ಗುಜರಾತ್: ಭರೂಚ್ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರಿ ಸ್ಫೋಟ, ವಿಷಾನಿಲ ಸೋರಿಕೆಯಾಗಿ ಐವರು ಕಾರ್ಮಿಕರ ಸಾವು, ಐವರಿಗೆ ಗಂಭೀರ ಗಾಯ

ಭರೂಚ್ (ಗುಜರಾತ್): ಗುಜರಾತ್‌ನ ಭರೂಚ್ ಜಿಲ್ಲೆಯ ವಾಘ್ರಾ ತಾಲೂಕಿನಲ್ಲಿರುವ ಸೈಖಾ ಜಿಐಡಿಸಿ (GIDC) ಕೈಗಾರಿಕಾ ಪ್ರದೇಶದ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭಾರಿ ಸ್ಫೋಟ ಹಾಗೂ ವಿಷಾನಿಲ ಸೋರಿಕೆಯಿಂದಾಗಿ ಐವರು ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ. ಘಟನೆಯಲ್ಲಿ ಮತ್ತೈವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಸೈಖಾ ಕೈಗಾರಿಕಾ ಪ್ರದೇಶದಲ್ಲಿರುವ ಸಿಂಜೀಲ್ ಫಾರ್ಮಾಕೆಮ್ (SynZeal Pharmachem) ಘಟಕದಲ್ಲಿ ಶುಕ್ರವಾರ ರಾತ್ರಿ ಸುಮಾರು 10:00 ಗಂಟೆಯ ವೇಳೆಗೆ ಈ ದುರಂತ ಸಂಭವಿಸಿದೆ ಎಂದು ಮ್ಯಾಜಿಸ್ಟ್ರೇಟ್ ಮನೀಷಾ ಮನಾನಿ ಮಾಹಿತಿ ನೀಡಿದ್ದಾರೆ. ಸ್ಫೋಟದ ತೀವ್ರತೆಗೆ ರಿಯಾಕ್ಟರ್ ಟ್ಯಾಂಕ್ ಸಂಪೂರ್ಣವಾಗಿ ಛಿದ್ರಗೊಂಡಿದ್ದು, ಯಂತ್ರೋಪಕರಣಗಳ ಭಾಗಗಳು ಕಾರ್ಖಾನೆಯ ಆವರಣದಾದ್ಯಂತ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸುಮಾರು ಒಂದು ವರ್ಷದ ಹಿಂದಷ್ಟೇ ಆರಂಭವಾಗಿದ್ದ ಈ ಘಟಕದಲ್ಲಿ ಔಷಧ ತಯಾರಿಕೆಗೆ ಅಗತ್ಯವಾದ ಮಧ್ಯಂತರ ರಾಸಾಯನಿಕಗಳನ್ನು (Intermediates) ಉತ್ಪಾದಿಸಲಾಗುತ್ತಿತ್ತು.

ಮೃತರನ್ನು ಜಯದೀಪ್ ಮಹೇಶ್ ಭಾಯ್ ಪಟೇಲ್, ಭಾವಿಕ್ ದಿಲೀಪ್ ಕುಮಾರ್ ವಾಸವಾ, ವೃಂದ್ ತಲಾವಿಯಾ, ಅನಿಕೇತ್ ಹರಿಲಾಲ್ ಗೌತಮ್ ಮತ್ತು ಅರ್ಜುನ್ ಕುಮಾರ್ ರಾಮ್ ಸಿಂಗ್ ಗೌತಮ್ ಎಂದು ಗುರುತಿಸಲಾಗಿದೆ. ಮೃತರಲ್ಲಿ ಮೊದಲ ಇಬ್ಬರು ಆಮೋದ್ ಮೂಲದವರಾಗಿದ್ದು, ವೃಂದ್ ತಲಾವಿಯಾ ಗಿರ್ ಸೋಮನಾಥ್ ಜಿಲ್ಲೆಯ ತಲಾಲಾ ನಿವಾಸಿಯಾಗಿದ್ದಾರೆ. ಉಳಿದಿಬ್ಬರು ಉತ್ತರ ಪ್ರದೇಶ ಮೂಲದವರು.

ಗಾಯಗೊಂಡಿರುವ ಪವನ್ ಕುಮಾರ್ ಗೌತಮ್, ಮೌಸಮ್ ಕುಮಾರ್ ಯಾದವ್, ಶಿವದಯಾಳ್ ಯಾದವ್, ಪ್ರತೀಕ್ ಪ್ರಜಾಪತಿ ಮತ್ತು ಪ್ರಿಯಾಂಶು ಎಂಬುವವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಗುಜರಾತ್ ಮಾಲಿನ್ಯ ನಿಯಂತ್ರಣ ಮಂಡಳಿ, ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ನಿರ್ದೇಶನಾಲಯ (DISH) ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಸ್ಫೋಟಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು