ಇಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ ಮೈತ್ರಿಕೂಟದಿಂದ ಮಹಾ ಸಭೆ ಜರುಗಿತು.
ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಬೇಕಿದೆ. ದೇಶದಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಯುತ್ತಿಲ್ಲ. ಪ್ರಧಾನಿ ಮೋದಿಗೆ ಪ್ರಜಾಪ್ರಭುತ್ವ ಬೇಡ. ಅವರು ಸರ್ವಾಧಿಕಾರದ ರೀತಿಯಲ್ಲಿ ದೇಶವನ್ನು ನಡೆಸಲು ಬಯಸುತ್ತಾರೆ ಎಂದು ಹೇಳಿದರು.
ರಾಜಕೀಯ ಪಕ್ಷಗಳು ಮತ್ತು ಮುಖಂಡರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದ್ದು, ಇದರಿಂದ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಲೋಕಸಭೆ ಚುನಾವಣೆಯನ್ನು ಫಿಕ್ಸ್ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಚುನಾವಣೆಗೂ ಮುನ್ನ ನಾಯಕರನ್ನು ಜೈಲಿಗೆ ಹಾಕಲಾಗುತ್ತಿದೆ ಎಂದರು. ಚುನಾವಣೆ ನಡೆಸುವ ಅಧಿಕಾರಿಗಳನ್ನು ಬದಲಾಯಿಸಲಾಗಿದೆ. ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಆದಾಯ ತೆರಿಗೆ ಇಲಾಖೆ ಮೂಲಕ ಬೆದರಿಕೆ ಹಾಕಲಾಗುತ್ತಿದೆ. ಸಂವಿಧಾನ ಬದಲಿಸಲು ಬಿಜೆಪಿ ತಯಾರಿ ನಡೆಸುತ್ತಿದೆ. ಹೀಗಾಗಿ ಮೋದಿ ಸರಕಾರವನ್ನು ಕಿತ್ತೊಗೆಯುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಚುನಾವಣಾ ಬಾಂಡ್‌ಗಳ ತನಿಖೆಗೆ ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ವಿಶೇಷ ಸಮಿತಿಯನ್ನು ರಚಿಸಬೇಕು ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ಅರವಿಂದ್ ಕೇಜ್ರಿವಾಲ್ ಮತ್ತು ಹೇಮಂತ್ ಸೋರೆನ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಮತ್ತು ರಾಜಕೀಯ ಪಕ್ಷಗಳ ಆರ್ಥಿಕ ಮೂಲಗಳನ್ನು ತಡೆಯಬಾರದು. ಚುನಾವಣಾ ಆಯೋಗ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದರು.