Friday, May 3, 2024

ಸತ್ಯ | ನ್ಯಾಯ |ಧರ್ಮ

ನನ್ನ ಆಪತ್ತಿಗಾದ ನೆಂಟ

ಎಲ್ಲವೂ ಸರಿಯಿದ್ದು ಏನಾದರೂ ತೊಂದರೆಯಾದರೆ ಆ ಗಳಿಗೆಯಲ್ಲಿ ಜಾತಿ, ಧರ್ಮ, ಗೋತ್ರದ ಹಂಗಿಲ್ಲದೆ ನಮ್ಮ ಸಹಾಯಕ್ಕೆ ಬಂದವನನ್ನು ಆಪತ್ತಿಗಾದ ನೆಂಟ ಅನ್ನಲಾಗದೆ? ಎಲ್ಲಕ್ಕೂ ಮೀರಿದ ಒಂದು ಬಾಂಧವ್ಯ ಅಲ್ಲಿ ಆಗ ಹುಟ್ಟಿಬಿಡುವುದಿಲ್ಲವೇ? ತನಗೆದುರಾದ ಆಪತ್ತಿಗೆ ನೆಂಟನಾಗಿ ಬಂದವನ ಬಗ್ಗೆ ಬರೆದಿದ್ದಾರೆ ಕಲಬುರ್ಗಿಯ ಕಾಶಿನಾಥ ಮುದ್ದಾಗೋಳ.

ನಾನು ಒಂದು ಕತೆ ಹೇಳ್ತೀನಿ! ಹಾ.. ಕತೆ ಅಲ್ಲ. ಅದು  ನನ್ನ ಜೀವನದಲ್ಲಾದ ಮರೆಯಲಾರದ ಘಟನೆ.

