Home ಕರ್ನಾಟಕ ಚುನಾವಣೆ - 2023 ಗ್ಯಾರಂಟಿಗಳು: ಜನರಿಗೆ ಖುಶಿ; ಪ್ರತಿಪಕ್ಷಕ್ಕೆ ಉರಿ!

ಗ್ಯಾರಂಟಿಗಳು: ಜನರಿಗೆ ಖುಶಿ; ಪ್ರತಿಪಕ್ಷಕ್ಕೆ ಉರಿ!

0

ಜನಸಾಮಾನ್ಯರ ಸಶಕ್ತೀಕರಣದ ಉದ್ದೇಶ ಹೊಂದಿರುವ, ಅವರ ಕೈಗೆ ಚಲಾವಣೆಯ ಹಣ ಒದಗಿಸುವ, ಆ ಮೂಲಕ ಮಾರುಕಟ್ಟೆ ಆರ್ಥಿಕತೆಯ ಚೇತರಿಕೆಗೆ ಕಾರಣವಾಗಬಲ್ಲ, ಹೆಚ್ಚು ವಿಸ್ತಾರವಾದ, ಮತ್ತು ಇಷ್ಟು ದೊಡ್ಡ ಯೋಜನೆ ಬೇರೆಲ್ಲೂ ಬಂದಿಲ್ಲ – ನಿಖಿಲ್ ಕೋಲ್ಪೆ, ಹಿರಿಯ ಪತ್ರಕರ್ತರು 

ಪ್ರಜಾಸತ್ತಾತ್ಮಕ, ಜಾತ್ಯತೀತ, ಸಮಾಜವಾದಿ ಗಣರಾಜ್ಯವಾಗಿರುವ ಭಾರತದಲ್ಲಿ ಎಲ್ಲರ ಅಭಿವೃದ್ಧಿಯು ಪ್ರತಿಯೊಂದು ಸರಕಾರದ ಸಾಂವಿಧಾನಿಕ ಜವಾಬ್ದಾರಿ. ದೇಶದ ಪ್ರತಿಯೊಬ್ಬರೂ ಶಾಂತಿ, ನೆಮ್ಮದಿ, ಸಮಾನತೆ ಮತ್ತು ಸಾಮರಸ್ಯದ ವಾತಾವರಣದಲ್ಲಿ ಬದುಕುವಂತಾಗಬೇಕು ಎಂಬುದು ಸಂವಿಧಾನದ ಆಶಯ. ಆ ಸಾಮಾಜಿಕ, ಆರ್ಥಿಕ, ರಾಜಕೀಯ ಆಶಯಗಳಲ್ಲಿ ನಾವು ಬೇರೆಬೇರೆ ಪ್ರಮಾಣದ ಯಶಸ್ಸು, ವೈಫಲ್ಯ ಮತ್ತು ತಾರತಮ್ಯಗಳನ್ನು ಕಂಡಿದ್ದೇವೆ. ಜನಸಾಮಾನ್ಯರ ಸಾಮಾಜಿಕ ಮತ್ತು ರಾಜಕೀಯ ಶಕ್ತಿಯು ಅವರ ಆರ್ಥಿಕ ಶಕ್ತಿಯ ಜೊತೆಗೆ/ಮೇಲೆ ನೇರವಾದ ಸಂಬಂಧ/ಪರಿಣಾಮ ಹೊಂದಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಗೆ ಮೊದಲು ಕಾಂಗ್ರೆಸ್ ನೀಡಿದ್ದ ಮತ್ತು ಸರಕಾರ ಅಸ್ತಿತ್ವಕ್ಕೆ ಬಂದ ನಂತರವೀಗ ತಪ್ಪದೇ ಅನುಷ್ಟಾನಗೊಳಿಸುತ್ತಿರುವ ಐದು “ಗ್ಯಾರಂಟಿ” ಎಂದೇ ಜನಪ್ರಿಯವಾಗಿರುವ ಐದು ಜನಪರ ಯೋಜನೆಗಳನ್ನು ನೋಡಬೇಕು.

