ಹೆಜಮಾಡಿ ಟೋಲ್ ವ್ಯಾಪ್ತಿಯ ಸ್ಥಳೀಯರಿಗೂ ಸಾಸ್ತಾನ-ಶಿರೂರು ಮಾದರಿ ರಿಯಾಯಿತಿ ನೀಡಿ: ಉಡುಪಿ ಜಿಲ್ಲಾಧಿಕಾರಿ ಸೂಚನೆ

ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ರ ಸಾಸ್ತಾನ ಹಾಗೂ ಶಿರೂರು ಸುಂಕ ವಸೂಲಾತಿ ಕೇಂದ್ರಗಳಲ್ಲಿ ಸ್ಥಳೀಯ ವಾಹನಗಳಿಗೆ ನೀಡಲಾಗುತ್ತಿರುವ ರಿಯಾಯಿತಿಯನ್ನು ಹೆಜಮಾಡಿ ಟೋಲ್ ಗೇಟ್ ವ್ಯಾಪ್ತಿಯ ಸ್ಥಳೀಯರಿಗೂ ವಿಸ್ತರಿಸುವ ಸಂಬಂಧ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದು ಕೋರಲಾಗುವುದು ಎಂದು ಉಡುಪಿ ಜಿಲ್ಲಾಡಳಿತ ತಿಳಿಸಿದೆ.

ರಾಷ್ಟ್ರೀಯ ಹೆದ್ದಾರಿ ಟೋಲ್ ಸುಂಕ ವಸೂಲಾತಿಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು. ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಸ್ಥಳೀಯರಿಗೆ 10 ಕಿ.ಮೀ ವ್ಯಾಪ್ತಿಯಲ್ಲಿ ವಿನಾಯಿತಿ ನೀಡಲಾಗಿದ್ದು, ಇದೇ ಮಾದರಿಯನ್ನು ಹೆಜಮಾಡಿಯಲ್ಲಿಯೂ ಅನುಸರಿಸಬೇಕೆಂದು ಸ್ಥಳೀಯರು ನಿರಂತರವಾಗಿ ಬೇಡಿಕೆ ಸಲ್ಲಿಸುತ್ತಿದ್ದಾರೆ.

ಹೆಜಮಾಡಿ ಭಾಗದಲ್ಲಿ ವಾಸವಿರುವ ಸಾರ್ವಜನಿಕರು ದೈನಂದಿನ ಕೆಲಸ ಕಾರ್ಯಗಳಿಗಾಗಿ ದಿನದಲ್ಲಿ ಹಲವು ಬಾರಿ ಸಂಚರಿಸಬೇಕಾಗಿದ್ದು, ಪ್ರತಿ ಬಾರಿಯೂ ಶುಲ್ಕ ಪಾವತಿಸುವುದು ಸಮಸ್ಯೆಯಾಗಿದೆ. ಆದ್ದರಿಂದ ಟೋಲ್ ಸುತ್ತಮುತ್ತಲಿನ ನಿಗದಿತ ವ್ಯಾಪ್ತಿಯ ನೋಂದಾಯಿತ ಸ್ಥಳೀಯ ವಾಹನಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ಅಥವಾ ಮಾಸಿಕ ಪಾಸ್ ಸೌಲಭ್ಯ ಕಲ್ಪಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಜೊತೆಗೆ, ರಾಷ್ಟ್ರೀಯ ಹೆದ್ದಾರಿ 66 ರ ಹಲವೆಡೆ ಅನುಮೋದನೆ ದೊರೆತಿರುವ ಸರ್ವೀಸ್ ರಸ್ತೆಗಳ ನಿರ್ಮಾಣ ಕಾಮಗಾರಿಯನ್ನು ತಕ್ಷಣವೇ ಆರಂಭಿಸಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ಹೆದ್ದಾರಿಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ಸರ್ವೀಸ್ ರಸ್ತೆ ನಿರ್ಮಾಣ, ರಿಫ್ಲೆಕ್ಟರ್ ಮತ್ತು ದಾರಿದೀಪಗಳ ಅಳವಡಿಕೆ, ರಸ್ತೆ ಗುಂಡಿ ದುರಸ್ತಿ, ಒಳಚರಂಡಿ ನಿರ್ವಹಣೆ ಹಾಗೂ ಜಂಕ್ಷನ್‌ಗಳಲ್ಲಿ ಸೂಕ್ತ ಸೂಚನಾ ಫಲಕಗಳನ್ನು ಅಳವಡಿಸುವಂತಹ ಸುರಕ್ಷತಾ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳುವಂತೆ ನಿರ್ದೇಶಿಸಲಾಯಿತು.

Related Articles

ಇತ್ತೀಚಿನ ಸುದ್ದಿಗಳು