Friday, October 25, 2024

ಸತ್ಯ | ನ್ಯಾಯ |ಧರ್ಮ

Her Story : ಶೌಚಾಲಯವಿಲ್ಲದೆಡೆ…

ಇತ್ತೀಚೆಗೆ ಖಾಸಗಿ ಮಾಧ್ಯಮವೊಂದು “ಮಹಿಳೆಯೊಬ್ಬಳು ಪುರುಷರಂತೆಯೇ ಮೂತ್ರ ವಿಸರ್ಜನೆ ಮಾಡಿದಳು” ಎಂಬ ತಲೆಬರಹದ ಮೂಲಕ ಬಂದ ಸುದ್ದಿಯೊಂದು ವೈರಲ್ ಆಗಿತ್ತು. ಆದರೆ ಅದೊಂದು ಮಾಧ್ಯಮವಾಗಿ ಶೌಚಾಲಯ ಸಮಸ್ಯೆ ಎತ್ತಿ ಹಿಡಿಯುವುದು ಬಿಟ್ಟು ಹೊಣೆಗೇಡಿತನ ಪ್ರದರ್ಶಿಸಿದ್ದು ಮಾಧ್ಯಮಗಳ ನೈತಿಕ ಅದ:ಪತನವನ್ನು ಸೂಚಿಸಿದಂತಿತ್ತು‌. ಈ ಬಗ್ಗೆ ಲೇಖಕಿ ಸಮುದ್ಯತಾ ಕಂಜರ್ಪಣೆ ಅವರ ಲೇಖನ ತಪ್ಪದೇ ಓದಿ

ಮಹಿಳೆಯೊಬ್ಬಳು ಪುರುಷರಂತೆಯೇ ಮೂತ್ರ ವಿಸರ್ಜನೆ ಮಾಡಿದಳು ಎಂಬ ತಲೆಬರಹವನ್ನು ಹೊಂದಿದ ಸುದ್ದಿ ಮಾಡುವ ಮೂಲಕ ನಾಡಿನ ಅತ್ಯಂತ ಜನಪ್ರಿಯ ಸುದ್ದಿ ಮಾಧ್ಯಮವೊಂದು ಅಸೂಕ್ಷ್ಮತೆಗೆ ಕನ್ನಡಿಯಾಗಿ ನಿಂತಿದೆ. ಮಹಿಳೆಯೊಬ್ಬಳ ದೇಹದ ನೈಸರ್ಗಿಕ ಪ್ರಕ್ರಿಯೆಯನ್ನು ಕೂಡಾ ಮಾಧ್ಯಮಗಳು ಈ ಮಟ್ಟಿಗೆ ನೋಡುತ್ತವೆ ಎನ್ನುವುದು ಆತಂಕಕಾರಿ ಬೆಳವಣಿಗೆ, ಜೊತೆಗೆ ತಲೆತಗ್ಗಿಸುವಂತಹ ವಿಷಯ ಕೂಡ. 

ಇಂದಿಗೂ ಭಾರತದ ಎಷ್ಟೋ ಹಳ್ಳಿಗಳಲ್ಲಿ ಮಹಿಳೆಯರು ಶೌಚಕ್ಕೆಂದು ಬಯಲಿಗೋ, ಇನ್ಯಾವುದೋ ಕಡೆಗೋ ಹೋಗುವುದು ಸಾಮಾನ್ಯ. ದೂರ ಪ್ರಯಾಣಗಳಲ್ಲಿ ಎಲ್ಲೋ ಮರದ ಬಳಿಯೋ, ರಸ್ತೆಬದಿಯೋ ಅನಿವಾರ್ಯವಾಗಿ ಶೌಚ ಮಾಡುವುದು ಕೂಡಾ ಗ್ರಾಮೀಣ ಭಾಗಗಳಲ್ಲಿ ಸಾಮಾನ್ಯ. ಅನಕ್ಷರಸ್ಥರಾದ, ಶಿಕ್ಷಣವಿಲ್ಲದ ಹಳ್ಳಿಗಳ ಎಷ್ಟೋ ಜನ ಪುರುಷರು ಅದನ್ನ ಸಹಜವಾಗಿ ಸ್ವೀಕರಿಸುತ್ತಾರೆ ಮತ್ತು ಅದು ಅವರಿಗೆ ಗಮನಿಸಬೇಕಾದ ವಿಷಯವೇ ಆಗಿರುವುದಿಲ್ಲ. ಆದರೆ ಸುಶಿಕ್ಷಿತರೆನಿಸಿಕೊಂಡ, ಜನ ಜಾಗೃತಿ ಮೂಡಿಸಬೇಕಾದ ಒಂದು ಪ್ರಖ್ಯಾತ ಸುದ್ದಿ ಮಾಧ್ಯಮ ನಡೆದುಕೊಂಡ ರೀತಿ ಇಂದು ಅತ್ಯಂತ ಹೀನಾಯವಾಗಿದೆ. 

