ಮಂಡಿ: ಬಾಹ್ಯಾಕಾಶಕ್ಕೆ ಹೋದ ಮೊದಲ ವ್ಯಕ್ತಿ ಹನುಮಾನ್ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಸಂಸದ ಅನುರಾಗ್ ಠಾಕೂರ್ ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಶಾಲೆಯೊಂದರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅನುರಾಗ್ ಠಾಕೂರ್ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳನ್ನು, “ಬಾಹ್ಯಾಕಾಶಕ್ಕೆ ಹೋದ ಮೊದಲ ವ್ಯಕ್ತಿ ಯಾರು?” ಎಂದು ಪ್ರಶ್ನಿಸಿದರು. ಇದಕ್ಕೆ ವಿದ್ಯಾರ್ಥಿಗಳೆಲ್ಲರೂ “ನೀಲ್ ಆರ್ಮ್‌ಸ್ಟ್ರಾಂಗ್” ಎಂದು ಉತ್ತರಿಸಿದರು. ಆದರೆ, ಠಾಕೂರ್ ಅವರು ಮಕ್ಕಳ ಉತ್ತರವನ್ನು ತಳ್ಳಿಹಾಕಿ, “ನನ್ನ ಪ್ರಕಾರ ಬಾಹ್ಯಾಕಾಶ ಯಾನ ಮಾಡಿದ ಮೊದಲ ವ್ಯಕ್ತಿ ಹನುಮಾನ್ ಜೀ” ಎಂದು ಹೇಳಿದರು.
ಠಾಕೂರ್ ಮುಂದುವರಿದು, “ನಮ್ಮ ಸಾವಿರಾರು ವರ್ಷಗಳ ಸಂಪ್ರದಾಯ, ಜ್ಞಾನ ಮತ್ತು ಸಂಸ್ಕೃತಿ ನಮಗೆ ತಿಳಿದಿಲ್ಲದಿದ್ದರೆ, ಆಂಗ್ಲರು ನಮಗೆ ತೋರಿಸಿದ್ದನ್ನೇ ನಾವು ನೋಡಬೇಕಾಗುತ್ತದೆ. ಆದ್ದರಿಂದ ನಮ್ಮ ಪುರಾಣಗಳ ಬಗ್ಗೆಯೂ ತಿಳಿದುಕೊಳ್ಳಿ” ಎಂದು ಹೇಳಿದರು.
ನಂತರ ಶಿಕ್ಷಕರನ್ನು ಉದ್ದೇಶಿಸಿ, “ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ, ನಮ್ಮ ವೇದಗಳು, ಸಂಪ್ರದಾಯಗಳು ಮತ್ತು ಜ್ಞಾನದ ಕಡೆಗೆ ಗಮನ ಹರಿಸಿದರೆ ನಮಗೆ ಅನೇಕ ವಿಷಯಗಳು ತಿಳಿಯುತ್ತವೆ” ಎಂದು ಸಲಹೆ ನೀಡಿದರು.
ಈ ಹೇಳಿಕೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅನುರಾಗ್ ಠಾಕೂರ್ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಒಬ್ಬ ನೆಟಿಜನ್, “ಇಂತಹ ನಾಯಕರು ಭಾರತವನ್ನು ಸಾವಿರಾರು ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆಯೇ? ಕನಿಷ್ಠ ಶಾಲಾ ಮಕ್ಕಳಿಗೆ ತಪ್ಪು ಜ್ಞಾನ ಹೇಳಬಾರದು ಎಂಬುದು ಇವರಿಗೆ ಗೊತ್ತಿಲ್ಲವೇ?” ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು, “ಅಧಿಕಾರದಲ್ಲಿರುವ ಮಂತ್ರಿಗಳು ಓದು ಮತ್ತು ವಿಜ್ಞಾನವನ್ನು ಬದಿಗಿಟ್ಟು ಕಥೆಗಳನ್ನು ವಿಜ್ಞಾನವೆಂದು ಹೇಳಿದರೆ ಮಕ್ಕಳ ಭವಿಷ್ಯ ಅಪಾಯಕ್ಕೆ ಸಿಗುವ ಸಾಧ್ಯತೆ ಇದೆ. ಇತಿಹಾಸ ಮತ್ತು ಪೌರಾಣಿಕ ಕಥೆಗಳನ್ನು ಗೌರವಿಸುವುದು ಸರಿಯೇ, ಆದರೆ ಶಿಕ್ಷಣದಲ್ಲಿ ಸತ್ಯ ಮತ್ತು ಜ್ಞಾನ ಮಾತ್ರ ಇರಬೇಕು” ಎಂದು ಬರೆದುಕೊಂಡಿದ್ದಾರೆ.
ನಿಜವಾಗಿ ಬಾಹ್ಯಾಕಾಶಕ್ಕೆ ಹೋದ ಮೊದಲ ವ್ಯಕ್ತಿ ಸೋವಿಯತ್‌ನ ಯೂರಿ ಗಗಾರಿನ್ , ಚಂದ್ರನ ಮೇಲೆ ಕಾಲಿಟ್ಟ ಮೊದಲ ವ್ಯಕ್ತಿ ನೀಲ್ ಆರ್ಮ್‌ಸ್ಟ್ರಾಂಗ್.