ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆಯವರು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಔಷಧಿ ಚೀಟಿಗಳಲ್ಲಿ ಕನ್ನಡ ಕಡ್ಡಾಯಗೊಳಿಸುವಂತೆ ಕೋರಿ ಮನವಿ ಸಲ್ಲಿಸಿದ್ದರು. ಇದೀಗ ಆ ಪತ್ರಕ್ಕೆ ಸಚಿವರು ಪ್ರತಿಕ್ರಿಯಿಸಿದ್ದು ಇದನ್ನು ಅನುಷ್ಠಾನಗೊಳಿಸುವುದು ಕಷ್ಟಸಾಧ್ಯ ಎಂದು ಹೇಳಿದ್ದಾರೆ.
ಈ ಕುರಿತು ಪ್ರಾಧಿಕಾರದ ಅಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ಸಚಿವರು “ವೈದ್ಯರು ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯಬೇಕೆಂದು ತಾವು ಮಾಡಿರುವ ಸಲಹೆ ಅತ್ಯಂತ ಮಹತ್ವಪೂರ್ಣ ವಿಷಯ ಎನಿಸಿತು. ನೂರಾರು ವೈದ್ಯರು ತಮ್ಮ ಮಾತುಗಳಿಂದ ಪ್ರೇರಿತರಾಗಿ ಕನ್ನಡದಲ್ಲಿ ಬರೆದ ಔಷಧಿ ಚೀಟಿಗಳನ್ನು ತಮ್ಮಲ್ಲಿ ಹಂಚಿಕೊಂಡಿದ್ದಾರೆ ಎನ್ನುವುದು ಸಹ ನಿಜಕ್ಕೂ, ಸಂತಸದ ಸಂಗತಿ ಇಂಗ್ಲಿಷ್ ಭಾಷೆ ಇತರೆ ಭಾಷೆಗಳನ್ನು ಆಪೋಶನ ತೆಗೆದುಕೊಳ್ಳುತ್ತಿರುವ ಈ ಕಾಲಘಟ್ಯದಲ್ಲಿ ದೈನಂದಿನ ಜೀವನದಲ್ಲಿ ಕನ್ನಡ ಭಾಷೆ ಉಳಿಯಲು, ಬೆಳೆಯಲು ಇಂತಹ ಕ್ರಮಗಳು ಪೂರಕ ಎನ್ನುವುದು ಸರ್ವವೇದ್ಯ ಸಂಗತಿಯಾಗಿದೆ.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ವೈದ್ಯರು ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯುವುದನ್ನು ಕಡ್ಡಾಯಗೊಳಿಸುವ ವಿಚಾರದಲ್ಲಿ ಸಾಕಷ್ಟು ತಾಂತ್ರಿಕ ಸಂಗತಿಗಳು ಮಿಳಿತವಾಗಿದೆ. ವೈದ್ಯರು, ರೋಗಿಗಳು, ಶುಷ್ರೂಷಕರು, ಔಷಧಿ ವರ್ತಕರು ಮುಂತಾದ ಹತ್ತು ಹಲವು ಪ್ರಭಾ ಕೇಂದ್ರಗಳಿರುವ ಈ ವ್ಯವಸ್ಥೆಯ ಒಂದು ಕೊಂಡಿ ಸರಿಯಾಗಿ ಕನ್ನಡವನ್ನು ಅರ್ಥೈಸಿಕೊಳ್ಳುವುದರಲ್ಲಿ ಎಡವಿದರೂ ರೋಗಿಗಳ ಜೀವನ್ಮರಣದ ಪ್ರಶ್ನೆಯಾಗುವ ಸಾಧ್ಯತೆಯೂ ಇದೆ. ಜನರ ಆರೋಗ್ಯವನ್ನು ಕಾಯುವ ವೈದ್ಯಕೀಯ ವಿಜ್ಞಾನ ಕ್ಷೇತ್ರ ಅತ್ಯಂತ ವಿಶಾಲ ಮತ್ತು ಸಂಕೀರ್ಣವಾಗಿದ್ದು ಪ್ರಮುಖ ಬದಲಾವಣೆಗಳ ಮುನ್ನ ಎಲ್ಲ ಭಾಗಿದಾರರುಗಳ ಜೊತೆಗೆ ಪೂರ್ವಸಂವಾದ ಅಗತ್ಯ ಎನ್ನುವುದು ನನ್ನ ಭಾವನೆ. ಇದು ಕೇವಲ ಒಂದು ಆದೇಶದ ಮೂಲಕ ಜಾರಿಗೆ ಬರುವ ವಿಚಾರವಲ್ಲ” ಎಂದು ಅವರು ತಿಳಿಸಿದ್ದಾರೆ.
ಅವರು ತನ್ನ ಪತ್ರದಲ್ಲಿ ಮುಂದುವರೆದು “ಕನ್ನಡದಲ್ಲಿ ವೈದ್ಯಕೀಯ ವ್ಯವಹಾರದ ಅನುಷ್ಠಾನ ಪೂರ್ವದಲ್ಲಿ ಸಾಧಕ ಬಾಧಕಗಳ ಬಗ್ಗೆ ವಿಸ್ನತ ಚರ್ಚೆ ಅತ್ಯಗತ್ಯ ಎನ್ನುವುದನ್ನು ತಾವೂ ಒಪ್ಪಿಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ ಕನ್ನಡದ ಅಸ್ಮಿತೆಯನ್ನು ಸಾರುವುದರಲ್ಲಿ ನಾವು ಹಿಂದಡಿ ಇಡುವುದು ಸಾಧ್ಯವೇ ಇಲ್ಲದಿದ್ದರೂ ವೈದ್ಯಕೀಯ ಕ್ಷೇತ್ರದಲ್ಲಿ ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂಬುದನ್ನು ಎಲ್ಲರನ್ನೂ ಒಳಗೊಳ್ಳುವ ರೀತಿಯಲ್ಲಿ ವರಾಮರ್ತಿಸಲೇಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ಔಚಿತ್ಯಪೂರ್ಣ ಸಲಹೆಯನ್ನು ಮುಖ್ಯಮಂತ್ರಿಗಳ ಅವಗಾಹನೆಗೆ ತಂದು ಆಸಕ್ತರ ಸಹಮತಿಯೊಂದಿಗೆ ಜಾರಿಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಮಗೆ ತಿಳಿಯಬಯಸುತ್ತೇನೆ ನಮ್ಮ ಸರ್ಕಾರ ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗಾಗಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಸದಾ ಸನ್ನದ್ಧವಾಗಿದ್ದು ಈ ಸಂದರ್ಭದಲ್ಲೂ ಧನಾತ್ಮಕ ನಿಲುವನ್ನೇ ನಿರೀಕ್ಷಿಸಬಹುದಾಗಿದೆ” ಎಂದು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜನರ ಆರೋಗ್ಯವನ್ನು ಕಾಯುವ ವೈದ್ಯಕೀಯ ವಿಜ್ಞಾನ ಕ್ಷೇತ್ರ ಅತ್ಯಂತ ವಿಶಾಲ ಮತ್ತು ಸಂಕೀರ್ಣವಾಗಿದ್ದು, ಪ್ರಮುಖ ಬದಲಾವಣೆಗಳ ಮುನ್ನ ಎಲ್ಲ ಭಾಗಿದಾರರುಗಳ ಜೊತೆಗೆ ಪೂರ್ವಸಂವಾದ ಅಗತ್ಯ ಎನ್ನುವುದು ನನ್ನ ಭಾವನೆ. ಇದು ಕೇವಲ ಒಂದು ಆದೇಶದ ಮೂಲಕ ಜಾರಿಗೆ ಬರುವ ವಿಚಾರವಲ್ಲ ಎಂದು ತಿಳಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಿದ್ದು, ಅಧ್ಯಕ್ಷರ ಈ ನಿಲುವಿನ ಕುರಿತು ಈಗಾಗಲೇ ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ಪುರುಷೋತ್ತಮ ಬಿಳಿಮಲೆಯವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡು ಈಗಾಗಲೇ ಹಿಂದಿ ಭಾಷಿಕ ಡಾಕ್ಟರುಗಳು ಹಿಂದಿಯಲ್ಲೇ ಔಷಧಿ ಚೀಟಿ ಬರೆಯುತ್ತಿರುವುದಕ್ಕೆ ಸಾಕ್ಷಿಯಾಗಿ ಔಷಧಿ ಚೀಟಿಯನ್ನು ತಮ್ಮ ಫೇಸ್ಬುಕ್ ಹಾಗೂ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದರು. ಜೊತೆಗೆ ಹೊಳೆನರಸೀಪುರ ಮೂಲದ ವೈದ್ಯರೊಬ್ಬರು ಕನ್ನಡದಲ್ಲಿ ಬರೆದಿರುವ ವೈದ್ಯರ ಸಲಹಾ ಚೀಟಿಯನ್ನೂ ಶೇರ್ ಮಾಡಿದ್ದರು.
ಈ ಹಿಂದೆ ಮದ್ರಸಾಗಳಲ್ಲಿ ಕನ್ನಡ ಕಲಿಸುವ ಕುರಿತು ತೀರ್ಮಾನ ಕೈಗೊಂಡಿದ್ದ ಅವರು ನಂತರ ಅದಕ್ಕೆ ವಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈಬಿಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಮದ್ರಾಸಗಳಲ್ಲಿ ಈಗಾಗಲೇ ಕನ್ನಡ ಕಲಿಸಲಾಗುತ್ತಿದೆ ಎನ್ನುವುದು ವಿರೋಧಿಸಿದವರ ಅಭಿಪ್ರಾಯವಾಗಿತ್ತು.