ಮೂತ್ರ ವಿಸರ್ಜನೆ ಎನ್ನುವ ಗಂಡು ಹೆಣ್ಣು ಪ್ರಾಣಿ ಪಕ್ಷಿ ಎಲ್ಲಕ್ಕೂ ಇರುವ ಜೈವಿಕ ಪ್ರಕ್ರಿಯೆಗೆ ಒಂದು ಲಿಂಗಾಧಾರಿತ ಬಣ್ಣ ಬಳಿದು ಒಬ್ಬ ಹೆಣ್ಣು ಮಗಳ ಖಾಸಗಿತನಕ್ಕೆ ಧಕ್ಕೆ ತಂದಿರುವುದಲ್ಲದೆ, ಆಕೆಗೆ ಅಸಹಾಯಕ ಪರಿಸ್ಥಿತಿ ತಂದಿತ್ತ ವ್ಯವಸ್ಥೆಯ ಕುರಿತು ಸ್ವಲ್ಪವೂ ಯೋಚಿಸದೇ ಇರುವುದು ಮಾಧ್ಯಮದ ಬೇಜವಾಬ್ದಾರಿ ಮತ್ತು ಮಿತಿಯನ್ನು ಎತ್ತಿ ಹಿಡಿದಿದೆ. 

ಮಾಧ್ಯಮಗಳು ಇಲ್ಲಿಯವರೆಗೆ ರಾಜಕೀಯ ಲಾಭದ ಕಾರಣಗಳನ್ನು ಹೊರತುಪಡಿಸಿದಾಗ ಸಂಪೂರ್ಣವಾಗಿ ಮರೆತೇ ಹೋಗುವ ವಿಷಯಗಳಲ್ಲಿಮೂಲಭೂತ ಸೌಕರ್ಯಗಳು ಕೂಡ ಒಂದು. ಈ ಅಸೂಕ್ಷ್ಮತೆಯನ್ನು ಬಿಡಿಸುತ್ತಾ ಹೋದಾಗ ಮಹಿಳೆಯರಿಗೆ ಮೂಲಭೂತ ಸೌಲಭ್ಯಗಳು ಎಷ್ಟರ ಮಟ್ಟಿಗೆ ಲಭ್ಯವಿದೆ ಎನ್ನುವುದು ತೆರೆದುಕೊಳ್ಳುತ್ತಾ ಹೋಗುತ್ತದೆ. 

ಗ್ರಾಮೀಣ ಭಾರತದಲ್ಲಿ ನಿರ್ಮಲ್‌ ಭಾರತ್‌, ಸ್ವಚ್ಛ ಭಾರತ್‌ ಮಿಷನ್‌ ಯೋಜನೆಗಳಡಿ ಪ್ರತಿ ಮನೆಗೂ ಶೌಚಾಲಯಗಳ ನಿರ್ಮಾಣದ ಅಭಿಯಾನ ಆರಂಭವಾಯಿತು. ಸರ್ಕಾರದ ಅಂಕಿ ಅಂಶಗಳ ಪ್ರಕಾರ 2014ರಲ್ಲಿ 39% ಮನೆಗಳಲ್ಲಿ ಶೌಚಾಲಯವಿದ್ದರೆ, 2022ರ ವೇಳೆಗೆ ಈ ಅಂಕಿ ಅಂಶ 100% ಪ್ರಗತಿ ಸಾಧಿಸಿದೆ ಎನ್ನಲಾಗುತ್ತದೆ. 

ಶೌಚಾಲಯಗಳ ಅಲಭ್ಯತೆಯಿದ್ದ ಕಡೆಗಳಲ್ಲಿ ಮಹಿಳೆಯರು ಬಯಲು ಶೌಚಕ್ಕೆಂದು ಹೊರಗಡೆ ಹೋದಾಗ ಕಾಡು ಪ್ರಾಣಿಗಳ ಹಾವಳಿ, ಕ್ರಿಮಿಕೀಟಗಳಿಂದ ಅಪಾಯ, ದೌರ್ಜನ್ಯ ಮುಂತಾದ ಸಮಸ್ಯೆಗಳು ಸಾಮಾನ್ಯ. ಗ್ರಾಮೀಣ ಭಾಗಗಳಲ್ಲಿ ಶೌಚಾಲಯಗಳು ನಿರ್ಮಾಣವಾಗಿದ್ದರೂ ನೀರಿನ ಅಲಭ್ಯತೆಯಿಂದಾಗಿ ಮತ್ತು ಜಾಗೃತಿಯ ಕೊರತೆಯಿಂದಾಗಿ ಶೌಚಾಲಯಗಳನ್ನು ಬಳಸುವವರ ಸಂಖ್ಯೆ ಕಡಿಮೆಯೇ ಇದೆ. ಸ್ವಚ್ಛ ಭಾರತ್‌ ಮಿಷನ್‌ (ಗ್ರಾಮೀಣ)ನ ಮಾರ್ಗಸೂಚಿಯ ಅನುಸಾರ ಪ್ರತಿಯೊಂದು ಕುಟುಂಬಕ್ಕೂ ಬಳಸಲು ಸಾಧ್ಯವಾಗುವಂತಹ, ಸೌಲಭ್ಯಗಳನ್ನು ಹೊಂದಿದ, ಸುರಕ್ಷಿತ, ಸುಭದ್ರ ಶೌಚಾಲಯಗಳನ್ನು ಒದಗಿಸಬೇಕು. ಇದನ್ನು ಇನ್ನಷ್ಟು ಸ್ಪಷ್ಟವಾಗಿ ತಿಳಿಯಬೇಕೆಂದರೆ ಪ್ರತಿ ಕುಟುಂಬಕ್ಕೂ ಅವರ ವಾಸಸ್ಥಳದಲ್ಲಿ ಶೌಚಾಲಯ ನಿರ್ಮಾಣವಾಗಿರಬೇಕು, ಶೌಚಾಲಯಕ್ಕೆ ಸರಿಯಾದ ಗೋಡೆಗಳು, ಮುಚ್ಚಬಹುದಾದ ಬಾಗಿಲು, ನೀರಿನ ವ್ಯವಸ್ಥೆ ಇರಬೇಕು. ಮುಖ್ಯವಾಗಿ ಶೌಚಾಲಯ ಬಳಕೆಗೆ ಯೋಗ್ಯವಾಗಿರಬೇಕು. ಈ ನಿಟ್ಟಿನಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಮಾರ್ಗಸೂಚಿಗಳೇ ಇದ್ದರೂ ಬಳಕೆಯ ಕುರಿತಾದ ಜಾಗೃತಿ ಮೂಡಿಸುವುದು ಇಂದಿಗೂ  ಸವಾಲಿನ ಕೆಲಸವೇ ಆಗಿದೆ. 

ಇದು ಗ್ರಾಮೀಣ ಭಾಗಗಳ ಸಮಸ್ಯೆಯಾಗಿದ್ದರೆ ನಗರ ಭಾಗಗಳಲ್ಲಿ ಸಮಸ್ಯೆಗಳು ವಿಭಿನ್ನವಾಗಿವೆ. ಮನೆಗಳಲ್ಲಿ ಬಹುತೇಕ ಶೌಚಾಲಯಗಳಿದ್ದರೂ, ಹೊರಭಾಗದಲ್ಲಿ, ಪ್ರಯಾಣದ ಸಮಯದಲ್ಲಿ ಶೌಚಾಲಯಗಳ ಸಮಸ್ಯೆಗಳು ಬಹಳಷ್ಟಿವೆ. ಸಾಧಾರಣವಾದ ಬಸ್‌ ತಂಗುದಾಣಗಳಲ್ಲಿ ಅಥವಾ ಸಾರ್ವಜನಿಕ ಶೌಚಾಲಯಗಳ ಸ್ಥಿತಿಯಂತೂ ಶೋಚನೀಯವಾಗಿವೆ. ಉಗುಳಿದ ಗುಟಕಾಗಳು, ಗೋಡೆಗಳ ಮೇಲಿನ ಅಶ್ಲೀಲ ಚಿತ್ರ, ಬರಹಗಳು, ಎಲ್ಲೆಂದರಲ್ಲಿ ಬಿದ್ದಿರುವ ಸ್ಯಾನಿಟರಿ ನ್ಯಾಪ್‌ ಕಿನ್‌ ಗಳು, ಶೌಚಾಲಯವನ್ನು ಇತರ ಮಾದಕ ವಸ್ತು ಸೇವನೆಗೋ, ಅಕ್ರಮ ಚಟುವಟಿಕೆಗಳಿಗೋ ಬಳಸಿದ ಕುರುಹುಗಳು ಮಹಿಳೆಯರಿಗೆ ಶೌಚಾಲಯದ ಒಳಗೆ ಕಾಲೂ ಇಡದಂತೆ ಮಾಡುವುದರ ಜೊತೆಗೆ ಎಷ್ಟೋ ಕಡೆಗಳಲ್ಲಿ ನಲ್ಲಿಗಳಲ್ಲಿ ನೀರೇ ಇರುವುದಿಲ್ಲ, ಒಂದು ಬಕೆಟ್‌, ಚೊಂಬಿನ ವ್ಯವಸ್ಥೆ ಇರುವುದಿಲ್ಲ, ಕೆಲವೆಡೆ ಶೌಚಾಲಯಗಳು ಒಡೆದೇ ಹೋಗಿರುತ್ತವೆ, ಬಾಗಿಲಿಗೆ ಚಿಲಕಗಳೇ ಇರುವುದಿಲ್ಲ, ಸಂಪೂರ್ಣ ಕಸದ ತೊಟ್ಟಿಯಂತಾದ ಶೌಚಾಲಯಗಳನ್ನು ಅನಿವಾರ್ಯವಾಗಿ ಉಪಯೋಗಿಸುವ ಪರಿಸ್ಥಿತಿ ಏನಾದರೂ ಬಂದರೆ ಅದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುವುದು ಇನ್ನೊಂದು ಸಂಕಟ. 

