ಬೆಂಗಳೂರು: ಭಾರತದ ಮುಖ್ಯವಾಹಿನಿಯ ಮಾಧ್ಯಮಗಳು ಬಾಂಗ್ರಾದೇಶದ ಬಗ್ಗೆ ವದಂತಿ ಹಬ್ಬಿಸುತ್ತಿವೆ ಎಂದು ಬಾಂಗ್ಲಾದೇಶ ಮೂಲದ ಸತ್ಯ ತಪಾಸಣೆ ವೆಬ್‌ಸೈಟ್ ರೂಮರ್ ಸ್ಕ್ಯಾನರ್ ವರದಿಯಲ್ಲಿ ಬಹಿರಂಗಪಡಿಸಿದೆ.
ಈ ತನಿಖಾ ಘಟಕವು X ನಲ್ಲಿ 50 ಖಾತೆಗಳನ್ನು ಗುರುತಿಸಿದೆ, ಅದು ಬಾಂಗ್ಲಾದೇಶದಲ್ಲಿ ಇತ್ತೀಚಿನ ಘಟನೆಗಳಿಗೆ ಸಂಬಂಧಿಸಿದ ಚಿತ್ರಗಳು, ವೀಡಿಯೊಗಳು ಮತ್ತು ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಕೋಮುದ್ವೇಷವನ್ನು ಹರಡಿಸುತ್ತಿವೆ ಎಂದು ಹೇಳಿದೆ.
ಈ ಪ್ರತಿಯೊಂದು ಖಾತೆಯಲ್ಲಿ ಕನಿಷ್ಠ ಒಂದು ಪೋಸ್ಟ್ ಕೋಮು ದ್ವೇಷದ ಮತ್ತು ಸುಳ್ಳು ಮಾಹಿತಿ ಪ್ರಕಟವಾಗಿದೆ ಎಂದು Surge of Communal Misinformation on X During Bangladesh’s Political Crisis ಎಂಬ ಈ ವರದಿ ಹೇಳಿದೆ.
ಆಗಸ್ಟ್ 5 ರಿಂದ 13 ರವರೆಗೆ, ಆ 50 ಖಾತೆಗಳಲ್ಲಿ ಮಾಡಲಾಗಿದ್ದ ಪೋಸ್ಟ್‌ಗಳನ್ನು 154 ಮಿಲಿಯನ್ ಗೂ ಅಧಿಕ ಜನ ನೋಡಿದ್ದು , 72% ರಷ್ಟು ನಕಲಿ ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಹರಡುವ ಖಾತೆಗಳು ಭಾರತದಲ್ಲಿವೆ ಎಂದು ಹೇಳಿದೆ. ಹಲವಾರು ಜವಾಬ್ದಾರಿಯುತ ವ್ಯಕ್ತಿಗಳು ಮತ್ತು ಭಾರತದ ಮುಖ್ಯವಾಹಿನಿಯ ಮಾಧ್ಯಮಗಳು ಕೂಡ ಈ ಕೆಲವು ತಪ್ಪು ಮಾಹಿತಿಯನ್ನು ಪ್ರಚಾರ ಮಾಡುತ್ತಿವೆ ಎಂದು ವರದಿ ಹೇಳಿದೆ. ಇದಲ್ಲಿ ನ್ಯೂಸ್ ಮಧ್ಯಪ್ರದೇಶ ಮತ್ತು ನ್ಯೂಸ್ 24 ಕೂಡ ಸೇರಿವೆ.
ಹಿಂದೂ ಮಹಿಳೆಯರು ಮತ್ತು ಮಕ್ಕಳ ಶಿಬಿರದಲ್ಲಿ ಬಾಂಬ್‌ಗಳನ್ನು ಸ್ಫೋಟಿಸುವ ಮೂಲಕ ಜಿಹಾದಿಗಳು ನೂರಾರು ಮಹಿಳೆಯರನ್ನು ಕೊಂದಿದ್ದಾರೆ ಎಂದು ಹೇಳುವ ವೀಡಿಯೊವನ್ನು ದೀಪಕ್ ಶರ್ಮಾ ಎಂಬ X ಖಾತೆಯಿಂದ ಆಗಸ್ಟ್ 9 ರಂದು ಪೋಸ್ಟ್ ಮಾಡಲಾಗಿದೆ. ವೀಡಿಯೋವನ್ನು ಪರಿಶೀಲಿಸಿದಾಗ, ಜುಲೈ 7 ರಂದು ಜಗನ್ನಾಥ ದೇವರ ರಥಯಾತ್ರೆಯ ಸಂದರ್ಭದಲ್ಲಿ ವಿದ್ಯುದಾಘಾತದಿಂದ ಐದು ಜನರ ಸಾವಿನ ವಿಡಿಯೋ ಇದು ಎಂದು ತಿಳಿದುಬಂದಿದೆ.
ಕಾಣೆಯಾದ ತನ್ನ ಮಗನ ಪತ್ತೆಗೆ ಒತ್ತಾಯಿಸುತ್ತಿರುವ ಹಿಂದೂ ವ್ಯಕ್ತಿಯ ವೀಡಿಯೊವನ್ನು ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್ (ANI), NDTV ಮತ್ತು ಮಿರರ್ ನೌ ತಮ್ಮ X ನಲ್ಲಿ ಹಂಚಿಕೊಂಡಿವೆ. ರೂಮರ್ ಸ್ಕ್ಯಾನರ್ ಇದರ ಹಿಂದಿನ ಸುಳ್ಳನ್ನು ಪತ್ತೆ ಮಾಡಿದ್ದು, ಇದು ಬಾಬುಲ್ ಹೌಲಾಡರ್ ಎಂಬ ಮುಸ್ಲಿಂ ವ್ಯಕ್ತಿ 2013 ರಿಂದ ಕಾಣೆಯಾದ ತನ್ನ ಮಗನನ್ನು ಪತ್ತೆ ಹಚ್ಚಲು ಆಗ್ರಹಿಸಿ ನಡೆಸಿದ ಪ್ರತಿಭಟನೆಯ ವಿಡಿಯೋವಾಗಿದೆ.
ಸುಳ್ಳುಸುದ್ದಿ ಹರಡಲು ಹೆಸರಾಗಿರುವ OpIndia ನ ಮುಖ್ಯ ಸಂಪಾದಕಿ ನೂಪುರ್ ಜೆ ಶರ್ಮಾ ತನ್ನ X ಹ್ಯಾಂಡಲ್‌ನಿಂದ ಎಂದಿನಂತೆ ಸುಳ್ಳು ಸುದ್ದಿಗಳನ್ನು ಹರಡಿದ್ದರು. ಇದನ್ನು ಆಕೆಯ ಗಮನಕ್ಕೆ ತಂದ ರೂಮರ್ ಸ್ಕಾನರ್‌ನ ಸದಸ್ಯರೊಬ್ಬರನ್ನು ಆಕೆ ಆಗಸ್ಟ್ 11 ರಂದು X ನಲ್ಲಿ ಬ್ಲಾಕ್ ಮಾಡಿದ್ದಾರೆ.
ಭಾರತ ಮಾತ್ರವಲ್ಲ ಇತರ ದೇಶಗಳಲ್ಲೂ ಬಾಂಗ್ಲಾದೇಶದ ಬಗ್ಗೆ ಸುಳ್ಳನ್ನು ಹರಡಲಾಗಿದೆ ಎಂದು ರೂಮರ್ ಸ್ಕ್ಯಾನರ್ ಹೇಳಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ಸುಳ್ಳು ಹೇಳುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವಾಸ್ತವದಲ್ಲಿ, ಈ ದೃಶ್ಯಾವಳಿಗಳು ಮಶ್ರಫ್ ಎಂಬವರ ಮನೆಯ ಮೇಲೆ ನಡೆದ ಬೆಂಕಿ ದಾಳಿಯಾಗಿದ್ದವು. ಲಿಟನ್ ಅವರ ಮನೆಯಲ್ಲಿ ಅಂತಹ ಯಾವುದೇ ಘಟನೆ ಸಂಭವಿಸಿಲ್ಲ ಎಂದು ರೂಮರ್ ಸ್ಕ್ಯಾನರ್ ಹೇಳಿದೆ.