ಬೆಂಗಳೂರು : ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (BMIC) ನೈಸ್ (NICE ) ಯೋಜನೆಯು ರಾಜ್ಯದ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ (High Court) ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ.
ಯೋಜನೆಯಲ್ಲಿ ನಡೆದಿದೆಯೆನ್ನಲಾದ ವಂಚನೆ ಹಾಗೂ ಅಕ್ರಮಗಳ ಕುರಿತು ತಜ್ಞರ ತಂಡದಿಂದ ಸ್ವತಂತ್ರ ತನಿಖೆ ಮತ್ತು ಕಂಪನಿಯ ಖಾತೆಗಳ ‘ಫೋರೆನ್ಸಿಕ್ ಆಡಿಟ್’ (Forensic Audit) ನಡೆಸುವುದು ಅಗತ್ಯವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಭೂಸ್ವಾಧೀನ ಅಧಿಸೂಚನೆ ಹೊರಡಿಸಿ 23 ವರ್ಷಗಳು ಕಳೆದರೂ ರೈತರಿಗೆ ಸೂಕ್ತ ಪರಿಹಾರ ನೀಡದ ಹಿನ್ನೆಲೆಯಲ್ಲಿ ಭೂಸ್ವಾಧೀನ ರದ್ದುಗೊಳಿಸಿದ್ದ ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ನೈಸ್ ಸಂಸ್ಥೆ ಹಾಗೂ ಕೆಐಎಡಿಬಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸುವಾಗ ವಿಭಾಗೀಯ ಪೀಠ ಈ ಮಹತ್ವದ ಆದೇಶ ನೀಡಿದೆ. ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿ ರೈತರ ಭೂಮಿ ವಶಪಡಿಸಿಕೊಂಡು ಲಾಭ ಗಳಿಸಲು ಸಂಸ್ಥೆಗೆ ಸರ್ಕಾರವೇ ಸಹಕರಿಸಿದೆ ಎಂದು ಪೀಠ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಪೀಠವು ತನ್ನ ಆದೇಶದಲ್ಲಿ, ಸಂವಿಧಾನದ ವಿಧಿ 300A ಅಡಿಯಲ್ಲಿ ಕಡ್ಡಾಯವಾಗಿ ನೀಡಬೇಕಾದ ಸೂಕ್ತ ಪರಿಹಾರವನ್ನು ನೀಡದೆ ರೈತರ ಭೂಮಿ ಹಾಗೂ ಜೀವನೋಪಾಯವನ್ನು ಕಸಿದುಕೊಳ್ಳಲಾಗಿದೆ. ರೈತರ ಲೂಟಿಯನ್ನು ಹೊರತುಪಡಿಸಿದರೆ ಈ ‘ನೈಸ್’ ಯೋಜನೆಯಲ್ಲಿ ನೈಸ್ ಅನಿಸುವಂತಹದ್ದು ಏನೂ ಇಲ್ಲ ಎಂದು ಖಾರವಾಗಿ ನುಡಿದಿದೆ. ಅಲ್ಲದೆ, ಸಾರ್ವಜನಿಕ ಹಿತಾಸಕ್ತಿಯನ್ನು ಬಲಿಕೊಟ್ಟು ಕೇವಲ ಖಾಸಗಿ ಪ್ರವರ್ತಕರ ಹಿತಾಸಕ್ತಿಯನ್ನು ಮಾತ್ರ ಈ ಯೋಜನೆ ಕಾಯ್ದಿದೆ ಎಂದು ಬೇಸರ ವ್ಯಕ್ತಪಡಿಸಿದೆ.
ಎಕ್ಸ್‌ಪ್ರೆಸ್‌ವೇ ಹಾಗೂ ಉಪನಗರಗಳನ್ನು ನಿರ್ಮಿಸಿ ಸಂಚಾರ ದಟ್ಟಣೆ ಕಡಿಮೆ ಮಾಡುವ ತನ್ನ ಮೂಲ ಉದ್ದೇಶದಲ್ಲೇ ನೈಸ್ ಸಂಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ. ಸಂಸ್ಥೆ ಎಸಗಿರುವ ಸಾಲು ಸಾಲು ನಿಯಮ ಉಲ್ಲಂಘನೆಗಳ ಬಗ್ಗೆ ಸ್ವತಃ ಸರ್ಕಾರಕ್ಕೇ ಸ್ಪಷ್ಟ ಅರಿವಿದ್ದರೂ ಸಹ, ಈ ಯೋಜನೆಯನ್ನು ರಾಜ್ಯ ಸರ್ಕಾರ ಏಕೆ ಮರುಪರಿಶೀಲಿಸುತ್ತಿಲ್ಲ ಅಥವಾ ರದ್ದುಗೊಳಿಸುತ್ತಿಲ್ಲ ಎಂದು ಪ್ರಶ್ನಿಸಿರುವ ಹೈಕೋರ್ಟ್, ಸರ್ಕಾರದ ಮೌನ ಮತ್ತು ನಡವಳಿಕೆಗೆ ತೀವ್ರ ಆಶ್ಚರ್ಯ ವ್ಯಕ್ತಪಡಿಸಿದೆ.
