ಹಾಸನ: ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆ ದೃಷ್ಟಿಯಿಂದ ಹಾಸನದಲ್ಲಿ ಜ.24ರಂದು ಜೆಡಿಎಸ್ ಬೆಳ್ಳಿಹಬ್ಬದ ಜನತಾ ಸಮಾವೇಶ ನಡೆಸುವ ಮೂಲಕ ಪಕ್ಷದ ಕಾರ್ಯಕರ್ತರು, ನಾಡಿನ ಜನತೆಗೆ ಸಂದೇಶ ರವಾನಿಸಲಾಗುವುದು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು. ಸಮಾವೇಶ ನಡೆಯುವ ನಗರ ಹೊರವಲಯದ ಬೂವನಹಳ್ಳಿ ಸಮೀಪ ಇರುವ ಬಿಜಿಎಸ್‌ಕೆ ವಸತಿ ಬಡಾವಣೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಜಿಲ್ಲೆ ನಮ್ಮ ಪಕ್ಷಕ್ಕೆ ಕರ್ಮಭೂಮಿ, ಈ ಜಿಲ್ಲೆಯಿಂದಲೇ ಹೊಸದಾಗಿ 2028 ರ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗೆ ಈ ಪವಿತ್ರ ಭೂಮಿಯಿಂದಲೇ ಸಂಘಟನೆ ಚಾಲನೆ ನೀಡಲಾಗುವುದು ಎಂದರು.ಜಾತ್ಯಾತೀತ ಜನತಾ ದಳದ 25ನೇ ವರ್ಷದ ಬೆಳ್ಳಿಹಬ್ಬನ್ನು ಸಾಂಕೇತಿಕವಾಗಿ ಬೆಂಗಳೂರಿನಲ್ಲಿ ಆಚರಿಸಲಾಗಿದೆ. ಬೆಳ್ಳಿಹಬ್ಬವನ್ನು ಮುಂದಿನ ದಿನಗಳಲ್ಲಿ ರಾಜ್ಯದ 30 ಜಿಲ್ಲೆಯಲ್ಲಿ ಆಚರಿಸಲು ಘೋಷಣೆ ಮಾಡಲಾಗಿತ್ತು. ಅದರಂತೆ ಪ್ರಥಮ ಸಮಾವೇಶವನ್ನು ಜ.24ರಂದು ಹಾಸನದಲ್ಲಿ ನಡೆಸಲಾಗುತ್ತಿದೆ.
ಜಿಲ್ಲೆಯಲ್ಲಿ ಜೆಡಿಎಸ್ ಮುಗಿಸುವ ಉದ್ದೇಶದಿಂದ ಈಗಿನ ಕಾಂಗ್ರೆಸ್ ಸರ್ಕಾರ ಹಾಸನದಲ್ಲಿ ಎರಡು ಸಮಾವೇಶ ಮಾಡಿರುವುದನ್ನು ನಾನು ಗಮನಿಸಿದ್ದೇನೆ. ಪ್ರಥಮ ಸಮಾವೇಶ ಹಾಸನದಲ್ಲಿ ನಡೆದ ನಂತರ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಸಲು ದಿನಾಂಕ ನಿಗದಿ ಮಾಡಲಾಗುವುದು ಎಂದು ಹೇಳಿದರು.ದೇವೇಗೌಡರು ಸಹಕಾರ ಸಂಘದ ಮೂಲಕ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದರು. ಅವರ ಇಷ್ಟು ವರ್ಷಗಳ ಸುದೀರ್ಘ ರಾಜಕೀಯ ಜೀವನ ನಡೆದಿರುವುದು ಈ ಜಿಲ್ಲೆಯ ಜನರ ಸಹಕಾರ ಮಹತ್ವದ್ದಾಗಿದೆ. ಹಾಗಾಗಿ ಸಮಾವೇಶ ನಡೆಸಲು ಈ ಜಿಲ್ಲೆಯಲ್ಲೇ ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಸುಪ್ರೀಂ ಕೋರ್ಟ್ ಕೂಡ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸುವಂತೆ ಸೂಚಿಸಿದೆ.ಸದ್ಯದಲ್ಲೇ ಗ್ರಾಮ ಪಂಚಾಯಿತಿಗಳ ಅಧಿಕಾರಾವಧಿ ಕೂಡ ಮುಕ್ತಾಯಗೊಳ್ಳುವುದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷ ಸಂಘಟನೆಗೆ ಇಲ್ಲಿಂದಲೇ ಸಂದೇಶ ರವಾನಿಸಲಾಗುವುದು ಎಂದರು. ಈಗಾಗಲೇ ನಮ್ಮ ಕಾರ್ಯಕರ್ತರು ಹಬ್ಬದ ರೀತಿಯಲ್ಲಿ ಮಾಡಬೇಕೆಂಬ ಉತ್ಸಾಹದಲ್ಲಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿ ರೂಪುಗೊಳ್ಳಲಿದೆ ಎಂಬ ವಿಶ್ವಾಸ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.
