ಇಂದ
ದೊಡ್ಡಗೌಡರು, ಬೆಂಗಳೂರು
ಇವರಿಗೆ,
ರಾಜ್ಯದ ಜನತೆಗೆ
ಮಹಾಜನರೇ, ನಿನ್ನೆಯಿಂದ ನಾನು ಬರೆದಿರುವೇ ಎನ್ನಲಾದ ಪತ್ರ ಒಂದು ವೈರಲ್ ಆಗಿದೆ. ನಿಜ ಹೇಳಬೇಕೆಂದ್ರೆ ಅದು ನಾನು ಬರೆದದ್ದಲ್ಲ, ನನ್ನ ಮಕ್ಕಳು ತಮ್ಮ ರಾಜಕೀಯ ಷಡ್ಯಂತ್ರಕ್ಕಾಗಿ ನಮ್ಮ ಪಕ್ಷದ ಒಬ್ಬ ಒಳ್ಳೆಯ ವಂದಿಮಾಗದ ಆಸ್ಥಾನ ಲೇಖಕನಿಗೆ ದೊಡ್ಡ ಸಂಬಳ ಕೊಟ್ಟು ಹೀಗ್ಹೀಗೆ ಎಂದು ಹೇಳಿ ಬರೆಸಿದ ಪತ್ರವದು. ಅದು ಪ್ರಜ್ವಲ್ ರೇವಣ್ಣನಿಗೆ ಎಂದು ಹೇಳಲಾಗಿದ್ದರೂ ಅದರ ಒಳ ಉದ್ದೇಶ ರಾಜ್ಯ ಜನತೆಗೆ ತಲುಪಿಸುವುದೇ ಆಗಿತ್ತು. ಆ ಉದ್ದೇಶ ಈಡೇರಿಯಾಗಿದೆ.
ಕಳೆದೊಂದು ತಿಂಗಳಿನಿಂದ ನಾನು ಬಳಷ್ಟು ತೊಳಲಾಡಿದ್ದೇನೆ. ನಾವು ರಾಜಕಾರಣಿಗಳು. ನಮಗೂ ಒಂದು ಮನಸ್ಸಿರುತ್ತದೆ. ಆದರೆ, ನಮ್ಮ ಮನಸ್ಸಿನಲ್ಲಿ ಮೂಡುವ ಸತ್ಯವನ್ನು ನಮಗೆ ಹೇಳಲು ಸಾಧ್ಯವಾಗುದಿಲ್ಲ. ನಾವು ಏನಾದರೂ ನಮ್ಮೊಳಗೆ ಇರುವ ಸತ್ಯ ಹೇಳಿದರೆ ಅದ್ರಿಂದ ಪಕ್ಷದ ಕಾರ್ಯಕರ್ತರು ಮತದಾರರು ಏನೆಂದುಕೊಳ್ಳುತ್ತಾರೋ ಎಂದು ನಾವು ಅವರಿಗೆ ಬೇಕಾದಂತೆ ಸತ್ಯಕ್ಕೆ ತರಾವರಿ ಬಣ್ಣದ ಲೇಪ ಮಾಡಿಕೊಂಡೇ ಮಾತಾಡಬೇಕಾಗುತ್ತದೆ. ಆದರೆ, ಇವತ್ತು ತಡೆದುಕೊಳ್ಳಲಿಕ್ಕಾಗದೇ ಈ ಪತ್ರವನ್ನು ಬರೆಯುತ್ತಿದ್ದೇನೆ.
ನಾನು ಈ ದೇಶದ ಪ್ರಧಾನಿಯಾದುದು ನನ್ನ ಅದೃಷ್ಟ. ಇದ್ರಿಂದ ನನಗೆ ಮತ್ತು ನನ್ನ ಪಕ್ಷಕ್ಕೆ ಒಳ್ಳೆಯ ಹೆಸರು ಬಂತು. ಈ ನಾಡಿನ ಸೂಕ್ಷ್ಮ ಸಂವೇದನೆಯ ರಾಜಕಾರಣಿಗಳೆಲ್ಲ ನನ್ನ ಪಕ್ಷಕ್ಕೆ ಬಂದು ಸೇರಿಕೊಂಡರು. ದಕ್ಷಿಣ ಭಾರತದ ಹಿಂದಿವಾಲಾ ಪಕ್ಷಗಳ ವಿರುದ್ಧ ನಮ್ಮದೇ ನೆಲದ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸೋಣ ಅವರ ಕನಸಾಗಿತ್ತು. ಆರಂಭದಲ್ಲಿಯೇ ಎಲ್ಲವೂ ಚನ್ನಾಗಿಯೇ ಇತ್ತು. ಆದರೆ, ನನ್ನ ಪುತ್ರ ವಾತ್ಸಲ್ಯ ಮತ್ತು ಕುಟುಂಬ ಪ್ರೇಮ ನನ್ನನ್ನು ಕುರುಡನ್ನಾಗಿ ಮಾಡಿತ್ತು. ಅದೇ ನಾನು ಮಾಡಿದ ದೊಡ್ಡ ತಪ್ಪು.
ಇವನಿಗೆ ಸೀಟು ಕೊಟ್ಟರೆ ಅವನಿಗೆ ಸಿಟ್ಟು, ಅವನಿಗೆ ಕೊಟ್ರೆ ಇವನಿಗೆ ಸಿಟ್ಟು. ಹಾಗಾಗಿ ನಾನು ಬರಬರುತ್ತಾ ನನ್ನ ಮಕ್ಕಳಿಗೆ, ಸೊಸೆಯಂದಿರಿಗೆ, ಅಳಿಯಂದಿರಿಗೆ, ಮೊಮ್ಮಕ್ಕಳಿಗೆ ಇದ್ದುಬಿದ್ದ ಸಂಬಂಧಿಕರಿಗೆಲ್ಲ ನನ್ನ ಪಕ್ಷದ ಟಿಕೇಟ್‌ಗಳನ್ನು ಹಂಚುತ್ತಾ ಹೋದೆ. ಪ್ರಾದೇಶಿಕ ಪಕ್ಷ ಅಂತ ಬಂದವರೆಲ್ಲ ಒಬ್ಬೊಬ್ಬರು ಪಕ್ಷ ಬಿಟ್ಟು ಹೋದರು. ನಮ್ಮ ಪಕ್ಷ ಅನ್ನುವುದು ನನ್ನ ಕುಟುಂಬದ ಪಕ್ಷವಾಗಿ ಮಾತ್ರ ಉಳಿಯಿತು. ಹಾಗೆ ನೋಡಿದರೆ ನಾನು ಪ್ರಜಾಪ್ರಬುತ್ವ ವ್ಯವಸ್ಥೆಯ ವಿರೋಧಿ. ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ಇರುವ ಪ್ರಜಾ ರಾಜಕಾರಣವನ್ನು ನಮ್ಮ ಕರ್ನಾಟಕದಲ್ಲಿ ಕುಟುಂಬ ರಾಜಕಾರಣಕ್ಕೆ ಸೀಮಿತ ಮಾಡಿದ ಕುಖ್ಯಾತಿ ನನ್ನದೇ ಎನ್ನಬಹುದು. ಇದಷ್ಟೇ ಅಲ್ಲ, ನನ್ನ ಕುಟುಂಬದವರೆಲ್ಲ ಅವರವರ ಕ್ಷೇತ್ರಗಳಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿದರು. ರಾಜರಂತೆ ವರ್ತಿಸುತ್ತಾ ರಾಜಸತ್ತೆ ಸ್ಥಾಪಿಸತೊಡಗಿದರು. ತಮ್ಮ ತಮ್ಮ ಕ್ಷೇತ್ರಗಳನ್ನು, ಕ್ಷೇತ್ರದ ಜನರನ್ನು, ಹೆಂಗಸರನ್ನು ಆಸ್ತಿಯಂತೆ ಬಳಸತೊಡಗಿದರು. ಇದಕ್ಕೆ ನನ್ನ ದೊಡ್ಡ ಮಗ ಒಂದು ಸಿಂಪಲ್ ಉದಾಹರಣೆ.
ಇನ್ನೊಂದು ನನ್ನ ಮುಖ್ಯವಾದ ೨ನೇ ತಪ್ಪೆಂದರೆ ಪ್ರಜ್ವಲ್ ರೇವಣ್ಣ ಪ್ರಕರಣ ಐದಾರು ವರ್ಷಗಳ ಹಿಂದೆಯೇ ನನ್ನ ಗಮನಕ್ಕೆ ಬಂದಿದ್ದರೂ ನಾನು ನಿರ್ಲಕ್ಷ ಮಾಡಿದ್ದು. ಆಗ ನನ್ನ ಬುದ್ಧಿಗೆ ಮಂಕು ಕವಿದಿತ್ತು. ಪ್ರಜ್ವಲನ ಭಾಷಣ ಕೇಳುತ್ತಿದ್ದರೆ. ನಿಜ ಹೇಳಬೇಕೆಂದರೆ ಅವನ ಗತ್ತು ಗೈರತ್ತು ನೋಡುತ್ತಿದ್ದರೆ, ನನಗೆ ನನ್ನ ಕುಟುಂಬದ ಜೀನ್ಸ್ ಬಗ್ಗೆ ಬಹಳಷ್ಟು ಹೆಮ್ಮೆಯಾಗುತ್ತಿತ್ತು. ಈ ಪಜ್ವಲ ನಮ್ಮ ಪಕ್ಷವನ್ನು ಉಜ್ವಲಗೊಳಿಸುತ್ತಾನೆ ಎಂದೇ ನಾನು ನಂಬಿದ್ದೆ.
ರಾಜಕಾರಣಿಗಳ ಸುತ್ತಮುತ್ತಲೆಲ್ಲ ಸ್ವಜಾತಿಯ ಹೊಗಳುಭಟ್ಟ ವಂದಿ ಮಾಗದರೇ ತುಂಬಿಕೊಂಡಿರುತ್ತಾರೆ. ಅಂತ ವಂದಿಮಾಗದರು ಐದಾರು ವರ್ಷಗಳ ಹಿಂದೆಯೇ ಪ್ರಜ್ವಲನ ಕಾಮ ಕ್ರೀಡೋತ್ಸವಗಳನ್ನು ನನಗೆ ಹೇಳಿದ್ದರು. ಹೇಳಿದ ಮರುಗಳಿಗೆಯೇ ವಯಸ್ಸಿನ ಹುಡುಗ ಗೌಡ್ರೆ, ಅದರಲ್ಲೂ ನಮ್ಮಗೌಡ್ರ ಜಾತಿ ಹುಡುಗ, ಗಂಡು ಹುಡುಗ, ಇದೆಲ್ಲ ಕಾಮನ್ನು ಎಂದು ಅವರೇ ಸಮಾಧಾನ ಮಾಡಿದ್ದರು. ಸುಳ್ಳು ಯಾಕೆ ಹೇಳಲಿ ಆಗ ನನ್ನ ಸುತ್ತಲಿದ್ದವರ ಮಾತು ಕೇಳಿ ನನ್ನೊಳಗೂ ಗರ್ವ ತುಸು ಹೆಚ್ಚೇ ಇತ್ತು. ಅದು ನನ್ನನ್ನು ಮರುಳನನ್ನಾಗಿಸಿತು,
ಅವನ ಚಿಕ್ಕಪ್ಪ ಮಾಡಿದ ಪ್ರಕರಣ ಕಣ್ಮುಂದೆ ಇತ್ತಲ್ಲ. ಅವನ ಚಿಕ್ಕಪ್ಪನೂ ಹಾಗೆ ಒಂದಿಷ್ಟು ದಿನ ಹಾರಾಡಿ, ಊರೆಲ್ಲ ಸುತ್ತಾಡಿ ಆಮೇಲೆ ಮನೆಗೆ ಹತ್ತಿದವನು. ಇವನಿಗೂ ಮದುವೆ ಅನ್ನೋದೊಂದು ಮಾಡಿದ ಮೇಲೆ ಸರಿ ಹೋಗ್ತಾನೆ. ಅಲ್ಲಿಯವರೆಗೂ ಹಾರಾಡಿಕೊಂಡಿರಲಿ ಎಂದು ನಾನು ಸುಮ್ಮನಾಗಿದ್ದೆ.
ಬಹುಶಃ ಯಾರಿಗೆಲ್ಲ ಹಣ, ಅಧಿಕಾರ, ಕೀರ್ತಿ ಬರುತ್ತದೆಯೋ ಅವರೆಲ್ಲ ಹೀಗೆ ದಾರಿ ತಪ್ಪುತ್ತಾರೆ ಅನಿಸುತ್ತದೆ. ಈ ಕಾರಣಕ್ಕಾಗಿಯೇ ರಾಜರ ಅಂತಪುರಗಳಲ್ಲೆ ಎಲ್ಲ ಕಾಲದಲ್ಲೂ ತುಂಬಿ ತುಳುಕುತ್ತಿದ್ದವು. ಸಣ್ಣ ವಯಸ್ಸಿನ ಮಕ್ಕಳಿಗೆ ಅಧಿಕಾರ, ಸ್ಥಾನಮಾನ, ಟಿಕೇಟ್ ಕೊಡಲೇಬಾರದು ಎಂದು ಈಗನಿಸುತ್ತದೆ. ಇದು ನನ್ನ ಮೊಮ್ಮಕ್ಕಳದ್ದೇ ತಪ್ಪಲ್ಲ. ಎಲ್ಲೆಲ್ಲಿ ಕುಟುಂಬ ರಾಜಕಾರಣ ಇದೆಯO ಅಲ್ಲೆಲ್ಲ ಹಿರಿಯ ರಾಜಕಾರಣಿಗಳ ಮಕ್ಕಳು ಮೊಮ್ಮಕ್ಕಳು ಹಿಂಗೆ ಮೆರಿತಿದ್ದಾರೆ. ಆದರೆ, ಗುಂಡಿ ಒಳಗೆ ಬಿದ್ದೋನಿಗೆ ಆಳಿಗೊಂದು ಕಲ್ಲು.
ನನ್ನ ಸುತ್ತಲಿದ್ದ ಹೊಗಳುಭಟ್ಟರೆಲ್ಲ ನಮ್ಮನ್ನು ನೀವು ದೇಶ ಆಳಕ್ಕೆ ಬಂದವರು ಎಂದೆಲ್ಲ ಯಾವಾಗಲೂ ಹೇಳುತ್ತಲೇ ಇದ್ದರು. ನಾನು ನನ್ನ ಕುಟುಂಬದವರು ಕೂಡ ಅದನ್ನೆ ನಂಬಿ ಆಳುವುದಕ್ಕಾಗಿ ಹೋರಾಡುತ್ತಲೇ ಇದ್ದೇವು. ಆದರೆ, ದೇಶ ಆಳಕ್ಕೆ ಹೋಗಿ ನಮ್ಮ ನಮ್ಮ ಮನೆಯ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದರ ಕಡೆ ನಾವು ಗಮನ ಕೊಡಲೇ ಇಲ್ಲ. ಮಕ್ಕಳಿಗೆ ತುಸುವಾದರೂ ಸಂವೇದನೆ ಕಲಿಸಿದ್ದರೆ, ಸಮಾಜದ ಬಗ್ಗೆ ಅರ್ಥ ಮಾಡಿಸಿದ್ದರೆ ಹೀಗಾಗುತ್ತಿರಲಿಲ್ಲ.
ಅದರ ಪ್ರತಿಫಲವೇ ಈಗ ಇಷ್ಟೆಲ್ಲ ಆಗಿದೆ. ನನ್ನ ಎರಡನೇ ಮಗ ಎರಡು ಸಂಸಾರ ಕಟ್ಟಿಕೊಂಡಾಗ, ನನ್ನ ದೊಡ್ಡಮಗ ಕೊರೊನಾ ಕಾಲದಲ್ಲಿ ಜನರಿಗೆ ಕಿಟ್ ಹಂಚುವಾಗ ಬೀಕ್ಷುಕರಿಗೆ ಎಸೆಯುವಂತೆ ಕಿಟ್ ಎಸೆದಾಗ, ನನ್ನ ಸೊಸೆ ಒಂದು ಯಕಶ್ಚಿತ್ ಕಾರು ಡ್ಯಾಮೇಜ್ ಆದಾಗ ಗೌಡ್ರಾಳ್ವಿಕೆಯ ಪೊಗರಿನ ಮಾತಾಡಿದಾಗ, ಪ್ರಜ್ವಲನ ಕಾಮಕ್ರೀಡೆಗಳ ವಿಚಾರ ಕಿವಿಗೆ ಬಿದ್ದಾಗ… ಹೀಗೆ ಆಗಲೇ ಎಚೆತ್ತುಕೊಂಡು ಬುದ್ಧಿ ಹೇಳಿದ್ದರೆ ಇದೆಲ್ಲ ನಡೆಯುತ್ತಲೇ ಇರಲಿಲ್ಲ. ಈಗ ಕಾಲ ಮಿಂಚಿ ಹೋಗಿಬಿಟ್ಟಿದೆ.
ಇನ್ನು ನನ್ನ ಕಣ್ಣಾರೆ ಏನೇನೋ ನೋಡುವುದಿದೆಯೋ ಎಂದು ಅಲವತ್ತುಕೊಳ್ಳುತ್ತಾ ಕಾಲ ಕಳೆಯುವುದಷ್ಟೆ ಈಗ ನನಗೆ ಉಳಿದಿರುವುದು. ಇದನ್ನು ಕೂಡ ನೀವು ಸಹಾನುಭೂತಿ ಗಿಟ್ಟಿಸಿಕೊಳ್ಳಲು ದೊಡ್ಡಗೌಡರ ಗೋಳಾಟ ಎಂದುಕೊಂಡರೆ ನಾನೇನು ಮಾಡಲಾಗುವುದಿಲ್ಲ. ನಿಮಗೆ ಮನವರಿಕೆ ಮಾಡಲು ಸಾಧ್ಯವಿಲ್ಲವೆಂದು ನನಗೆ ಗೊತ್ತು. ನಾನು ನನ್ನ ಆತ್ಮಸಾಕ್ಷಿಗೆ ಹೆದರುತ್ತೇನೆ, ದೇವರಲ್ಲಿ ನನಗೆ ನಂಬಿಕೆ
ಇಂತಿ ನಿಮ್ಮ ದೊಡ್ಡಗೌಡ್ರು
- ಹನುಮಂತ ಹಾಲಿಗೇರಿ