ಕುಲು: 20 ವರ್ಷದ ಯುವತಿಯೊಬ್ಬಳಿಗೆ ವಾಟ್ಸಪ್ ಚಾಟ್‌ನಲ್ಲಿ ನಗ್ನ ವಿಡಿಯೋಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಬಿಜೆಪಿ ಶಾಸಕ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಯ ಮಾಜಿ ಉಪಸ್ಪೀಕರ್ ಹನ್ಸ್ ರಾಜ್ ವಿರುದ್ಧ ಪೊಲೀಸರು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.
ಯುವತಿಯ ಜೊತೆ ಚಾಟಿಂಗ್ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಲ್ಲದೇ, ನಗ್ನಚಿತ್ರಕ್ಕೆ ಒತ್ತಾಯಿಸಿದ್ದ ಎಂದುಬಿಜೆಪಿ ಕಾರ್ಯಕರ್ತರೊಬ್ಬರ ಪುತ್ರಿ ಆರೋಪಿಸಿದ್ದಾಳೆ.
ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 75 (ಲೈಂಗಿಕತೆ ಒತ್ತಾಯಿಸುವುದು, ಅಶ್ಲೀಲತೆ ಪ್ರದರ್ಶನ ಅಥವಾ ಲೈಂಗಿಕ ಲೇಪನದ ಪ್ರತಿಕ್ರಿಯೆ) ಮತ್ತು 351(2) (ಅಪರಾಧ ಪಿತೂರಿ) ಅನ್ವಯ 41 ವರ್ಷ ವಯಸ್ಸಿನ ಶಾಸಕನ ಮೇಲೆ ಚಂಬಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆಗಸ್ಟ್ 9ರಂದೇ ಪ್ರಕರಣ ದಾಖಲಾಗಿದ್ದರೂ, ತಡವಾಗಿ ಬೆಳಕಿಗೆ ಬಂದಿದೆ. “ಪುತ್ರಿಯ ಜತೆ ಆನ್ಲೈನ್ ಚಾಟಿಂಗ್ ವೇಳೆ ಆಕೆಯ ನಗ್ನಚಿತ್ರಕ್ಕೆ ಒತ್ತಾಯಿಸಿದ್ದಲ್ಲದೇ ಅಶ್ಲೀಲ ಸಂದೇಶಗಳನ್ನೂ ಹನ್ಸ್ರಾಜ್ ಕಳುಹಿಸಿದ್ದಾನೆ” ಎಂದು ಬಿಜೆಪಿ ಪದಾಧಿಕಾರಿಯೂ ಆಗಿರುವ ಸಂತ್ರಸ್ತೆಯ ತಂದೆ ದೂರಿನಲ್ಲಿ ವಿವರಿಸಿದ್ದಾರೆ.
ಕೆಲ ಕೆಲಸಗಳ ಬಗ್ಗೆ ಕೇಳಿದಾಗಲೆಲ್ಲ ಶಾಸಕ ವೈಯಕ್ತಿಕವಾಗಿ ಭೇಟಿ ಮಾಡುವಂತೆ ಒತ್ತಾಯಿಸುತ್ತಿದ್ದ ಹಾಗೂ ಏನು ಬೇಕೋ ಅದೆಲ್ಲವನ್ನೂ ಮಾಡಿಕೊಡುತ್ತೇನೆ ಎಂದು ಹೇಳುತ್ತಿದ್ದ. ಶಾಸಕ ಹಾಗೂ ಶಾಸಕನ ಬೆಂಬಲಿಗರು ಈ ಚಾಟ್ಗಳನ್ನು ಡಿಲೀಟ್ ಮಾಡುವಂತೆ ಬೆದರಿಕೆ ಹಾಕಿದ್ದಾರೆ ಎಂದೂ ಯುವತಿ ದೂರಿದ್ದಾರೆ.
“ಈ ಸಂದೇಶಗಳನ್ನು ಡಿಲೀಟ್ ಮಾಡಿಸಲು ಶಾಸಕರ ಬೆಂಬಲಿಗರು ಏನು ಮಾಡಲೂ ಸಿದ್ಧ. ನನಗೆ ಅಥವಾ ನಮ್ಮ ಕುಟುಂಬಕ್ಕೆ ಏನೇ ಆದರೂ ಅದಕ್ಕೆ ಶಾಸಕರು ಮತ್ತು ಅವರ ಬೆಂಬಲಿಗರು ಹೊಣೆ” ಎಂದು ಯುವತಿ ಹೇಳಿದ್ದಾರೆ. ನನ್ನ ಹತ್ತಿರ ಎರಡು ಫೋನ್ ಗಳಿದ್ದವು. ಎಲ್ಲ ಸಾಕ್ಷ್ಯಗಳನ್ನು ನಾಶಪಡಿಸುವ ಸಲುವಾಗಿ ಆ ಪೈಕಿ ಒಂದನ್ನು ಶಾಸಕರ ಬೆಂಬಲಿಗರು ಜಜ್ಜಿ ಹಾಳು ಮಾಡಿದ್ದಾರೆ ಎಂದು ಯುವತಿ ಎಫ್‌ಐಆರ್‌ನಲ್ಲಿ ದೂರಿದ್ದಾರೆ.