ಅದೊಂದು ದಿನ ಮೈಯ ತುಂಬೆಲ್ಲ ಜ್ವರ, ಮನಸ್ಸಿಗೆ ಗಾಢ ಕತ್ತಲೆ ಕವಿದ ಬೇಸರ, ವಿಪರೀತ ತಲೆ ನೋವಿಗೆ ಹೊಸದಾಗಿ ಬಂದ ಕನ್ನಡಕ, ಹೆಗಲಿಗೆ ಭಾರವಾದ ಕಾಲೇಜು ಬ್ಯಾಗ್. ಅದರೊಳಗೆ ನಾಲ್ಕು ಜನ ಕುಡಿದು ಉಳಿಯುವಷ್ಟು ದೊಡ್ಡ ನೀರಿನ ಬಾಟಲು ಹೊತ್ತು ಕಾಲೇಜಿಗೆ ಹೊರಟಿದ್ದೆ ಅರ್ಧ ಮನಸ್ಸಿನಿಂದ. ಜೊತೆಗೆ ಯಾರು ಇಲ್ಲ ಎಂದು ಮನೆಯಲ್ಲಿ ಅನ್ನ ಮೊಸರು ಉಂಡು ಅರೆ ಹೊಟ್ಟಿ ತುಂಬಿಸಿಕೊಂಡ ಕಾರಣ ಒಳ ಒಳಗೆ ಹಸಿವು ಸಣ್ಣದಾಗಿ ಹುಟ್ಟಿಕೊಂಡಿತ್ತು. ಪಾಸ್ ಇದ್ದರೂ ಬಸ್ಸಿಗಾಗಿ ಕಾಯುವ ಮನಸ್ಥಿತಿ ಇರಲಿಲ್ಲ. ಸದಾ ಕಾಲ ಕಂಜೂಸುತನ ಮಾಡುವ ನಾನು ಅಂದು  ಧೈರ್ಯ ಮಾಡಿ ಆಟೋಗೆ ಹೋಗುವ ಸಾಹಸ ಮಾಡಿದೆ. ಖಾಲಿ ಆಟೋದಲ್ಲಿ ಕುಳಿತರೆ ಆಟೋ ತುಂಬಿ ಬಿಡುವುದಕ್ಕೆ ತಡವಾಗಬಹುದೆಂದು ಬೇಗ ಬೇಗ ತುಂಬಿದ ಆಟೋ ಹುಡುಕಿದೆ. ಆಗಷ್ಟೇ ಒಂದರಲ್ಲಿ ಮೂರು ಜನ ಕುಳಿತಿದ್ದರು. ಮುಂದೆ ಚಾಲಕನ ಪಕ್ಕದ ಸೀಟು ಖಾಲಿ ಇತ್ತು “ಬರ್ರೀ ಖರ್ಗೆ”, “ಆವ್ ಜೀ ಖರ್ಗೆ” ಅಂತ ನಗುಮುಖದಿ ಕರೆಯುತ್ತಿರುವವನ ಗಾಡಿ ಹತ್ತಿ ಕುಳಿತೆ. ಅಷ್ಟರಲ್ಲಿ ಮೂಗಿಗೆ ಅಪ್ಪಳಿಸಿದ ಅತ್ತರಿನ ಗಮ ‘ಆಹಾ’ ಎಂದಿಗೂ ಮರೆಯದು. ಬಿಳಿಯ ಬಣ್ಣದ ಬಟ್ಟೆ ತೊಟ್ಟು, ಎರಡು ಕಣ್ಣಿಗೆ ಸುರ್ಮ ಹಾಕಿಕೊಂಡು, ನೆಟ್ಟನೇರವಾದ ಮೂಗು, ಕೆಂಗುಲಾಬಿ ದಳದ ತುಟಿ, ತುಂಬಿದ ದೇಹ, ಗಟ್ಟಿ ಹಾಲಿನ ಕೆನೆಯ ಮೈಬಣ್ಣ ನೋಡಲು ತುಂಬಾ ಆಕರ್ಷಕನಾಗಿದ್ದ ಚಾಲಕ (ಡ್ರೈವರ್). ಆಟೋ ಮುಂದೆ ಚಲಿಸತೊಡಗಿತು. ಎಡಗೈಯನ್ನು ಮುಂದಿನ ಕನ್ನಡಿಗೆ ಹಿಡಿದು, ಬಲಗೈಯನ್ನು ಬೆನ್ನಿನ ಹಿಂದಿನ ಕಬ್ಬಿಣದ ರಾಡಿಗೆ ಬಿಗಿಯಾಗಿ ಹಿಡಿದು ಕೊಂಡು ಬಿಸಿಯುಸಿರ ಬಿಡುತ್ತಾ ಕುಳಿತಿದ್ದೆ. ನನ್ನ ಎದೆಗೆ ಅವನ ತೋಳು ಮುಟ್ಟಿತ್ತು. ಸ್ವಲ್ಪ ದೂರ ಸಾಗಿದಾಗ  ಕಣ್ಣಿಗೆ ಕತ್ತಲು ಬಂದು ತಲೆಸುತ್ತಿದಂತಾಯಿತು. ಆದರೂ ಕಷ್ಟಪಟ್ಟು  ಕಣ್ಣು ರೆಪ್ಪೆ ಬಡಿಯುತ್ತಾ ಹಿಗ್ಗಿಸುತ್ತಾ ಕುಳಿತಿದ್ದೆ. ಹಿಂದೆ ಕುಳಿತ ಮೂರು ಜನ ಇಳಿಯುವ ಸ್ಥಳ ಸಮೀಪಿಸಿತು. ಅವರು ಆಟೋ ನಿಲ್ಲಿಸಿ ಇಳಿದರು.

‘ನೀವು ಹಿಂದೆ ಹೋಗಿ’ ಎಂದ ಅವನ ಮಾತು ಕೇಳಿ ನಾನು ಮೆಲ್ಲನೆ ಇಳಿಯುವಾಗ ಸುಸ್ತಿಗೆ ಎಡವಿ ನೆಲಕ್ಕೆ ರಮ್ಮನೆ ಬಿದ್ದೆ. ‘ಹಲೋ ಹಲೋ ಏಳಿ- ಎದ್ದೇಳಿ’ ಎಂದಿದ್ದಷ್ಟೇ ಕೇಳಿತು. ಕಣ್ಣು ತೆರೆದು ನೋಡಿದಾಗ ಅದ್ಯಾವುದೋ ಅಪರಿಚಿತ ಸಣ್ಣ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದೆ. ನಾನು ಎಚ್ಚರಗೊಳ್ಳುವುದನ್ನೇ ಕಾಯುತ್ತಾ ಕಾಲ ಕಡೆ ತುಸು ಜಾಗ ಮಾಡಿಕೊಂಡು ಅವನು ಕುಳಿತಿದ್ದ. ನಾನು ಎಚ್ಚರ ಗೊಂಡ ತಕ್ಷಣ ಸಣ್ಣದಾಗಿ ನಗೆ ಬೀರಿ ಔಷಧಿಯ ಕಾಗದದ ಚೀಲ ನನ್ನ ಕಾಲೇಜಿನ ಬ್ಯಾಗಿನಲ್ಲಿ ಹಾಕಿ ಒಳಗಿದ್ದ ನೀರಿನ ಬಾಟಲಿ ಹಿಡಿದು ಕುಡಿಯಲು ಹೇಳಿದ. ತಲೆ ಆಡಿಸಿ ‘ಬೇಡ’ ಎಂದು ಹೇಳಿದೆ. ಕಣ್ಣಿನಿಂದಲೇ ‘ಬಾ’ ಎಂದು ಕರೆದು ಬ್ಯಾಗ್‌ ಕೈಯಲ್ಲಿ ಹಿಡಿದುಕೊಂಡು ಮುಂದೆ ಸಾಗಿದ. ನಾನು ಅವನನ್ನು ಹಿಂಬಾಲಿಸಿದೆ. ಆಟೋದಲ್ಲಿ ಕುಳಿತವನೇ ಹೆಚ್ಚಿಗೆ ಏನು ಮಾತನಾಡದೆ ನಾ ಮೊದಲೇರಿದ ಆಟೋ ಸ್ಟ್ಯಾಂಡ್ ಗೆ ಒಯ್ದು ಇಳಿಸಿದ. ಮೆಲ್ಲಗೆ ಇಳಿದೆ. ನಮ್ಮೂರಿನ ಬಸ್ ನಿಂತ ಕಡೆ ನೋಡಿದೆ. ಬ್ಯಾಗ್ ತೆಗೆದುಕೊಂಡು ಬಸ್ಸಿನ ಕಡೆ ಬಂದು ಕೈಯಲ್ಲಿ ಬ್ಯಾಗ್ ಕೊಟ್ಟವನು ‘ಹುಷಾರ್’ ಎಂದ. ‘ಹಾ’ ಎಂದೆ. ಕಿಟಕಿ ಪಕ್ಕದಲ್ಲಿ ಅವನ ನೋಡುತ್ತಲೇ ಕುಳಿತಿದ್ದೆ. ಬಸ್ಸಿನ ಮುಂದೆ ನಿಂತಿರುವ ಒಂದು ಹಣ್ಣಿನ ಬಂಡಿಯ ಕಡೆ ಹೋದವನು ಸೇಬು ಬಾಳೆ ಹಣ್ಣುಗಳೆರಡೆರೆಡು ತಂದು ಕೈಗಿಟ್ಟ. ‘ಇದೆಲ್ಲ ಏಕೆ?’ ಎಂದಾಗ ‘ತಿನ್ನಿ’ ಎಂದು ಹೇಳಿ ನನ್ನ ಕಡೆ ಬೆನ್ನು ಮಾಡಿ ಹೊರಟ. ನಾನು ಸುಮ್ಮನೆ ಕುಳಿತಿದ್ದೆ. ಅವ ಕಣ್ಮರೆಯಾದ ಹಾಗೆಯೇ ಆತನನ್ನು ನೋಡ ಬಯಸಿ ಎದ್ದುನಿಂತೆ. ಬಹುದೂರ ಜನರ ಮಧ್ಯೆ ಹೋದವನು ಕಣ್ಣಿಗೆ ಬೀಳಲಿಲ್ಲ. ಸೀಟಿನ ಮೇಲೆ ಹಾಗೇ ಕುಳಿತೆ.

ಮನಸ್ಸಿನೊಳಗೆ ಹೊಸ ಚಡಪಡಿಕೆ ಶುರುವಾಯಿತು. ಇಷ್ಟೆಲ್ಲಾ ಮಾಡಿದವನಿಗೆ ಧನ್ಯತೆಯನ್ನೂ ತಿಳಿಸದೆ ಕುಳಿತೆನಲ್ಲ ಎಂದು ಬೇಜಾರಾಯಿತು. ಅವನು ಕೊಟ್ಟ ಬಾಳೆಹಣ್ಣೊಂದನ್ನು, ಸೇಬಿನ ಹಣ್ಣೊಂದನ್ನು ತಿಂದು ಮನೆ ತಲುಪಿದೆ. ಮನೆಯಲ್ಲಿಯೂ ಎಲ್ಲ ವಿವರಿಸಿ ಆ ನೆಂಟನ ಕಥೆ ಹೇಳಿದೆ. ಎಲ್ಲರೂ ಅವನನ್ನು ಆಶೀರ್ವದಿಸಿದರು.

ಎರಡ್ಮೂರು ದಿನ ಕಳೆದವು. ಮತ್ತೆ ಕಾಲೇಜಿನ ನೆಪ ಮಾಡಿ ಬಂದು ಒಂದು ದಿನ ಪೂರ್ತಿ ಅವನಿಗಾಗಿ ಆ ಆಟೋ ಸ್ಟಾಂಡ್ ನಲ್ಲಿ ಕಾಯ್ತಾ ಕುಳಿತೆ. ಸಿಗಲಿಲ್ಲ! ಎಂದಿನಂತೆ ಮನೆಗೆ ಹೋದೆ. ಬೇಜಾರು ನನ್ನೊಂದಿಗೇ ಉಳಿಯಿತು. ಮೂರ್ನಾಲ್ಕು ದಿನದ ದಿನಚರಿ ಅದೆ ಆಯ್ತು. ನನ್ನಾಪತ್ತಿಗಾದ ನೆಂಟ ಸಿಗಲೇ ಇಲ್ಲ! ಅವನ ನೆನಪಾದಾಗಲೆಲ್ಲ ನಾ ನಡೆದಾಡುವ ದಾರಿಯಲ್ಲಿ ಅವನ ನೆರಳು ಹುಡುಕುತ್ತಿರುವೆ. 

ಈ ಮಣ್ಣಿನ ಗುಣವೇ ಅದು. ಒಬ್ಬರ ಆಪತ್ತಿಗೆ ಇನ್ನೊಬ್ಬರು ಹೆಗಲು ಕೊಡುವುದು. ಆನಂದಕ್ಕೆ ಅಪ್ಪಿಕೊಳ್ಳುವುದು. ಕೂಡಿ ಬಾಳುವ ಪರಂಪರೆ ನಮ್ಮ ನೆಲದ್ದು. ಶರಣ ಬಸವೇಶ್ವರ, ಖಾಜಾ ಬಂದೇನವಾಜರು,  ರಾಣೆಶಪೀರ್, ಕಡಕೋಳದ ಮಡಿವಾಳಪ್ಪ, ತಿಂತಣಿಯ ಮೌನಪ್ಪ, ಕೊಡೇಕಲ್ ಬಸವಣ್ಣ ಇವರುಗಳೇ ನಮ್ಮ ಆದರ್ಶ.ಅವರ ಆಶಯವೇ ಈ ನೆಲದ ಉಸಿರು.

ಕಾಶಿನಾಥ ಮುದ್ದಾಗೋಳ, ನಾಗೂರ ಕಲಬುರ್ಗಿ

ಹವ್ಯಾಸಿ ಬರಹಗಾರ

Related Articles

ಇತ್ತೀಚಿನ ಸುದ್ದಿಗಳು