ಪ್ರಜ್ವಲ್ ರೇವಣ್ಣನಿಗೆ ಸಂಬಂಂಧಿಸಿದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಂಚಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಪ್ರೀತಮ್ ಗೌಡರನ್ನು ಬಂಧಿಸದಂತೆ ಹೈಕೋರ್ಟ್ ಆದೇಶಿಸಿದೆ. ಹಾಗೂ ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಲು ಎಸ್‌ಐಟಿಗೆ ಹೈಕೋರ್ಟ್ ತಿಳಿಸಿದೆ.
ಹೈಕೋರ್ಟ್ ಪ್ರೀತಂ ಗೌಡರಿಗೆ ಬಿಗ್ ರಿಲೀಫ್ ಕೊಡುವುದರ ಜೊತೆಗೆ ಎಸ್‌ಐಟಿ ತನಿಖೆಗೆ ಸಕಾಲದಲ್ಲಿ ಸ್ಪಂದಿಸುವಂತೆ ಸ್ಪಷ್ಟ ಸೂಚನೆ ನೀಡಿದೆ.
ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದೆ ಎನ್ನಲಾದ ಅಶ್ಲೀಲ ದೃಶ್ಯಾವಳಿ ಒಳಗೊಂಡ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಪ್ರೀತಮ್ ಗೌಡ ವಿರುದ್ಧ ಪ್ರಕರಣ ದಾಖಲಾಗಿತ್ತು. ಪೆನ್ ಡ್ರೈವ್ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಗೆ ಹಾಸನ ಜಿಲ್ಲೆಯ ಮಹಿಳೆಯೊಬ್ಬರು ದೂರು ನೀಡಿದ್ದು, ಪ್ರಜ್ವಲ್ ರೇವಣ್ಣ ಮತ್ತು ಬಿಜೆಪಿ ಮಾಜಿ ಶಾಸಕ ಪ್ರೀತಮ್ ಗೌಡ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ ನಲ್ಲಿದ್ದ ಪ್ರಜ್ವಲ್ ಅವರನ್ನು ಬಾಡಿ ವಾರೆಂಟ್ ಮೇಲೆ ಎಸ್‌ಐಟಿ ನಾಲ್ಕು ದಿನ ವಶಕ್ಕೆ ಪಡೆದುಕೊಂಡಿತ್ತು.
ದೂರುದಾರ ಮಹಿಳೆಯ ಅಶ್ಲೀಲ ವಿಡಿಯೋವನ್ನು ಪ್ರಜ್ವಲ್ ಚಿತ್ರಕರಿಸಿದ ಆರೋಪವಿದ್ದು, ಆ ವಿಡಿಯೋ ಒಳಗೊಂಡ ಪೆನ್ ಡ್ರೈವ್ ಅನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಿದ್ದಾಗಿ ಮಾಜಿ ಶಾಸಕ ಪ್ರೀತಂ ಗೌಡ ಮತ್ತು ಇತರರ ವಿರುದ್ಧವೂ ಆರೋಪ ಕೇಳಿ ಬಂದಿದ್ದು ದೂರು ದಾಖಲಾಗಿದೆ.