ಇತ್ತೀಚೆಗೆ ನಗರಗಳಲ್ಲಿ ಮಾಲ್‌ ಸಂಸ್ಕೃತಿ ಬಂದ ನಂತರದಲ್ಲಿ ಮಾಲ್‌ ಗಳಲ್ಲಿ, ಅಥವಾ ದೊಡ್ಡ ದೊಡ್ಡ ರೆಸ್ಟುರೆಂಟ್‌ ಗಳಲ್ಲಿ ಸುಸಜ್ಜಿತ, ಸ್ವಚ್ಛ ಶೌಚಾಲಯಗಳು ಕಣ್ಣಿಗೆ ಬೀಳುತ್ತವೆ. ಅದರಲ್ಲಿ ಕಸದ ಬುಟ್ಟಿಗಳು, ವ್ಯಾನಿಟಿ ಬ್ಯಾಗ್‌ ಅಥವಾ ದುಪ್ಪಟ್ಟಾ ನೇತು ಹಾಕಲು ಗೋಡೆಗೋ, ಬಾಗಿಲಿಗೋ ಒಂದು ಹೂಕ್‌ ಹಾಕಿರುತ್ತಾರೆ. ಮಹಿಳೆಯರು ತಮ್ಮ ಚೀಲಗಳನ್ನು ಯಾರಿಗೆ ಕೊಡೋದು, ಹೇಗೆ ಹಿಡ್ಕೊಳೋದು ಎನ್ನುವ ತಳಮಳವಿಲ್ಲದೆ ಉಪಯೋಗಿಸಬಹುದಾದ ಶೌಚಾಲಯಗಳು ನಿರ್ಮಾಣವಾಗುತ್ತಿರುವುದು ಅನುಕೂಲಕರ. ಆದರೆ ಈ ಸೌಲಭ್ಯಗಳು ಒಂದು ವರ್ಗಕ್ಕೆ ಮಾತ್ರ ಸೀಮಿತವಾದುದು. ಅದರ ಹೊರತಾದ ಮಧ್ಯಮ, ಕೆಳ ಮಧ್ಯಮ ವರ್ಗದವರಿಗೆ ಇಂತಹಾ ಸೌಲಭ್ಯಗಳು ಕೈಗೆಟಕುವುದಿಲ್ಲ. ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣ ಮಾಡುವಾಗ ಶೌಚಾಲಯದ ವ್ಯವಸ್ಥೆ ಇರುವುದಿಲ್ಲ ಎನ್ನುವ ಆತಂಕದಿಂದ ನೀರೇ ಕುಡಿಯದೇ ಪ್ರಯಾಣಿಸುವ, ನಂತರದಲ್ಲಿ ಅದರಿಂದಲೇ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಎಷ್ಟೋ ಮಹಿಳೆಯರು ನಮ್ಮ ನಡುವೆಯೇ ಇದ್ದಾರೆ. 

ಮಹಿಳೆಯರು ಪುರುಷರಿಗೆ ಹೋಲಿಸಿದರೆ ಹೆಚ್ಚಿನ ಹೊತ್ತು ಮೂತ್ರ ವಿಸರ್ಜನೆ ತಡೆಗಟ್ಟಬಲ್ಲರು ಎನ್ನುವ ಒಂದು ಹೇಳಿಕೆ ನೀಡಿ ಮಹಿಳೆಯರು ತಮ್ಮ ತುರ್ತುಗಳನ್ನೂ ತಡೆಹಿಡಿಯಬೇಕು ಎನ್ನುವ ಹೇರಿಕೆಯೂ ಇದರಲ್ಲಿದೆ.  ಒಬ್ಬ ಪುರುಷನಿಗೆ ರಸ್ತೆಬದಿಯಲ್ಲಿ ಶೌಚ ಮಾಡುವುದು ಸುಲಭವೆನಿಸುವಷ್ಟು ಮಹಿಳೆಗೆ ಅನಿಸಲು ಸಾಧ್ಯವಿಲ್ಲ. ದೈಹಿಕ ರಚನೆಯ ಕಾರಣದಿಂದಾಗಿ ಒಬ್ಬ ಮಹಿಳೆ ರಸ್ತೆ ಬದಿಯಲ್ಲಿ ಕೂತರೆ ಆಕೆಯ ಅಂಗಾಂಗಗಳು ಖಂಡಿತಾ ಕಾಣುತ್ತವೆ, ಮತ್ತು ಪ್ರಕೃತಿ ಸಹಜವಾದ ಕ್ರಿಯೆಯನ್ನು ಅಷ್ಟೇ ಸಹಜವಾಗಿ ಸ್ವೀಕರಿಸುವ ಪರಿಸ್ಥಿತಿ ಇವತ್ತು ಶಿಕ್ಷಿತ ಸಮುದಾಯಗಳಲ್ಲೇ ಕಡಿಮೆಯಾಗಿರುವುದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ. ನೈಸರ್ಗಿಕ ಅಪಾಯಗಳು, ಅರೋಗ್ಯ ಸಮಸ್ಯೆಗಳ ಜೊತೆಗೆ ಸಾಮಾಜಿಕವಾಗಿಯು ಅಭದ್ರತೆ ಹುಟ್ಟಿಸುವ ಪರಿಸ್ಥಿತಿ ಅದು. ಜೊತೆಗೆ ಆ ರೀತಿಯಲ್ಲಿ ಪರಿಸರ ಮಾಲಿನ್ಯಕ್ಕೆ, ಅನೈರ್ಮಲ್ಯಕ್ಕೆ ಕಾರಣವಾಗುವುದು ಮಹಿಳೆಯ ಆಯ್ಕೆಯೂ ಅಲ್ಲ. 

ಮುಟ್ಟಿನ ಸಮಯಗಳಲ್ಲಿ ಸ್ಯಾನಿಟರಿ ಪ್ಯಾಡ್‌ ಬದಲಾಯಿಸಬೇಕೆಂದರೆ, ಅಥವಾ ಡಯಾಬಿಟೀಸ್‌ ಮುಂತಾದ ಆರೋಗ್ಯ ಸಮಸ್ಯೆಗಳಿಂದ, ವಯಸ್ಸಾಗುತ್ತಾ ಹೋದಂತೆ ದೇಹದ ಬದಲಾವಣೆಗಳಿಂದ, ಗರ್ಭಿಣಿಯರಿಗೆ, ಒಂದು ಹೆರಿಗೆಯ ನಂತರದಲ್ಲಿ ಸ್ನಾಯುಗಳು ಸಡಿಲವಾಗಿದ್ದಾಗ ಹೆಚ್ಚಿನ ಹೊತ್ತು ಮೂತ್ರ ವಿಸರ್ಜನೆಯನ್ನು ತಡೆಗಟ್ಟಲು ಕಷ್ಟವಾಗುತ್ತದೆ. ಅಂತಹ ಸಮಯದಲ್ಲಿ ಹತ್ತಿರದಲ್ಲಿ ಶೌಚಾಲಯಗಳ ವ್ಯವಸ್ಥೆ ಇರುವುದಿಲ್ಲ, ಇರುವ ಶೌಚಾಲಯಗಳು ಬಳಕೆಗೆ ಯೋಗ್ಯವಾಗಿರುವುದಿಲ್ಲ. ಇನ್ನು ಸ್ಯಾನಿಟರಿ ಪ್ಯಾಡ್‌ ಗಳ ವಿಲೇವಾರಿಯಂತೂ ಬೇರೆಯದೇ ಕತೆ. 

ಭಾರತೀಯ ಸರೈ ಕಾಯ್ದೆ (1867) (Indian Sarais Act, 1867) ಅನುಸಾರ ಪ್ರತಿಯೊಬ್ಬ ನಾಗರಿಕನಿಗೂ ಎಲ್ಲಾ ಹೋಟೆಲ್‌ ಗಳಲ್ಲಿ ಉಚಿತವಾಗಿ ನೀರು ಕುಡಿಯುವ ಮತ್ತು ಶೌಚಾಲಯ ಬಳಸುವ ಹಕ್ಕಿದೆ. ಈ ನಿಟ್ಟಿನಲ್ಲಿ ದೆಹಲಿ ಮತ್ತು ಕರ್ನಾಟಕ ಮುಂಚೂಣಿಯಲ್ಲಿ ನಿಲ್ಲುತ್ತವೆ. ನಮ್ಮ ರಾಜ್ಯದ ಸ್ಟಾರ್‌ ಹೋಟೆಲ್‌ ಸೇರಿದಂತೆ ಯಾವುದೇ ಹೋಟೆಲ್‌ ಮತ್ತು ಕೆಫಿಟೇರಿಯಾಗಳಲ್ಲಿ ಯಾರು ಬೇಕಾದರೂ ಉಚಿತವಾಗಿ ನೀರು ಕುಡಿಯಬಹುದು ಮತ್ತು ಶೌಚಾಲಯವನ್ನು ಬಳಸಬಹುದು. ಆದರೆ ಈ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಖಂಡಿತಾ ಅಗತ್ಯವಿದೆ. 

