Wednesday, March 12, 2025

ಸತ್ಯ | ನ್ಯಾಯ |ಧರ್ಮ

ಅವಳ ಹೆಜ್ಜೆ ಕಿರುಚಿತ್ರೋತ್ಸವ: ಕಿರುಚಿತ್ರಗಳಿಗೆ ಮತ್ತು ಕಿರು ಚಿತ್ರಕತೆಗಳಿಗೆ ಆಹ್ವಾನ  

 ಬೆಂಗಳೂರು: ಮಹಿಳಾ ಸಮಾನತೆ ಕುರಿತು ಪ್ರತಿ ವರ್ಷ  ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಗುಬ್ಬಿವಾಣಿ ಟ್ರಸ್ಟ್‌ ʼಅವಳ ಹೆಜ್ಜೆʼ ಘೋಷವಾಕ್ಯದೊಂದಿಗೆ ಈ ವರ್ಷ ಜೂನ್‌ ನಲ್ಲಿ ಕಿರು ಚಿತ್ರೋತ್ಸವ ಹಮ್ಮಿಕೊಳ್ಳಲಿದ್ದು, ಚಿತ್ರೋತ್ಸವಕ್ಕೆ ಮಹಿಳಾ ಸಮಾನತೆ ವಿಷಯದ ಕಿರು ಚಿತ್ರಗಳನ್ನು ಅಹ್ವಾನಿಸಿದೆ.

“ಅವಳ ಹೆಜ್ಜೆ” – ಹೆಣ್ಣಿನ ಹೆಜ್ಜೆಗುರುತು ಆಟದ ಮೈದಾನದಿಂದ ಬೋರ್ಡ್ ರೂಂವರೆಗೂ ಎಲ್ಲೆಡೆ ಕಾಣುವ ಆಶಯದೊಂದಿಗೆ ಆರಂಭಿಸಿದ ಸಾಮಾಜಿಕ ಸಂಕಲ್ಪ. ಕಳೆದ ಎಂಟು ವರ್ಷಗಳಲ್ಲಿ ಅವಳ ಹೆಜ್ಜೆ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಈ ವರ್ಷ ‘ಅವಳ ಹೆಜ್ಜೆ’ ಕಿರು ಚಲನಚಿತ್ರೋತ್ಸವ ಮತ್ತು ಸ್ಪರ್ಧೆಯನ್ನು ಏರ್ಪಡಿಸುವುದರ ಮೂಲಕ ಒಂದು ಪ್ರಮುಖ ಹೆಜ್ಜೆಯನ್ನು ಇಡುತ್ತಿದೆ.ಈ ಮೂಲಕ ಕನ್ನಡದ ಮಹಿಳೆಯರ ಅನುಭವ ಮತ್ತು ದೃಷ್ಟಿಕೋನಗಳಿಗೆ ವೇದಿಕೆ ಸೃಷ್ಟಿಸುವುದು ನಮ್ಮ ಉದ್ದೇಶ ಎಂದು ಟ್ರಸ್ಟ್‌ ನಿರ್ದೇಶಕಿ ಶಾಂತಲಾ ದಾಮ್ಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅತ್ಯುತ್ತಮ ಕಿರುಚಿತ್ರಕ್ಕೆ “ಅವಳ ಹೆಜ್ಜೆ ಬಹುಮಾನ” ₹1,00,000 (ಒಂದು ಲಕ್ಷ) ಪಡೆಯುವ ಅವಕಾಶವಿದೆ. ಜೊತೆಗೆ, ಈ ಕೆಳಗಿನ ವಿಶೇಷ ವರ್ಗಗಳಲ್ಲಿ ತಲಾ ಒಂದು ಚಿತ್ರಕ್ಕೆ ಮೆಚ್ಚುಗೆಯ ಬಹುಮಾನ ₹10,000 (ಹತ್ತು ಸಾವಿರ) ಪಡೆಯುವ ಅವಕಾಶವಿದೆ.

