ಗೌಡರ ಕುಟುಂಬದ ಪಾಲಿನ ಪ್ರತಿಷ್ಠೆಯ ಕಣದಂತಾಗಿರುವ ಚನ್ನಪಟ್ಟಣದ ಚುನಾವಣಾ ಪ್ರಚಾರದಿಂದ ಎಚ್ ಡಿ ರೇವಣ್ಣ ಯಾಕೆ ದೂರ ಉಳಿದಿದ್ದಾರೆ? ಈ ಪ್ರಶ್ನೆ ಈಗ ಹೆಚ್ಚು ಚರ್ಚೆಯಾಗುತ್ತಿದೆ. ತಮ್ಮ ಮತ್ತು ತಮ್ಮ ಮಕ್ಕಳ ಮೇಲೆ ಕೇಳಿಬಂದ ಅತ್ಯಾಚಾರ ಆರೋಪ ಮತ್ತು ಜೈಲುಪಾಲಾದ ಪ್ರಕರಣಗಳಿಂದ ಮುಜುಗರಕ್ಕೆ ಈಡಾಗಿರುವ ರೇವಣ್ಣ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಹಿಂದೇಟು ಹಾಕಿ ಪ್ರಚಾರದಿಂದ ದೂರ ಉಳಿದಿರಬಹುದು ಎಂದು ಇಷ್ಟು ದಿನ ಜನ ಭಾವಿಸಿದ್ದರು. ಆದರೆ ವಾಸ್ತವ ಸಂಗತಿಯೇ ಬೇರೆ ಇದೆ!
ಎಚ್ ಡಿ ರೇವಣ್ಣ ಉದ್ದೇಶಪೂರ್ವಕವಾಗಿಯೇ ಈ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾರೆ ಎನ್ನುತ್ತವೆ ಗೌಡರ ಕುಟುಂಬದ ಆಪ್ತ ಮೂಲಗಳು. ರೇವಣ್ಣ ಮಹಾನ್ ದೈವಭಕ್ತ ಮತ್ತು ಜ್ಯೋತಿಷಿಗಳನ್ನು ಅಪಾರವಾಗಿ ನಂಬುವಂತವರು. ಜೈಲಿನಿಂದ ಬಿಡುಗಡೆಯಾದ ಕೂಡಲೇ ಅವರು ದೇವದರ್ಶನಕ್ಕೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದ್ದು ನೆನಪಿರಬಹುದು. ಆಗ, ಅವರು ತುಂಬಾ ನಂಬುವ ಕೇರಳ ಮೂಲದ ಜ್ಯೋತಿಷಿಯೊಬ್ಬರು ಗ್ರಹಗತಿಗಳನ್ನು ಅಧ್ಯಯನ ಮಾಡಿ, ಅವರ ಈ ಪರಿಸ್ಥಿತಿಗೆ ಹೊರಗಿನ ವಿರೋಧಿಗಳಿಗಿಂತ ಜೊತೆಗೇ ಇರುವ ಹಿತಶತ್ರುವಿನ ಚಿತಾವಣೆ ಕಾರಣ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಆ ಜ್ಯೋತಿಷ್ಯವಾಣಿಯ ನಂತರ ಗೌಡರ ಕುಟುಂಬದಲ್ಲಿ ಬಿರುಕು ಕಾಣಿಸಿಕೊಳ್ಳಲು ಶುರುವಾಗಿದೆ. ನೇರಾನೇರ ಹೇಳಬೇಕೆಂದರೆ, ತನಗೆ ಮತ್ತು ತನ್ನ ಮಕ್ಕಳಿಗೆ ಬಂದೊದಗಿದ ಈ ದುಸ್ಥಿತಿಗೆ ಕುಮಾರಸ್ವಾಮಿಯ ಸ್ವಾರ್ಥ ರಾಜಕಾರಣವೇ ಕಾರಣ ಅನ್ನೋದು ರೇವಣ್ಣನ ಬಲವಾದ ನಂಬಿಕೆಯಂತೆ. ಇದಕ್ಕೆ ಭವಾನಿಯವರ ಒಮ್ಮತವೂ ಇದೆ.
ಇದಕ್ಕೆ ಪುಷ್ಠಿ ನೀಡುವಂತೆ, ಪ್ರಜ್ವಲ್ ರೇವಣ್ಣನ ಪೆನ್ ಡ್ರೈವ್ ಬೀದಿಬೀದಿಯಲ್ಲಿ ಹಂಚಲು ಯಾವ ಬಿಜೆಪಿಯ ದೇವರಾಜೇಗೌಡ ಕಾರಣನಾಗಿದ್ದನೋ, ಅದೇ ದೇವರಾಜೇಗೌಡನನ್ನು ಪಕ್ಕದಲ್ಲಿ ಕೂರಿಸಿಕೊಂಡು ಇತ್ತೀಚೆಗೆ ನಿಖಿಲ್ ಚನ್ನಪಟ್ಟಣದಲ್ಲಿ ಪದೇಪದೇ ಪ್ರಚಾರ ಮಾಡಿದ ಫೋಟೊಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು. ತನ್ನ ಕೇಂದ್ರ ಮಂತ್ರಿಗಿರಿಗೋಸ್ಕರ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು, ಅವರ ತಂತ್ರಗಾರಿಕೆ ಎದುರು ಕೈಕಟ್ಟಿ ನಿಲ್ಲುವಂತೆ ಕುಮಾರಸ್ವಾಮಿ ಮಾಡಿದ್ದರಿಂದಲೇ, ಆ ಬಿಜೆಪಿಯವರು ತಮ್ಮ ಕುಟುಂಬದ ವಿರುದ್ಧ ಇಂತಹ ಒಳಸಂಚು ಮಾಡಲು ಕಾರಣ ಅನ್ನೋದು ರೇವಣ್ಣನಿಗಿರುವ ಮತ್ತೊಂದು ಗುಮಾನಿ. ಎಚ್ ಡಿ ರೇವಣ್ಣನಿಗೆ ಆರಂಭದಿಂದಲೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಇಷ್ಟವಿರಲಿಲ್ಲ. ಮೈತ್ರಿ ಮಾತುಕತೆಗೆಂದು ಒಮ್ಮೆ ದಿಲ್ಲಿಗೆ ಹೋಗಿದ್ದಾಗ, ಬಿಜೆಪಿ ಹಾಕಿದ ಷರತ್ತುಗಳಿಗೆ ಬೇಸರಗೊಂಡು ಮಾತುಕತೆಯ ನಡುವೆಯೇ ಅರ್ಧಕ್ಕೇ ರೇವಣ್ಣ ಹೊರಬಂದಿದ್ದರು. ಕೊನೆಗೆ, ದೇವೇಗೌಡರು ಸಮಾಧಾನ ಮಾಡಬೇಕಾಯ್ತು.
ಸಾಲದ್ದಕ್ಕೆ, ಪೆನ್ ಡ್ರೈವ್ ಭಾನ್ಗಡಿ ಹೊರಬಂದಾಗ, `ನಮ್ಮ ಕುಟುಂಬವೇ ಬೇರೆ, ರೇವಣ್ಣನ ಕುಟುಂಬವೇ ಬೇರೆ’ ಎಂದು ಕುಮಾರಸ್ವಾಮಿ ಆಡಿದ ಮಾತು ರೇವಣ್ಣನಿಗೆ ದೊಡ್ಡ ಘಾಸಿ ಉಂಟು ಮಾಡಿದೆ. ತನ್ನ ಒಬ್ಬ ಮಗ ಇನ್ನೂ ಜಾಮೀನು ಸಿಗದೆ ಜೈಲಿನಲ್ಲಿ ಬಂಧಿಯಾಗಿರುವ ಸಂದರ್ಭದಲ್ಲಿ ಕುಮಾರಸ್ವಾಮಿ ತನ್ನ ಮಗನನ್ನು ಶಾಸಕನನ್ನಾಗಿ ಮಾಡಲು, ತಮಗೆ ಈ ಸ್ಥಿತಿ ತಂದ ಅದೇ ಬಿಜೆಪಿಯವರ ಕೈಕೈಹಿಡಿದು ಹುಮ್ಮಸ್ಸಿನಿಂದ ಓಡಾಡುತ್ತಿರುವುದು ರೇವಣ್ಣನ ಸದ್ಯದ ಸಿಟ್ಟಿನ ಅಸಲೀ ಕಾರಣ. ಅದಕ್ಕೋಸ್ಕರವೇ ಅವರು ಚುನಾವಣಾ ಪ್ರಚಾರದಿಂದ ಸಂಪೂರ್ಣ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ.
ಅಷ್ಟೇ ಅಲ್ಲ, ತನ್ನ ಮಕ್ಕಳ ಭವಿಷ್ಯವನ್ನು ಬಲಿಕೊಟ್ಟು ತನ್ನ ಮಗನ ಭವಿಷ್ಯ ಸರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಕುಮಾರಸ್ವಾಮಿಯ ಯತ್ನ ಯಾವುದೇ ಕಾರಣಕ್ಕೂ ಕೈಗೂಡಲು ಬಿಡೋದಿಲ್ಲ ಎಂಬ ಶಪಥ ಮಾಡಿರುವ ಎಚ್ ಡಿ ರೇವಣ್ಣ, ಚನ್ನಪಟ್ಟಣದಲ್ಲಿ ಶತಾಯಗತಾಯ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಲು ನಿರ್ಧರಿಸಿದ್ದಾರೆ ಅನ್ನೋದು ಲೇಟೆಸ್ಟ್ ಮತ್ತು ಪಕ್ಕಾ ಸುದ್ದಿ. ರೇವಣ್ಣನ ಈ ಶಪಥಕ್ಕೆ ಅವರ ಮಡದಿ ಭವಾನಿಯವರ ಒತ್ತಾಸೆಯೂ ಇದೆ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ಒಟ್ಟಿನಲ್ಲಿ ಈ ಉಪಚುನಾವಣೆಯ ನಂತರ ಗೌಡರ ಕುಟುಂಬ ಇಬ್ಭಾಗವಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎನ್ನುತ್ತಿವೆ, ಗೌಡರನ್ನು ಹತ್ತಿರದಿಂದ ಬಲ್ಲ ಆಪ್ತ ಮೂಲಗಳು.
ಕೆಂಪರಾಜು ಜಿ ಕರೀಗೌಡ, ಮಳವಳ್ಳಿ
ಹವ್ಯಾಸಿ ಪತ್ರಕರ್ತ