ಹಾಸನ : ಏನೇ ಶುಭ ಕಾರ್ಯ ನಡೆದರೂ ಅದು ವಾಸ್ತು ಪ್ರಕಾರ ಸಂಪ್ರದಾಯ ಬದ್ಧವಾಗಿಯೇ ನಡೆಯಬೇಕು ಎನ್ನುವ ಮಾಜಿ ಸಚಿವ ಇಂದೂ ಸಹ ಅದನ್ನೂ ಪಾಲನೆ ಮಾಡಿದರು.ಶನಿವಾರದಂದು ನಗರದಲ್ಲಿ ಜೆಡಿಎಸ್ ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶದ ಸಿದ್ಧತೆ ಪರಿಶೀಲನೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದು ಆಗಮಿಸಿದ್ದರು.
ನಗರದ ಹೊರವಲಯದ ಬೂವನಹಳ್ಳಿ ಬಳಿ ನಡೆಯಲಿರುವ ಜನತಾ ಸಮಾವೇಶಕ್ಕೆ ಈಗಾಗಲೇ ಬೃಹತ್ ವೇದಿಕೆ ನಿರ್ಮಾಣಗೊಂಡಿದೆ. ಇದನ್ನು ನೋಡಲು ಬಂದ ಎಚ್.ಡಿ.ಕುಮಾರಸ್ವಾಮಿ ಅವರನ್ನು ವಾಸ್ತು ಪ್ರಕಾರವೇ ರೇವಣ್ಣ ಕರೆದುಕೊಂಡು ಬರುವ ಮೂಲಕ ಅಚ್ಚರಿ ಮೂಡಿಸಿದರು. ಆರಂಭದಲ್ಲಿ ವೇದಿಕೆ ಬಳಿಗೆ ದಕ್ಷಿಣ ದಿಕ್ಕಿನಿಂದ ಬಂದ ಎಚ್.ಡಿ.ಕುಮಾರಸ್ವಾಮಿ ಆಗಮಿಸಿದರು. ಎಚ್‌ಡಿಕೆ ಜೊತೆ ಎಚ್.ಡಿ.ರೇವಣ್ಣ, ಶಾಸಕ ಎಚ್.ಪಿ.ಸ್ವರೂಪ್‌ಪ್ರಕಾಶ್ ಹಾಗೂ ಎಂಎಲ್‌ಸಿ ಬೋಜೇಗೌಡ ಕಾರಿನಲ್ಲೇ ಆಗಮಿಸಿದರು.
ಇನ್ನೇನು ಕಾರಿನಿಂದ ಕುಮಾರಸ್ವಾಮಿ ಇಳಿಯಬೇಕು ಎನ್ನುವಷ್ಟರಲ್ಲಿ ಕಾರಿನಿಂದ ಇಳಿಯದಂತೆ ಹೇಳಿ ಮುಂದಕ್ಕೆ ಹೋಗುವಂತೆ ಕಾರು ಚಾಲಕನಿಗೆ ಹೇಳಿದೆ ರೇವಣ್ಣ ಸೂಚನೆ ನೀಡಿದರು. ಅವರ ನಿರ್ದೇಶನದಂತೆ ಉತ್ತರ ದಿಕ್ಕಿಗೆ ಹೋಗಿ ಈಶಾನ್ಯ ಮೂಲೆಯಿಂದ ಬಂದು ಪೂರ್ವ ದಿಕ್ಕಿಗೆ ಚಾಲಕ ಕಾರು ನಿಲ್ಲಿಸಿದರು. ಪೂರ್ವಾಭಿಮುಖವಾಗಿ ಕಾರು ನಿಂತ ಮೇಲೆಯೇ ಕುಮಾರಸ್ವಾಮಿ ಕೆಳಗಿಳಿದರು. ನಂತರ ಸಮಾವೇಶದ ಸಿದ್ಧತೆಗಳನ್ನು ಪರಿಶೀಲನೆ ಕೇಂದ್ರ ಸಚಿವರು ಪರಿಶೀಲಿಸಿದರು.
ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್, ತಾಲೂಕು ಅಧ್ಯಕ್ಷ ಎಸ್,ದ್ಯಾವೇಗೌಡ, ಜೆಡಿಎಸ್ ಜಿಲ್ಲಾ ವಕ್ತಾರ ರಘು ಹೊಂಗೆರೆ , ಮುಖಂಡರಾದ ಕೆಂಕೆರೆ ಕೇಶವಮೂರ್ತಿ, ಬಾಣಾವರ ಅಶೋಕ್, ಎಂ.ಎ.ನಾಗರಾಜ್ , ನಿರಂಜನ್ ಮೊದಲಾದವರಿದ್ದರು.
