Home ಅಂಕಣ 2019 ರ ನಂತರ ಜಮ್ಮು-ಕಾಶ್ಮೀರ ನಿಜವಾಗಿಯೂ ‘ಅಭಿವೃದ್ಧಿ’ಯಾಗಿದೆಯೇ? ಡೇಟಾ ಬೇರೆಯೇ ಹೇಳುತ್ತದೆ!

2019 ರ ನಂತರ ಜಮ್ಮು-ಕಾಶ್ಮೀರ ನಿಜವಾಗಿಯೂ ‘ಅಭಿವೃದ್ಧಿ’ಯಾಗಿದೆಯೇ? ಡೇಟಾ ಬೇರೆಯೇ ಹೇಳುತ್ತದೆ!

0
ಜನವರಿ 13, 2025 ಜಮ್ಮು-ಕಾಶ್ಮೀರದಲ್ಲಿ Z-Morh ಸುರಂಗದ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ. | ಚಿತ್ರಕೃಪೆ: PTI

ಜಮ್ಮು-ಕಾಶ್ಮೀರದ ‘ಸಂಕಷ್ಟದ ದಿನಗಳು’ ದೂರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಹಿಂದೆ ರಾಜ್ಯವಾಗಿದ್ದಾಗ ಸಮೃದ್ದವಾಗಿದ್ದ ಜಮ್ಮು-ಕಾಶ್ಮೀರ 2019 ದಿಂದ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದೆ ಎಂಬುದನ್ನು ಅಂಕಿಅಂಶಗಳು ಬಹಿರಂಗಪಡಿಸುತ್ತವೆ

ಜನವರಿ 13, 2025 ಸೋಮವಾರದಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇಂದ್ರ ಕಾಶ್ಮೀರದ ಗಂದೇರ್‌ಬಾಲ್ ಜಿಲ್ಲೆಯಲ್ಲಿ ಆಯಕಟ್ಟಿನ ಪ್ರಮುಖ ಸುರಂಗವನ್ನು ಉದ್ಘಾಟಿಸಿದರು.

ಲಡಾಖ್‌ಗೆ ವರ್ಷಪೂರ್ತಿ ಸಂಪರ್ಕವನ್ನು ಕಲ್ಪಿಸಲು ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ 6.4 ಕಿಮೀ ಉದ್ದದ ಸೋನಾಮಾರ್ಗ್ ಸುರಂಗ ನಿರ್ಮಿಸಲಾಗಿದೆ. 2025 ರ ಮೊದಲ ಎರಡು ವಾರಗಳಲ್ಲಿ ಮೋದಿಯವರು ಈ ಪ್ರದೇಶದಲ್ಲಿಉದ್ಘಾಟಿಸಿದ ಎರಡನೇ ಪ್ರಮುಖ ಮೂಲಸೌಕರ್ಯ ಯೋಜನೆ ಇದಾಗಿದೆ.

2019 ರ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ರಾಜ್ಯ ಸ್ಥಾನಮಾನವನ್ನು ರದ್ದುಗೊಳಿಸುವುದರ ಬಗ್ಗೆ ಪರೋಕ್ಷವಾಗಿ ಉಲ್ಲೇಖಿಸಿದ ಮೋದಿ, ಕೇಂದ್ರಾಡಳಿತ ಪ್ರದೇಶವು “ಹಿಂದಿನ ಕಷ್ಟದ ದಿನಗಳನ್ನು ಬಿಟ್ಟು ‘ಭೂಮಿಯ ಮೇಲಿನ ಸ್ವರ್ಗ’ ಎಂಬ ಖ್ಯಾತಿಯನ್ನು ಮರಳಿ ಪಡೆಯುತ್ತಿದೆ,” ಎಂದು ಹೇಳಿದರು.

