ರಾಜಕೀಯ ಪಕ್ಷದ ಹೆಸರಿನಲ್ಲಿ ₹1,143 ಕೋಟಿ ನಕಲಿ ದೇಣಿಗೆ ದಂಧೆ: ಗುಜರಾತ್‌ನಲ್ಲಿ ಬೃಹತ್ ತೆರಿಗೆ ವಂಚನೆ ಬಯಲಿಗೆ, ಐಟಿ ದೂರು ದಾಖಲು

ರಾಜಕೀಯ ಪಕ್ಷದ ಹೆಸರಿನಲ್ಲಿ ಅಕ್ರಮ ಮಾರ್ಗಗಳ ಮೂಲಕ ಬೃಹತ್ ಪ್ರಮಾಣದಲ್ಲಿ ಆದಾಯ ತೆರಿಗೆ ವಂಚಿಸುತ್ತಿದ್ದ ಜಾಲವೊಂದರ ಗುಟ್ಟನ್ನು ಗುಜರಾತ್‌ನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರಟ್ಟು ಮಾಡಿದ್ದಾರೆ.

ಗುಜರಾತ್‌ನ ಗಾಂಧಿನಗರ ಮೂಲದ ನೋಂದಾಯಿತ ಆದರೆ ಮಾನ್ಯತೆ ಪಡೆಯದ ಪಕ್ಷವಾದ (RUPP) ‘ಭಾರತೀಯ ನ್ಯಾಷನಲ್ ಜನತಾ ದಳ’ (BNJD) ಹಾಗೂ ಅದರ ಉನ್ನತ ಪದಾಧಿಕಾರಿಗಳ ವಿರುದ್ಧ ಐಟಿ ಅಧಿಕಾರಿಗಳ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಈ ಪಕ್ಷವು 2019-20 ರಿಂದ 2024-25ರ ಆರ್ಥಿಕ ವರ್ಷಗಳ ನಡುವೆ ಸುಮಾರು 56,000 ತೆರಿಗೆದಾರರಿಂದ ₹1,143 ಕೋಟಿಗೂ ಅಧಿಕ ಮೊತ್ತದ ನಕಲಿ ರಾಜಕೀಯ ದೇಣಿಗೆಯನ್ನು ಸಂಗ್ರಹಿಸಿದೆ.

ತೆರಿಗೆದಾರರನ್ನು ಸಂಪರ್ಕಿಸಿ ಪಕ್ಷದ ಖಾತೆಗಳಿಗೆ ಆರ್‌ಟಿಜಿಎಸ್ (RTGS) ಅಥವಾ ಬ್ಯಾಂಕಿಂಗ್ ಮಾರ್ಗಗಳ ಮೂಲಕ ದೇಣಿಗೆ ಹಣ ವರ್ಗಾಯಿಸುವಂತೆ ಇವರು ವ್ಯವಸ್ಥೆ ಮಾಡುತ್ತಿದ್ದರು. ಹಣ ಜಮೆಯಾದ ತಕ್ಷಣ ದೇಣಿಗೆ ರಶೀದಿಗಳನ್ನು ವಿತರಿಸಲಾಗುತ್ತಿತ್ತು; ಈ ರಶೀದಿಗಳ ಮೂಲಕ ತೆರಿಗೆದಾರರು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80GGC ಅಡಿಯಲ್ಲಿ ಶೇಕಡಾ 100ರಷ್ಟು ತೆರಿಗೆ ವಿನಾಯಿತಿ ಪಡೆಯುತ್ತಿದ್ದರು. ಆ ನಂತರ ಆ ಹಣವನ್ನು ಜೆ ಟ್ರೇಡಿಂಗ್, ಕಾಜಲ್ ಎಂಟರ್‌ಪ್ರೈಸಸ್, ಪರ್ಮಾರ್ ಅಸೋಸಿಯೇಟ್ಸ್ ಮುಂತಾದ ತಮ್ಮದೇ ಶೆಲ್ ಕಂಪನಿಗಳ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು.

ಆ ಕಂಪನಿಗಳ ಮೂಲಕ ಧಾನ್ಯಗಳು ಅಥವಾ ಇತರ ಸರಕುಗಳನ್ನು ಖರೀದಿ ಮಾಡಿದಂತೆ ನಕಲಿ ಬಿಲ್‌ಗಳನ್ನು ಸೃಷ್ಟಿಸಿ, ಬ್ಯಾಂಕ್‌ಗಳಿಂದ ನಗದನ್ನು ವಿತ್‌ಡ್ರಾ ಮಾಡಿಕೊಳ್ಳಲಾಗುತ್ತಿತ್ತು. ಈ ಇಡೀ ವ್ಯವಹಾರಕ್ಕೆ ಶೇಕಡಾ 2 ರಿಂದ 10 ರಷ್ಟು ಕಮಿಷನ್ ಕಡಿತ ಮಾಡಿಕೊಂಡು, ಉಳಿದ ನಗದು ಹಣವನ್ನು ಹವಾಲಾ ಅಥವಾ ಆಂಗಡಿಯಾ ಮಾರ್ಗಗಳ ಮೂಲಕ ಮೂಲ ತೆರಿಗೆದಾರರಿಗೆ ಹಿಂತಿರುಗಿಸಲಾಗುತ್ತಿತ್ತು. ಚುನಾವಣಾ ಆಯೋಗಕ್ಕೆ ಪಕ್ಷವು ಸಲ್ಲಿಸಿದ ‘ಫಾರ್ಮ್ 24ಎ’ ಕೊಡುಗೆ ವರದಿಯ ಮೇಲೆ ಅನುಮಾನ ಬಂದು ತನಿಖೆ ನಡೆಸಿದಾಗ ಈ ಭಾರಿ ಅಕ್ರಮ ಬೆಳಕಿಗೆ ಬಂದಿದೆ. ಈ ನಕಲಿ ದೇಣಿಗೆ ದಂಧೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಸುಮಾರು ₹343 ಕೋಟಿ ನೇರ ತೆರಿಗೆ ನಷ್ಟ ಉಂಟಾಗಿದೆ ಎಂದು ಐಟಿ ಇಲಾಖೆ ದೃಢಪಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು