ಧಾರವಾಡ/ರಾಯಚೂರು/ಕಾರವಾರ: ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಭಾನುವಾರ ಸಂಜೆ ಭೀಕರ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮುಂಗಾರು ಪೂರ್ವ ಮಳೆ ಅಬ್ಬರಿಸಿದ್ದು, ವಿವಿಧೆಡೆ ಸಿಡಿಲು ಬಡಿದು ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಮತ್ತು ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಅವಧಿಯ ಮಳೆಯು ಒಣಹವೆಯಿಂದ ಕಂಗಾಲಾಗಿದ್ದ ಜನರಿಗೆ ತಂಪೆರೆದಿದೆಯಾದರೂ, ಸಾರ್ವಜನಿಕ ಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಸಂಜೆ 4 ಗಂಟೆಯಿಂದ ಆರಂಭವಾದ ಭಾರಿ ಮಳೆ ಎರಡು ಗಂಟೆಗಳ ಕಾಲ ಸತತವಾಗಿ ಸುರಿಯಿತು. ಧಾರವಾಡದ ಹೊರವಲಯದ ಕಳಗೇರಿ ಗ್ರಾಮದಲ್ಲಿ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಜಯಶ್ರೀ ಶಿರಸಂಗಿ (29) ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರ ಪತಿ ಹನುಮಂತಪ್ಪ ಶಿರಸಂಗಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿಯ ಇಂದಿರಾ ಗ್ಲಾಸ್ ಹೌಸ್ ರಸ್ತೆ ಸೇರಿದಂತೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಚರಂಡಿ ನೀರು ಅಂಗಡಿ-ಮುಂಗಟ್ಟು ಹಾಗೂ ಮನೆಗಳಿಗೆ ನುಗ್ಗಿದೆ.
ಗದಗ-ಬೆಟಗೇರಿ ಮತ್ತು ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಮರಗಳು ಉರುಳಿ ಬಿದ್ದು ಮನೆ ಮುಂದೆ ನಿಲ್ಲಿಸಿದ್ದ ಹಲವು ಬೈಕ್ ಹಾಗೂ ಕಾರುಗಳು ಜಖಂಗೊಂಡಿವೆ. ಗದಗ ತಾಲೂಕಿನ ಕುರ್ತಕೋಟಿ, ಶಿಗೋಟಿ, ದುಂದುರ ಮತ್ತು ಹುಲಕೋಟಿ ಗ್ರಾಮಗಳ ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ. ಗಜೇಂದ್ರಗಡ-ನರೇಗಲ್ ರಸ್ತೆಯ ಗದ್ದಿಹಾಳ್ ಹಳ್ಳದ ಬಳಿ ಪವನ ವಿದ್ಯುತ್ ಗೋಪುರ (ವಿಂಡ್ ಟರ್ಬೈನ್ ಟವರ್) ರಸ್ತೆಗೆ ಉರುಳಿ ಬಿದ್ದಿದ್ದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು.
ಕಲ್ಯಾಣ ಕರ್ನಾಟಕದ ಭಾಗದಲ್ಲೂ ಭಾನುವಾರ ಭಾರಿ ಮಳೆಯಾಗಿದ್ದು, ರಾಯಚೂರು ಜಿಲ್ಲೆಯ ಮುದ್ಗಲ್ ಸಮೀಪದ ಕೋಮಲಾಪುರ ಗ್ರಾಮದಲ್ಲಿ ಕರಿಯಪ್ಪ ಅಯ್ಯಪ್ಪ ಗಣಕಿಹಾಳ (48) ಎಂಬುವವರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ ಮತ್ತು ಬಸವರಾಜ ಎಂಬುವವರು ಗಾಯಗೊಂಡಿದ್ದಾರೆ. ಸಿಡಿಲಿನ ಜಿಂಕೆಗೆ ರೈತರೊಬ್ಬರ ಒಣಹುಲ್ಲಿನ ಮೇವು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಮುದ್ಗಲ್ ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಂದು ಡಜನ್‌ಗೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜೇವರ್ಗಿ ತಾಲೂಕು ಕ್ರೀಡಾಂಗಣದ ಗ್ಯಾಲರಿಯ ಒಂದು ಭಾಗ ಬಿರುಗಾಳಿ ಮಳೆಗೆ ಕುಸಿದು ಬಿದ್ದಿದೆ.
ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದ ಭಟ್ಕಳ ಮತ್ತು ಹೊನ್ನಾವರದಲ್ಲಿ ಗುಡುಗು ಸಹಿತ ತೀವ್ರ ಮಳೆಯಾಗಿದೆ. ಹೊನ್ನಾವರದ ಅಪ್ಸರಕೊಂಡ ಬೀಚ್ ಸಮೀಪ ಮೀನುಗಾರಿಕೆ ನಡೆಸುತ್ತಿದ್ದ ವಿನಾಯಕ ಖಾರ್ವಿ (38) ಎಂಬ ಮೀನುಗಾರ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಬೀಚ್‌ನಲ್ಲಿದ್ದ ಇಬ್ಬರು ಪ್ರವಾಸಿಗರಿಗೂ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ. ಭಟ್ಕಳ ತಾಲೂಕಿನ ಮುಡಶಿರಾಲಿಯಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ 35 ವರ್ಷದ ವ್ಯಕ್ತಿಯ ಮೇಲೆ ವಿದ್ಯುತ್ ಕಂಬ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಂಡೇಲಿ, ಜೊಯಿಡಾ ಮತ್ತು ಮುಂಡಗೋಡಿನಲ್ಲಿ ಭಾರಿ ಮಳೆಯಾಗಿದ್ದು, ಮರ ಬಿದ್ದು ಹಲವು ಮನೆಗಳಿಗೆ ಹಾನಿಯಾಗಿದೆ.
ಇನ್ನುಳಿದಂತೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಶನಿವಾರ ರಾತ್ರಿ ಸುರಿದ ಮಳೆಗೆ ಭತ್ತ, ಪಪ್ಪಾಯಿ ಮತ್ತು ಅಡಿಕೆ ಸೇರಿದಂತೆ ಸುಮಾರು 622 ಎಕರೆ ಪ್ರದೇಶದ ಬೆಳೆ ನಾಶವಾಗಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆ ಬಳಿಯ ರಾಘವೇಂದ್ರಸ್ವಾಮಿ ದೇವಸ್ಥಾನ ಜಲಾವೃತಗೊಂಡಿದೆ. ರಿಪ್ಪನ್‌ಪೇಟೆಯ ಸರ್ಕಾರಿ ಪಿಯು ಕಾಲೇಜಿನ ಸಭಾಂಗಣದ ಮೇಲ್ಛಾವಣಿಯ ಶೀಟ್‌ಗಳು ಗಾಳಿಗೆ ಹಾರಿಹೋಗಿವೆ. ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ಮೂರು ದಿನಗಳ ಕಾಲ ಮುಂಗಾರು ಪೂರ್ವ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
