ಪಾಲಕ್ಕಾಡ್ ಶಾಸಕ ರಾಹುಲ್ ಮಮ್‌ಕೂಟತಿಲ್ ವಿರುದ್ಧ ಹಲವಾರು ಮಹಿಳೆಯರು ಲೈಂಗಿಕ ಕಿರುಕುಳ ಆರೋಪಗಳನ್ನು ಹೊರಿಸಿದ ನಂತರ ಕಾಂಗ್ರೆಸ್ ಸೋಮವಾರ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಅಮಾನತುಗೊಳಿಸಿದೆ. ಪಕ್ಷದ ಒಳಗೆ ಮತ್ತು ಹೊರಗೆ ಹೆಚ್ಚುತ್ತಿರುವ ಒತ್ತಡದ ಹಿನ್ನೆಲೆಯಲ್ಲಿ ಅವರು ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಕೆಲವೇ ದಿನಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಕಳೆದ ವಾರ ಮಲಯಾಳಂ ನಟಿ ಮತ್ತು ಮಾಜಿ ಪತ್ರಕರ್ತೆ ರಿನಿ ಆನ್ ಜಾರ್ಜ್, ಪ್ರಮುಖ ರಾಜಕೀಯ ಪಕ್ಷದ ಯುವ ನಾಯಕನೊಬ್ಬ ತನಗೆ ಪದೇ ಪದೇ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದಾರೆ ಮತ್ತು ಹೋಟೆಲ್‌ಗೆ ಆಹ್ವಾನಿಸಿದ್ದಾರೆ ಎಂದು ಆರೋಪಿಸಿದಾಗ ವಿವಾದ ಆರಂಭವಾಯಿತು.
ಇದರ ಬೆನ್ನಲ್ಲೇ ಬರಹಗಾರ್ತಿ ಹನಿ ಭಾಸ್ಕರನ್ ಅವರು ರಾಹುಲ್ ಮಾಮ್‌ಕೂಟತಿಲ್ ಅವರನ್ನು ಸಾರ್ವಜನಿಕವಾಗಿ ಹೆಸರಿಸಿ, ಅವರು ನಿರಂತರವಾಗಿ ತನಗೂ ಅಸಭ್ಯ ಸಂದೇಶ ಕಳುಹಿಸುತ್ತಿದ್ದಾರೆ ಮತ್ತು ನಂತರ ತಮ್ಮ ಸಂಭಾಷಣೆಗಳನ್ನು ತಪ್ಪಾಗಿ ನಿರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಯುವ ಕಾಂಗ್ರೆಸ್‌ನಲ್ಲಿ ಅವರ ವಿರುದ್ಧ ಈ ಹಿಂದೆ ಹಲವಾರು ದೂರುಗಳು ಬಂದಿವೆ ಆದರೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆರೋಪಿಸಿದರು.
ಅವಂತಿಕಾ ಎಂಬ ಟ್ರಾನ್ಸ್‌ಜೆಂಡರ್ ಮಹಿಳೆ ಕೂಡ ಮಾಮ್‌ಕೂಟತಿಲ್ ತನ್ನ ಮೇಲೆ ಅತ್ಯಾಚಾರ ಮಾಡುವ ಬಯಕೆಯನ್ನು ವ್ಯಕ್ತಪಡಿಸಿ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. “ನನ್ನ ಮೇಲೆ ಅತ್ಯಾಚಾರ ಮಾಡಬೇಕೆಂದು ಹೇಳಿದ್ದರಿಂದ ಆತ ಲೈಂಗಿಕವಾಗಿ ಹತಾಶೆಗೊಂಡಿದ್ದಾನೆ ಎಂದು ನಾನು ಭಾವಿಸುತ್ತೇನೆ ಎಂದು ರಾಹುಲ್ ಮಾಮ್‌ಕೂಟತಿಲ್ ವಿರುದ್ಧ ಮಾತನಾಡಿದ್ದಾರೆ. ನಾವು ಬೆಂಗಳೂರು ಅಥವಾ ಹೈದರಾಬಾದ್‌ಗೆ ಹೋೋಣ ಎಂದು ರಾಹುಲ್ ನನಗೆ ಒತ್ತಾಯಿಸಿದ್ದಾರೆ” ಎಂದು ಅವರು ಹೇಳಿದರು.
ನಂತರ, ಮಮ್‌ಕೂಟತಿಲ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು, ಇದು ಅವರ ವೈಯಕ್ತಿಕ ನಿರ್ಧಾರ ಹಾಗೂ ಈ ನಿರ್ಧಾರದ ಹಿಂದೆ ಯಾವುದೇ ಒತ್ತಡ ಇಲ್ಲ ಎಂದು ಹೇಳಿದರು.
ಸಧ್ಯ ಹೆಚ್ಚಿದ ಒತ್ತಡದ ಕಾರಣಕ್ಕೆ ಕಾಂಗ್ರೆಸ್ ಸೋಮವಾರ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಅಮಾನತುಗೊಳಿಸಿದೆ.