ಬಡವರ ಪರ ಯೋಜನೆಗಳು ಇಂದು ನಿನ್ನೆಯವಲ್ಲ

ಇಂತಾ ನೆರವುಗಳ ತಾತ್ವಿಕ ಮತ್ತು ಪ್ರಯೋಗಿಕ ಉದ್ದೇಶಗಳನ್ನು ಚುಟುಕಾಗಿ ನೋಡುವುದಾದರೆ, ಸಮಾಜದ ಬಡವರಿಗೆ ನೆರವಾಗುವ ಯೋಜನೆಗಳು ಇಂದು ನಿನ್ನೆಯವು ಏನಲ್ಲ. ರಾಜಪ್ರಭುತ್ವದ ಕಾಲದಲ್ಲಿ ಇದನ್ನು “ದಾನ” ಎಂಬ ಹೆಸರಿನಲ್ಲಿ ಮಾಡಲಾಗುತ್ತಿತ್ತು. ಉತ್ಪಾದನಾ ಸಾಧನಗಳ-ಮುಖ್ಯವಾಗಿ ಭೂಮಿಯ- ಸಂಪೂರ್ಣ ಒಡೆತನ ಹೊಂದಿ, ಜನರಿಂದ ಯದ್ವಾತದ್ವಾ ಸುಲಿದು ಸಂಗ್ರಹಿಸಿದ ಹಣವನ್ನು ಮೇಲ್ವರ್ಗದ ಐಷಾರಾಮಿಗೂ, ರಾಜ್ಯ ರಕ್ಷಣೆ, ವಿಸ್ತರಣೆಗೆ ಮಾಡುವ  ಯುದ್ಧಗಳಿಗೆ ವೆಚ್ಚ ಮಾಡಿ, ಉಳಿದದ್ದನ್ನು ಜನರಿಗಾಗಿ ವೆಚ್ಚ ಮಾಡುವ ವ್ಯವಸ್ಥೆಯು ಅನಿವಾರ್ಯ ರಾಜನಿಷ್ಟೆ ಮತ್ತು ಜೀಹುಜೂರ್ ಗುಲಾಮಗಿರಿಯನ್ನು ಪ್ರೋತ್ಸಾಹಿಸುವಂತೆ ಇತ್ತು. ಕೆಲವು ಉದಾರಿ ರಾಜರು ತಮ್ಮ ಪ್ರಜೆಗಳಿಗೆ ಬಹಳಷ್ಟನ್ನು ಮಾಡಿ ಜನಪ್ರಿಯರಾದ ಉದಾಹರಣೆಗಳೂ ಇತಿಹಾಸದಲ್ಲಿ ಇವೆ. ತಮ್ಮ ಅಧಿಕಾರವನ್ನು ಭದ್ರಪಡಿಸಲು, ಬಂಡಾಯ ಏಳದಂತೆ ತಡೆಯಲೂ ಇಂತಾ “ದಾನ-ಧರ್ಮ-ಸತ್ಕಾರ್ಯ”ಗಳು ಅನಿವಾರ್ಯವಾಗಿದ್ದವು ಕೂಡಾ.

ನಂತರ ಬಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಜೊತೆಜೊತೆಗೆಯೇ ಬಂಡವಾಳಶಾಹಿ ವ್ಯವಸ್ಥೆ ಕೂಡಾ ಬೆಳೆದುಬಂತು ಎಂಬುದನ್ನು ಗಮನಿಸಬೇಕು. ಆರ್ಥಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಮೆರೆಯುತ್ತಿರುವ ಬಂಡವಾಳಶಾಹಿ ವ್ಯವಸ್ಥೆಯು ಬಡವರನ್ನು ನಿರಂತರವಾಗಿ ಇನ್ನಷ್ಟು ಬಡವರನ್ನಾಗಿಯೂ, ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮಾಡುವ ನಾಜೂಕಿನ ವಂಚಕ ವ್ಯವಸ್ಥೆ ಎಂಬುದನ್ನು ಬಹಳ ಜನರು ಅರ್ಥ ಮಾಡಿಕೊಳ್ಳುವುದಿಲ್ಲ. ಪ್ರಸ್ತುತ ಪ್ರಪಂಚದ ಬಹುತೇಕ ದೇಶಗಳಲ್ಲಿ- ಅವು ರಾಜಪ್ರಭುತ್ವ, ಪ್ರಜಾಪ್ರಭುತ್ವ ಅಥವಾ ಬೇರೆಬೇರೆ ಮುಖವಾಡಗಳನ್ನು ಹೊತ್ತಿರುವ ಸರ್ವಾಧಿಕಾರವೇ ಆಗಿರಲಿ- ಬಂಡವಾಳಶಾಹಿ ವ್ಯವಸ್ಥೆಯೇ ಇದೆ. ಜನರ-ಜನರ ನಡುವಿನ, ಪ್ರದೇಶ-ಪ್ರದೇಶಗಳ ನಡುವಿನ, ದೇಶ-ದೇಶ-ದೇಶಗಳ ನಡುವಿನ ಅಸಮಾನತೆಯ ಕಂದಕ ದಿನದಿಂದ ದಿನಕ್ಕೆ ಆಳವಾಗುತ್ತಾ ಹೋಗುತ್ತಿರುವುದನ್ನು ಅಂಕಿಅಂಶಗಳು ಸಾಬೀತುಮಾಡುತ್ತವೆ. ಕೆಲವೇ ಅತಿಶ್ರೀಮಂತರು ಪ್ರಪಂಚದ ಬಹುತೇಕ ಸಂಪತ್ತನ್ನು ಹೊಂದಿದ್ದು, ಬಹುಸಂಖ್ಯಾತ ಜನರು ತಮ್ಮೊಳಗೆ ಹಂಚಿಕೊಳ್ಳಬೇಕಾದ ಸಂಪತ್ತಿನ ಪಾಲು ತೀರಾ ಕಡಿಮೆ ಎಂಬುದನ್ನೂ ಈ ಅಂಕಿಅಂಶಗಳು ತಿಳಿಸುತ್ತವೆ. ಇದನ್ನೂ ಜನರು ಅರ್ಥಮಾಡಿಕೊಳ್ಳುವುದಿಲ್ಲ.

ಸವಲತ್ತುಗಳು ʼಭಿಕ್ಷೆʼ ಅಲ್ಲ, ʼಹಕ್ಕುʼ

ಇಂತಾ ಸಂದರ್ಭದಲ್ಲಿ ಜನಪರ, ಜನಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಂಡು ಜನರ ಅಸಮಾಧಾನ, ಬಂಡಾಯಗಳನ್ನು ನಿಯಂತ್ರಣದಲ್ಲಿ ಇಡುವುದು ಸರಕಾರಗಳಿಗೆ ಅನಿವಾರ್ಯವಾಗುತ್ತದೆ. ಜಾತಿ, ಧರ್ಮಗಳನ್ನು ಒಡೆದಾಳುವ ನೀತಿ ಬಹಳ ಕಾಲ ಬಾಳದು. ಶ್ರೀಮಂತ ದೇಶಗಳು ಬಡದೇಶಗಳಿಗೆ ತಾವು ದೋಚಿದ ಹಣದಲ್ಲೇ “ನೆರವು” ನೀಡುವುದು ಕೂಡಾ ಇದಕ್ಕಾಗಿಯೇ. ಇದು ನ್ಯಾಯಯುತ ವ್ಯವಸ್ಥೆ ಎಂದು ತೋರಿಸಿಕೊಳ್ಳಲು ಮತ್ತು ಈ ಸಂಪತ್ತಿನ ಉತ್ಪಾದಕರಾದ ಶ್ರಮಜೀವಿ, ನೌಕರವರ್ಗವನ್ನು ಜೀವಂತವಾಗಿ ಇಡಲು ಇದು ಅನಿವಾರ್ಯ. ಇಲ್ಲವಾದಲ್ಲಿ ನಾವು ದೌರ್ಜನ್ಯದ ಗುಲಾಮಗಿರಿಯ ಕರಾಳಯುಗಕ್ಕೆ ಮರಳಬೇಕಾಗುತ್ತದೆ. ಹಾಗಾಗಿ, ಸರಕಾರ ಜನರಿಗೆ ನೀಡುವ ಸವಲತ್ತುಗಳು “ಭಿಕ್ಷೆ” ಎಂದು ತಿಳಿದುಕೊಂಡು, ಅವುಗಳನ್ನು ಕುಟಿಲವಾಗಿ, ಅತಾರ್ಕಿಕವಾಗಿ ವಿರೋಧಿಸುತ್ತಿರುವ- ರಾಜಪ್ರಭುತ್ವವಾದಿ, ಸರ್ವಾಧಿಕಾರವಾದಿ, ಧರ್ಮಾಡಳಿತವಾದಿ ಬಲಪಂಥೀಯರ ವಿಚಾರಗಳಿಗೆ ವ್ಯತಿರಿಕ್ತವಾಗಿ, ಅವು ಜನರಿಗೆ ತಾವು ಸೃಷ್ಟಿಸಿದ ಸಂಪತ್ತಿನ, ತಾವು ಕಟ್ಟಿದ ತೆರಿಗೆಯ ಮೇಲೆ ಇರುವ ಹಕ್ಕು ಎಂಬುದನ್ನು ತಿಳಿದುಕೊಳ್ಳಬೇಕು. ಇದು ಕೂಡಾ ಮೀಸಲಾತಿಯಂತೆ ಹಕ್ಕೇ ಹೊರತು, ಭಿಕ್ಷೆಯಲ್ಲ.

ಬೇರೆಬೇರೆ ಸರಕಾರಗಳು ಶಿಕ್ಷಣದ ಮೇಲೆ, ಆರೋಗ್ಯ ಸೇವೆ ಇತ್ಯಾದಿಗಳ ಮೇಲೆ ಖರ್ಚು ಮಾಡುತ್ತಾ ಬಂದಿವೆ. ಮುಖ್ಯವಾಗಿ ಉನ್ನತ ಶಿಕ್ಷಣದಲ್ಲಿ ಕೋಟಿಗಟ್ಟಲೆ ಡೊನೇಷನ್ ನೀಡಿ, ನಂತರ ವಿದೇಶಗಳಿಗೆ ಓಡುವ ಶ್ರೀಮಂತ, ಮೇಲ್ಜಾತಿ, ಮೇಲ್ವರ್ಗಗಳ ವಿದ್ಯಾರ್ಥಿಗಳಿಗೂ ಇದು ಅನ್ವಯಿಸುತ್ತದೆ. ಇದು ವೈಯಕ್ತಿಕವಾಗಿ ಸಿಗುವ ಸಮಲತ್ತುಗಳು. ಇನ್ನು ಮೂಲಸೌಕರ್ಯಗಳ ವಿಷಯ ಬಂದಾಗ, ಜನಸಾಮಾನ್ಯರಿಗೆ ಅನುಕೂಲವಾಗುವ ಯೋಜನೆಗಳಿಗಿಂತ ಶ್ರೀಮಂತರಿಗೆ ಅನುಕೂಲಕರವಾದ ಯೋಜನೆಗಳಿಗೇ ಸರಕಾರಗಳು ಹೆಚ್ಚಿನ ಹಣ ವ್ಯಯಿಸುತ್ತವೆ. ಉದಾಹರಣೆಗೆ ವಾಹನ ಇರುವವರು ಟೋಲ್ ಕೊಟ್ಟು ಓಡಾಡಬೇಕಾದ, ಖಾಸಗಿಯವರಿಗೆ ಲಾಭ ತರುವ, ಎಕ್ಸ್‌ಪ್ರೆಸ್ ಹೈವೇಗಳಿಂದಾಗಲೀ, ಸಾಮಾನ್ಯ ರೈಲುಗಳ ಜಾಗದಲ್ಲಿ ಬರುತ್ತಿರುವ ದುಬಾರಿ “ವಂದೇ ಭಾರತ್” ಬಡಾಯಿಯಿಂದಾಗಲೀ ಬಡಜನರಿಗೆ ನೇರ ಲಾಭವಿದೆಯೇ? 

ಇವುಗಳನ್ನು ಗಮನಿಸಿ..

ಹೀಗಿದ್ದರೂ, ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ತಂದಿರುವ ಐದು ಜನಪರ ಯೋಜನೆಗಳು- ಮಹಿಳೆಯರಿಗೆ ಮಾಸಿಕ ೨,೦೦೦ ರೂ.ಗಳನ್ನು ನೀಡುವ ಗೃಹಲಕ್ಷ್ಮೀ, ಬಡವರಿಗೆ ತಿಂಗಳಿಗೆ ೧೦ ಕೆ.ಜಿ. ಅಕ್ಕಿ ನೀಡುವ ಅನ್ನಭಾಗ್ಯ, ೨೦೦ ಯುನಿಟ್‌ಗಳ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ, ಮಹಿಳೆಯರಿಗೆ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ, ನಿರುದ್ಯೋಗಿ ವಿದ್ಯಾವಂತರಿಗೆ ಎರಡು ವರ್ಷಗಳ ಕಾಲ ನೆರವು ನೀಡುವ ಯೋಜನೆಗಳಿಂದ ದೇಶದ ಆರ್ಥಿಕತೆ ದಿವಾಳಿಯಾಗುತ್ತಿದೆ ಎಂದು ಕೂಗಾಡುತ್ತಾ, ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಕೂಡಾ ಮಾಡಿದ ವಿರೋಧವನ್ನು ಗಮನಿಸಿ. ಚುನಾವಣೆಯಲ್ಲಿ ಸೋತ ಕೂಡಲೇ ಅವುಗಳ ವ್ಯವಸ್ಥಿತ ಜಾರಿಗೆ ಒತ್ತಾಯಿಸುತ್ತಾ, ಅವಸರ ಮಾಡುತ್ತಾ, ಕಾಂಗ್ರೆಸ್ ಜನರನ್ನು ವಂಚಿಸಿದೆ ಎಂದು ಮಾಡಿದ ಚೀರಾಟವನ್ನೂ, ಇಬ್ಬಗೆ ನೀತಿಯನ್ನೂ ಗಮನಿಸಿ. ಇದೀಗ ಈ ಯೋಜನೆಗಳು ಜಾರಿಯಾದಾಗ ಮಾಡುತ್ತಿರುವ ಟೀಕೆಗಳು, ಕುಹಕಗಳು, ಹುಡುಕುತ್ತಿರುವ ಹುಳುಕುಗಳು ಮತ್ತು ಸೃಷ್ಟಿಸುತ್ತಿರುವ ಗೊಂದಲಗಳನ್ನೂ ಗಮನಿಸದೇ ಇರಬೇಡಿ.

ಇಷ್ಟು ದೊಡ್ಡ ಯೋಜನೆ ಬೇರೆಲ್ಲೂ ಬಂದಿಲ್ಲ

ಮಹಾರಾಷ್ಟ್ರ, ತಮಿಳುನಾಡು, ಕೇರಳ, ದಿಲ್ಲಿ, ಪಂಜಾಬ್ ಮತ್ತು ಕೆಲವು ಉತ್ತರ ಪ್ರದೇಶದಂತ ಬಿಜೆಪಿ ಆಡಳಿತದ ಬೇರೆ ರಾಜ್ಯಗಳು ಕೂಡಾ ಬೇರೆಬೇರೆ ಉಚಿತ ಅಥವಾ ನೆರವಿನ ಯೋಜನೆಗಳನ್ನು ನಡೆಸುತ್ತಿವೆ. ಹಿಂದಿನ ಸಿದ್ದರಾಮಯ್ಯ ಸರಕಾರದ ‘ಭಾಗ್ಯ’ ಯೋಜನೆಗಳೂ ಜನಪ್ರಿಯ. ಆದರೆ, ಇವುಗಳ ನಡುವಿನ ವ್ಯತ್ಯಾಸ ಎಂದರೆ, ಬಿಜೆಪಿಯ ಕೊಡುಗೆಗಳು ಸಮಾಜದಲ್ಲಿ ಮತೀಯ ಬಿರುಕು ಮಾಡಬಲ್ಲ ಧಾರ್ಮಿಕ ಸ್ವರೂಪದ ಕೊಡುಗೆಗಳಾದರೆ, ಉಳಿದ ರಾಜ್ಯಗಳಲ್ಲಿ ಇರುವುದು ಅನ್ನ, ವಸತಿ, ಶಿಕ್ಷಣ, ಮಹಿಳಾ ಸಶಕ್ತೀಕರಣ ಮುಂತಾದ ಬಡಜನರ ಉಳಿವಿಗೆ ಅಗತ್ಯವಾದ ಕೊಡುಗೆಗಳು. ಆದರೆ, ಜನಸಾಮಾನ್ಯರ ಸಶಕ್ತೀಕರಣದ ಉದ್ದೇಶ ಹೊಂದಿರುವ, ಅವರ ಕೈಗೆ ಚಲಾವಣೆಯ ಹಣ ಒದಗಿಸುವ, ಆ ಮೂಲಕ ಮಾರುಕಟ್ಟೆ ಆರ್ಥಿಕತೆಯ ಚೇತರಿಕೆಗೆ ಕಾರಣವಾಗಬಲ್ಲ, ಹೆಚ್ಚು ವಿಸ್ತಾರವಾದ, ಮತ್ತು ಇಷ್ಟು ದೊಡ್ಡ ಯೋಜನೆ ಬೇರೆಲ್ಲೂ ಬಂದಿಲ್ಲ. 

ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿ- ಸಂಕುಚಿತ, ಕುಟಿಲ ಮತ್ತು ಕ್ರೂರವಾದ ಬಿಜೆಪಿ ರಾಜಕಾರಣವನ್ನು ಸೋಲಿಸುವಲ್ಲಿ ಸಫಲವಾದ “ಕರ್ನಾಟಕ ಮಾಡೆಲ್” ರೀತಿಯ ಯೋಜನೆಗಳನ್ನು ರಾಜಸ್ಥಾನ ಮುಂತಾದ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಕಾಂಗ್ರೆಸ್ ಘೋಷಣೆ ಮಾಡಿರುವುದು ಬಿಜೆಪಿಗೆ ಉರಿ, ಹೊಟ್ಟೆ ನೋವು ಉಂಟುಮಾಡಿದೆ. ಈ ಕಠಿಣ ಪದಗಳನ್ನು ಬಳಸಲು ಕಾರಣವೆಂದರೆ, ಅದು ಮಾಡುತ್ತಿರುವ ತರ್ಕ, ವಿವೇಕ, ಸಭ್ಯತೆಯೂ ಇಲ್ಲದ ದುಷ್ಟ ಟೀಕೆಗಳು. ಪ್ರಧಾನಿ ನರೇಂದ್ರ ಮೋದಿಯಂತೂ- ರಾಜಸ್ಥಾನದಲ್ಲಿ ಮಾಡಿದ “ಅಪಪ್ರಚಾರ” ಭಾಷಣದಲ್ಲಿ ಕರ್ನಾಟಕದ ಉಚಿತ ಕೊಡುಗೆಗಳನ್ನು “ದಿವಾಳಿ ಕೊಡುಗೆ”ಗಳೆಂದು ಟೀಕಿಸಿ, ಇದು ದೇಶದ ಆರ್ಥಿಕತೆಯನ್ನು ನಾಶಪಡಿಸುವುದೆಂಬ ಅಗ್ಗದ ಹೇಳಿಕೆ ನೀಡಿದರು.

ಗುಜರಾತ್ ಮಾಡೆಲ್, ಯುಪಿ ಮಾಡೆಲ್ ಜಾಗದಲ್ಲೀಗ ಜನಪ್ರಿಯ ಕರ್ನಾಟಕ ಮಾಡೆಲ್

ಅರಾಜಕವಾದ, ಮೇಲ್ಜಾತಿ ಪ್ರಾಬಲ್ಯದ, ದಲಿತರು ಮತ್ತು ಮುಸ್ಲಿಮರ ಮೇಲಿನ ದೌರ್ಜನ್ಯದ, ಪೊಲೀಸ್ ರಾಜ್ಯದ- ವಿದೇಶಿ ಕಾಮಗಾರಿಗಳ ಚಿತ್ರ ಹಾಕಿ ತಮ್ಮ ಸಾಧನೆ ಎಂದು ಹೇಳುತ್ತಾ ಸಾವಿರಾರು ಕೋಟಿ ರೂ. ವೆಚ್ಚದ ಜಾಹೀರಾತುಗಳು, ಮಾರಿಹೋದ ಕೊಳಕು ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು, ಬಾಡಿಗೆ ಭಾಷಣಕಾರರು ಸೃಷ್ಟಿಸಿದ ಟೊಳ್ಳು “ಗುಜರಾತ್ ಮಾಡೆಲ್”, “ಯುಪಿ ಮಾಡೆಲ್” ಇತ್ಯಾದಿಗಳ ಜಾಗದಲ್ಲಿ ಜನಪರ “ಕರ್ನಾಟಕ ಮಾಡೆಲ್” ಜನಪ್ರಿಯವಾಗುತ್ತಿರುವುದು ಬಿಜೆಪಿಯಲ್ಲಿ ಆತಂಕ ಉಂಟುಮಾಡಿದೆ ಎಂಬುದು ಅದರ ಯದ್ವಾತದ್ವಾ ಪ್ರತಿಕ್ರಿಯೆಗಳಿಂದಲೇ ಗೊತ್ತಾಗುತ್ತದೆ.

ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ, ರಾಜ್ಯಾಧ್ಯಕ್ಷ, ಕಟೀಲ್, ಯತ್ನಾಳ, ಸಿ.ಟಿ. ರವಿ, ಸಂತೋಷ, ಪ್ರತಾಪಸಿಂಹ, ಸೂಲಿಬೆಲೆ, ಮಹೇಶ್ ಹೆಗ್ಡೆ, ಬಾಡಿಗೆ ಬರಹಗಾರರು- ಮುಂತಾದವರು ಕೀಳುಮಟ್ಟದ ಟೀಕೆಯನ್ನು ಮಾಡುತ್ತಲೇ ಇದ್ದಾರೆ. ಇವರಲ್ಲಿ ಹೊಸ ಸಂಪುಟವು ಪ್ರಮಾಣವಚನ ಸ್ವೀಕರಿಸುವ ಮೊದಲೇ “ಸರಕಾರ ಮಾತು ತಪ್ಪಿ ವಂಚಿಸಿದೆ” ಎಂದು ಹೇಳಿದ ಬೊಮ್ಮಾಯಿ, ಮುಸ್ಲಿಮರ ಬಹುಪತ್ನಿತ್ವದ ಬಗ್ಗೆ ಆಧಾರರಹಿತ ಕುತ್ಸಿತ ಟೀಕೆ ಮಾಡಿ ಕೋಮುಬಣ್ಣ ಹಚ್ಚಲು ಯತ್ನಿಸಿದ ಸಂಸದ ಪ್ರತಾಪ್ ಸಿಂಹ, ಡಾಲರ್ ಲೆಕ್ಕ ಗೊತ್ತಿಲ್ಲದಿದ್ದರೂ, ಮಹಾನ್ ಆರ್ಥಿಕ ತಜ್ಞನಂತೆ ವರ್ತಿಸುವ ನಳಿನ್ ಕುಮಾರ್ ಕಟೀಲ್ ನಗೆಪಾಟಲಿಗೂ, ಜನರ ಕೋಪಕ್ಕೂ ಗುರಿಯಾದರು. ಗುಲಾಮಿ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ಸಾಕುನಾಯಿಗಳಂತೆ ಇವರನ್ನೇ ಅನುಸರಿಸಿದವು. ದೇಶದಲ್ಲಿ ಪ್ರತಿಯೊಂದು ವಸ್ತುವನ್ನು ಕೊಳ್ಳುವಾಗಲೂ, ಪ್ರತೀ ಸೇವೆಯನ್ನು ಪಡೆಯುವಾಗಲೂ ಜನರು ತೆರಿಗೆ ಕಟ್ಟುತ್ತಾರೆ ಎಂಬುದನ್ನು ಮರೆತ- ಸರಕಾರದಿಂದ ಅಗ್ಗದ ಬೆಲೆಗೆ ಸಾವಿರಾರು ಎಕರೆ ಜಮೀನು, ಸರಕಾರಿ ಖರ್ಚಿನಲ್ಲಿ ಮೂಲ ಸೌಕರ್ಯ, ತೆರಿಗೆ ಸಹಿತ ಹಲವು ವಿನಾಯಿತಿ ಪಡೆದ ಬಹುರಾಷ್ಟ್ರೀಯ ಸಂಸ್ಥೆಯೊಂದರ ಮಾಜಿ ಮುಖ್ಯಸ್ಥ- ತಾವು ಕಟ್ಟುವ ತೆರಿಗೆ ಹಣವನ್ನು ಬಡವರಿಗೆ ನೀಡಬಾರದು ಎಂಬರ್ಥದ ಹೇಳಿಕೆ ನೀಡಿ, ಜನರ ಕೋಪಕ್ಕೆ ಗುರಿಯಾದ. ಹಣ ಎಲ್ಲಿಂದ ತರುತ್ತೀರಿ ಎಂಬುದರಿಂದ ಹಿಡಿದು, ದೇಶ ದಿವಾಳಿಯಾಗುತ್ತದೆ, ಆರ್ಥಿಕತೆ ನಾಶವಾಗುತ್ತವೆ ಎಂಬುದು ಇವರ ಕೂಗು.

ಬಿಜೆಪಿಯ ವಂಚಕ ಆರ್ಥಿಕ ಸಿದ್ಧಾಂತ!

ಹಲವಾರು ವಂಚಕ ಉದ್ಯಮಿಗಳು (ಬಹುತೇಕ ಪ್ರಧಾನಿ ಮತ್ತು ಗೃಹ ಸಚಿವರ ರಾಜ್ಯದವರು) ಸಾರ್ವಜನಿಕ ರಂಗದ ಬ್ಯಾಂಕುಗಳಿಗೆ ಲಕ್ಷಾಂತರ ಕೋಟಿ ರೂ. ವಂಚಿಸಿ ದೇಶಬಿಟ್ಟು ಓಡಿದಾಗ, ಸರಕಾರದ ಒಲವು ಪಡೆದಿರುವ ಉದ್ಯಮಿಗಳ ಲಕ್ಷಾಂತರ ಕೋಟಿ ರೂ. ಮನ್ನಾ ಮಾಡಿದಾಗ ಅಥವಾ ಅದಾನಿ ಸಂಸ್ಥೆಗಳು ಶೇರುದಾರರಿಗೆ ಸಾವಿರಾರು ಕೋಟಿ ನಷ್ಟ ಉಂಟುಮಾಡಿದಾಗ, ಲೆಕ್ಕವೇ ಕೊಡದ “ಪಿಎಂ ಕೇರ್ಸ್” ಮತ್ತು ಪಕ್ಷಕ್ಕೆ “ಚುನಾವಣಾ ಬಾಂಡ್”ಗಳಿಂದ ಹಲವು ಸಾವಿರ ಕೋಟಿ ದೇಣಿಗೆ ಪಡೆದಾಗ- ತಲಾ ೪,೨೦೦ ಕೋಟಿ ರೂ. ವೆಚ್ಚದ ಎರಡು ಐಷಾರಾಮಿ ಬೋಯಿಂಗ್ ೭೭೭ ವಿಮಾನಗಳನ್ನು, ದುಬಾರಿ ವಿದೇಶಿ ಕಾರುಗಳನ್ನು ಸ್ವಂತ ಉಪಯೋಗಕ್ಕೆ ಹೊಂದಿರುವ, ದುಬಾರಿ ಸೂಟು, ಬೂಟುಗಳ ಐಷಾರಾಮಿ ಜೀವನ ನಡೆಸುತ್ತಿರುವ, ಸ್ವಂತ ಪ್ರಚಾರಕ್ಕೆ ಸಾವಿರಾರು ಕೋಟಿ ರೂ. ವ್ಯಯಿಸುತ್ತಿರುವ, ವಿಮಾನವೇ ಈ ತನಕ ಬಂದಿಳಿಯದ ಶಿವಮೊಗ್ಗದಂತಾ ವಿಮಾನ ನಿಲ್ದಾಣಗಳನ್ನು ಉದ್ಘಾಟಿಸಲು, ಯಕಶ್ಚಿತ್ ರೈಲುಗಳಿಗೆ ಬಾವುಟ ತೋರಿಸಲು ಕೋಟಿಗಟ್ಟಲೆ ತೆರಿಗೆ ಹಣವನ್ನು ಸ್ವಂತದ ಮತ್ತು ಪಕ್ಷದ ಪ್ರಚಾರಕ್ಕೆ ಬಳಸುವ ಪ್ರಧಾನಿಯ ದುಂದು ವೆಚ್ಚದಿಂದ ದೇಶವಾಗಲೀ ಆರ್ಥಿಕತೆಯಾಗಲಿ ದಿವಾಳಿಯಾಗಲಿಲ್ಲ. ಒಂದು ವಿಮಾನದ ವೆಚ್ಚದಲ್ಲಿ ಇಡೀ ಒಂದು ವರ್ಷ ರಾಜ್ಯದ ಮಹಿಳೆಯರು ಉಚಿತ ಬಸ್ (ಪ್ರಧಾನಿಯಂತೆ ಐಷಾರಾಮಿ ಅಲ್ಲ) ಪ್ರಯಾಣ ಮಾಡಿದರೆ, ಬಡವರು ಸವಲತ್ತು ಪಡೆದರೆ ದೇಶ ದಿವಾಳಿಯಾಗುತ್ತದೆ! ಇದೇ ಬಿಜೆಪಿಯ ವಂಚಕ ಆರ್ಥಿಕ ಸಿದ್ಧಾಂತ!

ಅವರ ಪ್ರಶ್ನೆ: ಹಣ ಎಲ್ಲಿಂದ ಬರುತ್ತದೆ?

ದೇಶದಲ್ಲಿಯೇ ಅತ್ಯಂತ ಹೆಚ್ಚಿನ ಆದಾಯ ಮತ್ತು ತೆರಿಗೆ ಸಂಗ್ರಹ ಇರುವ ರಾಜ್ಯಗಳಲ್ಲಿ ಕರ್ನಾಟಕ ಇದೆ. 3.80 ಲಕ್ಷ ಕೋಟಿ ರೂ.ಗಳ ಅಂದಾಜು ವಾರ್ಷಿಕ ಬಜೆಟ್ ಹೊಂದಿರುವ ರಾಜ್ಯಕ್ಕೆ- ಈ ಯೋಜನೆಗಳಿಗೆ ಬೇಕಾಗಿರುವ 5೦,೦೦೦ ಕೋಟಿ ರೂ.ಗಳನ್ನು ಹೊಂದಿಸಲು ಕಷ್ಟವಾಗಬಾರದು. ಇಲ್ಲಿ – ದಕ್ಷಿಣ ರಾಜ್ಯಗಳು, ಮಹಾರಾಷ್ಟ್ರ, ಪಂಜಾಬ್ ಮುಂತಾದ ಅತ್ಯಂತ ಹೆಚ್ಚು ತೆರಿಗೆ ಸಂಗ್ರಹ ಮಾಡಿ ಕೇಂದ್ರಕ್ಕೆ ಸಲ್ಲಿಸುವ ರಾಜ್ಯಗಳ ಕಾನೂನುಬದ್ಧ ಪಾಲು ಮರಳಿಸದೆ, ಬಿಜೆಪಿ ಆಡಳಿತವಿರುವ ಕಡಿಮೆ ತೆರಿಗೆ ಸಂಗ್ರಹಿಸುವ ಉತ್ತರಪ್ರದೇಶದಂತ ರಾಜ್ಯಗಳಿಗೆ ಹೆಚ್ಚು ಪಾಲು ನೀಡುವ ದುಷ್ಟ ಸಂಚಿನ ಬಲಿಪಶುಗಳಲ್ಲಿ ಕರ್ನಾಟಕವೂ ಒಂದು. (ಉದಾಹರಣೆಗೆ ರಾಜ್ಯವು ಸಂಗ್ರಹಿಸಿದ ಒಂದು ರೂಪಾಯಿ ಜಿಎಸ್‌ಟಿಯಲ್ಲಿ ರಾಜ್ಯಕ್ಕೆ 35 ಪೈಸೆ ಮರಳಿಸಿದ್ದರೆ, ಉತ್ತರ ಪ್ರದೇಶಕ್ಕೆ ಒಂದು ರೂಪಾಯಿಗೆ 1.70 ರೂಪಾಯಿ ನೀಡಲಾಗಿದೆ. ಕೆಲವರ್ಷಗಳಿಂದ ಅಂಕಿಅಂಶಗಳನ್ನೇ ಸರಿಯಾಗಿ ಇಡದ, ಕಡ್ಡಾಯ ದಶವಾರ್ಷಿಕ ಜನಗಣತಿಯನ್ನೂ ನಡೆಸದ, ಅಂಕಿಅಂಶ ಸಚಿವರು ನಿದ್ದೆ ಮಾಡುತ್ತಿರುವ ಸರಕಾರದಿಂದ ನಿಖರ ಅಂಕಿಅಂಶಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

