Home ಬ್ರೇಕಿಂಗ್ ಸುದ್ದಿ ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮ ಹಾಸನದಲ್ಲಿ ಬಾಗಿಲು ಮುಚ್ಚುತ್ತಿವೆ ಹೋಟೆಲ್ಸ್

ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮ ಹಾಸನದಲ್ಲಿ ಬಾಗಿಲು ಮುಚ್ಚುತ್ತಿವೆ ಹೋಟೆಲ್ಸ್

ಹಾಸನ: ಮಧ್ಯಪ್ರಾಚ್ಯದಲ್ಲಿ ಇರಾನ್–ಇಸ್ರೇಲ್ ನಡುವೆ ತೀವ್ರಗೊಂಡಿರುವ ಯುದ್ಧದ ಪರಿಣಾಮವಾಗಿ ಜಾಗತಿಕ ಇಂಧನ ಸರಬರಾಜಿನಲ್ಲಿ ಉಂಟಾಗಿರುವ ಅಸ್ತವ್ಯಸ್ತತೆ ರಾಜ್ಯದಲ್ಲೂ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಅಡುಗೆ ಅನಿಲ ಕೊರತೆಯಿಂದ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕುತ್ತಿದೆ. ಇದರ ತೀವ್ರತೆಯನ್ನು ತೋರಿಸುವ ಘಟನೆ ಹಾಸನ ನಗರದ ಎಂಜಿ ರಸ್ತೆಯಲ್ಲಿ ಬೆಳಕಿಗೆ ಬಂದಿದೆ.

ಶ್ರೀದೇವಿ ಎಂಬ ಮಹಿಳೆ ಸುಮಾರು 8 ಲಕ್ಷ ರೂ. ಸಾಲ ಮಾಡಿ ಭಾರೀ ನಿರೀಕ್ಷೆಗಳೊಂದಿಗೆ ಮಂತ್ರಾಲಯಂ ಹೋಟೆಲ್ ಆರಂಭಿಸಿದ್ದರು. ಆದರೆ ಹೋಟೆಲ್ ಆರಂಭವಾದ ತಿಂಗಳಲ್ಲೇ ಅಡುಗೆ ಅನಿಲದ ಕೊರತೆ ದೊಡ್ಡ ಹೊಡೆತ ನೀಡಿದ್ದು, ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಸಿಗದೇ ಹೋಟೆಲ್ ಬಾಗಿಲು ಮುಚ್ಚುವ ಅನಿವಾರ್ಯತೆ ಎದುರಾಗಿದೆ.‌ ಗ್ಯಾಸ್ ಸಿಲಿಂಡರ್ ಲಭ್ಯವಾಗದ ಕಾರಣ ಸೌದೆ ಒಲೆ ಬಳಸುವುದಕ್ಕೂ ಸಾಧ್ಯವಾಗದೇ, “SORRY NO GAS SO CLOSED” ಎಂಬ ಫಲಕವನ್ನು ಹಾಕಿ ಹೋಟೆಲ್ ಬಂದ್ ಮಾಡಲಾಗಿದೆ. ಆರಂಭದಲ್ಲೇ ಇಂತಹ ಆಘಾತ ಎದುರಾದ ಹಿನ್ನೆಲೆ ಶ್ರೀದೇವಿ ತೀವ್ರ ಸಂಕಷ್ಟ ವ್ಯಕ್ತಪಡಿಸಿದ್ದಾರೆ.

ಎಲ್ಲವನ್ನೂ ಸಾಲ ಮಾಡಿ ಹೋಟೆಲ್ ಆರಂಭಿಸಿದ್ದೇನೆ. ಈಗ ಬಾಡಿಗೆ ಕಟ್ಟಲು, ಕಾರ್ಮಿಕರಿಗೆ ಸಂಬಳ ನೀಡಲು, ಬ್ಯಾಂಕ್ ಇಎಂಐ ಪಾವತಿಸಲು ಸಾಧ್ಯವಾಗದ ಸ್ಥಿತಿ ಬಂದಿದೆ ಎಂದು ಅವರು ಬಾವುಕರಾಗಿ ಅಳಲು ತೋಡಿಕೊಂಡಿದ್ದಾರೆ. ಮೊದಲ ತಿಂಗಳ ಬಾಡಿಗೆಯೇ ಬಾಕಿಯಾಗಿದ್ದು, ಉದ್ಯಮ ಸಂಪೂರ್ಣ ಸ್ಥಗಿತಗೊಂಡಿದೆ. ನಮ್ಮಂತಹ ಸಣ್ಣ ಉದ್ಯಮಿಗಳಿಗೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಸರಬರಾಜು ತಕ್ಷಣ ಸುಧಾರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದೀಗ ಗ್ಯಾಸ್ ಕೊರತೆ ಕೇವಲ ಮನೆಮಟ್ಟದಲ್ಲೇ ಅಲ್ಲ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲೂ ಗಂಭೀರ ಪರಿಣಾಮ ಬೀರುತ್ತಿರುವುದು ಸ್ಪಷ್ಟವಾಗಿದ್ದು, ಮಧ್ಯಪ್ರಾಚ್ಯ ಯುದ್ಧದ ಪ್ರತಿಫಲ ರಾಜ್ಯದ ಆರ್ಥಿಕ ಚಟುವಟಿಕೆಗಳ ಮೇಲೆ ಹೇಗೆ ಬೀಳುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ.

You cannot copy content of this page

Exit mobile version