Thursday, November 21, 2024

ಸತ್ಯ | ನ್ಯಾಯ |ಧರ್ಮ

ಸರ್ಕಾರದ ಹೃದಯಹೀನ ನೀತಿಯಿಂದಾಗಿ ಬಂಡಾಯಗಾರನ ದುರಂತ ಅಂತ್ಯ: ಮಾಜೀ ನಕ್ಸಲರಾದ ನೂರ್‌ ಶ್ರೀಧರ್‌ ಮತ್ತು ಸಿರಿಮನೆ ನಾಗರಾಜ್ ಆಕ್ರೋಶ

ಬೆಂಗಳೂರು: ಕರ್ನಾಟಕದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸೀತಾಂಬೈಲು ಪ್ರದೇಶದಲ್ಲಿರುವ ಹೆಬ್ರಿ ಕಬ್ಬಿನಾಲೆಯಲ್ಲಿ ನವೆಂಬರ್ 18ರ ಸೋಮವಾರ ರಾತ್ರಿ ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲ್ ಕಮಾಂಡರ್ ವಿಕ್ರಮ್ ಗೌಡ ಹತರಾಗಿದ್ದರು. ವಿಕ್ರಮ್ ಗೌಡ ಇತ್ತೀಚಿನ ದಿನಗಳಲ್ಲಿ ಶೃಂಗೇರಿ, ನರಸಿಂಹರಾಜಪುರ, ಕಾರ್ಕಳ ಮತ್ತು ಉಡುಪಿ ಭಾಗದಲ್ಲಿ ನಕ್ಸಲ್ ಚಟುವಟಿಕೆಗಳನ್ನು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಎನ್‌ಕೌಂಟರ್‌ ಬಗ್ಗೆ ಅನೇಕ ಅನುಮಾನಗಳು ರಾಜ್ಯದಲ್ಲಿ ಎದ್ದಿವೆ.

ಈ ಎನ್‌ಕೌಂಟರ್‌ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜೀ ನಕ್ಸಲರೂ, ಹಾಲಿ ಸಕ್ರಿಯ ಸಾಮಾಜಿಕ ಕಾರ್ಯಕರ್ತರೂ ಆದ ನೂರ್‌ ಶ್ರೀಧರ್‌ ಹಾಗೂ ಸಿರಿಮನೆ ನಾಗರಾಜ್‌ ಇಂದು (ನವೆಂಬರ್‌ 20, 2024) ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಜಂಟಿ ಪತ್ರಿಕಾಗೋಷ್ಟಿ ನಡೆಸಿ, ” ಹೃದಯಹೀನ ಸರ್ಕಾರದ ನೀತಿಯಿಂದಾಗಿ ಕ್ರಾಂತಿಯ ಅಪ್ರಯೋಗಿಕ ಹಾದಿ ಮತ್ತೊಬ್ಬ ಬಂಡಾಯಗಾರನ ದುರಂತ ಅಂತ್ಯವಾಗಿದೆ. ಕರ್ನಾಟಕ ಸಾವುನೋವುಗಳ ದುರಂತಗಾಥೆಗೆ ಜಾರದಂತೆ ಕಾಪಾಡಿಕೊಳ್ಳುವ ಹೊಣೆ ನಮ್ಮೆಲ್ಲರದಾಗಿದೆ. ನಾಡಿನ ಹಿತದೃಷ್ಟಿಯಿಂದ ಜನಚಳವಳಿಗಳ ಮುಖ್ಯವಾಹಿನಿಗೆ ಮರಳಬೇಕೆಂದು ಕಾಡಿನಲ್ಲಿರುವ ಸಂಗಾತಿಗಳಿಗೆ ಮರುಮನವಿ ಮಾಡುತ್ತಿದ್ದೇವೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಕರ್ನಾಟಕ ಮತ್ತೊಂದು ದುಃಖಕರ ದುರಂತವನ್ನು ಕಂಡಿದೆ. ಮಲೆನಾಡಿನ ಆದಿವಾಸಿ ಹೋರಾಟಗಾರ ವಿಕ್ರಂ ಗೌಡರ ಹತ್ಯೆಯಾಗಿದೆ. ಮಲೆಕುಡಿಯ ಆದಿವಾಸಿ ಕುಟುಂಬಕ್ಕೆ ಸೇರಿದ, ಹೆಬ್ರಿ ಮೂಲದ, ಬಡ ಕುಟುಂಬದ ಯುವ ಕಿಡಿಯೊಂದನ್ನು ನಂದಿಸಿ ಪೋಲೀಸರು  ಎನ್ಕೌಂಟರ್‌ ಕಥೆ”ಯನ್ನು ಹರಿಬಿಟ್ಟಿದ್ದಾರೆ. ಕಗ್ಗತ್ತಲ ರಾತ್ರಿಯಲ್ಲಿ, ಕಾಡಿನ ಒಡಲಲ್ಲಿ ಚಿಮ್ಮಿದ ಆದಿವಾಸಿ ಯುವಕನ ನೆತ್ತರ ಹನಿಗಳು ಗೃಹಮಂತ್ರಿ ಪರಮೇಶ್ವರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಿಳಿಯಂಗಿಗಳ ಮೇಲೂ ಬಿದ್ದಿವೆ. ನಕ್ಸಲ್‌ ಚಳವಳಿಯ ಪರ ವಿರೋಧಿ ಚರ್ಚೆಗಳು ನಡಿಯುತ್ತಿವೆ. ಮಲೆನಾಡಿನಲ್ಲಿ ಪೋಲೀಸರ ಓಡಾಟ – ಆರ್ಭಟ ಮತ್ತೆ ಹೆಚ್ಚಾಗಿದೆ. ಜನಸಾಮಾನ್ಯರ ಮನದಲ್ಲಿ ಆತಂಕದ ಮೋಡಗಳು ಕವಿಯತೊಡಗಿವೆ. ಈ ಘಟನೆಗೆ ಮಾತ್ರ ಸ್ಪಂದಿಸಿ ಸುಮ್ಮನಾಗದೆ ಈ ಸಮಸ್ಯೆಯ ಅಳ ಅಗಲವನ್ನು ಅವಲೋಕಿಸಿ ದುರಂತ ಪರಂಪರೆಗೆ ಕರ್ನಾಟಕ ಮತ್ತೆ ಜಾರದಂತೆ ನೋಡಿಕೊಳ್ಳುವ ಹೊಣೆ ಎಲ್ಲಾ ಪ್ರಜ್ಞಾವಂತ ನಾಗರೀಕರದಾಗಿದೆ. ಕಾಡಿನಲ್ಲಿ ಪ್ರತ್ಯೇಕವಾಗುಳಿಯದೆ ಜನಚಳವಳಿಗಳ ಮುಖ್ಯ ಧಾರೆಯ ಜೊತೆಗೂಡುವ ಕುರಿತು ಆಲೋಚಿಸಬೇಕಿರುವ ಜವಬ್ದಾರಿ ಕಾಡಿನ ಸಂಗಾತಿಗಳ ಮೇಲೂ ಇದೆ,”

ಈ ಪತ್ರಿಕಾ ಪ್ರಕಟಣೆಯಲ್ಲಿ ಈ ಕೆಳಗಿನ ನಾಲ್ಕು ಮುಖ್ಯ ಅಂಶಗಳನ್ನು ಸರ್ಕಾರದ, ಸಮಾಜದ ಹಾಗೂ ಕಾಡಿನ ಸಂಗಾತಿಗಳ ಮುಂದಿಟಿದ್ದಾರೆ.

ಹೃದಯಹೀನ ಸರ್ಕಾರದ ನೀತಿ:
ಮೊದಲಿಗೆ ಯಾಕಾದರೂ ಕೊಂದಿರಿ? ಎಂದು ಈ ಸರ್ಕಾರವನ್ನು ನಾವೆಲ್ಲರೂ ಕೇಳಲೇಬೇಕಿದೆ. 10 ವರ್ಷ ಕರ್ನಾಟಕ ಶಾಂತವಾಗಿತ್ತು. ವಿಕ್ರಂ ಗೌಡ ಮತ್ತು ತಂಡ ಪೋಲೀಸರ ಮೇಲೇನೂ ದಾಳಿ ಮಾಡಿರಲಿಲ್ಲ, ಯಾರನ್ನೂ ಕೊಂದಿರಲಿಲ್ಲ, ಕನಿಷ್ಟ ಬೆದರಿಸಿಯೂ ಇರಲಿಲ್ಲ, ಏನನ್ನೂ ಸುಟ್ಟಿರಲೂ ಇಲ್ಲ. ಹಾಗಿದ್ದಾಗ ಕೊಲ್ಲುವ ಅಗತ್ಯವಾದರೂ, ತುರ್ತಾದರೂ ಏನಿತ್ತು? ಕಾಡಿನಲ್ಲಿ ಕೆಲವರು ಬಂದಕೂ ಹಿಡಿದು ಓಡಾಡಿದ ಮಾತ್ರಕ್ಕೆ ಅವರನ್ನು ಕೊಂದುಬಿಡಿ ಎಂಬ ಲೈಸೆನ್ಸನ್ನು ನಿಮಗೆ ಕೊಟ್ಟವರು ಯಾರು? ಈ ಪ್ರಶ್ನೆಗಳಿಗೆ ಪೋಲೀಸರು ಮನಸ್ಸಾಕ್ಷಿಯಿಂದ ಉತ್ತರಿಸಬೇಕಿದೆ. ಮುಖ್ಯಮಂತ್ರಿಗಳು, ಸಾಮಾಜಿಕ ವಿಶ್ವಾಸವನ್ನು ಗಳಿಸಿರುವ ನಿವೃತ್ತ ನ್ಯಾಯಾಧೀಶರೊಬ್ಬರ ಮೇಲುಸ್ತುವಾರಿಯಲ್ಲಿ, ಈ ಕೂಡಲೇ ಈ ಇಡೀ ಘಟನೆಯ ಕುರಿತು ಕೂಲಂಕೂಷ ತನಿಖೆಗೆ ಆದೇಶಿಸಲೇಬೇಕಿದೆ.

ಎರಡನೆಯದಾಗಿ “ಸಶಸ್ತ್ರ ಹೋರಾಟ ಬಿಟ್ಟು ಮುಖ್ಯವಾಹಿನಿಗೆ ಮರಳಿ” ಎಂದು ಸರ್ಕಾರ ಕರೆಕೊಟ್ಟಿದ್ದು ನಿಜ. ಆದರೆ ನಿಮ್ಮ ಮಾತಲ್ಲಿ ಯಾಕಾದರೂ ಅವರು ವಿಶ್ವಾಸವಿಡಬೇಕು? ಎಂಬುದನ್ನು ಸರ್ಕಾರ ನೋಡಿಕೊಳ್ಳಬೇಕಿದೆ. ಕರ್ನಾಟಕದ ಪ್ರಜ್ಞಾವಂತ ನಾಗರೀಕರ ಕರೆಗೆ ಓಗೊಟ್ಟು ಹಲವರು 2014-2018 ರ ನಡುವೆ ಮುಖ್ಯವಾಹಿನಿಗೆ ಬಂದರು. ಮೊದಲಿಗೆ ಬಂದ ನಮ್ಮನ್ನು ನಾಗರೀಕ ಸಾಮಾಜ ಅತುಕೊಂಡಿತು. ಹೆಚ್.‌ ಎಸ್.‌ ದೊರೆಸ್ವಾಮಿ, ಎ.ಕೆ. ಸುಬ್ಬಯ್ಯ ಹಾಗೂ ಗೌರಿ ಲಂಕೇಶ್‌ ಅವರಂತಹ ದಿಗ್ಗಜರ ಅಸರೆ ಜೊತೆಗಿತ್ತು. ಹಾಗೂಹೀಗೂ ಮಾಡಿ, ಜೈಲು – ಕೋರ್ಟಿಗೂ ಅಲೆದಾಡಿ, ಬಯಸಿದಂತೆ ನಾವು ಜನಚಳವಳಿಗಳ ಭಾಗವಾದೆವು. ಆದರೆ ನಮ್ಮ ನಂತರ ಬಂದವರ ಕತೆ ಏನಾಗಿದೆ? ಆದಿವಾಸಿ ಯುವತಿ ಕನ್ಯಾಕುಮಾರಿ 8 ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದಾಳೆ. ಆಕೆಯ ಹಸುಗೂಸು 6 ವರ್ಷಗಳ ಕಾಲ ಹೊರಜಗತ್ತನ್ನೂ ನೋಡದೆ ನಾಲ್ಕು ಗೋಡೆಗಳ ನಡುವೆಯೆ ಬಾಲ್ಯ ಕಳೆದು ಈಗ ಹೊರಬಂದಿದೆ. ಆಕೆಯ ಮೇಲೆ ಪೋಲೀಸರು ಹಾಕಿರುವ ಸುಮಾರು 58 ಕೇಸುಗಳಿವೆ. ಅವು ಮುಗಿಯುವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಮತ್ತೊಬ್ಬ ಸಂಗಾತಿ ಪದ್ಮನಾಭರಿಗೆ ಬೇಲ್‌ ಸಿಕ್ಕಿದೆ. ಅದರೆ ಕಳೆದ 8 ವರ್ಷಗಳಿಂದ ಕೋರ್ಟಿಗೆ ಅಲೆಯುವುದೇ ಅವರ ಕೆಲಸವಾಗಿದೆ. ಪ್ರತಿ ಹಿಯರಿಂಗ್‌ ಸಂದರ್ಭದಲ್ಲಿ, ಲಾಯರ್‌ ಗಳಿಗೆ ಕೊಡಲು ಹಣವಿಲ್ಲದೆ ತಲೆತಗ್ಗಿಸಿ ನಿಲ್ಲುವ ಹಿಂಸೆಯನ್ನು ಅವರು ಅನುಭವಿಸಬೇಕಿದೆ. ಹೆಂಡತಿ – ಮಗುವನ್ನು ಸಾಕಲು ಕಣ್ಣೀರು ಸುರಿಸುತ್ತಿದ್ದಾರೆ. ಕೊಪ್ಪದಲ್ಲಿ ಇರುವ ಅವರ ಮನೆಯನ್ನು ಹೋಗಿ ನೋಡಿ. ಪ್ಲಾಸ್ಟಿಕ್‌ ಶೀಟನ್ನು ಕಟ್ಟಿಕೊಂಡು ಬದುಕುತ್ತಿದ್ದಾರೆ. ಅವರಿಗೆ ಒಂದು ಕಾಲು ಇಲ್ಲ. ಕೃತಕ ಕಾಲು ಕಿತ್ತು ಹೋಗಿದೆ. ಅದನ್ನು ರಿಪೇರಿ ಮಾಡಿಸಲೂ ಅವರಿಗೆ ಶಕ್ತಿ ಇಲ್ಲವಾಗಿದೆ. ಮಿಕ್ಕವರದೂ ಹೆಚ್ಚು ಕಡಿಮೆ ಇದೇ ಕಥೆ. ಮುಖ್ಯವಾಹಿನಿಗೆ ಬಂದವರನ್ನು ಹೀಗೆ ನಡೆಸಿಕೊಂಡರೆ ಒಳಗಿರುವವರು ಹೇಗಾದರೂ ಹೊರಬರಲು ಮನಸ್ಸು ಮಾಡುತ್ತಾರೆ?

ಮೂರನೆಯದಾಗಿ ಅನೇಕ ಜನ ಆದಿವಾಸಿ ಯುವಕರು ನಕ್ಸಲ್‌ ಚಳವಳಿಗೆ ಆಕರ್ಶಿತರಾಗಿ ಸಶಸ್ತ್ರ ದಳಗಳನ್ನು ಸೇರುವಂತಹ ಪರಿಸ್ಥಿತಿ ನಿರ್ಮಿಸಿದವರು ಯಾರು? ಈ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಿದೆ. ರಾಷ್ಟ್ರೀಯ ಉದ್ಯಾನವನದ ಹೆಸರಿನಲ್ಲಿ ಕಾಡಿನಲ್ಲಿರುವ ಜನರನ್ನೆಲ್ಲಾ ಖಾಲಿ ಮಾಡಿಸಲು ಹೊರಟ ಸರ್ಕಾರದ ನೀತಿಯೇ ಇದಕ್ಕೆ ಮೂಲ ಕಾರಣ. ಕಾಡಿನ ಜೊತೆ ಬದುಕುತ್ತಿದ್ದವರನ್ನು ಕಾಡಿನಿಂದ ಪ್ರತ್ಯೇಕಿಸಲು ಹೊರಟಿರಿ. ಅವರ ಪ್ರಜಾತಾಂತ್ರಿಕ ಹೋರಾಟಗಳಿಗೆ ಸೊಪ್ಪು ಹಾಕಲಿಲ್ಲ. ಆದಿವಾಸಿಗಳಿಗೆ ಅರಣ್ಯ ಇಲಾಖೆಯಿಂದ ಸತತ ಬೆದರಿಕೆಗಳು, ಧಮಕಿಗಳು. ಹತಾಶರಾದ, ರೊಚ್ಚಿಗೆದ್ದ ಹಲವು ಯುವಕರು ನಕ್ಸಲ್‌ ದಳಗಳಿಗೆ ಸೇರಲು ನೀವೇ ಕಾರಣರಾದಿರಿ. ವಿಕ್ರಂ ಗೌಡರ ಕಥೆಯನ್ನೇ ತೆಗೆದುಕೊಳ್ಳಿ; ಅವರ ಕುಟುಂಬಕ್ಕೆ ಇರುವುದು 14 ಗುಂಟೆ ಜಮೀನು. ಅಂದರೆ ಅರ್ಧ ಎಕರೆಗಿಂತಲೂ ಕಡಿಮೆ. ಈ ಜಾಗವನ್ನು ಸಹ ಖಾಲಿ ಮಾಡಿಸುವ ನೋಟೀಸ್‌ ಬಂದಿದ್ದರಿಂದ ರಾಷ್ಟ್ರೀಯ ಉದ್ಯೋನ ಯೋಜನೆಯ ವಿರುದ್ಧದ ಹೋರಾಟಕ್ಕೆ ಬಂದವರು ವಿಕ್ರಂ ಗೌಡ. 1998 ರಿಂದ 2004 ರ ತನಕ ಈ ಭಾಗದಲ್ಲಿ ನಡೆದ ಎಲ್ಲಾ ಪ್ರಜಾತಾಂತ್ರಿಕ ಹೋರಾಟದಲ್ಲಿ ಕರ್ನಾಟಕ ವಿಮೋಚನಾ ರಂಗದ ಭಾಗವಾಗಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಅವರನ್ನು, ಅವರ ಕುಟುಂಬದವರನ್ನು ಅರಣ್ಯ ಇಲಾಖೆಯವರು ಮತ್ತು ಪೋಲೀಸರು ಕಾಡಿದ್ದು ಅಷ್ಟಿಷ್ಟಲ್ಲ. 2003 ರಲ್ಲಿ ಹೆಬ್ರಿ ಬಳಿಯೇ ಪಾರ್ವತಿ ಮತ್ತು ಹಾಜಿಮಾ ಹತ್ಯೆ ನಡೆಯಿತು. ಇದಾದ ನಂತರ ಪೋಲೀಸರು ವಿಕ್ರಂ ಗೌಡ ಮತ್ತು ಗೆಳೆಯರ ಬದುಕನ್ನು ನರಕ ಮಾಡಿಟ್ಟರು. ಪೋಲೀಸ್‌ ಠಾಣೆಗೆ ಎಳೆದೊಯ್ದು ಟಾರ್ಚರ್‌ ಸಹ ನೀಡಿದರು. ಏನೇ ಘಟನೆ ನಡೆದರೂ ಎಳೆದೊಯ್ಯುತ್ತಿದ್ದರು. ವಿಚಾರಣೆ ಹೆಸರಲ್ಲಿ ಥಳಿತ, ಅವಮಾನ. ನೆಮ್ಮದಿಯಿಂದ ಬದುಕುವ ದಾರಿಕಾಣದೆ ಅಮಾಯಕ ಆದಿವಾಸಿ ಯುವಕ ಸಶಸ್ತ್ರ ದಳದ ಸಾಮಾನ್ಯ ಸದಸ್ಯನಾದ. ನೀವು ಆತನನ್ನು ದೊಡ್ಡ ನಕ್ಸಲೈಟ್‌ ನಾಯಕ ಎಂಬಂತೆ ಬಿಂಬಿಸಿಬಿಟ್ಟಿರಿ. ಸುಮಾರು ಸುಳ್ಳು ಕೇಸುಗಳನ್ನು ಜಡಿದುಬಿಟ್ಟಿರಿ. ಕೊನೆಗೆ ಕೊಂದೇಬಿಟ್ಟಿರಿ. ಈಗ ಒತ್ತುವರಿ ತೆರವು ಹೆಸರಲ್ಲಿ ಮತ್ತೆ ಅರಣ್ಯವಾಸಿಗಳನ್ನು ಕಾಡತೊಡಗಿದ್ದೀರಿ. ಇದು ಹೀಗೆ ಮುಂದುವರೆದರೆ ಇನ್ನೂ ಕೆಲ ಯುವಕ ಯುವತಿಯರು ಕಾಡಿನ ಪಾಲಾದರೆ ಆಶ್ಚರ್ಯವಿಲ್ಲ. ಅದಕ್ಕೆ ಹೊಣೆ ಸರ್ಕಾರದ ಈ ಹೃದಯಹೀನ, ಬಂಡವಾಳಿಗರ ಪರ, ಜನ ವಿರೋದಿ ನೀತಿಗಳೇ ಕಾರಣವಾಗಲಿವೆ.

ಆತ್ಮಸಾಕ್ಷಿ ಇದ್ದರೆ ಸರ್ಕಾರ ಈಗಲಾದರೂ ಆತ್ಮಾವಲೋಕನ ಮಾಡಿಕೊಳ್ಳಲಿ.

ಕ್ರಾಂತಿಯ ಅಪ್ರಯೋಗಿಕ ಹಾದಿ:
ಭೂಮಾಲೀಕ ವ್ಯವಸ್ಥೆಯ ವಿರುದ್ಧ ಸಿಡಿದ ಬಂಡಾಯವೇ ನಕ್ಸಲ್‌ ಚಳವಳಿ. ಚೀನಾದ ಹಾದಿಯಲ್ಲಿ ಸುದೀರ್ಘ ಪ್ರಜಾ ಸಮರ ನಡೆಸಿ ದೇಶದಲ್ಲಿ ಕ್ರಾಂತಿ ಸಾಧಿಸಬೇಕು, ಸಮಾಜವನ್ನು ನವ ಪ್ರಜಾತಾಂತ್ರಿಕ ವ್ಯವಸ್ಥೆಯಾಗಿ ಮಾರ್ಪಡಿಸಬೇಕು ಎಂಬ ದೃಷ್ಟಿಕೋನವನ್ನಿಟ್ಟುಕೊಂಡು ಕಳೆದ 67 ವರ್ಷಗಳಿಂದ ನಕ್ಸಲ್‌ ಚಳವಳಿ ದೇಶದ ಹಲವು ಭಾಗಗಳಲ್ಲಿ ನಡೆಯುತ್ತಿದೆ. ಅನೇಕ ಏಳುಬೀಳುಗಳನ್ನು ಕಂಡಿದೆ, ಅಪಾರ ಸಾವುನೋವಿಗೆ ಗುರಿಯಾಗಿದೆ. ಅನೇಕ ಬಲಿದಾನಗಳನ್ನು ಮಾಡಿದ್ದರೂ ದೇಶದ ಮುಖ್ಯವಾಹಿನಿ ಹೋರಾಟವಾಗುವುದರಲ್ಲಿ ವಿಫಲಗೊಂಡಿದೆ. ಇಂದು ಭಾರತದ ಕೆಲವು ಅರಣ್ಯ ಪ್ರದೇಶಗಳಿಗೆ ಮಾತ್ರ ಸೀಮಿತಗೊಂಡಿದೆ. ದೇಶದಲ್ಲಿ ನಡೆಯುತ್ತಿರುವ ಜನಚಳವಳಿಗಳಿಂದ ಸಂಬಂಧ ಕಳೆದುಕೊಂಡು ಅಕ್ಷರಶಃ ಕಾಡುಪಾಲಾಗಿದೆ. ಇದೊಂದು ವಿಷಾದಮಯ ವಾಸ್ತವವೇ ಹೌದು.

ಕರ್ನಾಟಕದಲ್ಲೂ 1987 ರಿಂದ ಪ್ರಾರಂಭಿಸಿ ಇಲ್ಲಿಯೂ ಸಶಸ್ತ್ರ ಚಳವಳಿ ಬೆಳೆಸಬೇಕು ಎಂಬ ಆಲೋಚನೆಯಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿದೆ. ಹೈದ್ರಬಾದ್‌ ಕರ್ನಾಟಕ ಭಾಗದಲ್ಲಿ ನಡೆದ ಮೊದಲ ಪ್ರಯತ್ನಗಳು ಘೋರ ವೈಫಲ್ಯದಲ್ಲಿ ಕೊನೆಗೊಂಡವು. ಅಲ್ಲಿ ನೆಲೆ ನಿಲ್ಲಲು ಸಾಧ್ಯವಾಗದೆ ಮಲೆನಾಡಿಗೆ ಸ್ಥಳಾಂತರಗೊಳ್ಳುವ ತೀರ್ಮಾನವಾದಾಗ “ವೈಫಲ್ಯಳಿಂದ ಪಾಠಗಳಿಂದ ಕಲಿತು ಹೊಸ ಹಾದಿಯ ಆವಿಷ್ಕಾರ ಮಾಡಬೇಕು. ಹಳೆ ಜಾಡಿನಲ್ಲೇ ಸಾಗಬಾರದು” ಎಂದು ನಮ್ಮಲ್ಲಿನ ಹಲವರು ಗಟ್ಟಿಯಾಗಿ ಪ್ರತಿಪಾದಿಸಿದೆವು. “ಇಂದು ಅಗತ್ಯವಿರುವುದು ವಿಶಾಲ ಜನಚಳವಳಿಯನ್ನು ಕಟ್ಟುವ ಅಗತ್ಯ.. ಎಲ್ಲಾ ಹೋರಾಟನಿರತ ಶಕ್ತಿಗಳು ಜೊತೆಗೂಡಿ ಆಳುವವರನ್ನು ಪ್ರಶ್ನಿಸುವ, ಅವರ ಜನ ವಿರೋಧಿ ನಡೆಗಳನ್ನು ಖಂಡಿಸುವ, ಬದಲಾವಣೆಗೆ ದಾರಿ ಮಾಡುವ ಮಹಾಶಕ್ತಿಯಾಗಬೇಕು. ಈ ಕಾಲದ ಕರ್ತವ್ಯಕ್ಕೆ ನಮ್ಮ ಕೊಡುಗೆಯನ್ನೂ ನೀಡಲು ನಾವು ಮುಂದಾಗಬೇಕು” ಎಂದು ಬಲವಾದ ವಾದ ಮಂಡಿಸಿದೆವು. ಆದರೆ ಮಾವೋವಾದಿ ಪಕ್ಷದ ನಾಯಕತ್ವ ಇದಕ್ಕೆ ಒಪ್ಪಲು ತಯಾರಿರಲಿಲ್ಲ. ಯಾಂತ್ರಿಕವಾಗಿ, ಒಮ್ಮುಖವಾಗಿ ಸಶಸ್ತ್ರ ಹೋರಾಟವನ್ನು ಕಟ್ಟುವ ದುಸ್ಸಾಹಸಕ್ಕೆ ಇಳಿಯಿತು. ಈ ಪಥವನ್ನು ಪ್ರತಿಪಾದಿಸಿದ ಸಾಕೇತ್‌ ರಾಜನ್‌ ಅವರನ್ನೂ ಒಳಗೊಂಡತೆ ಅನೇಕ ಅಮೂಲ್ಯ ಸಂಗಾತಿಗಳು ಬಲಿಯಾದರು. ಹೊಸ ಹಾದಿಯನ್ನು ಕಂಡುಕೊಳ್ಳಲೇಬೇಕು ಎಂದು ದೃಡ ತೀರ್ಮಾನ ಮಾಡಿ, ನಾವುಗಳು ಹೊರಬಂದೆವು. ಪ್ರಜಾ ಚಳವಳಿಗಳ ಭಾಗವಾಗಿ ನಮ್ಮ ಸೇವೆಯನ್ನು ಸಂಪೂರ್ಣ ಬದ್ಧತೆಯ ಜೊತೆ ಮಾಡುತ್ತಿದ್ದೇವೆ. ಕರ್ನಾಟಕದ ನಾಗರೀಕ ಸಮಾಜವೂ ನಮ್ಮನ್ನು ಅಷ್ಟೇ ಆದರದ ಜೊತೆ ಬರಮಾಡಿಕೊಂಡಿದೆ, ಜೊತೆಗೂಡಿಸಿಕೊಂಡಿದೆ. ಅದಕ್ಕೆ ನಾವು ರುಣಿಗಳಾಗಿದ್ದೇವೆ. ಇಂದು ಈ ದಾರಿಯೇ ಸರಿಯಾದುದು ಎಂಬುದು ನಮ್ಮ ಈ 10 ವರ್ಷದ ಅನುಭವ ನಿಚ್ಚಳವಾಗಿ ಸಾಬೀತುಪಡಿಸಿದೆ. ಕಲಿಯುವುದು ಸಾಕಷ್ಟಿದೆ, ಕಲಿಯುತ್ತಾ ಕಲಿಯುತ್ತಾ ಮೂಲಭೂತ ಬದಲಾವಣೆಯನ್ನು ಕಂಡುಕೊಳ್ಳಬೇಕಿದೆ

ವಾಸ್ತವದ ಈ ಅರಿವು ನಮಗೆ ಮಾತ್ರವಲ್ಲದೆ ಅನೇಕ ನಕ್ಸಲ್‌ ಪಂಥಗಳಲ್ಲಿ ಬರತೊಡಗಿದೆ. ಸಿದ್ದಸೂತ್ರಗಳನ್ನು ಕೈ ಬಿಟ್ಟು ಹೊಸ ಸಂದರ್ಭಕ್ಕೆ ಹೊರಳಿಕೊಳ್ಳುವ ಪ್ರಯತ್ನವನ್ನು ಎಲ್ಲರೂ ತಮ್ಮ ತಮ್ಮದೇ ರೀತಿಯಲ್ಲಿ ಮಾಡುತ್ತಿದ್ದಾರೆ. ಆದರೆ ಮಾವೋವಾದಿ ಪಕ್ಷ ಮಾತ್ರ ಮೊಂಡಾಗಿ ಹಳೆ ಪಥಕ್ಕೇ ಅಂಟಿಕೊಂಡು ಪೆಟ್ಟು ತಿಂದ ಹಾದಿಯಲ್ಲೇ ಮತ್ತೆ ಮತ್ತೆ ನಡಿಯುತ್ತಿದೆ. ಅದರ ಈ ಮೊಂಡು ನಡೆ ಅನೇಕ ಬದ್ಧತೆಯುಳ್ಳ ಹೋರಾಟಗಾರರ ಬದುಕು ಹಾಗೂ ಸಾಮರ್ಥ್ಯವನ್ನು ನುಂಗಿಹಾಕುತ್ತಿದೆ. ವಿಕ್ರಂ ಗೌಡ ಮತ್ತು ಈ ಹಿಂದಿನ ಹಲವು ಅಮಾಯಕ ಸಂಗಾತಿಗಳ ಸಾವಿಗೆ ಈ ತಪ್ಪು ಕ್ರಾಂತಿಕಾರಿ ಹಾದಿಯೂ ಹೊಣೆಯಾಗಿದೆ.

ಕ್ರಾಂತಿಯ ಗುರಿ ಸರಿ ಇದ್ದರೆ ಸಾಲದು, ದಾರಿಯೂ ಸರಿ ಇರಬೇಕು. ತಪ್ಪು ದಾರಿ ಗುರಿಯ ಕಡೆಗೆ ಕೊಂಡೊಯ್ಯಲು ಸಾಧ್ಯವೇ ಇಲ್ಲ. ದಾರಿಯ ಕುರಿತು ಮರು ಆಲೋಚನೆ ಮಾಡಲೇಬೇಕಾದ್ದು ಪ್ರತಿಯೊಬ್ಬ ಕ್ರಾಂತಿಕಾರಿಯ ಆಧ್ಯ ಕರ್ತವ್ಯವಾಗಿದೆ.

ನಾಗರೀಕರಾಗಿ ನಮ್ಮ ಹೊಣೆ:
ಕಳೆದ 50 ವರ್ಷಗಳಲ್ಲಿ ಕರ್ನಾಟಕವನ್ನು ಅನೇಕ ಪ್ರಖರ ಜನಚಳವಳಿಗಳು ಮುನ್ನಡೆಸಿಕೊಂಡು ಬಂದಿವೆ. ಅದರಲ್ಲಿ ದೊಡ್ಡ ಮಟ್ಟಕ್ಕೆ ಅಲ್ಲದಿದ್ದರೂ ಸಣ್ಣ ಮಟ್ಟಕ್ಕೆ ನಕ್ಸಲ್‌ ಚಳವಳಿಯ ಕೊಡುಗೆಯೂ ಇದೆ. ಇಂದು ಎಲ್ಲಾ ಚಳವಳಿಗಳ ದಾರೆಗಳು ಒಂದುಗೂಡಿ ಸಮಾಜದ ಸಾಕ್ಷಿ ಪ್ರಜ್ಞೆಯಾಗುವ ದಿಕ್ಕಿನತ್ತ ಮುಖಮಾಡಿವೆ. ಒಂದು ದಶಕದ ಹಿಂದೆ ಒಡೆದು ನುಚ್ಚುನೂರಾಗಿದ್ದ ರೈತ, ದಲಿತ, ಕಮ್ಯುನಿಸ್ಟ್‌ ಮುಂತಾದ ಜನ ಚಳವಳಿಗಳು ಆದ ತಪ್ಪನ್ನು ಅರಿತುಕೊಂಡು ಒಗ್ಗಟ್ಟಿನತ್ತ ಮುಖಮಾಡಿವೆ. ಎಲ್ಲಾ ಜನ ವರ್ಗಗಳನ್ನು ಒಟ್ಟುಗೂಡಿಸಿಕೊಂಡು ಮುಂದೆ ಸಾಗುವ ಹೊಸ ಪರಂಪರೆಯನ್ನು ಹುಟ್ಟುಹಾಕುತ್ತಿವೆ. ಕರ್ನಾಟಕದಲ್ಲಿ ನಾಗರೀಕ ಸಂಘಟನೆಗಳು ಜೊತೆಗೂಡಿ ಕೆಲಸ ಮಾಡುತ್ತಿರುವ ಪ್ರಬುದ್ಧ ಬಗೆಯನ್ನು ಇತರೆ ರಾಜ್ಯದ ಜನರು ಮೆಚ್ಚಿ ಅನುಸರಿಸುವಂತಹ ಸಂದರ್ಭ ಏರ್ಪಟ್ಟಿದೆ. ಸಂವಿಧಾನ ವಿರೋಧಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಇಳಿಸುವುದರಲ್ಲೂ, ಕಾಂಗ್ರೆಸ್‌ ಪಕ್ಷದೆ ಬಗ್ಗೆ ವಿಮರ್ಶೆ ಇಟ್ಟುಕೊಳ್ಳುತ್ತಲೇ ಅವರನ್ನು ಅಧಿಕಾರಕ್ಕೆ ತರುವುದರಲ್ಲೂ ಕರ್ನಾಟಕದ ನಾಗರೀಕ ಸಮಾಜದ ಗಮನಾರ್ಹ ಪಾತ್ರವಿದೆ. ಈಗ ಅಧಿಕಾರಕ್ಕೆ ಬಂದವರನ್ನು ಪ್ರಶ್ನಿಸುವ ದೊಡ್ಡ ಜವಬ್ದಾರಿ ನಮ್ಮೆಲ್ಲರದಾಗಿದೆ. ಕೇವಲ ಎನ್ಕೌಂಟರ್‌ ವಿಚಾರಕ್ಕೆ ಮಾತ್ರವಲ್ಲ ಈ ಸರ್ಕಾರ ತೆಗೆದುಕೊಳ್ಳುತ್ತಿರುವ ಜನ ವಿರೋಧಿ ನೀತಿಗಳನ್ನೆಲ್ಲಾ ನಾವು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲೇಬೇಕಿದೆ. ಕರ್ನಾಟಕದ ಪೋಲೀಸ್‌ ಇಲಾಖೆಯಂತೂ ಹೆಚ್ಚಿನ ಪಾಲು ಅಮಿತ್‌ ಶಾ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಗೃಹ ಮಂತ್ರಿಗಾಗಲೀ, ಮುಖ್ಯಮಂತ್ರಿಗಾಗಲೇ ಅದರ ಮೇಲೆ ಹಿಡಿತ ಇಲ್ಲವಾಗಿದೆ. ಈ ವಿಚಾರದಲ್ಲಂತೂ ಬಿಜೆಪಿಗೂ ಕಾಂಗ್ರೆಸ್ಸಿಗೂ ಹೆಚ್ಚು ವೆತ್ಯಾಸವೇ ಇಲ್ಲದಂತಾಗಿದೆ. ಬಿಜೆಪಿಯನ್ನು ತಡೆಯಲೇಬೇಕಿತ್ತು ತಡೆದಿದ್ದೇವೆ. ಈಗ ಕಾಂಗ್ರೆಸ್ಸನ್ನು ತಿದ್ದಲೇಬೇಕು, ತರಾಟೆಗೆ ತೆಗೆದುಕೊಳ್ಳಲೇಬೇಕು. ಈ ಜವಬ್ದಾರಿಯನ್ನೂ ನಾವು ಅಷ್ಟೇ ಹೊಣೆಗಾರಿಕೆಯ ಜೊತೆ ನಿಭಾಯಿಸಬೇಕಿದೆ.

ಕಾಡಿನ ಸಂಗಾತಿಗಳಲ್ಲಿ ಮರುಮನವಿ:
ಸಂಗಾತಿಗಳೇ, ನಿಮ್ಮ ಬದ್ಧತೆಯ ಬಗ್ಗೆ, ನೀವು ಕಾಣುತ್ತಿರುವ ಕ್ರಾಂತಿಯ ಕನಸಿನ ಬಗ್ಗೆ, ನೀವು ಅನುಭವಿಸಿರುವ ಕಷ್ಟ ನಷ್ಟಗಳ ಬಗ್ಗೆ ಅರಿವಿದೆ. ಕಾಳಜಿ ಮತ್ತು ಗೌರವವೂ ಇದೆ. ಈ ಪರಿಸ್ಥಿತಿಯನ್ನು ನಿರ್ಮಿಸಿದ ಸರ್ಕಾರಗಳ ನೀತಿ ಮತ್ತು ನಡತೆಯ ಬಗ್ಗೆ ಅಪಾರ ಆಕ್ರೋಶ ನಮಗೂ ಇದೆ. ಮುಖ್ಯವಾಹಿನಿಗೆ ಬಂದವರನ್ನು ಘನತೆಯಿಂದ ನಡೆಸಿಕೊಂಡಿಲ್ಲ ಎಂಬ ವಾಸ್ತವವೂ ನಮ್ಮ ಕಣ್ಣ ಮುಂದಿದೆ. ಆದರೂ ಇದಕ್ಕಿಂತ ಮಿಗಿಲಾದ ಸಾಮಾಜಿಕ ಜವಬ್ದಾರಿ ನಮ್ಮೆಲ್ಲರ ಮೇಲಿದೆ. ನಿಮ್ಮುಗಳ ಮೇಲೂ ಇದೆ. ಎಲ್ಲರೂ ಸೇರಿ ಕರ್ನಾಟಕದಲ್ಲಿ ಪ್ರಬಲವಾದ ಜನಾಂದೋಲನ ಕಟ್ಟೋಣ. ಈ ನಾಡು, ಈ ದೇಶ ನಿಜವಾದ ಅರ್ಥದಲ್ಲಿ ಜನತೆಯದಾಗುವ ತನಕ ಒಡಗೂಡಿ ಅಷ್ಟೇ ಬದ್ಧತೆಯ ಜೊತೆ ಹೋರಾಡೋಣ. ದಯವಿಟ್ಟು ನಮ್ಮ ಈ ಮನವಿಯನ್ನು ಕರ್ನಾಟಕದ ಸಮಸ್ತ ಜನಪರ ಚಳವಳಿಗಳ ಮನವಿ ಎಂದು ಭಾವಿಸಿ. ಎಲ್ಲರೂ ಏನು ಬಯಸುತ್ತಿದ್ದಾರೆ ಎಂಬ ಅರಿವು ನಮಗಿರುವುದರಿಂದ ವಿಶ್ವಾಸದ ಜೊತೆ ಈ ಮಾತನ್ನು ಹೇಳುತ್ತಿದ್ದೇವೆ. ನೀವು ಗಟ್ಟಿ ತೀರ್ಮಾನ ತೆಗೆದುಕೊಳ್ಳುವ ಧೈರ್ಯ ಮಾಡಿದರೆ ಕರ್ನಾಟಕದ ನಾಗರೀಕ ಸಮಾಜ ನಮ್ಮ ಜೊತೆ ನಿಂತಂತೆ ನಿಮ್ಮ ಜೊತೆಯೂ ನಿಲ್ಲುತ್ತದೆ ಎಂಬ ವಿಶ್ವಾಸ ನಮಗಿದೆ. ಇದು ಸಕಾಲ. ದಯವಿಟ್ಟು ಮರು ಆಲೋಚನೆ ಮಾಡಿ ಎಂದು ಮತ್ತೊಮ್ಮೆ ಮನವಿ ಮಾಡುತ್ತಿದ್ದೇವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page