ಸಂಸತ್ತು ಅಂಗೀಕರಿಸಿರುವ ವಕ್ಫ್ ಮಸೂದೆಯ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ 10 ಅರ್ಜಿಗಳು ಸಲ್ಲಿಕೆಯಾಗಿವೆ. ಸುಪ್ರೀಂ ಕೋರ್ಟ್ ಬುಧವಾರ ಮಧ್ಯಾಹ್ನ 2:00 ಗಂಟೆಗೆ ಈ ಅರ್ಜಿಗಳ ವಿಚಾರಣೆ ನಡೆಸಲಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಸಂಜಯ್ ಕುಮಾರ್ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ನೇತೃತ್ವದ ಪೀಠವು ಈ ಅರ್ಜಿಗಳನ್ನು ವಿಚಾರಣೆ ನಡೆಸಲಿದೆ.
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್, ಟಿಎಂಸಿ ಸಂಸದ ಮಹುವಾ ಮೊಯಿತ್ರಾ, ಎಸ್‌ಪಿ ಎಂಪಿ ಜಿಯಾ ಉರ್ ರೆಹಮಾನ್, ಎಜೆಡಿ ಸಂಸದ ಮನೋಜ್ ಕುಮಾರ್ ಝಾ, ಎಎಪಿ ಶಾಸಕ ಅಮಾನತುಲ್ಲಾ ಖಾನ್, ಮಣಿಪುರ ಶಾಸಕ ಶೇಖ್ ನೂರುಲ್ ಹಸನ್, ವೈಎಸ್‌ಆರ್‌ಸಿಪಿ, ಡಿಎಂಕೆ, ಸಿಪಿಐ ಮತ್ತು ಇತರ ಮುಸ್ಲಿಂ ಗುಂಪುಗಳು ಈ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದಾರೆ.
ವಕ್ಫ್ ಮಂಡಳಿ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ಬಾಕಿ ಇರುವ ಅರ್ಜಿಗಳ ವಿಚಾರಣೆಗೆ ಮುನ್ನ ತಮ್ಮ ವಾದಗಳನ್ನು ಆಲಿಸುವಂತೆ ಕೋರಿ ಹಲವಾರು ರಾಜ್ಯಗಳು ಅರ್ಜಿಗಳನ್ನು ಸಲ್ಲಿಸಿವೆ. ಈ ಕಾನೂನನ್ನು ಬೆಂಬಲಿಸಿ ಅಸ್ಸಾಂ, ರಾಜಸ್ಥಾನ, ಛತ್ತೀಸ್‌ಗಢ, ಉತ್ತರಾಖಂಡ, ಹರಿಯಾಣ ಮತ್ತು ಮಹಾರಾಷ್ಟ್ರ ಸರ್ಕಾರಗಳು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಿವೆ .