LGBTQ+ ಸಮುದಾಯಗಳ ಕತೆಗಳನ್ನು ಪೀಪಲ್ ನಿಮ್ಮ ಮುಂದೆ ಇಡುತ್ತಿದೆ. ಡೇಟಿಂಗ್, ನಿರುದ್ಯೋಗ, ಮನೆಯಿಂದ ತಿರಸ್ಕಾರ, ಪ್ರೇಮ-ಕಾಮ, ಮಾನಸಿಕ ಸಮಸ್ಯೆಗಳು.. ಹೇಗೆ ಸಾಲು ಸಾಲು ಸಮಸ್ಯೆಗಳಿಂದ ನಲುಗಿ ಹೋಗುತ್ತಿರುವ ಗೇ ಸಮುದಾಯ ಅತ್ಯಂತ ಹೆಚ್ಚು ಸೃಜನಶೀಲ ಜನರನ್ನು ಹೊಂದಿದೆ. ಹೆಟರೋಸೆಕ್ಸುವಲ್ ಸಮುದಾಯಗಳು ಕಂಡಿರದ ಕಥೆಗಳನ್ನು 'ನಿಮ್ಮ Gayಳೆಯನ ಕಥೆ!' ಎಂಬ ಅಂಕಣದ ಮೂಲಕ ನಿಮ್ಮ ಮುಂದಿಡುತ್ತೇವೆ.
ಲೇಖನ: ಸೂರಜ್ ಹೊನಗಂಗಪ್ಪ
2020 ರ ಮಾರ್ಚ್ ತಿಂಗಳು,
ಜನರೆಲ್ಲಾ ಕೊರೋನ ಸಾಂಕ್ರಮಿಕ ರೋಗಕ್ಕೆ ಹೆದರಿ ಬೆಂಗಳೂರು ಬಿಡುತ್ತಿದ್ದರೆ, ನಾನು ಬೆಂಗಳೂರಿಗೆ ಬಂದು ಅತ್ತಿಗುಪ್ಪೆಯಲ್ಲೊಂದು ಬಾಡಿಗೆ ಮನೆಯಲ್ಲಿ ಕೂತಿದ್ದೆ.
ಒಂದು ವರ್ಷಗಳ ಕಾಲ ಬೇರೆ ಬೇರೆ ನಗರಗಳಲ್ಲಿ ಕೆಲಸ ಮಾಡಿ, ಕೊನೆಗೆ ಬೆಂಗಳೂರಿಗೆ ಬಂದು ಮುಂದಿನ ಬದುಕನ್ನು ಕಟ್ಟಿಕೊಳ್ಳುವುದೆಂದರೆ ಸಾಗರದಲ್ಲಿ ಈಜಲು ಇಳಿದಂತೆ. ಬೆಂಗಳೂರಿಗೆ ಬರಲು ಉದ್ಯೋಗವೊಂದೇ ಕಾರಣವಾಗಿರಲಿಲ್ಲ. ಬೆಳೆದ ಊರಿನಲ್ಲಿ ʼನನ್ನಂತದ್ದೇʼ ಸ್ನೇಹಿತರನ್ನು ಹುಡುಕಲು ಆಗದಿದ್ದಾಗ ಬೆಂಗಳೂರು ನನ್ನಲ್ಲಿ ಕನಸುಗಳನ್ನು ಬಿತ್ತಿತ್ತು. ಅಲ್ಲಿಗೆ ಹೋದರೆ ʼನನ್ನಂತದ್ದೇʼ ಸ್ನೇಹಿತರನ್ನು ಮಾಡಿಕೊಳ್ಳಬಹುದು, ಸುತ್ತಾಡಬಹುದು, ಸಿನೇಮಾ ನೋಡಬಹುದು, ಓದಬಹುದು ಎಂಬೆಲ್ಲಾ ಯೋಚನೆಗಳು.
ಅದೊಂದು ಭ್ರಮೆಯಷ್ಟೇ!
ಬೆಳೆದ ಊರಿನಲ್ಲಿ ‘ಗೇ’ ಎಂದು ತಮ್ಮನ್ನು ಗುರುತಿಸಿಕೊಂಡವರನ್ನು ಹುಡುಕಿ ಸ್ನೇಹಿತರ ಬಳಗ ಕಟ್ಟಿಕೊಳ್ಳಲು ಸಾಧ್ಯವಿರಲಿಲ್ಲ. ನನ್ನಂತ ಸಾವಿರಾರು ಮಂದಿ ಬೆಂಗಳೂರಿನಲ್ಲಿದ್ದಾರೆ, ಅವರ ಪರಿಚಯವಾಗುವುದು ತುಂಬಾ ಸುಲಭ ಎಂದೆನ್ನಿಸಿತ್ತು.
ಆಗ ಗ್ರಿಂಡರ್ ಎಂಬ ಡೇಟಿಂಗ್ ಆಪ್ ತುಂಬಾ ಬಳಕೆಯಲ್ಲಿತ್ತು. ಸ್ನೇಹಿತರಾಗಲೋ, ಸೆಕ್ಸ್ ಮಾಡಲೋ, ಕೊನೆಗೆ ದುಡಿಮೆ ಇಲ್ಲದೆ ನಾಲ್ಕು ಕಾಸು ಮಾಡಲು ಗೇಗಳ ದಂಡೇ ಅಲ್ಲಿರುತ್ತಿತ್ತು.
ಮೊದಲ ಲಾಕ್ ಡೌನ್ ನಂತರ ಇಡೀ ಬೆಂಗಳೂರು ಖಾಲಿ ಖಾಲಿಯಾಗಿತ್ತು. ರಸ್ತೆಗಳಲ್ಲಿ ನಡೆದು ಹೋಗುವವರನ್ನೂ ಬಿಡದೆ, ಸುಮ್ಮನೆ ಸುತ್ತಾಡುವವರ ಕುಂಡೆಗೆ ಪೊಲೀಸರು ನಿರ್ದಯವಾಗಿ ಭಾರಿಸುತ್ತಿದ್ದರು. ನಾನು ವಾಸವಿದ್ದ ಅಪಾರ್ಟ್‌ಮೆಂಟಿನ ಕೆಳಗೆ ಬೈಕುಗಳಲ್ಲಿ ಬರುವವರನ್ನು ಪೊಲೀಸರು ಬೆಂಡೆತ್ತುತ್ತಿದ್ದರು.
ಒಂದು ಕಡೆ ಸೋಂಕು ಬರಬಹುದು ಎಂಬ ಭಯವಾದರೆ, ಇನ್ನೊಂದು ಕಡೆ ಸ್ಟ್ರಿಕ್ಟ್ ನಿಯಮಕ್ಕೆ ಹೆದರಿ ಮನೆಯಿಂದ ಹೊರಬರುತ್ತಿರಲಿಲ್ಲ.
ಹೀಗೆ ಹತ್ತಿರತ್ತಿರ ಒಂದು ತಿಂಗಳೇ ಕಳೆಯಿತು. ಒಂಟಿಯಾಗಿ ಮನೆಯಲ್ಲಿ ದಿನಗಳನ್ನು ದೂಡುತ್ತಿದ್ದೆ. ಮಾತನಾಡಲು ಯಾರೂ ಇಲ್ಲ. ಇಡೀ ಅಪಾರ್ಟ್‌ಮೆಂಟಿನಲ್ಲಿ ಇದ್ದಿದ್ದು ನನ್ನನ್ನು ಬಿಟ್ಟರೆ, ಕೆಳಗಿರುವ ನಂದಿನಿ ಹಾಲಿನಂಗಡಿಯವನು.
ಒಂಟಿತನ ನೆಮ್ಮದಿಯನ್ನು ಕಿತ್ತು ತಿನ್ನುತ್ತಿತ್ತು. ಫೋನಿನಲ್ಲಿ ಮಾತನಾಡಲೂ ಯಾರೂ ಇಲ್ಲ. ಕೊರೋನ ಬಹುತೇಕರ ಮಾನಸಿಕ ಅರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಿತ್ತು. ಗ್ರಿಂಡರ್ ಓಪನ್ ಮಾಡಿದರೆ ನೂರಾರು ಜನ. ಕೆಲವರು ಬೆತ್ತಲೆ ಫೋಟೋ ಕಳಿಸುವವರು, ತುಂಬಾ ಜನಕ್ಕೆ ಮುಖವೇ ಇರಲಿಲ್ಲ. ಯಾವುದೋ ಪಾರ್ನ್ ಸ್ಟಾರ್, ಸಿನೇಮಾ ನಟರ ಫೋಟೋಗಳನ್ನು ಡಿಪಿ ಹಾಕಿಕೊಂಡಿದ್ದಾರೆ.
ಲಾಕ್‌ಡೌನ್ ಕೊಂಚ ಸಡಿಲ ಮಾಡಿದ್ದರು.
ನಾನು ಗ್ರಿಂಡರ್‌ನಲ್ಲಿ ಒಬ್ಬನೊಂದಿಗೆ ಚಾಟ್ ಮಾಡುತ್ತಿದ್ದೆ. ಆತ ತನ್ನ ಫೋಟೋವನ್ನು ಕಳುಹಿಸಿದ್ದ, ನಾನೂ ನನ್ನ ಮುಖವನ್ನು ತೋರಿಸಿದ್ದೆ. ಆತನ ಮನೆ ಅಲ್ಲೇ ಹತ್ತಿರದಲ್ಲೇ ಎಲ್ಲೋ.
ಅದೂ ಇದೂ ಅಂತ ಸೆಕ್ಸ್‌ಗೆ ಹೊರತಾದ ಚಾಟ್. ಒಂದು ದಿನ ಸಂಜೆ ಕಾಫಿ ಕುಡಿಯಲು ಮನೆಗೆ ಕರೆದೆ. ಯಾರೋ ಒಬ್ಬರ ಜೊತೆಗೆ ಮಾತನಾಡುವುದೆಂದರೆ ಆ ಸ್ಥಿತಿಯಲ್ಲಿ ಅದೇನೋ ಸಂಭ್ರಮ.
“ಸಂಜೆ ಬಾ, ಕಾಫಿ ಕುಡಿಯುತ್ತಾ ಮಾತನಾಡುವ!” ಅಂತ ಮನೆಗೆ ಕರೆದೆ.
ನಾನು ಕಳುಹಿಸಿದ ಲೊಕೇಷನ್ ಬಳಸಿ ಅಪಾರ್ಟ್‌ಮೆಂಟಿನ ಕೆಳಗೆ ಬಂದವನನ್ನು ಮೇಲಕ್ಕೆ ಕರೆದೆ. ಕಾಫಿ ಕುಡಿಯುತ್ತಾ ಕಾಲೇಜು, ಕೊರೋನ, ಮನೆ ಹೀಗೆಲ್ಲಾ ಎನೇನೋ ಹದಿನೈದು ನಿಮಿಷ ಮಾತನಾಡಿದೆವು. ನಾನು ಕಾಫಿ ಕಪ್ ತೊಳೆಯಲು ಅಡುಗೆ ಕೋಣೆಗೆ ಹೋಗಿ, ಮತ್ತೆ ಆತನ ಪಕ್ಕ ಬಂದು ಕುಳಿತುಕೊಂಡೆ.
ಆತ ನಿಧಾನವಾಗಿ ನನ್ನ ಭುಜಗಳಿಗೆ ಕೈ ಹಾಕಿ ಸವರ ತೊಡಗಿದೆ. ನನ್ನ ಅಂಗಿಗಳನ್ನು ಕಳಚಿ ನನ್ನ ತೊಡೆಯ ಮೇಲೆ ಕುಳಿತುಕೊಂಡ.
ಇದ್ದಕ್ಕಿದ್ದಂತೆ ಮನೆಯ ಬಾಗಿಲನ್ನು ತೆರೆದು ಇಬ್ಬರು ಹುಡುಗರು ಒಳಬಂದರು. ನನ್ನ ಅಂಗಿಯನ್ನು ಕಸಿದುಕೊಂಡು ವೀಡಿಯೋ ಮಾಡತೊಡಗಿದರು. ಒಬ್ಬ ನನ್ನ ಕೆನ್ನೆಗೆ ಪಟಾರನೆ ಭಾರಿಸಿದ.
ಭಯದಿಂದ ಹೊಟ್ಟೆ ಕಿವುಚಿದಂತಾದರೂ ಧೈರ್ಯ ತಪ್ಪುವಂತಿಲ್ಲ.
“ಕೆಲಸ ಆಯ್ತಲ್ಲಾ, ಕಾಸು ಕೊಡು..ಐದು ಸಾವಿರ!” ಎಂದು ಒಬ್ಬ ಕೇಳಿದ.
“ಅಯ್ಯೋ, ನಾನು ಕಾಸು ಕೊಡುತ್ತೇನೆ ಎಂದು ಇವನನ್ನು ಕರೆದಿಲ್ಲ,” ಎಂದು ಹೇಳಿದರೂ ಕೇಳದೆ, “ಹಣ ಕೊಡದಿದ್ದರೆ ನಾವು ನಿನ್ನ ಈ ವಿಡಿಯೋವನ್ನು ಟ್ರಾನ್ಸ್‌ಜೆಂಡರ್‌ಗಳ ಗ್ರೂಪುಗಳಲ್ಲಿ ಹಾಕುತ್ತೇವೆ!” ಎಂದು ಧಮ್ಕಿ ಹಾಕಿದ. ಇನ್ನೊಬ್ಬ ಟ್ರಾನ್ಸ್‌ಜೆಂಡರ್‌ಗಳಂತೆಯೇ ಚಟಚಟ ಎಂದು ಚಪ್ಪಾಳೆ ಹೊಡೆದ.
ನಾನು ಸಮಧಾನದಿಂದ, “ಕುಳಿತುಕೊಳ್ಳಿ, ,ಮಾತನಾಡುವ. ಹಣ ಕೊಡುತ್ತೇನೆ,” ಎಂದೆ.
ಅದರಲ್ಲೊಬ್ಬ ಮನೆಗೆ ಬಂದಿದ್ದ ಹುಡುಗ ಹುಡುಗಿಯಂತೆ ಬಟ್ಟೆ ಧರಿಸಿರುವ ಫೋಟೋವನ್ನು ತೋರಿಸಿ ಅವರೆಲ್ಲರೂ ಪಕ್ಕಾ ಟ್ರಾನ್ಸ್‌ಜೆಂಡರ್ ಸಮುದಾಯದವರು ಎಂದು ನಂಬಿಸಲು ಪ್ರಯತ್ನಿಸುತ್ತಿದ್ದ.
ಎಸ್, ಅವರ್ಯಾರೂ ಟ್ರಾನ್ಸ್‌ಜೆಂಡರ್‌ಗಳಲ್ಲ. ಮನೆಗೆ ಬಂದ ಹುಡುಗ ನನ್ನಂತೆ ಗೇ ಇದ್ದಿರಲೂ ಬಹುದು. ಮೂವರೂ ಗ್ರಿಂಡರ್ ಬಳಸಿಕೊಂಡು ಅಸಹಾಯಕರನ್ನು ದರೋಡೆ ಮಾಡುವವರು.
“ನನ್ನಲ್ಲಿ ಹಣ ಇಲ್ಲ, ನಾನು ನನ್ನ ಫ್ರೆಂಡನ್ನು ಕೇಳಿ ಕೊಡ್ತೇನೆ. ಪ್ಲೀಸ್ ವಿಡಿಯೋ ಡಿಲಿಟ್ ಮಾಡಿ!” ಎಂದು ಕೇಳಿಕೊಂಡೆ.
“ಮೊದಲು ಕಾಸು ಕೊಡು, ಆಮೇಲೆ ಡಿಲಿಟ್ ಮಾಡ್ತೇನೆ.”
ಹೇಗೋ ಏನೋ ಐದು ಸಾವಿರವನ್ನು ಮೂರು ಸಾವಿರಕ್ಕೆ ಇಳಿಸಿದೆ. ಅಪಾರ್ಟ್‌ಮೆಂಟಿನ ಕೆಳಗೆ ಬಂದು ಹಿರಿಯ ಸ್ನೇಹಿತರೊಬ್ಬರಿಗೆ ಫೋನ್ ಮಾಡಿ ಮೂರು ಸಾವಿರ ತೆಗೆದುಕೊಂಡು, ಅದನ್ನು ಮೂವರಲ್ಲೊಬ್ಬನ ಗೂಗಲ್‌ಪೇಗೆ ಹಾಕಿದೆ.
ಮೂವರೂ ಒಂದೇ ಸ್ಕೂಟರ್ ಹತ್ತಿದರು. ಮನೆಗೆ ಕಾಫಿ ಕುಡಿಯಲು ಬಂದ ಹುಡುಗ ಇಳಿದು ಬಂದು, ಪೆಚ್ಚು ಮೋರೆ ಹಾಕಿ “ಸ್ಸಾರಿ…!” ಎಂದ.
ಆತನ ಬೆನ್ನನ್ನು ಮೆದುವಾಗಿ ತಟ್ಟಿ, “ಇಟ್ಸ್ ಓಕೆ!” ಎಂದೆ.