ಇಂಥಹಾ ತಕ್ಷಣದ ಸಂದರ್ಭಗಳಿಗೆ ಅನುಕೂಲವಾಗುವಂತೆ ಹೆಣ್ಣುಮಕ್ಕಳಿಗೆ ಶೌಚಾಲಯವಿಲ್ಲದೇ ಸುಲಭವಾಗಿ ಬಳಸುವ ಸಾಧನಗಳನ್ನು ಸಹ ಆವಿಷ್ಕರಿಸಲಾಗಿದೆ. ಇದರಿಂದ ದೂರ ಪ್ರಯಾಣ ಮಾಡುವವರಿಗೆ, ಅಥವಾ ಇನ್ನಿತರ ತುರ್ತು ಪರಿಸ್ಥಿತಿಗಳಲ್ಲಿ ಮಹಿಳೆಯರಿಗೆ ಬಹಳಷ್ಟು ನೆರವಾಗುತ್ತವೆ. ಆದರೆ, ಇವುಗಳು ಯಾವುದೂ ಒಂದು ಸುಸ್ಥಿರ ಪರಿಹಾರವೂ ಅಲ್ಲ. ಅವುಗಳ ಬೆಲೆಗಳಿಂದಾಗಿ. ಬಳಕೆಯ ಕುರಿತು ಮಾಹಿತಿ ಇಲ್ಲದ ಕಾರಣ ಎಲ್ಲರೂ ಕೊಂಡು ಬಳಸಲು ಸಾಧ್ಯವಾಗುವುದೂ ಇಲ್ಲ. 

ಯಾವುದೇ ವ್ಯಕ್ತಿಯ ಖಾಸಗಿ ಕ್ಷಣಗಳನ್ನು ಸಾರ್ವಜನಿಕವಾಗಿ ಅಪಹಾಸ್ಯಕ್ಕೀಡು ಮಾಡುವುದು, ಮಹಿಳೆಯರಿಗಿರುವ ಸೌಲಭ್ಯ, ಅನಾನುಕೂಲಗಳನ್ನು ಪುರುಷರೊಂದಿಗೆ ಹೋಲಿಸಿ ಇನ್ನಷ್ಟು ಅಮಾನವೀಯವಾಗಿ ನಡೆದುಕೊಳ್ಳುತ್ತಿರುವುದಂತೂ ಆತಂಕಕಾರಿ. ಮಾಧ್ಯಮಗಳು, ಸಂಘಟನೆಗಳು ಮಹಿಳೆಯರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳ ಕುರಿತು ಸರ್ಕಾರಕ್ಕೆ, ಪಾಲಿಕೆ ಅಧಿಕಾರಿಗಳಿಗೆ ವಾಸ್ತವಾಂಶ ತಿಳಿಸುವುದು ಪ್ರಸ್ತುತ ಅಗತ್ಯ. ಪ್ರತಿ ಜಿಲ್ಲೆ, ತಾಲ್ಲೂಕು ಗ್ರಾಮ ಮಟ್ಟದಲ್ಲಿ ಮೂಲಭೂತ ಸೌಕರ್ಯಗಳ ಸ್ಥಿತಿಗತಿಗಳ ಕುರಿತು ಸರ್ಕಾರಕ್ಕೆ, ಅಧಿಕಾರಿಗಳಿಗೆ, ನಾಗರಿಕರಿಗೆ ತಿಳಿಯುವ ಅಗತ್ಯವಿದೆ. ಸಮಸ್ಯೆ ಇರುವೆಡೆಯಲ್ಲಿ ಸರಿಪಡಿಸುವ ಅಗತ್ಯವೂ ಇದೆ. ಅದರ ಬದಲಾಗಿ ಒಬ್ಬ ಮಹಿಳೆಯ ತೀರಾ ವೈಯಕ್ತಿಕವಾದ, ಪ್ರಕೃತಿ ಸಹಜವಾದ ಒಂದು ಕ್ಷಣದ ಛಾಯಾಚಿತ್ರ ವೈರಲ್‌ ಆಗುವಷ್ಟು ಅಸೂಕ್ಷ್ಮವಾಗಿ ಬದಲಾಗುವುದು ಮಾನವೀಯತೆಯಿಂದ ಒಂದೊಂದೇ ಹೆಜ್ಜೆ ಹಿಂದಿಡುತ್ತಿರುವುದಕ್ಕೆ ಸಾಕ್ಷಿ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page