ಅಪ್ರಾಪ್ತ ಗರ್ಭಧಾರಣೆ ತಡೆಗೆ ವಿದ್ಯಾರ್ಥಿನಿಯರ ಋತುಚಕ್ರದ ಮಾಹಿತಿ ಸಂಗ್ರಹ – ಆರೋಗ್ಯ ಇಲಾಖೆ

ಬೆಂಗಳೂರು : ರಾಜ್ಯದಲ್ಲಿ ಆತಂಕಕಾರಿಯಾಗಿ ಹೆಚ್ಚುತ್ತಿರುವ ಅಪ್ರಾಪ್ತ ವಯಸ್ಸಿನ ಗರ್ಭಧಾರಣೆ (Child Pregnancy ) ಪ್ರಕರಣಗಳಿಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆಯು (Health department ) ಮಹತ್ವದ ಹೆಜ್ಜೆಯನ್ನಿಟ್ಟಿದೆ.

ಇನ್ಮುಂದೆ ಶಾಲಾ ಹಂತದಲ್ಲೇ ವಿದ್ಯಾರ್ಥಿನಿಯರ ಋತುಚಕ್ರದ (Menses ) ಮಾಹಿತಿಯನ್ನು ಕಾಯ್ದುಕೊಳ್ಳಲು ಶಾಲಾಡಳಿತ ಮಂಡಳಿಗಳಿಗೆ ಸೂಚನೆ ನೀಡಲಾಗಿದೆ.

ಈ ನೂತನ ಯೋಜನೆಯಡಿ, ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯರ ಮುಟ್ಟಿನ ದಿನಾಂಕಗಳು ಹಾಗೂ ಆರೋಗ್ಯ ಸ್ಥಿತಿಯ ದಿನನಿತ್ಯದ ದಾಖಲೆಯನ್ನು ನಿರ್ವಹಿಸಲಾಗುತ್ತದೆ.

ಯಾವುದೇ ವಿದ್ಯಾರ್ಥಿನಿಯ ಋತುಚಕ್ರದಲ್ಲಿ ದಿಢೀರ್ ವ್ಯತ್ಯಾಸ ಅಥವಾ ಸತತ ವಿಳಂಬ ಕಂಡುಬಂದಲ್ಲಿ, ಅದನ್ನು ಅನುಮಾನಾಸ್ಪದ ಪ್ರಕರಣವೆಂದು ಪರಿಗಣಿಸಿ ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ.

ಇಂತಹ ಪ್ರಕರಣಗಳು ಕಂಡುಬಂದ ತಕ್ಷಣವೇ ಸಂಬಂಧಪಟ್ಟ ವಿದ್ಯಾರ್ಥಿನಿಯರನ್ನು ಸೂಕ್ತ ವೈದ್ಯಕೀಯ ತಪಾಸಣೆಗೆ ಹಾಗೂ ಮಾನಸಿಕ ಆಪ್ತಸಲಹೆಗೆ (ಕೌನ್ಸಿಲಿಂಗ್) ಶಿಫಾರಸು ಮಾಡಲಾಗುತ್ತದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಗಳನ್ನು ತಡೆಯಲು ಈ ವರದಿಗಳು ಸಹಕಾರಿಯಾಗಲಿವೆ.

ಹೆಣ್ಣುಮಕ್ಕಳ ದೈಹಿಕ ನೈರ್ಮಲ್ಯ, ಜಾಗೃತಿ ಹಾಗೂ ಸುರಕ್ಷತೆಗೆ ಆದ್ಯತೆ ನೀಡಿರುವ ಈ ಯೋಜನೆಯು ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಶೀಘ್ರದಲ್ಲೇ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಸಂಪೂರ್ಣವಾಗಿ ಜಾರಿಗೆ ಬರಲಿದೆ.

Related Articles

ಇತ್ತೀಚಿನ ಸುದ್ದಿಗಳು