“ಜಮ್ಮು-ಕಾಶ್ಮೀರ ಭಾರತಕ್ಕೆ ಕಿರೀಟವಿದ್ದಂತೆ ಮತ್ತು ಈ ಕಿರೀಟವನ್ನು ಇನ್ನಷ್ಟು ಸುಂದರವಾಗಿ ಮತ್ತು ಸಮೃದ್ಧಗೊಳಿಸಬೇಕೆಂದು ನಾನು ಬಯಸುತ್ತೇನೆ,” ಎಂದು ಅವರು ಗಂದರ್ಬಾಲ್‌ನಲ್ಲಿ ಸಭೆಯನ್ನುದ್ದೇಶಿಸಿ ಹೇಳಿದರು.

ಆದರೆ, ಜಮ್ಮು ಮತ್ತು ಕಾಶ್ಮೀರದ ಆರ್ಥಿಕತೆಯ ವಿವಿಧ ಅಂಕಿಅಂಶಗಳು ಮತ್ತು ಇತರ ಅಭಿವೃದ್ಧಿ ಸೂಚ್ಯಂಕಗಳು ಹಿಂದೆ ಇದು ರಾಜ್ಯವಾಗಿದ್ದಾಗ ಆರ್ಥಿಕ ಮತ್ತು ಸಾಮಾಜಿಕ ಸೂಚ್ಯಂಕಗಳಲ್ಲಿ ಹೆಚ್ಚಿನ ಭಾರತೀಯ ರಾಜ್ಯಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿರುವುದನ್ನು ತೋರಿಸುತ್ತದೆ. ಬಿಜೆಪಿ ಸಂವಿಧಾನದಲ್ಲಿ ಬದಲಾವಣೆಗಳನ್ನು ತಂದ ಮೇಲೆ ಈ ಅಭಿವೃದ್ದಿಗೆ ಪೆಟ್ಟುಬಿದ್ದಿರುವುದು ಕಂಡು ಬರುತ್ತದೆ.

2019 ರ ಹಿಂದಿನ ಸಾಮಾಜಿಕ ಮತ್ತು ಆರ್ಥಿಕ ಸೂಚ್ಯಂಕಗಳು

ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರವು ಭಾರತದ ಒಟ್ಟು ಆಂತರಿಕ ಉತ್ಪನ್ನಕ್ಕೆ ಕೇವಲ 0.8% ಕೊಡುಗೆ ನೀಡುತ್ತದೆ. ಅದೇನೇ ಇದ್ದರೂ, ಈ ಹಿಂದೆ ರಾಜ್ಯ ಸ್ಥಾನಮಾಣವನ್ನು ಹೊಂದಿದ್ದಾಗ ಮಾನವ ಮತ್ತು ಸಾಮಾಜಿಕ ಅಭಿವೃದ್ಧಿ ಸೂಚ್ಯಂಕಗಳು ಯಾವಾಗಲೂ ದೇಶದ ಉಳಿದ ಭಾಗಗಳಿಗಿಂತ ಉತ್ತಮವಾಗಿದ್ದವು.

ಬಡತನದ ಪ್ರಮಾಣವನ್ನೇ ನೋಡಿದರೂ, ನ್ಯಾಶನಲ್ ಸ್ಯಾಂಪಲ್ ಸರ್ವೆ ಆರ್ಗನೈಸೇಶನ್ ಪ್ರಕಾರ, 2011-’12 ರ ವರ್ಷದಲ್ಲಿ ಬಡವರೆಂದು ಪರಿಗಣಿಸಲಾದ ಭಾರತದ ಜನಸಂಖ್ಯೆಯ ಪಾಲು 22% ಆಗಿತ್ತು. ಜಮ್ಮು ಮತ್ತು ಕಾಶ್ಮೀರದ ಬಡತನದ ಮಟ್ಟವು ಅದಕ್ಕಿಂತಲೂ ಅರ್ಧ ಇತ್ತು, 10.3% ಇತ್ತು.

ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಜಮ್ಮು ಮತ್ತು ಕಾಶ್ಮೀರವು ಎದ್ದು ಕಾಣುತ್ತದೆ. ಉದಾಹರಣೆಗೆ, 2009 ಮತ್ತು 2016 ರ ನಡುವೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಸರಾಸರಿ ಜೀವಿತಾವಧಿ (ಗಂಡು ಮತ್ತು ಹೆಣ್ಣು ಇಬ್ಬರಿಗೂ) ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ . ಹಿಂದೆ ರಾಜ್ಯವಾಗಿದ್ದಾಗ ಸಾಕ್ಷರತಾ ಪ್ರಮಾಣವು 2011 ರ ಜನಗಣತಿಯ ಪ್ರಕಾರ 67 % ಆಗಿತ್ತು, ಇದು ರಾಷ್ಟ್ರೀಯ ಸಾಕ್ಷರತೆಯ ಪ್ರಮಾಣವಾದ 73 % ಕ್ಕಿಂತ ಹತ್ತಿರ ಹತ್ತಿರವಿತ್ತು.

ಸ್ತ್ರೀ ಲಿಂಗದ ಅನುಪಾತದಲ್ಲಿ, ಜಮ್ಮು ಮತ್ತು ಕಾಶ್ಮೀರವು ದೇಶದ ಇತರ ಭಾಗಗಳಿಗಿಂತ ಉತ್ತಮವಾಗಿದೆ. ಭಾರತದಲ್ಲಿ 1,000 ಪುರುಷರಿಗೆ 929 ಮಹಿಳೆಯರು ಜನಿಸಿದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ 976 ಹೆಣ್ಣು ಜನನಗಳು ದಾಖಲಾಗಿವೆ. ಈ ಡೇಟಾವು 2019-21 ರಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ರ ಸಂಶೋಧನೆಗಳನ್ನು ಆಧರಿಸಿದೆ.

ಐದು ವರ್ಷದೊಳಗಿನ ಮಕ್ಕಳ ಮರಣದ ವಿಷಯಕ್ಕೆ ಬಂದರೆ, ಇಲ್ಲಿ ಉತ್ತಮವಾಗಿತ್ತು. ಭಾರತದಲ್ಲಿ 1,000 ಶಿಶುಗಳು ಹುಟ್ಟಿದರೆ, ಅವುಗಳಲ್ಲಿ 42 ಮಕ್ಕಳು ತಮ್ಮ ಐದನೇ ವರ್ಷದ ಹುಟ್ಟುಹಬ್ಬದವರೆಗೆ ಬದುಕುವುದಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಹುಟ್ಟುವ 1,000 ಶಿಶುಗಳಲ್ಲಿ ಕೇವಲ 18.5 ಮಕ್ಕಳು ಮಾತ್ರ ಐದನೇ ವರ್ಷದ ಒಳಗೆ ಸಾಯುತ್ತವೆ.

ನಿರುದ್ಯೋಗ ಹೆಚ್ಚುತ್ತಿದೆ!

ಸೋಮವಾರ ಮೋದಿ ಮಾಡಿದ ಭಾಷಣದಲ್ಲಿ ಅವರು, ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಸ್ಥಾಪಿಸುವ ಸರ್ಕಾರದ ಪ್ರಯತ್ನಗಳು ಜಮ್ಮು ಮತ್ತು ಕಾಶ್ಮೀರದ ಯುವಕರಿಗೆ “ಹೊಸ ಅವಕಾಶಗಳನ್ನು” ಒದಗಿಸಿವೆ ಎಂದು ಹೇಳಿದರು.

ಅಧಿಕೃತ ಮಾಹಿತಿಯು ಈ ಪ್ರದೇಶದಲ್ಲಿ ಯುವಜನರು ಆತಂಕಕಾರಿ ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವುದನ್ನು ಬಹಿರಂಗಪಡಿಸುತ್ತವೆ. ಜಮ್ಮು ಮತ್ತು ಕಾಶ್ಮೀರವನ್ನು ರಾಜ್ಯದಿಂದ ಕೇಂದ್ರಾಡಳಿತ ಪ್ರದೇಶ ಬದಲಾಯಿಸಿದ ನಂತರ, ನಿರುದ್ಯೋಗ ಸಮಸ್ಯೆ 2019 ರಿಂದ ಹದಗೆಟ್ಟಿದೆ.

ನವೆಂಬರ್‌ನಲ್ಲಿ, ವಾರ್ಷಿಕ ಪಿರಿಯಾಡಿಕ್‌ ಲೇಬರ್‌ ಫೋರ್ಸ್ ಸರ್ವೇಯ ಮಾಹಿತಿಯು ಜಮ್ಮು ಮತ್ತು ಕಾಶ್ಮೀರದ ಒಟ್ಟಾರೆ ನಿರುದ್ಯೋಗ ಪ್ರಮಾಣ 2023 ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಇದ್ದ 10.2% ಕ್ಕಿಂತ 2024 ರ ಅದೇ ತ್ರೈಮಾಸಿಕದಲ್ಲಿ 11.8 % ಕ್ಕೆ ಏರಿದ್ದನ್ನು ಬಹಿರಂಗಪಡಿಸಿದೆ.

15-29 ವಯಸ್ಕರಲ್ಲಿ ನಿರುದ್ಯೋಗ ಪ್ರಮಾಣವು ರಾಷ್ಟ್ರೀಯ ಸರಾಸರಿ 15.9% ಗೆ ಹೋಲಿಸಿದರೆ 32% ರಷ್ಟಿತ್ತು. ವಾರ್ಷಿಕ ಪಿರಿಯಾಡಿಕ್‌ ಲೇಬರ್‌ ಫೋರ್ಸ್ ಸರ್ವೇಯ ಪ್ರಕಾರ , 2017 ಮತ್ತು 2019 ರ ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟಾರೆ ನಿರುದ್ಯೋಗ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇತ್ತು.

ಜುಲೈ 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಏಕಪಕ್ಷೀಯವಾಗಿ ರದ್ದುಗೊಳಿಸುವ ಒಂದು ತಿಂಗಳ ಮೊದಲು, ಜೂನ್ 2024 ರವರೆಗೆ ಇಲ್ಲಿನ ನಿರುದ್ಯೋಗ ಪ್ರಮಾಣವು ರಾಷ್ಟ್ರೀಯ ನಿರುದ್ಯೋಗ ದರಕ್ಕಿಂತ ಸ್ಥಿರವಾಗಿ ಹೆಚ್ಚಾಗಿದೆ.

15-29 ವಯಸ್ಸಿನ ನಿರುದ್ಯೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ. 2019 ರ ಮೊದಲು, ಈ ವಯಸ್ಕರಲ್ಲಿನ ವಾರ್ಷಿಕ ನಿರುದ್ಯೋಗ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿತ್ತು. ಆದರೆ ಇದು 2019 ರ ದ್ವಿತೀಯಾರ್ಧದಿಂದ ರಾಷ್ಟ್ರೀಯ ನಿರುದ್ಯೋಗ ಪ್ರಮಾಣಕ್ಕಿಂತ ಸ್ಥಿರವಾಗಿ ಉಳಿದಿದೆ.

ಉದ್ಯೋಗದ ಮೇಲೆ ಕೋವಿಡ್ -19 ಸಾಂಕ್ರಾಮಿಕ ಬೀರಿದ ಪ್ರಭಾವವು ಜಾಗತಿಕ ವಿದ್ಯಮಾನವಾಗಿದ್ದರೂ, ವಾರ್ಷಿಕ ಪಿರಿಯಾಡಿಕ್‌ ಲೇಬರ್‌ ಫೋರ್ಸ್ ಸರ್ವೇಯ ಪ್ರಕಾರ ಸಾಂಕ್ರಾಮಿಕ ವರ್ಷಗಳ ನಂತರ ಭಾರತದ ಒಟ್ಟಾರೆ ನಿರುದ್ಯೋಗ ದರವು 2019-20 ರಲ್ಲಿ ಇದ್ದ 4.8 % ರಿಂದ 2023-24 ರಲ್ಲಿ 3.2% ಕ್ಕೆ ಇಳಿಕೆ ಕಂಡಿದೆ. ಹೋಲಿಸಿದರೆ, ಜಮ್ಮು-ಕಾಶ್ಮೀರದ ನಿರುದ್ಯೋಗ ದರವು 2019-20 ರಲ್ಲಿ ಇದ್ದ 6.7% ರಿಂದ 2023-’24 ಕ್ಕೆ 6.1% ಗೆ ಬದಲಾಗಿಲ್ಲ.

ಜಮ್ಮು ಮತ್ತು ಕಾಶ್ಮೀರದಲ್ಲಿ 15-29 ವಯೋಮಾನದವರ ನಿರುದ್ಯೋಗ ಪ್ರಮಾಣ ಹೆಚ್ಚು ಆತಂಕಕಾರಿಯಾಗಿದೆ. ಪಿರಿಯಾಡಿಕ್‌ ಲೇಬರ್‌ ಫೋರ್ಸ್ ಸರ್ವೇಯ ಪ್ರಕಾರ, ಇದು ರಾಷ್ಟ್ರೀಯ ಸರಾಸರಿ 10.2% ಗೆ ಹೋಲಿಸಿದರೆ 2023-24ರಲ್ಲಿ 17.4% ಕ್ಕೆ ಏರಿತು.

ಜಮ್ಮು ಮತ್ತು ಕಾಶ್ಮೀರದಲ್ಲಿ ನಿರುದ್ಯೋಗದ ಆತಂಕ ಎಲ್ಲೆಡೆ ಇವೆ. ಡಿಸೆಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನಲ್ಲಿ 4,002 ಕಾನ್‌ಸ್ಟೆಬಲ್‌ಗಳ ಹುದ್ದೆಗಳಿಗೆ ಲಿಖಿತ ಪರೀಕ್ಷೆಯಲ್ಲಿ 5.5 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು.

ಹೆಚ್ಚುತ್ತಿರುವ ಸಾಲ

ಉದ್ಯೋಗ ಮಾತ್ರವಲ್ಲ. ಸರಕಾರ ಅನುದಾನಕ್ಕೂ ಪರದಾಡುತ್ತಿದೆ.

ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಸಾಲದ ಮಟ್ಟವನ್ನೇ ತೆಗೆದುಕೊಳ್ಳಿ . ಕೇಂದ್ರಾಡಳಿತ ಪ್ರದೇಶಕ್ಕಾಗಿ 2024-’25 ರ ಬಜೆಟ್‌ನಿಂದ ಬಹಿರಂಗಪಡಿಸಿದಂತೆ, ಜಮ್ಮು ಮತ್ತು ಕಾಶ್ಮೀರದ ಒಟ್ಟು ಸಾಲ 2022-’23ರಲ್ಲಿ 1.12 ಲಕ್ಷ ಕೋಟಿಗಳಷ್ಟಿದೆ. ಇದು ಇದುವರೆಗಿನ ಅತ್ಯಧಿಕ ಸಾಲವಾಗಿದೆ. 2019-20ರಲ್ಲಿ ಇದೇ ಸಾಲ 83,573 ಕೋಟಿ ರುಪಾಯಿ ಇತ್ತು.

ಆರ್ಥಿಕ ತಜ್ಞರು ಈ ದಿಗ್ಭ್ರಮೆಗೊಳಿಸುವ ಸಾಲವನ್ನು ಎತ್ತಿತೋರಿಸಿದ್ದಾರೆ. ಬಜೆಟ್ ಪ್ರಕಾರ, 2024-’25 ರ ಕೇಂದ್ರಾಡಳಿತ ಪ್ರದೇಶದ ಸಾಲ-ಜಿಡಿಪಿ ಅನುಪಾತವು 51% ರಷ್ಟಿದೆ. ಸಾಲ-ಜಿಡಿಪಿ ಅನುಪಾತವು ದೇಶದ ವಾರ್ಷಿಕ ಆರ್ಥಿಕ ಉತ್ಪಾದನೆಯೊಂದಿಗೆ ಹೋಲಿಸುವ ಮೂಲಕ ತನ್ನ ಸಾಲವನ್ನು ಮರುಪಾವತಿ ಮಾಡುವ ದೇಶದ ಸಾಮರ್ಥ್ಯವನ್ನು ತೋರಿಸುವ ಒಂದು ಮೆಟ್ರಿಕ್ ಆಗಿದೆ. ಸಾಲ-ಜಿಡಿಪಿ ಅನುಪಾತ ಹೆಚ್ಚುವುದೆಂದರೆ ಆರ್ಥಿಕತೆಗೆ ಹೆಚ್ಚು ಕಷ್ಟದಲ್ಲಿದೆ ಎಂದರ್ಥ.

ಜಮ್ಮು ಮತ್ತು ಕಾಶ್ಮೀರ ಕೇಂದ್ರದ ಮೇಲೆ ಅತಿಯಾಗಿ ಅವಲಂಬಿಸಿರುವುದು, ಅಭಿವೃದ್ಧಿ ಹೊಂದುತ್ತಿರುವ ಖಾಸಗಿ ಮತ್ತು ಕೈಗಾರಿಕಾ ವಲಯದ ಕೊರತೆ ಮತ್ತು ದಶಕಗಳ ರಾಜಕೀಯ ಅಸ್ಥಿರತೆಯ ಕಾರಣದಿಂದಾಗಿ, ಸಾಲಗಳು ಜಮ್ಮು ಮತ್ತು ಕಾಶ್ಮೀರವನ್ನು ರಾಜ್ಯವಾಗಿದ್ದಾಗಲೂ ಯಾವಾಗಲೂ ಪೀಡಿಸುತ್ತಿದ್ದವು. ಆದರೆ ಇತ್ತೀಚಿನ ಸಾಲದ ಪ್ರಮಾಣವು ದಿಗ್ಭ್ರಮೆಗೊಳಿಸುವಂತಿದೆ. ಉದಾಹರಣೆಗೆ, 2011-’12ರಲ್ಲಿ ಇದು 36,256 ಕೋಟಿ ರುಪಾಯಿ ಸಾಲ ಹೊಂದಿತ್ತು.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ರಾಜ್ಯತ್ವವನ್ನು ರದ್ದುಗೊಳಿಸಿರುವುದು ಆ ಪ್ರದೇಶದ ಆರ್ಥಿಕ ಅಭಿವೃದ್ಧಿಯ ಹೊಸ ಉದಯಕ್ಕೆ ನಾಂದಿ ಹಾಡಿದೆ ಎಂಬ ಹೇಳುತ್ತಿರುವ ಕೇಂದ್ರ ಸರ್ಕಾರದ ವಾದಕ್ಕೆ ಈ ಸಂಖ್ಯೆಗಳು ವಿರುದ್ದವಾದ ವಸ್ತುಸ್ಥಿತಿಯನ್ನು ತೋರಿಸುತ್ತಿವೆ.


ಕಡಿಮೆಯಾಗುತ್ತಿರುವ ಉತ್ಪಾದನೆ

370 ನೇ ವಿಧಿಯನ್ನು ತೆಗೆದುಹಾಕಿ, ಜಮ್ಮು ಮತ್ತು ಕಾಶ್ಮೀರದ ರಾಜ್ಯದ ವಿಶೇಷ ಸ್ಥಾನಮಾನ ಮತ್ತು ರಾಜ್ಯತ್ವವನ್ನು ರದ್ದುಗೊಳಿಸಿದ ಐದನೇ ವರ್ಷದಲ್ಲಿ ಅಲ್ಲಿನ ಆರ್ಥಿಕತೆಯ ಬಗ್ಗೆ ಆತಂಕಕಾರಿ ವರದಿಯೊಂದಿಗೆ ಬಂದಿತು.

‘ಫೋರಮ್ ಫಾರ್ ಹ್ಯೂಮನ್ ರೈಟ್ಸ್ ಇನ್ ಜಮ್ಮು ಆಂಡ್ ಕಾಶ್ಮೀರ’ ಪ್ರಕಾರ, ಹಿಂದಿನ ರಾಜ್ಯದ ನಿವ್ವಳ ರಾಜ್ಯ ದೇಶೀಯ ಉತ್ಪನ್ನವು 2015 ಮತ್ತು 2019 ರ ಹಣಕಾಸು ವರ್ಷಗಳ ನಡುವೆ 13.28% ರಷ್ಟು ಹೆಚ್ಚಳವಾಗಿದೆ. 370 ನೇ ವಿಧಿಯನ್ನು ತೆಗೆದುಹಾಕಿದ ನಂತರ ಈ ಬೆಳವಣಿಗೆಯ ದರವು ಶೇ. 8.73% ಆಗಿದೆ!

ಒಂದು ನಿರ್ದಿಷ್ಟ ಅವಧಿಯಲ್ಲಿ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳ ಗಡಿಯೊಳಗೆ ಉತ್ಪತ್ತಿಯಾಗುವ ಸರಕು ಮತ್ತು ಸೇವೆಗಳ ವಿತ್ತೀಯ ಮೌಲ್ಯವನ್ನು ನಿವ್ವಳ ರಾಜ್ಯ ದೇಶೀಯ ಉತ್ಪನ್ನ ಎಂದು ಕರೆಯಲಾಗುತ್ತದೆ.

ಜಮ್ಮು ಮತ್ತು ಕಾಶ್ಮೀರದೊಳಗಿನ ವ್ಯಕ್ತಿಯ ಆರ್ಥಿಕ ಉತ್ಪಾದನೆಯಲ್ಲೂ ಈ ಕುಸಿತ ಕಂಡಿದೆ. “ಪ್ರತಿ ವ್ಯಕ್ತಿಗೆ NSDP ಬೆಳವಣಿಗೆ ದರವು ಏಪ್ರಿಲ್ 2015 ಮತ್ತು ಮಾರ್ಚ್ 2019 ರ ನಡುವೆ 12.31% ಆಗಿತ್ತು. ಆದರೆ ಇದು ಏಪ್ರಿಲ್ 2019-ಮಾರ್ಚ್ 2024 ರ ನಡುವೆ 8.41% ಆಗಿದೆ” ಎಂದು ಫೋರಮ್ ಫಾರ್ ಹ್ಯೂಮನ್ ರೈಟ್ಸ್ ಇನ್ ಜಮ್ಮು ಆಂಡ್ ಕಾಶ್ಮೀರ ಹೇಳಿದೆ.

ಈ ಆರ್ಥಿಕ ಕುಸಿತದ ನಡುವೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಹಣದುಬ್ಬರವು ರಾಷ್ಟ್ರೀಯ ಸರಾಸರಿಗಿಂತ ಸ್ಥಿರವಾಗಿ ಉಳಿದಿದೆ. ಇಲ್ಲಿನ ಸರ್ಕಾರದ 2023-’24 ರ ಆರ್ಥಿಕ ಸಮೀಕ್ಷೆಯ ಪ್ರಕಾರ, 2018-’23 ರ ನಡುವೆ ಹಣದುಬ್ಬರ ದರವು ಕೇವಲ ಎರಡು ವರ್ಷಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿದೆ.

ಲೇಖನ: ಸಫ್ವತ್ ಜರ್ಗರ್

(ಸ್ಕ್ರೋಲ್‌.ಇನ್‌ನಲ್ಲಿ ಪ್ರಕಟವಾಗಿರುವ ಲೇಖನದ ಭಾವಾನುವಾದ)

You cannot copy content of this page

Exit mobile version