Wednesday, February 18, 2026

ಸತ್ಯ | ನ್ಯಾಯ |ಧರ್ಮ

ಕಾಂ. ವೀರಪ್ಪ ಅವರ ಹ*ತ್ಯೆ ಪ್ರಕರಣ ; ತೀವ್ರ ಖಂಡನೆ ವ್ಯಕ್ತಪಡಿಸಿದ ಹಾಸನ ಜಿಲ್ಲಾ CITU ಘಟಕ

ಶೋಷಿತ ಸಮುದಾಯಗಳ ಪರ ಹೋರಾಟಗಾರ ಹಾಗೂ ಕಾರ್ಮಿಕ ಚಳುವಳಿಯ ಮುಖಂಡರಾಗಿದ್ದ ಕಾಂ. ವೀರಪ್ಪ ಅವರ ಹತ್ಯೆ ಪ್ರಕರಣ ಹಾಸನ ಜಿಲ್ಲೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಹಾಗೂ ಕಾರ್ಮಿಕ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ವೀರಪ್ಪ ಅವರ ಅಗಲಿಕೆಯನ್ನು ಕಾರ್ಮಿಕ ಸಂಘಟನೆಗಳು ಭಾರೀ ನಷ್ಟವೆಂದು CITU ಹಾಸನ ಜಿಲ್ಲಾ ಘಟಕ ಬಣ್ಣಿಸಿದೆ.

ಈ ಕುರಿತು Centre of Indian Trade Unions (ಸಿಐಟಿಯು) ಹಾಸನ ಜಿಲ್ಲಾ ಸಮಿತಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಪ್ರಕಟಣೆಯಲ್ಲಿ, ಸಿಐಟಿಯು ನೇತೃತ್ವದ KSRTC ನೌಕರರ ಫೆಡರೇಷನ್‌ ಸಂಘಟನೆಯನ್ನು ಹಾಸನ ಜಿಲ್ಲೆಯಲ್ಲಿ ಆರಂಭಿಸಿ ಅದರ ಮೊದಲ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ವೀರಪ್ಪ ಅವರು ಫೆಬ್ರವರಿ 17ರಂದು ದುರ್ಮರಣಕ್ಕೀಡಾದ್ದಾರೆ ಎಂದು ತಿಳಿಸಲಾಗಿದೆ.

ಹಾಸನ ವಿಭಾಗದಲ್ಲಿ KSRTC ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಸಾರಿಗೆ ನೌಕರರ ಹಕ್ಕುಗಳಿಗಾಗಿ ಹೋರಾಟ ನಡೆಸುವುದರ ಜೊತೆಗೆ ಸಿಐಟಿಯು ಚಳುವಳಿಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಇತ್ತೀಚೆಗೆ ಹಾಸನದಲ್ಲಿ ನಡೆದ ಸಿಐಟಿಯು 16ನೇ ರಾಜ್ಯ ಸಮ್ಮೇಳನದ ಯಶಸ್ಸಿಗಾಗಿ ಅವರು ಹಗಲಿರುಳು ಶ್ರಮಿಸಿದ್ದರು ಎಂದು ಸಂಘಟನೆ ಸ್ಮರಿಸಿದೆ.

ವೀರಪ್ಪ ಅವರು ಪ್ರಗತಿಪರ ನಿಲುವಿನ ನಾಯಕನಾಗಿದ್ದು, ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡವರು. ಸಾರಿಗೆ ನೌಕರರನ್ನು ಸಂಘಟಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು. ಎಲ್ಲರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ ಅವರು ಕಾರ್ಮಿಕ ವಲಯದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿದ್ದರು ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ವೀರಪ್ಪ ಅವರ ಹತ್ಯೆಯನ್ನು ಖಂಡಿಸಿರುವ ಸಿಐಟಿಯು ಜಿಲ್ಲಾ ಸಮಿತಿ, ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.

ಸಿಐಟಿಯು ಹಾಸನ ಜಿಲ್ಲಾ ಸಮಿತಿ ಪರವಾಗಿ ಜಿಲ್ಲಾಧ್ಯಕ್ಷ ಧರ್ಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ ಹಾಗೂ ಜಿಲ್ಲಾ ಖಜಾಂಚಿ ಅರವಿಂದ್ ಅವರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page