ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದ ಪ್ರಮುಖ ಮಹಿಳಾ ಸಬಲೀಕರಣ ಉಪಕ್ರಮವಾದ ಶಕ್ತಿ ಯೋಜನೆ ಮತ್ತೊಮ್ಮೆ ಜಾಗತಿಕ ಮನ್ನಣೆ ಗಳಿಸಿದೆ. ದಾಖಲೆ ಮಟ್ಟದಲ್ಲಿ ಮಹಿಳಾ ಪ್ರಯಾಣದ ಬಳಿಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರ್ಪಡೆ ನಂತರ ಈಗ ಮತ್ತೊಂದು ಜಾಗತಿಕ ಮನ್ನಣೆಗೆ ಕರ್ನಾಟಕ ಸರ್ಕಾರದ ಗ್ಯಾರಂಟಿ ಸ್ಕೀಂ “ಶಕ್ತಿ ಯೋಜನೆ” ಸಾಕ್ಷಿಯಾಗಿದೆ.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರ್ಪಡೆಯಾದ ನಂತರ, ಈ ಯೋಜನೆಯು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸಿದ್ದಕ್ಕಾಗಿ ಅಂತರರಾಷ್ಟ್ರೀಯ ದಾಖಲೆಗಳ ಪುಸ್ತಕ, ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್‌ನಲ್ಲಿ ಪಟ್ಟಿಗೆ ಸೇರ್ಪಡೆಗೊಂಡಿದೆ.
ಈ ಯೋಜನೆಯಡಿ ಮಹಿಳಾ ಟಿಕೆಟ್‌ಗಳ ಮೌಲ್ಯ 12,660 ಕೋಟಿ ರೂ.ಗಳನ್ನು ದಾಟಿದ್ದು, 500 ಕೋಟಿಗೂ ಹೆಚ್ಚು ಮಹಿಳಾ ಪ್ರಯಾಣಿಕರಿಗೆ ಪ್ರಯೋಜನವಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಯೋಜನೆಯ ಯಶಸ್ಸಿಗೆ ಕೊಡುಗೆ ನೀಡಿದ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಅಧಿಕಾರಿಗಳು, ಸಿಬ್ಬಂದಿ ಮತ್ತು ಕಾರ್ಮಿಕರ ಮುಖಂಡರಿಗೆ ಸಚಿವ ರಾಮಲಿಂಗಾರೆಡ್ಡಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.
ಶಕ್ತಿ ಯೋಜನೆಯು ಮಹಿಳೆಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಕೈಗಾರಿಕರಣದ ಅಡಿಯಲ್ಲೂ ಸಬಲೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇತರ ರಾಜ್ಯಗಳು ಇದನ್ನು ಗುರುತಿಸಿ ಅಳವಡಿಸಿಕೊಂಡಿರುವುದು ಅದರ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಕಾಂಗ್ರೆಸ್ ಸರ್ಕಾರವು ತನ್ನ ಚುನಾವಣಾ ಪೂರ್ವ ಖಾತರಿ ಯೋಜನೆಗಳ ಭಾಗವಾಗಿ ಶಕ್ತಿ ಯೋಜನೆಯನ್ನು ಪ್ರಾರಂಭಿಸಿತು ಮತ್ತು ಕರ್ನಾಟಕದಾದ್ಯಂತ ಮಹಿಳೆಯರಿಗೆ ಕೈಗೆಟುಕುವ ಸಾರಿಗೆಯನ್ನು ಒದಗಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.