ಗುರುಗ್ರಾಮ: ಪ್ಯಾಲೆಸ್ತೀನ್ ಸಂಘರ್ಷಗಳ ಕುರಿತು ಇತ್ತೀಚೆಗೆ ಗುರುಗ್ರಾಮ್ ವಿಶ್ವವಿದ್ಯಾಲಯದಲ್ಲಿ ನಡೆಯಬೇಕಿದ್ದ ಭಾಷಣ ಕಾರ್ಯಕ್ರಮವನ್ನು ಅಧಿಕಾರಿಗಳು ರದ್ದುಗೊಳಿಸಿದ್ದಾರೆ.
ಇದು ‘ವಿವಾದಾತ್ಮಕ’ ವಿಚಾರವಾಗಿದ್ದು, ಈ ಕಾರ್ಯಕ್ರಮಕ್ಕೆ ತಮ್ಮ ಅನುಮತಿ ಪಡೆದಿಲ್ಲ ಎಂದು ಉಪಕುಲಪತಿ ದಿನೇಶ್ ಕುಮಾರ್ ಹೇಳಿದ್ದಾರೆ. ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಜೋಯಾ ಹಸನ್ ಅವರು ಗುರುಗ್ರಾಮ್ ವಿಶ್ವವಿದ್ಯಾನಿಲಯದಲ್ಲಿ ಫೆಲೆಸ್ತೀನ್ ಸಂಘರ್ಷದ ಕುರಿತು ಭಾಷಣ ಮಾಡಲಿದ್ದರು. ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗವು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದೇ ತಿಂಗಳ 12ರಂದು ನಡೆಯಬೇಕಿತ್ತು.
ಆದರೆ ನವೆಂಬರ್ 10ರಂದು ಆಯೋಜಕರು ಹಸನ್ ಅವರಿಗೆ ಕರೆ ಮಾಡಿ ಕಾರ್ಯಕ್ರಮ ರದ್ದುಗೊಳಿಸಿರುವುದಾಗಿ ತಿಳಿಸಿದರು. ಈ ಕುರಿತು ‘ದಿ ಇಂಡಿಯನ್ ಎಕ್ಸ್ ಪ್ರೆಸ್’ ಪ್ರತಿನಿಧಿಯೊಂದಿಗೆ ಮಾತನಾಡಿದ ಉಪಕುಲಪತಿ ದಿನೇಶ್ ಕುಮಾರ್, ‘ವಿಶ್ವವಿದ್ಯಾಲಯದ ಶಿಕ್ಷಕರೊಬ್ಬರು ಈ ಕಾರ್ಯಕ್ರಮ ಆಯೋಜಿಸಿದ್ದರು. ಅದು ನನಗೆ ಗೊತ್ತಿರಲಿಲ್ಲ. ನಾನು ಕ್ಯಾಂಪಸ್‌ನಲ್ಲಿ ಇರಲಿಲ್ಲ. ಉದ್ದೇಶಿತ ವಿಷಯ ವಿವಾದಾಸ್ಪದವಾಗಿರುವುದರಿಂದ ನಾವು ಕಾರ್ಯಕ್ರಮವನ್ನು ರದ್ದುಗೊಳಿಸಿದ್ದೇವೆ” ಎಂದು ಅವರು ಹೇಳಿದರು.
ಪ್ಯಾಲೆಸ್ತೀನ್ ಸಂಘರ್ಷದ ಕುರಿತು ಅವರು ಬರೆದ ಲೇಖನವನ್ನು ಪತ್ರಿಕೆಯೊಂದು ಪ್ರಕಟಿಸಿತ್ತು ಅದನ್ನು ನೋಡಿ ರಾಜ್ಯಶಾಸ್ತ್ರ ವಿಭಾಗವು ಅದರ ಬಗ್ಗೆ ಮಾತನಾಡುವಂತೆ ನನ್ನನ್ನು ಕೇಳಿತ್ತು ಎಂದು ಹಸನ್ ಹೇಳಿದರು. ಪ್ಯಾಲೆಸ್ತೀನ್ ಸಂಘರ್ಷಕ್ಕೆ ಭಾರತದ ಪ್ರತಿಕ್ರಿಯೆಯನ್ನು ಚರ್ಚಿಸುವ ಅಗತ್ಯವಿದೆ ಎಂದು ಅವರು ನನಗೆ ಹೇಳಿದರು. ಕಾರ್ಯಕ್ರಮ ನಡೆಸಲು ಅನುಮತಿಯನ್ನೂ ಪಡೆದಿರುವುದಾಗಿ ನನಗೆ ತಿಳಿಸಿದ್ದರು ಎಂದು ಜೋಯಾ ಹಸನ್ ಹೇಳಿದ್ದಾರೆ.
“ಈ ತಿಂಗಳ ಐದನೇ ತಾರೀಖಿನಂದು ಸಂಘಟಕರು ನನ್ನನ್ನು ಭೇಟಿಯಾಗಿ, ಉಪನ್ಯಾಸದ ವಿಷಯವನ್ನು ಚರ್ಚಿಸಿದರು. ಕಾರ್ಯಕ್ರಮಕ್ಕೆ ಸಾರಿಗೆ ಮತ್ತಿತರ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತು. ಕಾರ್ಯಕ್ರಮ ನಡೆಸಲು ಅನುಮತಿಯನ್ನೂ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು.
ಆದರೆ ನ.10ರಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ನಿರ್ವಾಹಕರ ಆರೋಗ್ಯ ಸರಿಯಿಲ್ಲ, ಹೀಗಾಗಿ ಕಾರ್ಯಕ್ರಮ ರದ್ದಾಗಿದೆ ಎಂಬ ಮಾಹಿತಿ ಬಂತು. ಆರೋಗ್ಯದ ಸಮಸ್ಯೆಯಾಗಿದ್ದರೆ ಪೂರ್ವ ಯೋಜಿತ ಕಾರ್ಯಕ್ರಮವನ್ನು ಏಕೆ ರದ್ದುಗೊಳಿಸಬೇಕು?” ಎಂದು ಅವರು ಪ್ರಶ್ನಿಸಿದರು.
ಪ್ಯಾಲೆಸ್ತೀನ್ ಬಗ್ಗೆ ಚರ್ಚೆ ನಡೆಯದಿದ್ದರೂ ಅಧ್ಯಾಪಕರು ಆಸಕ್ತಿ ತೋರಿಸುತ್ತಿರುವುದು ಒಳ್ಳೆಯ ಸಂಗತಿ ಎಂದು ಹಸನ್ ಪ್ರತಿಕ್ರಿಯಿಸಿದ್ದಾರೆ.
ಕಳೆದ ತಿಂಗಳು JNU ಸೆಂಟರ್ ಫಾರ್ ವೆಸ್ಟ್ ಏಷ್ಯನ್ ಸ್ಟಡೀಸ್‌ನಲ್ಲಿ ಇರಾನ್, ಪ್ಯಾಲೆಸ್ಟೈನ್ ಮತ್ತು ಲೆಬನಾನ್ ರಾಯಭಾರಿಗಳು ಭಾಗವಹಿಸಬೇಕಾಗಿದ್ದ ಮೂರು ಸೆಮಿನಾರ್‌ಗಳನ್ನು ಆಯೋಜಿಸಲಾಗಿತ್ತು. ಆದರೆ ನಂತರ ಅವೆಲ್ಲವನ್ನೂ ರದ್ದುಗೊಳಿಸಲಾಯಿತು.