Thursday, May 9, 2024

ಸತ್ಯ | ನ್ಯಾಯ |ಧರ್ಮ

ಸ್ವಾತಂತ್ರ್ಯದ 75 ವರ್ಷಗಳಲ್ಲಿ ಸಂವಿಧಾನದ ಆಶಯ ಈಡೇರಿದೆಯೇ? ಕೆ.ಕೆ.ಶೈಲಜಾ ಪ್ರಶ್ನೆ

ತುಮಕೂರು.ಮಾ.07: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಸಂವಿಧಾನದ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ ಜಾತ್ಯತೀತತೆ, ಸಮಾಜವಾದ ಇವುಗಳನ್ನು ಸಾಧಿಸಲು ಸಾಧ್ಯವಾಗಿದೆಯೇ ಎಂಬ ಪ್ರಶ್ನೆಯನ್ನು ಇಂದು ನಾವೆಲ್ಲರೂ ಕೇಳಿಕೊಳ್ಳಬೇಕಾಗಿದೆ ಎಂದು ಕೇರಳ ವಿಧಾನಸಭೆಯ ಶಾಸಕಿ ಹಾಗೂ ಮಾಜಿ ಆರೋಗ್ಯ ಸಚಿವೆ ಶೈಲಜಾ ಟೀಚರ್ ತಿಳಿಸಿದ್ದಾರೆ.

ನಗರದ ಗಾಜಿನಮನೆಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಸಂವಿಧಾನದ ನೆರಳಲ್ಲಿ ಸ್ವಾಭಿಮಾನಿಯಾಗಿ ಮೇಲೇಳಲು ಹೊರಟ ಮಹಿಳೆಯನ್ನು ಮನುಸ್ಮೃತಿಯ ಅಡಿಯಲ್ಲಿ ತಂದು, ಆಕೆಯನ್ನು ನಾಲ್ಕುಗೋಡೆಗಳ ಮಧ್ಯೆ ಬಂಧಿಸುವ ಪ್ರಕ್ರಿಯೆ ಆರಂಭವಾಗಿದೆ. ಲಿಂಗ ತಾರತಮ್ಯದ ಹೆಸರಿನಲ್ಲಿ ಆಕೆಗೆ ಗಂಡಿನ ಸರಿಸಮ ಗುರುತಿಸಿಕೊಳ್ಳುವ, ತನ್ನ ಪ್ರತಿಭೆಯನ್ನು ತೋರ್ಪಡಿಸುವ ಅವಕಾಶದಿಂದ ವಂಚಿಸಲಾಗುತ್ತಿದೆ. ಮೊದಲು ಕುಟುಂಬದವರು ಹೆಣ್ಣು ಮಕ್ಕಳ ರಕ್ಷಣೆಯ ಬಗ್ಗೆ ನಿರ್ಧರಿಸುತ್ತಿದ್ದರು. ಈಗ ಹೆಣ್ಣು ಮಕ್ಕಳ ರಕ್ಷಣೆಯ ಹೆಸರಿನಲ್ಲಿ  ನೈತಿಕ ಪೊಲೀಸ್ ಗಿರಿ ನಡೆಯುತ್ತಿದ್ದು ಹೆಣ್ಣು ಮಕ್ಕಳನ್ನು ನಿಯಂತ್ರಿಸುವ ಕೆಲಸವನ್ನು ಧಾರ್ಮಿಕ ಮೂಲಭೂತವಾದಿಗಳು ಮಾಡುತ್ತಿದ್ದು, ಕರಾವಳಿ ಪ್ರದೇಶದಲ್ಲಿ ಇದು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಅಪಾಯದ ಸಂಕೇತವಾಗಿದೆ ಎಂದರು.

ಮಹಿಳೆ ಹೋರಾಟದ ಮೂಲಕವೇ ಮತದಾನದ ಹಕ್ಕು, ಆಸ್ತಿಯ ಹಕ್ಕು, ಶಿಕ್ಷಣದ ಹಕ್ಕನ್ನು ಪಡೆದು ಕೊಂಡಿದ್ದಾಳೆ. ಇಂದಿಗೂ ತನ್ನ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಲೇ ಇದ್ದಾಳೆ. ನ್ಯಾಯವೆಂಬುದು ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ. ಬಿಲ್ಕಿಸ್ ಬಾನು ಪ್ರಕರಣದಲ್ಲಿ ಸನ್ನಡತೆ ಆಧಾರದಲ್ಲಿ, ಆಕೆಯ ಮೇಲೆ ಅತ್ಯಾಚಾರ ನಡೆಸಿದ 11 ಜನರನ್ನು ಬಿಡುಗಡೆ ಮಾಡಲಾಗಿದೆ. ಅನೇಕ ಧರ್ಮ, ಜಾತಿಗಳನ್ನು ಹೊಂದಿರುವ ಭಾರತ ವಿವಿಧತೆಯಲ್ಲಿ ಏಕತೆಯನ್ನು ಮೈಗೂಡಿಸಿಕೊಂಡಿರುವ ಜನರನ್ನು ಒಳಗೊಂಡ ಸಮಾಜ ನಮ್ಮದು. ಆದರೆ ಇಂದು ಅದು ನಿಧಾನವಾಗಿ ಕಣ್ಮರೆಯಾಗುತ್ತಿದೆ. ಇದನ್ನು ಹಿಂದು ಭಾರತ, ಕ್ರಿಶ್ಚಿಯನ್ನರ, ಮುಸ್ಲಿಂರ ಭಾರತ ಎಂಬಂತೆ ವಿಂಗಡಿಸಲಾಗುತ್ತಿದೆ. ಬಂಡವಾಳಶಾಹಿಗಳು ದೇಶವನ್ನು ಆಳುತ್ತಿದ್ದಾರೆ. ಇದರ ವಿರುದ್ಧ ಮಹಿಳೆಯರು ನಿರಂತರ ಹೋರಾಟ ಮುಂದುವರೆಸಬೇಕಾಗಿದೆ ಎಂದು ಶೈಲಜಾ ಟೀಚರ್ ತಿಳಿಸಿದರು.

ಶಿಕ್ಷಣದಲ್ಲಿ, ಆರೋಗ್ಯದಲ್ಲಿ ಇಂದಿಗೂ ಭಾರತ ಹಿಂದೆ ಉಳಿದಿದೆ. ವಿಶ್ವ ಸಂಸ್ಥೆಯು ನೀಡಿದ್ದ ಶತಮಾನದ ಗುರಿಗಳಾದ ತಾಯಿ, ಮಗುವಿನ ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ದೇಶದ ಬಹುತೇಕ ರಾಷ್ಟ್ರಗಳಿಗೆ ಸಾಧ್ಯವಾಗಿಲ್ಲ. ಆದರೆ ಕೇರಳದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಎಲ್ಲ ಸಿಬ್ಬಂದಿ ಒಂದು ತಂಡವಾಗಿ ಕೆಲಸ ಮಾಡಿದ್ದರ ಪರಿಣಾಮವಾಗಿ ಶಿಶು ಮರಣ ಪ್ರಮಾಣವನ್ನು 1000-5.5 ಕ್ಕೆ ತರಲಾಗಿದೆ. ತಾಯಿಯ ಮರಣ ಪ್ರಮಾಣವನ್ನು 100೦- 19ಕ್ಕೆ ತರಲಾಗಿದೆ. ವಿಕೇಂದ್ರೀಕೃತ ವ್ಯವಸ್ಥೆಯ ಮೂಲಕ ಸಾರ್ವಜನಿಕ ಆಸ್ಪತ್ರೆಗಳ ಮೇಲೆ ಜನರಿಗೆ ನಂಬಿಕೆ ಮೂಡುವಂತಹ ಕೆಲಸಗಳು ಸಾಧ್ಯವಾಗಿವೆ ಎಂದು ಮಾಜಿ ಆರೋಗ್ಯ ಸಚಿವರು ನುಡಿದರು.

ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ವಿವಿ ಕುಲಸಚಿವರಾದ ಶ್ರೀಮತಿ ನಾಯಿದ ಜಮ್ ಜಮ್ ಮಾತನಾಡಿ, ಅಧಿಕಾರಿಯಾಗಿ ಕಾನೂನು ಪ್ರಕಾರ ಕಷ್ಟದಲ್ಲಿದ್ದವರಿಗೆ ಸ್ಪಂದಿಸಿದರೂ ಮಹಿಳೆ ಎಂಬ ಕಾರಣ ನೀಡಿ ಅದನ್ನು ಕುಗ್ಗಿಸುವ ಪ್ರಯತ್ನಗಳು ನಡೆದಿವೆ. ಪುರುಷ ಪ್ರಧಾನ ಸಮಾಜದ ದಬ್ಬಾಳಿಕೆಯ ನಡುವೆಯೂ ಇಂದು ಸಾವಿರಾರು ಮಹಿಳೆಯರು ಅಸಾಧ್ಯವಾದುದನ್ನು ಸಾಧಿಸಿದ್ದರೆ ಅದಕ್ಕೆ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವೇ ಕಾರಣ. ಈ ನಾಡಿನ ಹೆಣ್ಣು ಮಕ್ಕಳ ಬೆಳವಣಿಗೆಯ ಹಿಂದೆ, ಅವರ ಗಂಡ, ತಂದೆಯ ಸಹಾಯ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅಂಬೇಡ್ಕರ್ ಅವರು ಬರೆದ ಸಂವಿಧಾನದ ನೆರಳಿದೆ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸಾಧ್ಯವಾದಷ್ಟು ಅರ್ಥಿಕ ಸ್ವಾಯತ್ತತೆಯನ್ನು ಗಳಿಸಲು ಮಹಿಳೆಯರು ಪ್ರಯತ್ನಿಸಬೇಕು. ಆಗ ಮಾತ್ರ ಶೇ. 90ರಷ್ಟು ಅವಲಂಬನೆಯಿಂದ ಹೊರಬರಲು ಸಾಧ್ಯ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಡಾ.ಸಬಿಹಾ ಭೂಮೀಗೌಡ, 2012ರಲ್ಲಿ ಆರಂಭಗೊಂಡ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯು ತದನಂತರದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವಾಗಿ ಬದಲಾಗಿದೆ. ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ 10 ಕಾರ್ಯಕ್ರಮಗಳನ್ನು ನಡೆಸಿ, ಇದು 11ನೇ ಕಾರ್ಯಕ್ರಮವಾಗಿದೆ. ಎಲ್ಲ ಮಹಿಳಾ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವ ಕೆಲಸವನ್ನು ನಾವೆಲ್ಲರೂ ಮಾಡುತ್ತಿದ್ದೇವೆ. ಸಮಾನತೆಯಡೆಗೆ ನಮ್ಮ ನಡಿಗೆ ಎಂಬ ಅಂಶವನ್ನು ಮುಂದಿಟ್ಟುಕೊಂಡು ಆ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಇದಾಗಿದೆ ಎಂದರು.

ಸಾರ್ವಜನಿಕ ಸಮಾವೇಶಕ್ಕೂ ಮುನ್ನ ನಗರದ ಬಿಜಿಎಸ್ ವೃತ್ತದಿಂದ ಅಮಾನಿಕೆರೆಯ ಗಾಜಿನಮನೆಯವರೆಗೆ ಹಕ್ಕೊತ್ತಾಯ ಜಾಥಾ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಜಾಥಾ ಕ್ಕೆ ಚಾಲನೆ ನೀಡಿದರು.

ಸಮಾವೇಶದ ಅಧ್ಯಕ್ಷತೆಯನ್ನು ಬಾ.ಹ.ರಮಾಕುಮಾರಿ ವಹಿಸಿದ್ದರು. ವೇದಿಕೆಯಲ್ಲಿ ಅಕೈ ಪದ್ಮಶಾಲಿ, ಕೆ.ದೊರೈರಾಜು, ಹಂದಿ ಜೋಗಿ ರಾಮಕ್ಕ, ಡಾ.ಹನುಮಕ್ಕ, ಚಿತ್ರಕಲಾವಿದೆ ರೇಣುಕಾ ಕೆಸರುಮಡು, ಕೃಷಿಕರಾದ ಅರುಣ, ಗಂಗರಾಜಮ್ಮ, ಡಾ.ಸುಧಾ ಕಾಮತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಲ್ಲಿಕಾ ಬಸವರಾಜು ಸಂವಿಧಾನ ಪೀಠಿಕೆ ಓದಿದರು. ರಾಣಿ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು

Related Articles

ಇತ್ತೀಚಿನ ಸುದ್ದಿಗಳು