ಅಹಮದಾಬಾದ್: ಗುಜರಾತ್ ನ ಪ್ರಮುಖ ಪತ್ರಿಕೆ ಗುಜರಾತ್ ಸಮಾಚಾರ್ ನ ಮಾಲಿಕ ಬಾಹುಬಲಿ ಶಾ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಗುಜರಾತ್ ಸಮಾಚಾರ್ ಕಚೇರಿಯ ಸುತ್ತಮುತ್ತ ತಪಾಸಣೆ ನಡೆಸಲಾಯಿತು. ಅವರು ಲೋಕ ಪ್ರಕಾಶನ ಲಿಮಿಟೆಡ್‌ನ ನಿರ್ದೇಶಕರೂ ಆಗಿದ್ದಾರೆ. ಬಾಹುಬಲಿ ಷಾ ಅವರ ಸಹೋದರ ಶ್ರೇಯಾಂಶ್ ಷಾ ಗುಜರಾತ್ ಸಮಾಚಾರ್ ದೈನಿಕದ ವ್ಯವಸ್ಥಾಪಕ ಸಂಪಾದಕರಾಗಿದ್ದಾರೆ. ತುಷಾರ್ ದೇವ್ GSTV ಯಲ್ಲಿ ಡಿಜಿಟಲ್ ಸೇವೆಗಳ ಮುಖ್ಯಸ್ಥರಾಗಿದ್ದಾರೆ. ಆದರೆ ಆ ಚಾನೆಲ್ ಶ್ರೇಯಾಂಶ್ ಅವರದ್ದು. ಶುಕ್ರವಾರ ಬೆಳಗಿನ ಜಾವ ಇಡಿ ಬಾಹುಬಲಿ ಶಾ ಅವರನ್ನು ಬಂಧಿಸಿದೆ.
ದೇವ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಶಾ ಬಂಧನದ ಬಗ್ಗೆ ಬರೆದಿದ್ದಾರೆ. ಶಾ ಅವರನ್ನು ಮೊದಲು ವಿಎಸ್ ಆಸ್ಪತ್ರೆಗೆ ಮತ್ತು ನಂತರ ಜೈಡಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಶಾ ಅವರನ್ನು ಏಕೆ ಬಂಧಿಸಲಾಯಿತು ಎಂಬುದನ್ನು ಜಾರಿ ನಿರ್ದೇಶನಾಲಯ ಇನ್ನೂ ಬಹಿರಂಗಪಡಿಸಿಲ್ಲ. ಅಹಮದಾಬಾದ್‌ನ ಜಿಎಸ್‌ಟಿವಿ ಸುತ್ತಮುತ್ತಲ ಪ್ರದೇಶದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಸುಮಾರು 36 ಗಂಟೆಗಳ ಕಾಲ ಶೋಧ ನಡೆಸಿದರು. ಗುರುವಾರ ರಾತ್ರಿ ಐಟಿ ಅಧಿಕಾರಿಗಳು ಹೋದ ನಂತರ ಇಡಿ ತಪಾಸಣೆ ಪ್ರಾರಂಭವಾಯಿತು ಎಂದು ದೇವ್ ಮತ್ತೊಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಗುಜರಾತ್ ಶಾಸಕ ಮತ್ತು ಕಾಂಗ್ರೆಸ್ ರಾಜ್ಯ ಕಾರ್ಯಾಧ್ಯಕ್ಷ ಜಿಗ್ನೇಶ್ ಮೇವಾನಿ ಅವರು ಜಾರಿ ನಿರ್ದೇಶನಾಲಯದ ಕ್ರಮವನ್ನು ಖಂಡಿಸಿದ್ದಾರೆ. ಕಳೆದ 25 ವರ್ಷಗಳಿಂದ ಕೇಂದ್ರ ಸರ್ಕಾರದ ವಿಮರ್ಶಾತ್ಮಕ ವರದಿಗಳನ್ನು ಪತ್ರಿಕೆ ಪ್ರಕಟಿಸುತ್ತಿದೆ ಹೀಗಾಗಿ ಪತ್ರಿಕೆ ಹಾಗೂ ಅದರ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.