ಕನ್ನಡ ಚಿತ್ರೋಧ್ಯಮಕ್ಕೆ ಮತ್ತೊಂದು ಗರಿಮೆ ಮೂಡಿದೆ. ಪ್ರತಿಷ್ಠಿತ ಕಾನ್ ಚಲನಚಿತ್ರೋತ್ಸವದ ಕಿರುಚಿತ್ರ ವಿಭಾಗದಲ್ಲಿ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಪಡೆದ ನಿರ್ದೇಶಕ ಚಿದಾನಂದ್ ನಾಯಕ್ ನಿರ್ದೇಶನದ “ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು” ಕಿರುಚಿತ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಇದು ಕರ್ನಾಟಕ ಮಾತ್ರವಲ್ಲದೇ ಭಾರತಕ್ಕೇ ಸಿಕ್ಕ ದೊಡ್ಡ ಗೌರವವಾಗಿದೆ ಎಂದು ವರದಿಯಾಗಿದೆ.
ಪ್ರತಿದಿನ ಬೆಳಿಗ್ಗೆ ಸೂರ್ಯೋದಯಕ್ಕೆ ಕಾರಣವೆಂದು ಎಲ್ಲರೂ ನಂಬಿದ್ದ ಹುಂಜದೊಂದಿಗೆ ಅಜ್ಜಿ ಓಡಿಹೋಗುವ ಜನಪದ ಕಥಾವಸ್ತುವನ್ನು ಈ ಕಿರುಚಿತ್ರ ಹೊಂದಿದೆ.
ಪುಣೆಯ ಫಿಲ್ಡ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ (FTII) ಸಂಸ್ಥೆ ನಿರ್ಮಿಸಿರುವ ಈ ಕಿರುಚಿತ್ರದ ರಚನೆ ಹಾಗೂ ನಿರ್ದೇಶನ ಚಿದಾನಂದ ನಾಯಕ್ ಅವರದ್ದು. ವಿ ಮನೋಜ್– ಸಂಕಲನ, ಸೂರಜ್ ಠಾಕೂರ್ ಛಾಯಾಗ್ರಹಣ, ಅಭಿಷೇಕ್ ಕದಂ ಅವರ ಶಬ್ದವಿನ್ಯಾಸ ಚಿತ್ರಕ್ಕಿದೆ.
ಇದಷ್ಟೇ ಅಲ್ಲದೇ ಲಾ ಸಿನೆಫ್ ಬಹುಮಾನ ಗೆದ್ದ ಭಾರತದ ಎರಡನೇ ಕಿರುಚಿತ್ರ ಇದಾಗಿದ್ದು, 2020ರಲ್ಲಿ ಅಶ್ಮಿತಾ ಗುಹಾ ನಿಯೋಗಿ ನಿರ್ದೇಶನದ ‘ಕ್ಯಾಟ್‌ಡಾಗ್’ ಈ ಹಿಂದೆ ಬಹುಮಾನ ಗೆದ್ದಿತ್ತು.
ಈ ಕಿರುಚಿತ್ರದಲ್ಲಿ ಕನ್ನಡದ ಜನಪ್ರಿಯ ನಟ ಎಂ.ಎಸ್.ಜಹಾಂಗೀರ್ ಅಜ್ಜನಾಗಿ ನಟಿಸಿದ್ದಾರೆ. ಎರಡನೇ ಬಹುಮಾನವನ್ನು ಕೊಲಂಬಿಯಾ ವಿಶ್ವವಿದ್ಯಾಲಯದ ಅಸ್ಯ ಸೆಗಲೊವಿಚ್ ನಿರ್ದೆಶನದ ‘ಔಟ್ ಆಫ್ ದ ವಿಡೊ ಹೂ ದ ವಾಲ್’ ಮತ್ತು ಗ್ರೀಸ್‌ನ ಥೆಸಲೋನಿಕಿಯ ಅರಿಸ್ಟಾಟಲ್ ವಿಶ್ವವಿದ್ಯಾನಿಲಯದ ನಿಕೋಸ್ ಕೊಲಿಯೋಕೋಸ್ ಅವರು ನಿರ್ದೇಶಿಸಿರುವ ಚೋಸ್ ಶೀ ಲೆಫ್ಟ್ ಬಿಹೈಂಡ್ ಚಿತ್ರಗಳು ಹಂಚಿಕೊಂಡಿವೆ.
ಕರ್ನಾಟಕ ಮಾತ್ರವಲ್ಲದೇ ಭಾರತಕ್ಕೆ ಅತ್ಯಂತ ದೊಡ್ಡ ಗೌರವ ತಂದ ಚಿದಾನಂದ್ ನಾಯಕ್ ಅವರಿಗೆ ಕನ್ನಡ ಜನತೆಯ ಪರವಾಗಿ “ಪೀಪಲ್ ಬಳಗ” ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತದೆ.