ಮಾತೆತ್ತಿದ್ದರೆ ನಾನು ಏನು ಹರಿದೆ ಅಂತಾರೇ? ಇವರೆಲ್ಲಾ ಇಷ್ಟು ವರ್ಷ ಹರಿದಿದ್ದೇನು?: ವಿರೋದಿಗಳಿಗೆ ಕುಮಾರಸ್ವಾಮಿ ಪ್ರಶ್ನೆ

ಮಂಡ್ಯ: ಬಿಡದಿ ಉಪನಗರ ಯೋಜನೆಯ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅಥವಾ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಲು ತಾವು ಭೈರಮಂಗಲದಲ್ಲಿ ನಾಳೆ ಸಂಜೆ 4 ಗಂಟೆಯವರೆಗೂ ಕಾಯುವುದಾಗಿ ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಮಂಡ್ಯದ ಶಿವಾರಗುಡ್ಡ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಮುಖ್ಯಮಂತ್ರಿಯವರಿಗೆ ಕಾರ್ಯದೊತ್ತಡದಿಂದ ಖುದ್ದಾಗಿ ಬರಲು ಸಾಧ್ಯವಾಗದಿದ್ದರೆ, ಈ ಯೋಜನೆಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳನ್ನಾದರೂ ಸ್ಥಳಕ್ಕೆ ಕಳುಹಿಸಿಕೊಡಲಿ ಎಂದು ವಿನಂತಿಸಿದರು.

ಬಿಡದಿ ಟೌನ್‌ಶಿಪ್ ಯೋಜನೆಗೆ ಸ್ಥಳೀಯ ಶೇಕಡಾ 80 ಕ್ಕಿಂತಲೂ ಹೆಚ್ಚು ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸರ್ಕಾರ ಕೆಲವು ಪುಢಾರಿಗಳನ್ನು ಮಧ್ಯವರ್ತಿಗಳನ್ನಾಗಿ ಮಾಡಿಕೊಂಡು, ರೈತರಿಗೆ ಹಣದ ಆಮಿಷ ಒಡ್ಡಿ ಭೂಮಿ ಕಬಳಿಸಲು ಹೊರಟಿದೆ. ಇಂತಹ ಜನವಿರೋಧಿ ಧೋರಣೆ ಹೊಂದಿರುವ ಸರ್ಕಾರಗಳು ದೀರ್ಘಕಾಲ ಉಳಿಯುವುದಿಲ್ಲ, ಅವು ಧೂಳಿಪಟವಾಗಲಿವೆ ಎಂದು ಆಕ್ರೋಶ ಹೊರಹಾಕಿದರು.

ವಿರೋಧ ಪಕ್ಷದ ನಾಯಕರ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ಮಾತೆತ್ತಿದ್ದರೆ ನಾನು ಏನು ಹರಿದೆ ಅಂತಾರೇ? ಇವರೆಲ್ಲಾ ಇಷ್ಟು ವರ್ಷ ಹರಿದಿದ್ದೇನು?” ಎಂದು ಪ್ರಶ್ನಿಸಿದ ಅವರು, ಬೆಂಗಳೂರಿನಲ್ಲಿ ಗುಂಡಿ ಮುಚ್ಚೋರಿಲ್ಲ. ಟಾರ್ ಹಾಕೋರಿಲ್ಲ. ಇವರ ಸ್ವೇಚ್ಛಾಚಾರದ ಆಡಳಿತದಿಂದ ಬೆಂಗಳೂರಿನ ಜನ ಬೇಸತ್ತಿದ್ದಾರೆ ಎಂದು ಟೀಕಿಸಿದರು.

Related Articles

ಇತ್ತೀಚಿನ ಸುದ್ದಿಗಳು