ಗುಜರಾತ್ ರಾಜ್ಯದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಮುಂಜಾನೆ 7 ಗಂಟೆಯಿಂದ ಶುರುವಾಗಿದೆ. ಉತ್ತರ ಮತ್ತು ಮಧ್ಯ ಗುಜರಾತ್ ನ 14 ಜಿಲ್ಲೆಗಳಲ್ಲಿ 93 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಅಂತಿಮ ಹಂತದ ಮತದಾನ ರಾಷ್ಟ್ರದ ಗಮನ ಸೆಳೆದಿದೆ.
ಎರಡನೇ ಹಂತದ ಚುನಾವಣೆಯಲ್ಲಿ 61 ಪಕ್ಷಗಳ ಸುಮಾರು 833 ಅಭ್ಯರ್ಥಿಗಳು ಕಣದಲ್ಲಿದ್ದು ಅವರ ಭವಿಷ್ಯವನ್ನು 2.51 ಕೋಟಿ ಜನರು ನಿರ್ಧರಿಸಲಿದ್ದಾರೆ. ಅಂಕಿ ಅಂಶಗಳ ಆಧಾರದಲ್ಲಿ ಒಟ್ಟು 26,409 ಮತಗಟ್ಟೆಗಳಲ್ಲಿ ಒಟ್ಟು 36,000 ವಿದ್ಯುನ್ಮಾನ ಮತಯಂತ್ರಗಳು ಕಾರ್ಯ ನಿರ್ವಹಿಸಲಿವೆ.
ಮತದಾನಕ್ಕೆ ಅನುಕೂಲ ಆಗುವಂತೆ ಸುಮಾರು 29,000 ಪ್ರಿಸೈಡಿಂಗ್ ಅಧಿಕಾರಿಗಳು ಮತ್ತು 84,000 ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಒಟ್ಟು 26,409 ಮತಗಟ್ಟೆಗಳ ಪೈಕಿ, 93 ಮಾದರಿ ಮತಗಟ್ಟೆಗಳು, 93 ಪರಿಸರ ಸ್ನೇಹಿ ಮತಗಟ್ಟೆಗಳು, ಇನ್ನು 93 ವಿಕಲಾಂಗರು ಮತ್ತು 14 ಮತಗಟ್ಟೆಗಳನ್ನು ಯುವಕರು ನಿರ್ವಹಿಸಲು ಚುನಾವಣಾ ಆಯೋಗ ವ್ಯವಸ್ಥೆ ಮಾಡಿದೆ. ಗುಜರಾತ್ ನ ಎರಡನೇ ಹಂತದ ಈ ಚುನಾವಣೆಯಲ್ಲಿ 13,319 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.

ಎರಡನೇ ಹಂತದ 93 ಚುನಾವಣಾ ಕ್ಷೇತ್ರಗಳಲ್ಲಿ ಪ್ರಮುಖವಾಗಿ ಅಹಮದಾಬಾದ್, ಗಾಂಧಿನಗರ, ಮೆಹ್ಸಾನಾ, ಪಟಾನ್, ಬನಸ್ಕಾಂತ, ಸಬರ್ಕಾಂತ, ಅರಾವಳಿ, ಮಹಿಸಾಗರ್, ಪಂಚಮಹಲ್ ದಾಹೋದ್, ವಡೋದರಾ, ಆನಂದಖೇಡಾ ಮತ್ತು ಛೋಟಾ ಉದಯಪುರ ಜಿಲ್ಲೆಗಳು ಸೇರಲ್ಪಟ್ಟಿವೆ.
ಎರಡನೇ ಮತ್ತು ಅಂತಿಮ ಹಂತದ ಪ್ರಮುಖ ಕ್ಷೇತ್ರಗಳಲ್ಲಿ ಘಟ್ಲೋಡಿಯಾ ಕ್ಷೇತ್ರ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಚುನಾವಣಾ ಭವಿಷ್ಯವನ್ನು ನಿರ್ಧರಿಸಲಿದೆ. ಹಾಗೇ ಪಾಟಿದಾರ್ ನಾಯಕನಾದ ಹಾರ್ದಿಕ್ ಪಟೇಲ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ವಿರಾಮಗಮ್ ಮತ್ತು ಕೇಸರಿ ಪಕ್ಷವು ಅಲ್ಪೇಶ್ ಠಾಕೂರ್ ಅವರನ್ನು ಕಣಕ್ಕಿಳಿಸಿದೆ.
ಒಟ್ಟಾರೆ ಗುಜರಾತ್ ಚುನಾವಣೆಯಲ್ಲಿ ಡಿಸೆಂಬರ್ 1 ರಂದು ಮೊದಲ ಹಂತ ಮುಗಿದಿದ್ದು, ಎರಡನೇ ಹಂತದ ಮತದಾನ ಬಿರುಸಿನಿಂದ ಶುರುವಾಗಿದೆ. ಡಿಸೆಂಬರ್ 8 ಕ್ಕೆ ಒಟ್ಟಾರೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.