Wednesday, June 19, 2024

ಸತ್ಯ | ನ್ಯಾಯ |ಧರ್ಮ

ಗ್ಯಾರಂಟಿ ಯೋಜನೆ ಮೂಲಕ ₹52 ಸಾವಿರ ಕೋಟಿ ಹಣ ಬಡವರ ಕೈಸೇರುತ್ತಿರುವುದು ಜಗತ್ತಿನಲ್ಲೇ ಮೊದಲು : ಕೃಷ್ಣಭೈರೇಗೌಡ

ಬೆಂಗಳೂರು : ದಿನೋಪಯೋಗಿ ವಸ್ತುಗಳ ಬೆಲೆ ದಿನನಿತ್ಯ ಏರಿಕೆಯಾಗುತ್ತಿದ್ದು, ಬಡವರ ಬದುಕು ದುಸ್ಥರವಾಗಿದೆ. ಈ ಹಿನ್ನೆಲೆಯಲ್ಲಿ ಬಡವರಿಗೆ ಅನುಕೂಲವಾಗಲಿ, ಪ್ರತಿಯೊಂದು ಕುಟುಂಬಗಳಿಗೆ ತಿಂಗಳಿಗೆ 4 ರಿಂದ 5 ಸಾವಿರ ಹಣ ಉಳಿತಾಯವಾಗಲಿ ಎಂಬ ಕಾರಣಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ 52 ಸಾವಿರ ಕೋಟಿ ರೂ. ಹಣವನ್ನು ಜನಪರ ಯೋಜನೆಯ ಅಡಿಯಲ್ಲಿ ಜನರ ಕೈಗೇ ನೀಡುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕೋಗಿಲು ವಾರ್ಡ್ ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಿಂಚಣಿ ಹಾಗೂ ಗೃಹಲಕ್ಷ್ಮಿ ಮಂಜೂರಾತಿ ಪತ್ರ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಸರ್ಕಾರ ರಚನೆಯಾಗಿ ಕೇವಲ ಎರಡೇ ತಿಂಗಳಲ್ಲಿ ಆಶ್ವಾಸನೆ ನೀಡಿದ ಎಲ್ಲಾ ಯೋಜನೆಗಳನ್ನೂ ಜಾರಿಗೆ ತರುವ ಮೂಲಕ ಬಡ-ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಈ ಮೂಲಕ ಕಾಂಗ್ರೆಸ್ ಬಡವರ ಪರ ಸರ್ಕಾರ ಎಂಬುದನ್ನು ಮತ್ತೊಮ್ಮೆ ಸಾಬೀತುಮಾಡಿದೆ” ಎಂದರು.

ಮಹಿಳೆಯರ ಸಬಲೀಕರಣಕ್ಕಾಗಿ ಶಕ್ತಿ ಯೋಜನೆಯ ಅಡಿಯಲ್ಲಿ ಉಚಿತ ಸಾರಿಗೆ ವ್ಯವಸ್ಥೆ ನೀಡಲಾಗಿದೆ. ಎಲ್ಲರ ಮನೆಗಳಿಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯೂ ಆಗಸ್ಟ್ ತಿಂಗಳಿನಿಂದಲೇ ಜಾರಿಯಾಗಿದ್ದು, ಶೂನ್ಯ ದರದ ಬಿಲ್ ನೀಡಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಹೆಸರಿನಲ್ಲಿ ಪ್ರತಿ ಮಹಿಳೆಯರಿಗೆ 2 ಸಾವಿರ ರೂ ಹಣವನ್ನು ನೀಡಲು ಸರ್ಕಾರ ಈಗಾಗಲೇ ರೂಪುರೇಷೆ ಸಿದ್ದಪಡಿಸಿದ್ದು, ನೋಂದಣಿಯನ್ನೂ ಆರಂಭಿಸಿಯಾಗಿದೆ. ಅನ್ನಭಾಗ್ಯದ ಅಡಿಯಲ್ಲಿ 5 ಕೆಜಿ ಅಕ್ಕಿ, ಉಳಿದ ಅಕ್ಕಿಯ ಬದಲಾಗಿ ಕೆ.ಜಿ.ಗೆ ₹34ರಂತೆ ₹750 ರೂ.ಹಣವನ್ನು ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ.

ಈ ಮೂಲಕ ಪ್ರತಿ ಮನೆಗೆ ಮಾಸಿಕ ₹4 ರಿಂದ ₹5 ಸಾವಿರ ಹಣ ಉಳಿತಾಯವಾಗಲಿದೆ. ಈ ಹಣವನ್ನು ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆಗೆ, ಮಕ್ಕಳ ಶಿಕ್ಷಣಕ್ಕೆ ಸೇರಿದಂತೆ ಅಗತ್ಯ ವಿಚಾರಗಳಿಗೆ ಬಳಸಿಕೊಳ್ಳಬಹುದು. ದಿನೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟ ಎದುರಿಸುತ್ತಿರುವ ಬಡ-ಮಧ್ಯಮ ವರ್ಗದ ಜನರ ಪಾಲಿಗೆ ಕಾಂಗ್ರೆಸ್ ಸರ್ಕಾರ ಯೋಜನೆಗಳು ಆಶಾಕಿರಣವಾಗಿದೆ. ಜನರ ಸಂಕಷ್ಟ ನಿವಾರಣೆಗಾಗಿ ₹52 ಸಾವಿರ ಕೋಟಿ ಹಣವನ್ನು ಜನರಿಗೇ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಈವರೆಗೆ ಜಗತ್ತಿನಲ್ಲಿ ಯಾರೂ ಮಾಡಲಾಗದ ಸಾಧನೆ ಮಾಡಿದೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಭಾಗ್ಯಗಳ ಜೊತೆಗೆ ವಿಧವೆಯವರು, ವಯಸ್ಸಾವರು ಹಾಗೂ ಅಂಗವಿಕಲರನ್ನೂ ಹುಡುಕಿ ಅವರಿಗೂ ಪಿಂಚಣಿ ನೀಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಆದರೆ, ಅಧಿಕಾರದಲ್ಲಿದ್ದಾಗ ಯಾವ ಜನಪರ ಯೋಜನೆಗಳನ್ನೂ ಜಾರಿಮಾಡದ ಬಿಜೆಪಿ ನಾಯಕರು, ಕಾಂಗ್ರೆಸ್ ಘೋಷಿಸಿದ್ದ ಭಾಗ್ಯಗಳನ್ನು ಭೂಸಾ ಭಾಗ್ಯ, ಇದನ್ನು ಜಾರಿ ಮಾಡಲು ಸಾಧ್ಯವೇ ಇಲ್ಲ ಎಂದು ಆರೋಪಿಸಿದ್ದರು. ನಾವು ಈ ಆರೋಪ-ಅಪಹಾಸ್ಯಗಳಿಗೆ ಕಿವಿಗೊಡದೆ ಜನರ ಮಾತಿಗೆ ಬದ್ಧವಾಗಿ ಕೇವಲ ಎರಡು ತಿಂಗಳಲ್ಲಿ ಎಲ್ಲಾ ಭಾಗ್ಯಗಳನ್ನೂ ಜಾರಿ ಮಾಡಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿರುಗೇಟು ನೀಡಿದರು.

ಬಡವರ ಅಕ್ಕಿಗೆ ತಾರತಮ್ಯ ಮಾಡಿದ ಕೇಂದ್ರದ ವಿರುದ್ಧ ಕಿಡಿ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10 ಕೆ.ಜಿ ಅಕ್ಕಿ ನೀಡುವುದಾಗಿ ಆಶ್ವಾಸನೆ ನೀಡಿತ್ತು. ಹೀಗಾಗಿ ನಿಗದಿತ ₹34ರ ದರದಂತೆ ಕರ್ನಾಟಕಕ್ಕೆ ಅಕ್ಕಿ ನೀಡುವಂತೆ ಭಾರತೀಯ ಆಹಾರ ನಿಗಮಕ್ಕೆ ಪತ್ರ ಬರೆಯಲಾಗಿತ್ತು. ಆದರೆ, ಆರಂಭದಲ್ಲಿ ಅಕ್ಕಿ ನೀಡುವುದಾಗಿ ತಿಳಿಸಿ ಪತ್ರ ಬರೆದಿದ್ದ ಆಹಾರ ನಿಗಮ ಒಂದೇ ವಾರದಲ್ಲಿ ಅಕ್ಕಿ ನೀಡುವ ನಿರ್ಧಾರದಿಂದ ಹಿಂದೆ ಸರಿಯಿತು.

ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಉಪಯೋಗವಾಗಲಿಲ್ಲ. ಆಹಾರ ನಿಗಮಗಳ ಗೋಧಾಮಿನಲ್ಲಿ ಅಕ್ಕಿ ಇದ್ದರೂ ಬಡವರಿಗೆ ನೀಡಲು ಮನಸ್ಸಿಲ್ಲದ ಕೇಂದ್ರ ಸರ್ಕಾರ ಆ ಅಕ್ಕಿಯನ್ನು ಹರಾಜಿಗಿಟ್ಟಿತು. ಕರ್ನಾಟಕ ಸರ್ಕಾರಕ್ಕೆ ಹರಾಜಿನಲ್ಲಿ ಪಾಲ್ಗೊಳ್ಳಲೂ ಅವಕಾಶ ನೀಡಲಿಲ್ಲ. ಈ ಮೂಲಕ ಕೇಂದ್ರ ಸರ್ಕಾರ ತಾನು ಯಾವ ಕಾಲಕ್ಕೂ ಬಡವರ ಪರ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ಅವರು ಕಿಡಿಕಾರಿದರು.

ಕೇಂದ್ರ ಸರ್ಕಾರ ಬಡವರಿಗೆ ಅಕ್ಕಿ ನೀಡಲು ಸಹಕರಿಸದ ಕಾರಣ ಪ್ರತಿ ಕುಟುಂಬಗಳಿಗೆ 5 ಕೆಜಿ ಅಕ್ಕಿ ಜೊತೆಗೆ ಉಳಿದ 5 ಕೆಜಿ ಅಕ್ಕಿಗೆ ಬದಲಾಗಿ  ₹34ರ ದರದಂತೆ ₹750 ರೂ. ನೀಡಲು ಸರ್ಕಾರ ನಿರ್ಧರಿಸಿದ್ದು, ಆ ಹಣವೂ ನಿಮ್ಮ ಖಾತೆಗೆ ನೇರ ಜಮೆಯಾಗಲಿದೆ. ಈ ಹಣವನ್ನು ಮಹಿಳೆಯರು ನಿಮಗೆ ಅಗತ್ಯವಾದ ಪೌಷ್ಠಿಕ ಆಹಾರಕ್ಕೆ ಬಳಸಿ ಎಂದು ಸಚಿವ ಕೃಷ್ಣ ಬೈರೇಗೌಡ ಸಲಹೆ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು