ದೇಶದಲ್ಲಿ ಮಣಿಪುರದ ಹಿಂಸಾಚಾರ ಇನ್ನೂ ಬಿಸಿ ಇರುವಾಗಲೇ ಹರಿಯಾಣದಲ್ಲಿ ಕೋಮು ಗಲಭೆಯಿಂದ 4 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಮೆರವಣಿಗೆಯಲ್ಲಿ ಈ ಹಿಂಸಾಚಾರ ನಡೆದಿದ್ದು ಕೋಮು ಪ್ರಚೋದನೆಯೇ ಈ ಗಲಭೆಗೆ ಕಾರಣ ಎನ್ನಲಾಗಿದೆ.
ಹರಿಯಾಣದ ನುಹ್ ಜಿಲ್ಲೆಯಲ್ಲಿ ಗುಂಪೊಂದು ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆಯನ್ನು ತಡೆಯಲು ಬಂದಾಗ, ಕಲ್ಲು ತೂರಾಟ ಮತ್ತು ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ. ಸೋಮವಾರ ಮಧ್ಯಾಹ್ನದ ನಂತರ ನಡೆದ ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಜೊತೆಗೆ ಪೊಲೀಸರು ಸೇರಿದಂತೆ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನುಹ್ ಜಿಲ್ಲೆಯಲ್ಲಿ ನಡೆದ ಘರ್ಷಣೆಯ ಸುದ್ದಿ ವ್ಯಾಪಕವಾಗಿ ಹರಡುತ್ತಿದ್ದಂತೆ, ಹರಿಯಾಣದ ಸೊಹ್ನಾದಲ್ಲಿ ಹಲವು ಗುಂಪುಗಳು ಕಲ್ಲು ತೂರಾಟ ನಡೆಸಿದ್ದಾರೆ. ನಿರ್ದಿಷ್ಟ ಸಮುದಾಯದ ಜನರಿಗೆ ಸೇರಿದ ನಾಲ್ಕು ವಾಹನಗಳು ಮತ್ತು ಅಂಗಡಿಗಳನ್ನು ಸುಟ್ಟು ಹಾಕಿದ್ದಾರೆ. ಸೋಹ್ನಾದಲ್ಲೂ ಸಹ ಪ್ರತಿಭಟನಾಕಾರರು ಗಂಟೆಗಟ್ಟಲೆ ರಸ್ತೆ ತಡೆ ನಡೆಸಿದ್ದಾರೆ.
ರಾತ್ರೋರಾತ್ರಿ ನಡೆದ ಹಿಂಸಾಚಾರದಲ್ಲಿ ಮೂರು ಮಂದಿ ಸಾವನ್ನಪ್ಪಿದ್ದರೆ, ಗುರುಗ್ರಾಮ್‌ನ ಮಸೀದಿಯ ಮೇಲೆ ಗುಂಪೊಂದು ದಾಳಿ ಮಾಡಿದ ನಂತರ ನಾಲ್ಕನೇ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಸಧ್ಯಕ್ಕೆ ವಿಶ್ವ ಹಿಂದೂ ಪರಿಷತ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಹಿಂಸಾಚಾರ ಪೀಡಿತ ನುಹ್ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು, ಕರ್ಫ್ಯೂ ವಿಧಿಸಲಾಗಿದೆ. ನುಹ್ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹರಿಯಾಣ ಸರ್ಕಾರವು ಒಂದು ವಾರದವರೆಗೆ ಕೇಂದ್ರದಿಂದ ಕ್ಷಿಪ್ರ ಕಾರ್ಯಪಡೆಯ 20 ತಂಡಗಳನ್ನು ಹರಿಯಾಣಕ್ಕೆ ಕಳುಹಿಸಲು ಕೋರಿದೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು 20 ಮಂದಿಯ ಮೇಲೆ FIR ದಾಖಲಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಗುರುಗ್ರಾಮ್ ಮತ್ತು ಫರಿದಾಬಾದ್‌ನಲ್ಲಿನ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳು ಆಗಸ್ಟ್ 1 ರ ಮಂಗಳವಾರದಂದು ಬಂದ್ ಮಾಡಲು ಸರ್ಕಾರ ಆದೇಶಿಸಿದೆ. ಜೊತೆಗೆ 3 ದಿನಗಳ ಕಾಲ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಘಟನೆಗೆ ಕಾರಣ
ಘಟನೆ ನಡೆಯುವ ಕೆಲವು ದಿನಗಳ ಹಿಂದೆ ಹರಿಯಾಣದ ವಿವಾದಿತ ವ್ಯಕ್ತಿ, ಹಲವಷ್ಟು ಅನೈತಿಕ ಪೊಲೀಸಗಿರಿ, ಅಕ್ರಮ ಗೋರಕ್ಷಣೆ ಹಾಗೂ ಮುಸ್ಲಿಂ ಯುವಕರು ಸಾವಿನ ಹಿನ್ನೆಲೆಯಲ್ಲಿ ಆರೋಪಿಯಾಗಿದ್ದ ಮೋನು ಮಾನೇಸರ್, VHP ಆಯೋಜಿಸಿದ್ದ ಮೆರವಣಿಗೆಯಲ್ಲಿ ಭಾಗವಹಿಸುತ್ತೇನೆ ಎಂದು ಕರೆ ನೀಡಿದ್ದ.
ಈ ವರ್ಷದ ಪ್ರಾರಂಭದಲ್ಲಿ ಹರಿಯಾಣದ ಭಿವಾನಿ ಜಿಲ್ಲೆಯ ಬೊಲೆರೋದಲ್ಲಿ ನಾಸಿರ್ ಮತ್ತು ಜುನೈದ್ ಎಂಬ ಇಬ್ಬರು ಮುಸ್ಲಿಂ ಯುವಕರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಾವಿನ ಪ್ರಕರಣದ ತನಿಖೆಯ ನಂತರ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಗೋರಕ್ಷಣೆ, ಧರ್ಮ ರಕ್ಷಣೆ ಹೆಸರಲ್ಲಿ ಹೆಸರಾಗಿದ್ದ ಮೋನು ಮಾನೇಸರ್ ಹೆಸರನ್ನು ಉಲ್ಲೇಖಿಸಲಾಗಿತ್ತು.
ಅಂದಿನಿಂದಲೇ ಮೋನು ಮಾನೇಸರ್ ವಿರುದ್ಧ ಗುಂಪೊಂದು ಪ್ರತಿಕಾರಕ್ಕೆ ಅವಕಾಶ ಹುಡುಕುತ್ತಿತ್ತು. ಆ ಹಿನ್ನೆಲೆಯಲ್ಲಿ ಸೋಮವಾರದ ವಿಶ್ವ ಹಿಂದೂ ಪರಿಷತ್ ನ ಮೆರವಣಿಗೆ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಘಟನೆ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ.