ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 258 ಸರ್ಕಾರಿ ಕಚೇರಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೋಟಿಸ್ ಜಾರಿ ಮಾಡಿದೆ. ಆಸ್ತಿ ತೆರಿಗೆ ಬಾಕಿಗೆ ಸಂಬಂಧಿಸಿದಂತೆ, ಒಟ್ಟು ಎಷ್ಟು ಮೊತ್ತ ಬಾಕಿ ಇದೆ ಎಂದು ತಿಳಿದು ಬಂದಿಲ್ಲ. ಆದರೆ ಬಹಳ ವರ್ಷಗಳಿಂದ ತೆರಿಗೆ ಪಾವತಿಯಾಗದೇ ಉಳಿದಿದೆ ಎನ್ನಲಾಗಿದೆ. ನೂರಾರು ಕೋಟಿ ಬಾಕಿ ಇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಖಾಸಗಿ ಆಸ್ತಿಗಳಂತೆ, ಈಗ ಸರ್ಕಾರಿ ಆಸ್ತಿಗಳಿಗೂ ತೆರಿಗೆ ಪಾವತಿ ಕಡ್ಡಾಯವಾಗಿದ್ದು, ಈ ನಿಟ್ಟಿನಲ್ಲಿ ತೆರಿಗೆ ಬಾಕಿ ಇರುವ ಕಚೇರಿಗಳಿಗೆ ಬಿಬಿಎಂಪಿ ನೋಟೀಸು ನೀಡಿದೆ. ಈ ಪಟ್ಟಿಯಲ್ಲಿ ವಿಧಾನಸೌಧ, ವಿಕಾಸ ಸೌಧ ಮತ್ತು ರಾಜಭವನ ಮುಂತಾದ ಪ್ರಮುಖ ಸರ್ಕಾರಿ ಕಚೇರಿಗಳು ಸೇರಿರುವುದು ಈ ಪಟ್ಟಿಯಿಂದ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸರಕಾರದಿಂದ ಇನ್ನೂ ಯಾವ ಪ್ರತಿಕ್ರಿಯೆಯೂ ಬಂದಿಲ್ಲ.
ಚಕ್ರಬಡ್ಡಿಯನ್ನು ಕಡಿಮೆ ಮಾಡುವ ಮತ್ತು ದಂಡವನ್ನು ಶೇ.50ರಷ್ಟು ಕಡಿಮೆ ಮಾಡುವ ವನ್ ಟೈಮ್ ಸೆಟಲ್‌ಮೆಂಟ್ ಯೋಜನೆಯು ಜಾರಿಯಲ್ಲಿತ್ತು. ಆದರೆ ಸರಕಾರಿಯ ಕಚೇರಿಗಳು ಅದರ ಪ್ರಯೋಜನ ಪಡೆಯಲು ವಿಫಲವಾಗಿದೆ. ಆ ಯೋಜನೆಯ ಕಾಲಾವಧಿ ಪೂರ್ಣಗೊಳ್ಳುವ ಮೊದಲಿನಿಂದಲೂ, ಬಿಬಿಎಂಪಿ ಸತತವಾಗಿ ನೋಟಿಸ್‌ಗಳನ್ನು ಕಳುಹಿಸಿ, ತೆರಿಗೆ ಪಾವತಿ ಮಾಡಲು ಸೂಚನೆ ನೀಡುತ್ತಾ ಬಂದಿದೆ.ತೆರಿಗೆ ಪಾವತಿ ಬಾಕಿ ಇರುವ ಖಾಸಗಿ ಆಸ್ತಿ ಮಾಲಿಕರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಬಿಬಿಎಂಪಿ, ಅಂತಹ ಆಸ್ತಿಗಳನ್ನು ಹರಾಜಿಗೆ ಹಾಕಿ ತೆರಿಗೆ ಬಾಕಿ ವಸೂಲಿಗೆ ಮುಂದಾಗಿದೆ. ಆದರೆ ಸರ್ಕಾರಿ ಕಚೇರಿಗಳ ವಿರುದ್ಧ ಇನ್ನೂ ಯಾವ ಕ್ರಮವನ್ನೂ ಬಿಬಿಎಂಪಿ ಕೈಗೊಂಡಿಲ್ಲ.