ಹೀಗಿರುವಾಗ, ಈ ಜನಪರ ಕಾರ್ಯಕ್ರಮಗಳನ್ನು ಅಸಹನೆಯಿಂದ ವಿರೋಧಿಸುತ್ತಿರುವವರು, ಗೊಂದಲ ಸೃಷ್ಟಿಸುತ್ತಿರುವವರು, ಅವಹೇಳನ ಮಾಡುತ್ತಿರುವವರು ಯಾರು? ಹೀಗೆ ಮಾಡುವವರು- ಬಡವರು ಬಡವರಾಗಿಯೇ ಉಳಿಯಬೇಕೆಂದು, ತಮ್ಮ ಚಾಕರಿ ಮಾಡುತ್ತಲೇ ಇರಬೇಕೆಂದು ಬಯಸುವ ಮೇಲ್ವರ್ಗದವರು ಮತ್ತು ಮೂರು ಚಿಲ್ಲರೆ ಪರ್ಸೆಂಟ್ ಇದ್ದರೂ- ಮೊಗಲರಿರಲಿ, ಬ್ರಿಟಿಷರಿರಲಿ ಅಥವಾ ಈಗಲೂ ಅಧಿಕಾರದಲ್ಲಿ, ಆಡಳಿತದಲ್ಲಿ ಬಹುದೊಡ್ಡ ಪಾಲನ್ನು ಆಕ್ರಮಿಸಿದವರು. ಮೀಸಲಾತಿಯನ್ನು ವಿರೋಧಿಸುತ್ತಾ ಬಂದಿದ್ದರೂ ಇದೀಗ ತಮ್ಮ ಸಂಖ್ಯೆ ಮೀರಿದ ಹತ್ತು ಶೇಕಡಾ ಮೀಸಲಾತಿಯನ್ನು ಚಪ್ಪರಿಸುತ್ತಿರುವವರು. ಸಾವಿರಾರು ವರ್ಷಗಳಿಂದ ಧರ್ಮದ ಹೆಸರಲ್ಲಿ ಜನರನ್ನೂ, ರಾಜರನ್ನೂ ನಿಯಂತ್ರಿಸುತ್ತಾ ಅಥವಾ ಅವರ ಪದತಲದಲ್ಲಿ ತಲೆಯಿಟ್ಟು ಹೊಗಳಿ ಸಾವಿರಾರು ಎಕರೆ ಜಮೀನಿನ ಉಂಬಳಿ, ದೇವಸ್ಥಾನಗಳಂತಾ ಉದ್ದಿಮೆಗಳನ್ನು ಪಡೆದವರು. ಮೃಷ್ಟಾನ್ನ ಭೋಜನವನ್ನು ಬಿಟ್ಟಿಯಾಗಿ ಉಣ್ಣುವುದಕ್ಕೂ ಗೋದಾನ, ಭೂದಾನ, ಸುವರ್ಣದಾನ ಇತ್ಯಾದಿ ದಕ್ಷಿಣೆ ಪಡೆದವರು. ಬಹುಸಂಖ್ಯಾತರನ್ನು ವಿದ್ಯೆಯಿಂದ ದೂರವಿಟ್ಟವರು, ಅಧಿಕಾರದ ಲಾಲಸೆಯಿಂದ ಅವರ ಜೊತೆಗೆ ಸೇರಿದವರು. ಅವರು ಧರ್ಮದ ಹೆಸರಲ್ಲಿ ರೂಪಿಸಿರುವ ರಾಜಕೀಯ ಸಂಘಟನೆಗಳು ಮತ್ತು ಪಕ್ಷಗಳಿಗೆ- ಅದೇ ತಾರತಮ್ಯದ ಧರ್ಮದ ಹೆಸರಿನಲ್ಲಿ ಪರಂಪರಾಗತ ಗುಲಾಮರಾಗಿರಲು ಬಯಸುವವರು ಎಂಬುದನ್ನು ತಿಳಿದುಕೊಂಡು, ಯಾವತ್ತೂ ನೆನಪಿಡೋಣ.

ನಿಖಿಲ್‌ ಕೋಲ್ಪೆ

ಹಿರಿಯ ಪತ್ರಕರ್ತರು

ಇದನ್ನು ಓದಿದ್ದೀರಾ?-ಉಚಿತ ಸವಲತ್ತುಗಳ ರಾಜಕೀಯ

You cannot copy content of this page

Exit mobile version