Home ರಾಜಕೀಯ “ರಾಜ್ಯ ಹಾಳು ಮಾಡುತ್ತಿರುವ ಕಾಂಗ್ರೆಸ್‌ನ್ನು ಮುಗಿಸಲೆಂದೇ ಬಿಜೆಪಿ ಜತೆ ಕೈಜೋಡಿಸಿದ್ದೇನೆ”: ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

“ರಾಜ್ಯ ಹಾಳು ಮಾಡುತ್ತಿರುವ ಕಾಂಗ್ರೆಸ್‌ನ್ನು ಮುಗಿಸಲೆಂದೇ ಬಿಜೆಪಿ ಜತೆ ಕೈಜೋಡಿಸಿದ್ದೇನೆ”: ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

0

ಬೆಂಗಳೂರು: ರಾಜ್ಯವನ್ನು ಹಾಳು ಮಾಡುತ್ತಿರುವ ಕಾಂಗ್ರೆಸ್‌ ನಾಯಕರ ವಿರುದ್ಧವೇ ಬಿಜೆಪಿ ಜತೆ ಕೈಜೋಡಿಸಿದ್ದೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

ಸೋಮವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿದೆ” ಎಂಬ ಬಿಕೆ ಹರಿಪ್ರಸಾದ್ ಅವರ ಹೇಳಿಕೆಗೆ ತಿರುಗೇಟು ನೀಡಿದರು. “ನಿಜವಾಗಿ ನನ್ನನ್ನು ದುರುಪಯೋಗ ಮಾಡಿಕೊಂಡಿದ್ದು ಕಾಂಗ್ರೆಸ್‌ ಪಕ್ಷವೇ” ಎಂದು ಆರೋಪಿಸಿದರು.

ಜೆಡಿಎಸ್‌ ಪಕ್ಷವನ್ನು ದುರ್ಬಲಗೊಳಿಸಲು ಕಾಂಗ್ರೆಸ್‌ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಕುಮಾರಸ್ವಾಮಿ, “ಒಮ್ಮೆ ವಿಧಾನಸಭೆಯಲ್ಲಿ ಸುಮಾರು 40 ಸ್ಥಾನಗಳಿದ್ದ ನಮ್ಮ ಪಕ್ಷವನ್ನು 17-18 ಸ್ಥಾನಗಳಿಗೆ ಇಳಿಸಿದವರು ಕಾಂಗ್ರೆಸ್‌. ಈಗಲೂ ನಮ್ಮ ಶಾಸಕರನ್ನು ಸಂಪರ್ಕಿಸಿ ಪಕ್ಷವನ್ನು ಮುಗಿಸಲು ಯತ್ನಿಸುತ್ತಿದ್ದಾರೆ. ಆದರೆ ಜೆಡಿಎಸ್‌ನ ಭವಿಷ್ಯವನ್ನು ಜನರೇ ನಿರ್ಧರಿಸುತ್ತಾರೆ” ಎಂದು ಹೇಳಿದರು.

“ರಾಜ್ಯದ ಹಿತಾಸಕ್ತಿಗಾಗಿ ಮತ್ತು ರಾಜ್ಯವನ್ನು ಹಾಳು ಮಾಡುತ್ತಿರುವ ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಲೆಂದೇ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದೇನೆ. ಇದು ಯಾರ ಮೇಲಿನ ದ್ವೇಷದಿಂದಲ್ಲ, ರಾಜ್ಯದ ಅಭಿವೃದ್ಧಿಗಾಗಿ ತೆಗೆದುಕೊಂಡ ನಿರ್ಧಾರ” ಎಂದು ಅವರು ಸ್ಪಷ್ಟಪಡಿಸಿದರು.

2018ರ ರಾಜಕೀಯ ಬೆಳವಣಿಗೆಗಳನ್ನು ನೆನಪಿಸಿಕೊಂಡ ಕುಮಾರಸ್ವಾಮಿ, ಕಾಂಗ್ರೆಸ್‌ಗೆ ಬೆಂಬಲ ನೀಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಭೇಟಿ ಮಾಡಿ ಸರ್ಕಾರ ರಚಿಸುವಂತೆ ಸಲಹೆ ನೀಡಿದ್ದರು ಎಂದು ಹೇಳಿದರು. “ರಾಜೀನಾಮೆ ನೀಡಿ, ನಾಳೆಯೇ ಪ್ರಮಾಣವಚನ ಸ್ವೀಕರಿಸಿ. ಕರ್ನಾಟಕದ ಜನರಿಗೆ ಉತ್ತಮ ಕೆಲಸ ಮಾಡುವ ಅವಕಾಶ ಕೊಡುತ್ತೇನೆ ಎಂದು ಮೋದಿ ಹೇಳಿದ್ದರು. ಆದರೆ ನಾನು ಆ ಮಾರ್ಗವನ್ನು ಆಯ್ಕೆ ಮಾಡಲಿಲ್ಲ” ಎಂದು ತಿಳಿಸಿದರು.

2018ರ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ನ್ನು ತಿರಸ್ಕರಿಸಿದ್ದರೂ, ಜಾತ್ಯತೀತತೆಯನ್ನು ಉಳಿಸಬೇಕೆಂಬ ಕಾರಣಕ್ಕೆ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದೆವು ಎಂದು ಕುಮಾರಸ್ವಾಮಿ ಹೇಳಿದರು. “ಅಂದು ರೈತರ ಸಾಲಮನ್ನಾ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದೆ. ಆದರೆ ಕಾಂಗ್ರೆಸ್‌ನಿಂದ ನಿರೀಕ್ಷಿತ ಸಹಕಾರ ಸಿಗಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ತಮ್ಮ ಸರ್ಕಾರದ ಅವಧಿಯಲ್ಲೇ ಅನುದಾನ ಬಿಡುಗಡೆಯಾಗಿತ್ತು ಎಂದು ಹೇಳಿದ ಅವರು, “ಇಂದು ಕಾಂಗ್ರೆಸ್‌ ಉದ್ಘಾಟಿಸುತ್ತಿರುವ ಅನೇಕ ಕಾಮಗಾರಿಗಳಿಗೆ ಅಡಿಪಾಯ ಹಾಕಿದ್ದು ಮತ್ತು ಹಣ ಒದಗಿಸಿದ್ದು ನಮ್ಮ ಸರ್ಕಾರವೇ. ಕಳೆದ ಮೂರು ವರ್ಷಗಳಲ್ಲಿ ಹೊಸ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ” ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಟೀಕಿಸಿದರು.

You cannot copy content of this page

Exit mobile version