ಒಕ್ಕಲಿಗ ಕೋಟಾದಡಿ ಪಕ್ಷದ ಅಧ್ಯಕ್ಷರ ಹುದ್ದೆಗೆ ರೇಸಿನಲ್ಲಿದ್ದ ಪ್ರಮುಖ ರಾಜಕಾರಣಿ ಸದಾನಂದ ಗೌಡರನ್ನು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡುವ ಮೂಲಕ ಸಂತೋಷಕೂಟವು ರಾಜಕೀಯ ಮೇಲಾಟದಲ್ಲಿ ತನ್ನ ಕೈ ಮೇಲಾಗಿಸಿಕೊಂಡಿದೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ

ಬೆಂಗಳೂರು: ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಸಂಸದ ಡಿವಿ ಸದಾನಂದಗೌಡ ಅವರಿಗೆ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗುರುವಾರ ಹೇಳಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಪಕ್ಷದ ಹಿರಿಯ ನಾಯಕರ ನಿರ್ದೇಶನದಂತೆ ಮಾಜಿ ಮುಖ್ಯಮಂತ್ರಿ ಗೌಡರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಅವರು ಪಕ್ಷದ ಇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಸದಾನಂದಗೌಡ ಅವರು ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಬಿಜೆಪಿ ತೊರೆಯುವ ಯೋಚನೆಯಲ್ಲಿದ್ದಾರೆ ಎಂಬ ಮಾತುಗಳು ಈಗಲೂ ಕೇಳಿಬರುತ್ತಿವೆ.
ಕರ್ನಾಟಕದಲ್ಲಿ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ತಮ್ಮೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂದು ಸದಾನಂದ ಗೌಡ ಇತ್ತೀಚೆಗೆ ಹೇಳಿದ್ದರು.
ಕರ್ನಾಟಕ ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸದಾನಂದ ಗೌಡರನ್ನು ಲೋಕಸಭೆ ಚುನಾವಣೆಗೆ ಮುನ್ನ ದೊಡ್ಡ ಪಕ್ಷ ಸೇರುವಂತೆ ಸಂಪರ್ಕಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ವಿವರಿಸಿವೆ.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರೊಂದಿಗೂ ಮಾತನಾಡಿದ್ದರು.
ಒಂದು ಕಾಲದಲ್ಲಿ ಪಕ್ಷದಲ್ಲಿ ಪ್ರಾಮುಖ್ಯತೆಯನ್ನು ಹೊಂದಿದ್ದ ಸದಾನಂದ ಗೌಡರು ತಮ್ಮ ಕಾರ್ಯವೈಖರಿಯಿಂದ ಹೈಕಮಾಂಡನ್ನು ಮೆಚ್ಚಿಸಲು ವಿಫಲರಾಗಿದ್ದಾರೆ ಎಂದು ಬಿಜೆಪಿ ಮೂಲಗಳು ವಿವರಿಸಿವೆ.
ಪಕ್ಷದ ಸೂಚನೆಯಂತೆ ಸಿಎಂ ಸ್ಥಾನವನ್ನು ಬಿಟ್ಟುಕೊಟ್ಟ ನಂತರ, ಸದಾನಂದ ಗೌಡರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಕ್ಯಾಬಿನೆಟ್ಟಿನಲ್ಲಿ ಪ್ರತಿಷ್ಠಿತ ಕೇಂದ್ರ ರೈಲ್ವೆ ಸಚಿವಾಲಯವನ್ನು ನೀಡಲಾಗಿತ್ತು.
ನಂತರ ಸಚಿವ ಸ್ಥಾನವನ್ನು ಹಿಂಪಡೆದು ಅವರನ್ನು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರನ್ನಾಗಿ ಮಾಡಲಾಯಿತು. ನಂತರ, ಅವರನ್ನು ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವರನ್ನಾಗಿ ಮಾಡಲಾಯಿತು. ಜುಲೈ 2021ರಲ್ಲಿ ಕ್ಯಾಬಿನೆಟ್ ಪುನರ್ರಚನೆಗೆ ಮುಂಚಿತವಾಗಿ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯುವಂತೆ ಮಾಡಲಾಯಿತು.
ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗಿ ಬಂದ ನಂತರ ಸದಾನಂದ ಗೌಡರು ರಾಜಕೀಯವಾಗಿ ಬಹಳ ಪ್ರಭಾವಿ ನಾಯಕನಾಗಿ ಬೆಳೆದಿದ್ದರು. ಯಡಿಯೂರಪ್ಪ ಅವರು ಹೈಕಮಾಂಡ್‌ಗೆ ಸವಾಲು ಹಾಕಿ ಪಕ್ಷದ ಆಂತರಿಕ ಚುನಾವಣೆಯಲ್ಲಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ್ದರು.
ಆದರೆ, ನಂತರ ಸದಾನಂದ ಗೌಡ ಅವರು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಕುಟುಂಬದೊಂದಿಗೆ ಕೈಜೋಡಿಸಿ ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಪರಿಣಾಮ ಅವರನ್ನು ಪದಚ್ಯುತಗೊಳಿಸಲಾಯಿತು ಎಂದು ಮೂಲಗಳು ಹೇಳುತ್ತವೆ.
ಹೈಕಮಾಂಡ್ ಜತೆಗಿನ ಮಾತುಕತೆ ಬಳಿಕ ಸದಾನಂದ ಗೌಡ ಅವರು ಕಾಂಗ್ರೆಸ್ ಪಕ್ಷ ಸೇರುವ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ವಿವರಿಸಿವೆ.
ಇದರೊಂದಿಗೆ ಯಡಿಯೂರಪ್ಪ ಬಣದ ಇನ್ನೊಬ್ಬ ರಾಜಕಾರಣಿಯನ್ನು ಬಲಿ ತೆಗೆದುಕೊಳ್ಳುವಲ್ಲಿ ಸಂತೋಷಕೂಟ ಸಫಲವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.