ಕರ್ನಾಟಕದ ಹೆಸರು ಕೆಡಿಸುವಲ್ಲಿ ಇರುವ ಜೋಶಿಯವರ ಜೋಶ್ ಗುಜರಾತ್ ಬಗ್ಗೆ ಮಾತನಾಡಲು ಇಲ್ಲವೇಕೆ? ಎಂದು ಕಾಂಗ್ರೆಸ್ ಟೀಕಿಸಿದೆ. ಸಂಸದ ಪ್ರಹ್ಲಾದ್ ಜೋಷಿ “ರಾಜ್ಯದಲ್ಲಿ ಡ್ರಗ್ಸ್ ದಂಧೆಯ ಹಾವಳಿ ಹೆಚ್ಚಾಗಿದ್ದು, ಪಂಜಾಬ್ ರಾಜ್ಯವನ್ನೂ ಮೀರಿಸುವಂತೆ ಇಲ್ಲಿ ಡ್ರಗ್ಸ್ ಹರಿದಾಡುತ್ತಿದೆ. ಹುಬ್ಬಳ್ಳಿ, ಬೆಂಗಳೂರು, ಮಂಗಳೂರು ಭಾಗದಲ್ಲಿ ಹೆಚ್ಚು ಡ್ರಗ್ಸ್ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಬೇಜವಾಬ್ದಾರಿ ಮೆರೆದಿದೆ.” ಎಂಬಂತೆ ಹೇಳಿಕೆ ಕೊಟ್ಟಿದ್ದರು.
ಇವರ ಈ ಹೇಳಿಕೆಗೆ ತಿರುಗೇಟು ನೀಡಿರುವ ರಾಜ್ಯ ಕಾಂಗ್ರೆಸ್, “ದೇಶದಲ್ಲಿ ಡ್ರಗ್ಸ್ ಒಳ ನುಸುಳಲು ಗುಜರಾತ್ ಹೆಬ್ಬಾಗಿಲು. ಗುಜರಾತಿನಲ್ಲಿ ಡ್ರಗ್ಸ್ ಒಳಬರುವುದನ್ನು ತಡೆದರೆ ಇಡೀ ದೇಶದಲ್ಲಿ ನಿಯಂತ್ರಿಸಬಹುದು. ದೇಶದಲ್ಲಿ ಡ್ರಗ್ಡ್ ವಶಪಡಿಸಿಕೊಂಡಿದ್ದರಲ್ಲಿ ಗುಜರಾತಿನಲ್ಲೇ ಅತಿ ಹೆಚ್ಚು, 30% ಡ್ರಗ್ಸ್ ಗುಜರಾತಿನಲ್ಲೇ ಸಿಕ್ಕಿದೆ. ಗುಜರಾತಿನಲ್ಲಿರುವ ಅದಾನಿ ಬಂದರಿನಲ್ಲಿ ವಿಶ್ವದಾಖಲೆಯ 21,000 ಕೋಟಿ ಮೌಲ್ಯದ ಡ್ರಗ್ಸ್ ದೊರಕಿತ್ತು, ಮತ್ತೊಮ್ಮೆ 9,000 ಕೋಟಿ ಮೌಲ್ಯದ ಡ್ರಗ್ಸ್ ದೊರಕಿತ್ತು.” ಎಂದು ಗಂಭೀರವಾಗಿ ಆರೋಪಿಸಿದೆ.
“ಮೂರು ದಶಕಗಳಿಂದ ಬಿಜೆಪಿ ಆಳ್ವಿಕೆ ಇದ್ದರೂ ಗುಜರಾತ್ ಮಾದಕವಸ್ತುಗಳ ತವರು ಆಗ್ಗಿದ್ದೇಕೆ, ನಿಯಂತ್ರಣಕ್ಕೆ ತರದಿರುವುದೇಕೆ. ಕರ್ನಾಟಕದಲ್ಲಿ ಡ್ರಗ್ಸ್ ನಿಯಂತ್ರಿಸಲು ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ, ಆದರೆ ದೇಶಕ್ಕೆ ನುಗ್ಗುವ ಗುಜರಾತಿನಲ್ಲಿ ನಿಯಂತ್ರಣ ಮಾಡಲು ಜೋಶಿಯವರು ಆಗ್ರಹಿಸುವುದು ಯಾವಾಗ?” ಎಂದು ಕಾಂಗ್ರೆಸ್ ಪಕ್ಷ ಸಂಸದ ಪ್ರಹ್ಲಾದ್ ಜೋಷಿಗೆ ತಿರುಗೇಟು ನೀಡಿದೆ.
2023 ಮತ್ತು 2024 ರ ವರ್ಷಗಳಲ್ಲಿ ಗುಜರಾತ್ ಒಂದೇ ರಾಜ್ಯದಲ್ಲಿ ಸರಿ ಸುಮಾರು 30,000 ಕೋಟಿ ಮೌಲ್ಯದ 5 ರಿಂದ 6 ಸಾವಿರ ಕೆಜೆ ಹೆರಾಯಿನ್, ಹಾಷಿಶ್ ಡ್ರಗ್ಸ್ ಪತ್ತೆಯಾಗಿತ್ತು. ಅದಾನಿ ಒಡೆತನದ ಅಡಿಯಲ್ಲಿನ ಬಂದರಿನಲ್ಲಿ ಪತ್ತೆಯಾದ ದೊಡ್ಡ ಪ್ರಮಾಣದ ಮಾದಕ ವಸ್ತುಗಳನ್ನು ದೇಶದ ಅಂದಾಜು 30% ಮಾದಕ ವಸ್ತು ಒಂದೇ ಬಂದರುವಿನಲ್ಲಿ ಸಿಕ್ಕಿದ್ದ ಬಗ್ಗೆ ಗೃಹ ಇಲಾಖೆ ಬಹಿರಂಗಪಡಿಸಿತ್ತು.
ಕೇವಲ 2 ಬಾರಿಯಷ್ಟೇ ವಶಪಡಿಸಿಕೊಂಡ ದಾಖಲೆ ಇರುವಾಗ ಉಳಿದ ಸಮಯದಲ್ಲಿ ಇನ್ನೆಷ್ಟು ಪ್ರಮಾಣದ ಮಾದಕ ವಸ್ತುಗಳು ದೇಶದ ಒಳಗೆ ಬಂದಿರಬೇಡ ಎಂದು ಅನೇಕರು ಆ ಸಂದರ್ಭದಲ್ಲಿ ಆತಂಕ ವ್ಯಕ್ತಪಡಿಸಿದ್ದರು.