ಗಾಂಧಿನಗರ: ಗುಜರಾತ್‌ನಲ್ಲಿ ಆಡಳಿತ ಪಕ್ಷದ ಶಾಸಕನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಹೈಕೋರ್ಟ್ ಆದೇಶದ ಮೇರೆಗೆ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಗಜೇಂದ್ರ ಸಿನ್ಹ್ ಪರ್ಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜುಲೈ 30, 2020ರಂದು ಗಾಂಧಿನಗರದ ಶಾಸಕರ ಕ್ವಾರ್ಟರ್‌ಗೆ ಕರೆಸಿ ಮದುವೆಯಾಗುವುದಾಗಿ ನಂಬಿಸಿದ್ದಾನೆ ಎಂದು ದಲಿತ ಸಂತ್ರಸ್ತೆ ಆರೋಪಿಸಿದ್ದರು. ಆ ನಂತರ ಆಕೆಯ ಫೋನ್ ಕರೆಗಳಿಗೆ ಸ್ಪಂದಿಸದೆ, ತಮ್ಮ ಸಂಬಂಧವನ್ನು ಯಾರಿಗಾದರೂ ಹೇಳಿದರೆ ಆಕೆಯನ್ನು ಅಪಹರಿಸಿ ಹಿಂಸಿಸುತ್ತೇವೆ ಎಂದು ಜಾತಿ ಹೆಸರಿನಲ್ಲಿ ನಿಂದಿಸಿದ್ದಾನೆ ಎಂದು ಆರೋಪಿಸಿದ್ದರು. ಪೊಲೀಸರು ತನ್ನ ದೂರನ್ನು ನಿರ್ಲಕ್ಷಿಸಿದ್ದರಿಂದ ಆಕೆ 2021ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದೆ. ಕೂಡಲೇ ಪರ್ಮಾರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಆದೇಶಿಸಿದೆ. ಇದರ ಪರಿಣಾಮವಾಗಿ ಗಾಂಧಿನಗರ ಸೆಕ್ಟರ್-21 ಪೊಲೀಸ್ ಠಾಣೆಯ ಪೊಲೀಸರು ಅತ್ಯಾಚಾರ, ಪೋಕ್ಸೋ ಮತ್ತು ಇತರ ಪ್ರಕರಣಗಳನ್ನು ದಾಖಲಿಸಿದ್ದಾರೆ. ಈತನ ವಿರುದ್ಧ ಈಗಾಗಲೇ ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಅದೇ ರೀತಿ ರಾಜಸ್ಥಾನದಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ ಪ್ರಕರಣದಲ್ಲಿ ಗಜೇಂದ್ರಸಿಂಹ ಆರೋಪಿಯಾಗಿದ್ದಾನೆ. ಈ ಪ್ರಕರಣದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಏಪ್ರಿಲ್ 2023 ರಲ್ಲಿ ತಿರಸ್ಕರಿಸಿತು.