ಕಲ್ಲಕುರಿಚಿ: ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಪೊಂಗಲ್ ಹಬ್ಬದ ಸಂಭ್ರಮದ ವೇಳೆ ಭಾರೀ ದುರಂತವೊಂದು ಸಂಭವಿಸಿದೆ. ಬಲೂನ್‌ಗಳಿಗೆ ಗಾಳಿ ತುಂಬಲು ಬಳಸುತ್ತಿದ್ದ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮೂವರು ಮೃತಪಟ್ಟಿದ್ದು, 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಿಲ್ಲೆಯ ಮನಾಲುರ್‌ಪೆಟ್ಟೈನಲ್ಲಿ ಸೋಮವಾರ ರಾತ್ರಿ 7:30ರ ಸುಮಾರಿಗೆ ಈ ಘಟನೆ ನಡೆದಿದೆ. ಐದು ದಿನಗಳ ಪೊಂಗಲ್ ಆಚರಣೆಯ ಮುಕ್ತಾಯದ ಅಂಗವಾಗಿ ಆಯೋಜಿಸಲಾಗಿದ್ದ ನದಿ ಉತ್ಸವದಲ್ಲಿ (River Festival) ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಉತ್ಸವ ಮುಗಿಯುವ ಹಂತದಲ್ಲಿದ್ದಾಗ ಮತ್ತು ಜನರು ಮನೆಗೆ ಮರಳುತ್ತಿದ್ದ ಸಮಯದಲ್ಲಿ, ವೇದಿಕೆಯ ಸಮೀಪವಿದ್ದ ಗ್ಯಾಸ್ ಸಿಲಿಂಡರ್ ಹಠಾತ್ ಸ್ಫೋಟಗೊಂಡಿದೆ.
ಸ್ಫೋಟದ ತೀವ್ರತೆಗೆ ಸ್ಥಳದಲ್ಲಿ ಭೀಕರ ವಾತಾವರಣ ನಿರ್ಮಾಣವಾಗಿತ್ತು. ಕಲಾ (50) ಎಂಬ ಮಹಿಳೆ ಸ್ಫೋಟದ ರಭಸಕ್ಕೆ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಲಿಂಡರ್ ಸಮೀಪದಲ್ಲಿದ್ದವರೇ ಸ್ಫೋಟಕ್ಕೆ ನೇರವಾಗಿ ತುತ್ತಾಗಿದ್ದಾರೆ. ಗಾಯಾಳುಗಳನ್ನು ತಿರುವಣ್ಣಾಮಲೈ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಅರವಿಂದ್ ಮತ್ತು ಜಿಲ್ಲಾಧಿಕಾರಿ ಎಂ.ಎಸ್. ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡ 10 ಮಂದಿಯಲ್ಲಿ ಆರು ಜನರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಲ್ಲಿ ಒಬ್ಬ ಬಾಲಕ ಹಾಗೂ ಸಿಲಿಂಡರ್ ಆಪರೇಟರ್ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
