುರೋಳ್ಳಿ ನೇತೃತ್ವದಲ್ಲಿ ಮಲೆನಾಡಿನ ಜನರ ನ್ಯಾಯಯುತ ಹಕ್ಕೊತ್ತಾಯಗಳನ್ನು ಬಲವಾಗಿ ಮಂಡಿಸಲಾಗುವುದು. ಮಲೆನಾಡಿನಲ್ಲಿ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜು ಸ್ಥಾಪನೆ, ಹೈನುಗಾರಿಕೆ ಉತ್ತೇಜನಕ್ಕೆ ಹಾಲಿನ ಘಟಕ ಸ್ಥಾಪನೆ ಹಾಗೂ ಮಾರಕ ಅರಣ್ಯ ಕಾಯ್ದೆಗಳ ಕಾರಣ ಅಸ್ತಿತ್ವ ಕಳೆದುಕೊಂಡ ಸ್ಥಳೀಯ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕೆಂಬ ಒತ್ತಾಯ ಪ್ರಮುಖ ಬೇಡಿಕೆಗಳಾಗಿವೆ” ಎಂದು ತಿಳಿಸಿದರು.

ಶೃಂಗೇರಿ ವಿಧಾನಸಭಾ ಕ್ಷೇತ್ರದ ಶೃಂಗೇರಿ, ನರಸಿಂಹರಾಜಪುರ ಮತ್ತು ಕೊಪ್ಪ ತಾಲ್ಲೂಕುಗಳ ಜೊತೆಗೆ ತೀರ್ಥಹಳ್ಳಿ, ಚಿಕ್ಕಮಗಳೂರು, ಮೂಡಿಗೆರೆ ಮತ್ತು ಶಿವಮೊಗ್ಗ ಭಾಗಗಳಿಂದಲೂ ಸಾವಿರಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಯಕ್ರಮ ಪಕ್ಷಾತೀತವಾಗಿದ್ದು, ಪ್ರತಿ ಹಳ್ಳಿಗಳಲ್ಲೂ ಅರಿವು ಮೂಡಿಸಲು ಸ್ವಯಂಸೇವಕರು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ಒಕ್ಕೂಟದ ಕಾರ್ಯಕರ್ತರು, ಮಲೆನಾಡು ಜನಪರ ಚಳುವಳಿ ಮುಖಂಡರು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು