ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಪುತ್ರ, ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಗುರುವಾರ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯ ರಾಜಕೀಯ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದರು.ಇದರ ಬೆನ್ನಲ್ಲೇ ಕುಮಾರಸ್ವಾಮಿ ಅವರು ಶುಕ್ರವಾರ ಬೆಳಗ್ಗೆ 9.30ಕ್ಕೆ ‘ತುರ್ತು ಸುದ್ದಿಗೋಷ್ಠಿ’ ಕರೆದಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.ಏಕಾಏಕಿ ಸುದ್ದಿಗೋಷ್ಠಿ ಕರೆದಿರುವುದರ ಹಿಂದಿನ ಕಾರಣವೇನು ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಹಲವು ರೀತಿಯ ಚರ್ಚೆಗಳು ಆರಂಭವಾಗಿವೆ.
ಈ ವಾರ ನವದೆಹಲಿಯಲ್ಲಿ ಕುಮಾರಸ್ವಾಮಿ ಕುಟುಂಬದ ಸದಸ್ಯರು ನಡೆಸಿರುವ ಹಲವು ಮಹತ್ವದ ರಾಜಕೀಯ ಭೇಟಿಗಳ ಹಿನ್ನೆಲೆಯಲ್ಲಿ ಶುಕ್ರವಾರದ ಸುದ್ದಿಗೋಷ್ಠಿಯ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.ಕೆಲವು ರಾಜಕೀಯ ವಿಶ್ಲೇಷಕರ ಪ್ರಕಾರ, ಸಚಿವ ನಾಗೇಂದ್ರ ಅವರ ವಿಚಾರ ಸುದ್ದಿಗೋಷ್ಠಿಯ ಪ್ರಮುಖ ವಿಷಯವಾಗಿರಬಹುದು ಎನ್ನಲಾಗುತ್ತಿದ್ದು, ಶುಕ್ರವಾರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಬಹುದು ಎಂಬ ಚರ್ಚೆಯೂ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್‌ನ ಪ್ರಮುಖ ನಾಯಕರೊಬ್ಬರನ್ನು ರಾಜಕೀಯವಾಗಿ ‘ಕೆಳಗಿಳಿಸಿದ’ ಶ್ರೇಯಸ್ಸನ್ನು ತಮ್ಮದಾಗಿಸಿಕೊಳ್ಳಲು ಕುಮಾರಸ್ವಾಮಿ ಮುಂದಾಗಬಹುದು ಎಂಬ ಊಹಾಪೋಹವೂ ಕೇಳಿಬರುತ್ತಿದೆ.ಆದರೆ, ಮತ್ತೊಂದು ವಾದದ ಪ್ರಕಾರ, ಬಿಡದಿ ಹಾಗೂ ನೈಸ್ ರಸ್ತೆ ವಿಚಾರವೇ ಕುಮಾರಸ್ವಾಮಿ ಅವರ ತುರ್ತು ಸುದ್ದಿಗೋಷ್ಠಿಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.
ಇದೇ ವೇಳೆ, ಸುದ್ದಿಗೋಷ್ಠಿಯ ಸಮಯದ ಬಗ್ಗೆ ಕಾಂಗ್ರೆಸ್ ವಲಯದಲ್ಲೂ ಸಾಕಷ್ಟು ಆತಂಕ ಹಾಗೂ ಚರ್ಚೆ ನಡೆದಿದೆ ಎನ್ನಲಾಗಿದೆ.ತಂದೆ-ಮಗ ಇಬ್ಬರೂ ದೆಹಲಿಯಲ್ಲಿ ನಡೆಸಿರುವ ರಾಜಕೀಯ ಭೇಟಿಗಳ ಬೆನ್ನಲ್ಲೇ ಶುಕ್ರವಾರದ ತುರ್ತು ಸುದ್ದಿಗೋಷ್ಠಿ ಘೋಷಣೆಯಾಗಿರುವುದು ಕಾಕತಾಳೀಯವಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