– ಅತ್ಯುತ್ತಮ ಜೀವನಚರಿತ್ರೆಯ ಚಿತ್ರ

– ಅತ್ಯುತ್ತಮ ಅನಿಮೇಶನ್ ಚಿತ್ರ

– ಅತ್ಯುತ್ತಮ ಮಕ್ಕಳ ಚಲನಚಿತ್ರ

– ಅತ್ಯುತ್ತಮ ಪ್ರಥಮ ನಿರ್ದೇಶನದ ಚಿತ್ರ

– ಅತ್ಯುತ್ತಮ ವಿದ್ಯಾರ್ಥಿನಿಯ ಚಿತ್ರ

– ಅತ್ಯುತ್ತಮ ಕ್ರೀಡಾ ವಿಷಯದ ಚಿತ್ರ

– ಅತ್ಯುತ್ತಮ ಸಂರಕ್ಷಣಾ ವಿಷಯದ ಚಿತ್ರ

– ರಾಜಕೀಯ/ಪ್ರಜಾಪ್ರಭುತ್ವ ವಿಷಯದ ಅತ್ಯುತ್ತಮ ಚಲನಚಿತ್ರ​​

​​ಮೇಲ್ಕಂಡ ಬಹುಮಾನಗಳಲ್ಲದೇ, ಉದಯೋನ್ಮುಖ ಮಹಿಳಾ ನಿರ್ದೇಶಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇನ್ನೂ ನಿರ್ಮಾಣವಾಗಿರದ ಅತ್ಯುತ್ತಮ ಚಿತ್ರಕಥೆಯ ಚಿತ್ರ ನಿರ್ಮಾಣಕ್ಕೆ ಚಿತ್ರ ನಿರ್ಮಾಣ ಅನುದಾನವನ್ನು ಸಹ ನೀಡಲಾಗುವುದು. ಆಯ್ಕೆಯಾದ ಚಿತ್ರಕಥೆಗೆ ನಿರ್ಮಾಣದಲ್ಲಿ ನುರಿತವರಿಂದ  ಮಾರ್ಗದರ್ಶನದ ಜೊತೆಗೆ ಗರಿಷ್ಟ ₹1,00,000 (ಒಂದು ಲಕ್ಷ) ಅನುದಾನವನ್ನು ನಿರ್ಮಾಣದ ಅನೇಕ ಹಂತದಲ್ಲಿ ಕಂತಿನ ಮೂಲಕ ನೀಡಲಾಗುವುದು. ಆಯ್ಕೆಯನ್ನು ಜೂನ್ ತಿಂಗಳಿನಲ್ಲಿ ನಡೆಯಲಿರುವ ಕಿರುಚಿತ್ರೋತ್ಸವ ಸಮಾರಂಭದಲ್ಲಿ ಪ್ರಕಟಿಸಲಾಗುವುದು.  “ಚಿತ್ರ ನಿರ್ಮಾಣ ಅನುದಾನ”ಕ್ಕೆ ಅರ್ಹತೆ ಹೊಂದಿರುವವರು ಏಪ್ರಿಲ್ 30, 2025 ರೊಳಗೆ ಪ್ರವೇಶ ಶುಲ್ಕ ₹1,000 ದೊಂದಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ.

ಪ್ರವೇಶ ಶುಲ್ಕ ₹1000 ಗಳೊಂದಿಗೆ  ಕಿರುಚಿತ್ರ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 30, 2025.   ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಾರ್ಚ್ 31, 2025 ರೊಳಗೆ ​ಕಿರುಚಿತ್ರ ಸಲ್ಲಿಸಿದಲ್ಲಿ ಪ್ರವೇಶ ಶುಲ್ಕ ಇರುವುದಿಲ್ಲ. ಹೆಚ್ಚಿನ ವಿವರಗಳಿಗಾಗಿ www.avalahejje.net ಗೆ ಭೇಟಿ ನೀಡಬಹುದು. ಜೊತೆಗೆ ಇಮೇಲ್‌ (avalahejjefilms@gmail.com) ಅಥವಾ 8867747236 ಗೆ (ವಾಟ್ಸಾಪ್) ಮೂಲಕವೂ ಸಂಪರ್ಕಿಸಬಹುದು ಎಂದು ಶಾಂತಲಾ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page