Tuesday, September 30, 2025

ಸತ್ಯ | ನ್ಯಾಯ |ಧರ್ಮ

ನನ್ನನ್ನು ಜೈಲಿಗೆ ಕಳುಹಿಸಲು HD ಕುಮಾರಸ್ವಾಮಿ ಕುಟುಂಬ ಷಡ್ಯಂತ್ರ ನಡೆಸುತ್ತಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪ!

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜೈಲಿಗೆ ಹೋಗುವ ದಿನ ಹತ್ತಿರ ಬಂದಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಇತ್ತೀಚೆಗೆ ನೀಡಿದ್ದ ಹೇಳಿಕೆಗೆ, ಡಿ.ಕೆ. ಶಿವಕುಮಾರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮನ್ನು ಜೈಲಿಗೆ ಹಾಕಿಸಲು ಎಚ್.ಡಿ. ಕುಮಾರಸ್ವಾಮಿ ಕುಟುಂಬ ಷಡ್ಯಂತ್ರ ನಡೆಸುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ಎಚ್.ಡಿ. ಕುಮಾರಸ್ವಾಮಿ ಮೊದಲಿನಿಂದಲೂ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ನನ್ನ ವಿರುದ್ಧ ಅವರ ಕುಟುಂಬದಿಂದ ದೊಡ್ಡ ಷಡ್ಯಂತ್ರ ನಡೆದಿದೆ. ‘ಜೈಲಿಗೆ ಹೋಗುವ ದಿನ ಹತ್ತಿರ ಬಂದಿದೆ’ ಎಂದಿದ್ದಾರೆ. ಹಬ್ಬ ಆಗಲಿ, ಅವರು ಏನೇನು ಹೇಳುತ್ತಾರೆ ಎಲ್ಲದಕ್ಕೂ ಉತ್ತರ ಕೊಡುತ್ತೇನೆ,” ಎಂದಿದ್ದಾರೆ.

“ಇದು ಇವತ್ತಿನಿಂದಲ್ಲ. ಈ ಹಿಂದೆ ನನ್ನ ತಂಗಿ ಮೇಲೆ, ತಮ್ಮನ ಮೇಲೆ, ಎಲ್ಲರ ಮೇಲೂ ಈ ರೀತಿ ಷಡ್ಯಂತ್ರ ನಡೆಸಿದ್ದಾರೆ. ಮುಖ್ಯಮಂತ್ರಿ ಆದಾಗ (ಕುಮಾರಸ್ವಾಮಿ) ಜೈಲಿಗೆ ಹಾಕಿಸೋಕೇ ಪ್ರಯತ್ನ ಮಾಡಿದರು. ಅದಾದ ಮೇಲೆ ಬೇಕಾದಷ್ಟು ಷಡ್ಯಂತ್ರ ಮಾಡಿದರು. ಎಲ್ಲದಕ್ಕೂ ದಸರಾ ಹಬ್ಬ ಆದಮೇಲೆ ಉತ್ತರ ಕೊಡುತ್ತೇನೆ,” ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. “ಪಾಪ ಕುಮಾರಸ್ವಾಮಿ ಅವರಿಗೆ ಒಳ್ಳೆಯದಾಗಲಿ” ಎಂದು ಅವರು ವ್ಯಂಗ್ಯವಾಡಿದ್ದಾರೆ.

ನೇರ ಚರ್ಚೆಗೆ ಆಹ್ವಾನ

ಇದೇ ವೇಳೆ, ಕುಮಾರಸ್ವಾಮಿ ಅವರಿಗೆ ನೇರವಾಗಿ ಚರ್ಚೆಗೆ (ಡಿಬೇಟ್‌ಗೆ) ಬರುವಂತೆ ಡಿ.ಕೆ. ಶಿವಕುಮಾರ್ ಪಂಥಾಹ್ವಾನ ನೀಡಿದ್ದಾರೆ.

“ಅವರನ್ನು ಪಕ್ಕದಲ್ಲಿ ಕೂರಿಸಿ ಚರ್ಚೆ ಮಾಡೋಣ. ಈ ಹಿಂದೆ ಸಾತನೂರಿನಲ್ಲಿ 20-20 ಪಂದ್ಯ ನಡೆದಿತ್ತು. ಅಸೆಂಬ್ಲಿಗೆ ಕರೆದಿದ್ದೆ, ಪಾಪ ಪಾರ್ಲಿಮೆಂಟ್‌ಗೆ ಹೋದರು. ಎಚ್.ಡಿ. ಕುಮಾರಸ್ವಾಮಿ ‘ಹಿಟ್ ಅಂಡ್ ರನ್’ ಮಾಡದೆ ಚರ್ಚೆಗೆ ಬರಲಿ. ನನ್ನಲ್ಲಿರುವ ಅಗಾಧ ಬಂಡಾರದಿಂದ ಎಲ್ಲವನ್ನೂ ತೆಗೆಯುತ್ತೇನೆ, ಅವರು ಕೂಡ ತಮ್ಮ ಬತ್ತಳಿಕೆಯಲ್ಲಿ ಏನೇನಿದೆ ಎಲ್ಲವನ್ನೂ ತೆಗೆಯಲಿ. ಕುಮಾರಸ್ವಾಮಿ ಚರ್ಚೆಗೆ ನೇರವಾಗಿ ಡಿಬೇಟ್‌ಗೆ ಬರಲಿ,” ಎಂದು ಡಿಸಿಎಂ ಸವಾಲು ಹಾಕಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page